ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ

0

ಪುತ್ತೂರು:ನಾಡಪ್ರಭು ಕೆಂಪೇ ಗೌಡರವರು ನವಕರ್ನಾಟಕದ ನಿರ್ಮಾಣಕ್ಕೆ ಕೊಡುಗೆ ನೀಡಿದವರು. ಬೆಂಗಳೂರನ್ನು ವ್ಯವಸ್ಥಿತವಾದ ನಿರ್ಮಾಣಕ್ಕೆ ಕಾರಣರಾದ ಕೆಂಪೇ ಗೌಡರ ದೂರದೃಷ್ಠಿಯಿಂದ 500 ವರ್ಷಗಳ ನಂತರವೂ ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಜೂ.27ರಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇ ಗೌಡರ 512ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಗಳೂರನ್ನು ಇನ್ನೂ 500 ವರ್ಷಗಳ ತನಕ ಜಗತ್ತಿಲ್ಲಿ ವೇಗವಾಗಿ ಬೆಳೆಯಲು ಪೂರಕವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಜಗತ್ತಿನ ವಿವಿಧ ದೇಶಗಳನ್ನು ಆಕರ್ಷಿಸಲು 500 ವರ್ಷಗಳ ಹಿಂದೆಯೇ ಯೋಜನೆ ರೂಪಿಸಿದ್ದರು. ಮೂಲಭೂತ ಸೌಲಭ್ಯವನ್ನು ಒದಗಿಸಿ, ಉದ್ಯೋಗ ಸೃಷ್ಠಿ ಮಾಡಿರುವುದಲ್ಲದೆ, ಆಧುನಿಕ ಯುಗದಲ್ಲಿ ವೈಶಿಷ್ಟ್ಯ ಪೂರ್ಣವಾದ ಜೀವನ ನಡೆಸಲು ಪೂರಕವಾಗಿ 500 ವರ್ಷಗಳ ಹಿಂದೆ ಕೆಂಪೇಗೌಡ ಬೆಂಗಳೂರನ್ನು ನಿರ್ಮಿಸಿದ್ದಾರೆ. ಮಾರುಕಟ್ಟೆ ಒದಗಿಸುವ ಮೂಲಕ ಉದ್ಯೋಗ ಮಾಡುವವರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದರು.

ದೀಪ ಪ್ರಜ್ವಲನೆ ಮಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಕೆಂಪೇ ಗೌಡರವರು, ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ದೂರದೃಷ್ಠಿಯನ್ನು ಹೊಂದಿದ್ದರು. ಬೆಂಗಳೂರನ್ನು 16ನೇ ಶತಮಾನದಲ್ಲಿಯೇ ಸುಸಜ್ಜಿತ ನಗರವನ್ನಾಗಿ ನಿರ್ಮಿಸಿದ್ದರು. ನೀರಾವರಿ, ಅಂತರ್ಜಲವೃದ್ಧಿ, ಕೆರೆಗಳ ನಿರ್ಮಾಣ, ನಗರಗಳ ಅಭಿವೃದ್ಧಿಯ ದೂರದೃಷ್ಠಿಯನ್ನು ಹೊಂದಿದ್ದ ಅವರು 16ನೇ ಶತಮಾನದ ಸಾಧನೆ 21 ಶತಮಾನಕ್ಕೆ ಪೂರಕವಾಗಿದೆ ಎಂದ ಸಹಾಯಕ ಆಯುಕ್ತರು, ಕೆಂಪೇ ಗೌಡರವರ ಆದರ್ಶಗಳನ್ನು 21ನೇ ಶತಮಾನದಲ್ಲಿ ಪಾಲಿಸಬೇಕು. ಇದಕ್ಕಾಗಿ ಅವರ ಜಯಂತಿಯ ಆಚರಣೆಗಳನ್ನು ಮಾಡಲಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಮಾತನಾಡಿ, ನಾಡಪ್ರಭು ಕೆಂಪೇ ಗೌಡರವರ ಕಾರ್ಯ, ದೈರ್ಯ, ಸಾಧನೆಯ ದೂರದೃಷ್ಠಿಯಲ್ಲಿ ಈಗಿನ ಬೆಂಗಳೂರು ನಿರ್ಮಾಣಗೊಂಡಿದೆ. ಅವರು ಒಕ್ಕಲಿಗ ಸಮುದಾಯದ ಏಳಿಗೆ ಮಾತ್ರ ಬಯಸದೇ ಇಡೀ ಸಮಾಜದ ಏಳಿಗೆಯನ್ನು ಬಯಸಿದ್ದರು. ನೀರಾವರಿಗೆ ಆಧ್ಯತೆ ನೀಡಿದ್ದ ಅವರು ಕಾಲುವೆಗಳ ನಿರ್ಮಾಣ, ಕುಲಕಸುಬುಗಳಿಗೆ ಪ್ರೇರಣೆ ನೀಡಲು ಮಾರುಕಟ್ಟೆಗಳ ನಿರ್ಮಾಣ ಮಾಡಿದ್ದ ಧೀಮಂತ ಅರಸರಾಗಿದ್ದಾರೆ ಎಂದರು.
ಒಕ್ಕಲಿಗ ಮಹಿಳಾ ಸಂಘದ ಅಧ್ಯಕ್ಷ ಮೀನಾಕ್ಷಿ ಡಿ.ಗೌಡ ಮಾತನಾಡಿ, ಶುಭಹಾರೈಸಿದರು.

ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಕೋಶಾಧಿಕಾರಿ ಲಿಂಗಪ್ಪ ಗೌಡ, ಪ್ರಮುಖರಾದ ಎ.ವಿ ನಾರಾಯಣ, ಶ್ರೀಧರ ಗೌಡ ಕಣಜಾಲು, ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳು, ಮಹಿಳಾ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಷಾಮಣಿ ದಯಾನಂದ ಪ್ರಾರ್ಥಿಸಿದರು. ತಾಲೂಕು ಕಚೇರಿಯ ದಯಾನಂದ ಸ್ವಾಗತಿಸಿ, ವಂದಿಸಿದರು. ಉಪ ತಹಶೀಲ್ದಾರ್ ಸುಲೋಚನ ಪಿ.ಕೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here