ಫಿಲೋಮಿನಾ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹಾಯಕಿ ಮೋಲಿ ಮಸ್ಕರೇನ್ಹಸ್‌ರವರಿಗೆ ಬೀಳ್ಕೊಡುಗೆ ಸನ್ಮಾನ

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದಲ್ಲಿನ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಸುಮಾರು 31 ವರ್ಷ ಕರ್ತವ್ಯ ನಿರ್ವಹಿಸಿ ಜೂ.30 ರಂದು ಸೇವಾ ನಿವೃತ್ತಿ ಹೊಂದಲಿರುವ ಮೋಲಿ ಮಸ್ಕರೇನ್ಹಸ್‌ರವರಿಗೆ ಶಾಲಾ ವತಿಯಿಂದ ಜೂ.18 ರಂದು ಬೀಳ್ಕೊಡುಗೆ ಸನ್ಮಾನ ನೆರವೇರಿತು.

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಶಾಲೆಯ ಏಳು ಮಂದಿ ಶಿಕ್ಷಕರು, ಆಡಳಿತ ಸಿಬ್ಬಂದಿ ನಿವೃತ್ತಿಗೊಂಡಿರುತ್ತಾರೆ. ಈಗ ಮೋಲಿ ಮಸ್ಕರೇನ್ಹಸ್‌ರವರ ಸರದಿ. ಮೋಲಿ ಮಸ್ಕರೇನ್ಹಸ್‌ರವರು ತನ್ನ ಕರ್ತವ್ಯವನ್ನು ನಿಷ್ಠೆಯಿಂದ, ಪ್ರೀತಿಯಿಂದ, ಪ್ರಾಮಾಣಿಕವಾಗಿ ನಿರ್ವಹಿಸಿರುವುದು ಅಭಿಮಾನದ ವಿಷಯವಾಗಿದೆ. ವ್ಯಕ್ತಿ ನಿವೃತ್ತಿಗೊಂಡರೂ ತಾನು ನಿರ್ವಹಿಸಿದ ಕರ್ತವ್ಯದಲ್ಲಿ ಬಾಂಧವ್ಯ ಹಾಗೂ ನೆನಪು ಸದಾ ಇರುತ್ತದೆ. ಮೋಲಿ ಮಸ್ಕರೇನ್ಹಸ್‌ರವರದ್ದು ನಗುಮುಖದ ವ್ಯಕ್ತಿತ್ವ, ಅವರ ಹೃದಯ ಹಾಗೂ ಮನಸ್ಸಿನಲ್ಲಿರುವ ನೆಮ್ಮದಿ ಅವರ ಮುಖದಲ್ಲಿ ಎದ್ದು ಕಾಣುತ್ತದೆ. ನಿಮ್ಮ ಸೇವೆಯ ಅನುಭವ ಶಾಲೆಗೆ, ಸಮಾಜದಲ್ಲಿ ಹಂಚಿಕೊಂಡರೆ ಮತ್ತಷ್ಟು ಸಹಾಯ ಆಗುತ್ತದೆ ಎಂದು ಹೇಳಿ ಮೋಲಿ ಮಸ್ಕರೇನ್ಹಸ್‌ರವರ ಮುಂದಿನ ನಿವೃತ್ತಿ ಬದುಕು ಹಸನಾಗಲಿ ಎಂದು ಹೇಳಿ ಶುಭ ಹಾರೈಸಿದರು.

ನಿವೃತ್ತಗೊಳ್ಳಲಿರುವ ಶಾಲೆಯ ದ್ವಿತೀಯ ದರ್ಜೆ ಸಹಾಯಕಿ ಮೋಲಿ ಮಸ್ಕರೇನ್ಹಸ್‌ರವರ ಸಹೋದ್ಯೋಗಿ ವಿಲಿಯಂ ಪಿಂಟೋರವರು ಮಾತನಾಡಿ, ತಾನು ಮತ್ತು ಮೋಲಿ ಮಸ್ಕರೇನ್ಹಸ್‌ರವರು ಪ್ರಥಮ ಪಿಯುಸಿಯಿಂದ ಅಂತಿಮ ಪದವಿವರೆಗೂ ಜೊತೆಯಾಗಿ ವ್ಯಾಸಂಗ ಮಾಡಿದವರು. ಲೆಕ್ಕಪತ್ರ ನಿರ್ವಹಣೆ ಹಾಗೂ ಹಣಕಾಸು ವಿಚಾರ ಸುಲಭದ ಕೆಲಸವಲ್ಲ. ಆದರೆ ಮೋಲಿ ಮಸ್ಕರೇನ್ಹಸ್‌ರವರ ಲೆಕ್ಕಪತ್ರ ನಿರ್ವಹಣೆ ಹಾಗೂ ಹಣಕಾಸಿನ ವಿಚಾರದಲ್ಲಿ ಸರಕಾರದ ನಿಯಮಗಳಿಗನುಸಾರವಾಗಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ಆಡಿಟ್ ವ್ಯವಸ್ಥೆಯಲ್ಲಿ ಮೆಚ್ಚುಗೆಯನ್ನು ಗಳಿಸಿದ್ದಾರೆ. ಶಾಲೆಯಲ್ಲಿನ ನಗದು ವ್ಯವಹಾರದಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದಂತೆ ಅವರ ಕಾರ್ಯಕ್ಷಮತೆಯನ್ನು ಮೆಚ್ಚಬೇಕಾಗಿದೆ ಎಂದು ಹೇಳಿ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ನಿವೃತ್ತ ಮೋಲಿ ಮಸ್ಕರೇನ್ಹಸ್‌ರವರ ಪುತ್ರಿ ಮೇವಿಸ್ ಡಿ’ಸೋಜ, ಶಾಲೆಯ ಶಿಕ್ಷಕ ವೃಂದ, ಆಡಳಿತ ಸಿಬ್ಬಂದಿ ವೃಂದದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಆಶಾ ರೆಬೆಲ್ಲೋ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಕ್ಲೆಮೆಂಟ್ ಪಿಂಟೋ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಮೋಲಿ ಮಸ್ಕರೇನ್ಹಸ್‌ರವರ ಪರಿಚಯ…
ದಿ.ರೊಸಾರಿಯೋ ಮಸ್ಕರೇನ್ಹಸ್ ಹಾಗೂ ಸಿಸಿಲಿಯಾ ಲೋಬೋರವರ ಪುತ್ರಿಯಾಗಿ 1964, ಜೂನ್ 24ರಂದು ಜನಿಸಿದ ಮೋಲಿ ಮಸ್ಕರೇನ್ಹಸ್‌ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ, ಪಿಯುಸಿ ಹಾಗೂ ಬಿಕಾಂ ಪದವಿಯನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದ್ದರು. 1991, ಏಪ್ರಿಲ್ 1ರಂದು ಫಿಲೋಮಿನಾ ಪ್ರೌಢಶಾಲೆಯಲ್ಲಿ ಕಛೇರಿ ವಿಭಾಗದಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯವನ್ನು ಆರಂಭಿಸಿರುತ್ತಾರೆ. ಸೇವೆಗೆ ಸೇರಿದಂದಿನಿಂದ ಇಂದಿನವರೆಗೂ ಆಡಳಿತ ವಿಭಾಗದ ಲೆಕ್ಕಪತ್ರ, ದಾಖಲೆಗಳ ನಿರ್ವಹಣೆ, ಸಂಸ್ಥೆಯ ಹಣಕಾಸಿನ ಲೆಕ್ಕಾಚಾರ, ವಿದ್ಯಾರ್ಥಿ ಹಾಗೂ ಶಿಕ್ಷಕರ ದಾಖಲೆ ನಿರ್ವಹಣೆ, ಎಸೆಸ್ಸೆಲ್ಸಿ, ಎನ್‌ಟಿಎಸ್‌ಇ, ಎನ್‌ಎಂಎಂಎಸ್ ಮತ್ತು ಇತರೇ ಪರೀಕ್ಷಾ ಸಮಯದಲ್ಲಿ ವ್ಯವಸ್ಥಿತ ಕಾರ್ಯನಿರ್ವಹಣೆಯನ್ನು ಮಾಡಿರುತ್ತಾರೆ. ಪ್ರಸ್ತುತ ಇವರು ತಾಯಿ ಸಿಸಿಲಿಯಾ ಲೋಬೊ, ಪತಿ ನಿವೃತ್ತ ಬ್ಯಾಂಕ್ ಉದ್ಯೋಗಿ ಡೇವಿಡ್ ಡಿ’ಸೋಜ, ಪುತ್ರಿಯರಾದ ಮೇವಿಸ್ ಡಿ’ಸೋಜ, ಅನುಷಾ ಡಿ’ಸೋಜರವರೊಂದಿಗೆ ಸಾಮೆತ್ತಡ್ಕದಲ್ಲಿ ವಾಸವಾಗಿದ್ದಾರೆ.

ಕೃತಜ್ಞತೆಗಳು..
ಶಾಲಾ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ನಿವೃತ್ತಿಗೊಳ್ಳುತ್ತಿರುವ ಶಾಲೆಯ ದ್ವಿತೀಯ ದರ್ಜೆ ಸಹಾಯಕಿ ಮೋಲಿ ಮಸ್ಕರೇನ್ಹಸ್‌ರವನ್ನು ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮೋಲಿ ಮಸ್ಕರೇನ್ಹಸ್‌ರವರು, ಫಿಲೋಮಿನಾ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುವುದೇ ನನ್ನ ಭಾಗ್ಯವಾಗಿದೆ. ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಶಾಲಾ ಸಂಚಾಲಕರು, ಮುಖ್ಯ ಶಿಕ್ಷಕರು, ಸಹೋದ್ಯೋಗಿ ಮಿತ್ರರು ನನಗೆ ಪ್ರೋತ್ಸಾಹಿಸಿದ್ದಕ್ಕೆ ತುಂಬು ಹೃದಯದ ಕೃತಜ್ಞತೆಗಳು ಎಂದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.