ಬೆಟ್ಟಂಪಾಡಿ ಸ.ಪ್ರ.ದ.ಕಾಲೇಜಿನ ವಿಸ್ತರಿತ ಕಟ್ಟಡ ಉದ್ಘಾಟನೆ

0

  • ಬೆಟ್ಟಂಪಾಡಿ ಕಾಲೇಜಿನ ಸಾಧನೆಗಳು ನನಗೆ ಸ್ಪೂರ್ತಿ ನೀಡಿದೆ -ಡಾ| ಅಶ್ವಥ್ ನಾರಾಯಣ್

 

 

ಬೆಟ್ಟಂಪಾಡಿ: ರಾಜ್ಯದ ಸರಕಾರಿ ಕಾಲೇಜುಗಳ ಪೈಕಿ ಅತ್ಯಂತ ವಿಶೇಷ ಸಾಧನೆ ಮಾಡಿರುವ ಬೆಟ್ಟಂಪಾಡಿ ಸರಕಾರಿ ಕಾಲೇಜಿನ ಸಾಧನೆಗಳು, ಇಲ್ಲಿನ ಶಾಸಕರ ಶಿಕ್ಷಣ ಕ್ಷೇತ್ರದ ಆಸಕ್ತಿ, ಪ್ರಾಂಶುಪಾಲರ ಕರ್ತವ್ಯ ಬದ್ದತೆ ನೋಡಿ ನನಗೆ ಸ್ಪೂರ್ತಿ ಸಿಕ್ಕಿದಂತಾಗಿದೆ ಎಂದು ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದರು.

ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಸ್ತರಿತ ಕಟ್ಟಡವನ್ನು ಜೂ. 29ರಂದು ಉದ್ಘಾಟಿಸಿ ಅವರು ಮಾತನಾಡಿದರು. ನೂತನ ಕಟ್ಟಡವನ್ನು ರಿಬ್ಬನ್ ಕತ್ತರಿಸಿ, ಶಾಸಕ ಸಂಜೀವ ಮಠಂದೂರು ನಾಮಫಲಕ ಅನಾವರಣಗೊಳಿಸಿ ಬಳಿಕ ಸಚಿವರು ಮತ್ತು ಗಣ್ಯರು ದೀಪ ಬೆಳಗಿಸಿದರು.

ಶಾಸಕನಾದವನ ಮೊದಲ ಕಾರ್ಯ ಶಿಕ್ಷಣ ಕ್ಷೇತ್ರದಲ್ಲಾಗಬೇಕು ಆ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ತೋರಿ ಉತ್ತಮ ಕಾರ್ಯ ಮಾಡುತ್ತಿರುವುದಕ್ಕೆ ಅಭಿನಂದನಾರ್ಹರು ಎಂದು ಸಚಿವ ಡಾ. ಅಶ್ವಥ್ ನಾರಾಯಣ್ ಮಾತು ಆರಂಭಿಸಿದರು.

ಉದ್ಯೋಗಾವಕಾಶದ ಸುಧಾರಿತ ತಂತ್ರಜ್ಞಾನ ಭರಿತ ಕಲಿಕೆಗೆ ಒತ್ತು : ವಿದ್ಯಾರ್ಥಿಗಳಲ್ಲಿ ಸುಧಾರಿತ ತಂತ್ರಜ್ಞಾನ ಭರಿತ ಕಲಿಕೆಗೆ ಒತ್ತು ನೀಡಿ ಪದವಿ ಶಿಕ್ಷಣದಲ್ಲಿಯೇ ಹಲವು ತಂತ್ರಜ್ಞಾನ ಪ್ರೇರಿತ ಪ್ರೋಗ್ರಾಮ್‌ಗಳನ್ನು ಉನ್ನತ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ. ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಮೂಲಕ 4000 ಕ್ಕಿಂತ ಅಧಿಕ ಕಂಪ್ಯೂಟರ್ ಪ್ರೋಗ್ರಾಮ್‌ಗಳನ್ನು ನೀಡಲಾಗಿದ್ದು, 11 ಲಕ್ಷ ವಿದ್ಯಾರ್ಥಿಗಳು ಇದರ ಬಳಕೆ ಮಾಡುತ್ತಿದ್ದಾರೆ. ಇಂತಹ ಪ್ರೋಗ್ರಾಮ್‌ಗಳ ಮೂಲಕ ಮಲ್ಟಿ ನ್ಯಾಷನಲ್ ಕಂಪೆನಿಗಳಲ್ಲಿ ಲಕ್ಷಾಂತರ ಉದ್ಯೋಗಾವಕಾಶ ಕಲ್ಪಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ. ಕಲಿಕೆಯಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹೊರತರುವ ಯೋಜನೆ ಇದಾಗಿದೆ ಎಂದು ಸಚಿವರು ಹೇಳಿದರು.

ನೂರಕ್ಕೆ ನೂರು ಉದ್ಯೋಗ: ರಾಜ್ಯದಲ್ಲಿ ನೂರಕ್ಕೆ ನೂರು ಉದ್ಯೋಗ ಮತ್ತು ವಿದ್ಯಾರ್ಥಿಗಳ ಕನಸಿನ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ಬಗ್ಗೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಡಿಜಿಟಲೈಸೇಷನ್ ಎಜುಕೇಶನ್: ಇಡೀ ಭಾರತದಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ ಉನ್ನತ ಶಿಕ್ಷಣದಲ್ಲಿ ಡಿಜಿಟಲೈಸೇಷನ್ ಎಜುಕೇಶನ್ ನೀಡುತ್ತಿರುವ ರಾಜ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕ ಬಂಧುಗಳಿಗೆ ನನ್ನ ಅಭಿನಂದನೆ ಎಂದು ಸಚಿವರು ಹೇಳಿದರು.

ವಿದ್ಯಾರ್ಥಿ ಸಾಧನೆ ಪರಿಶೀಲನಾ ವ್ಯವಸ್ಥೆ: ಡಿಜಿಟಲೈಸೇಷನ್‌ನಲ್ಲಿ ವಿದ್ಯಾರ್ಥಿಯ ಪ್ರತೀ ತರಗತಿವಾರು ಕಲಿಕೆಯ ಮಟ್ಟದ ಪರಿಶೀಲನೆ, ಅಧ್ಯಾಪಕರ ಕಲಿಕಾ ಮಟ್ಟದ ಪರಿಶೀಲನೆ ಇತ್ಯಾದಿ ಅಂಶಗಳನ್ನು ಆಯಾ ದಿನವೇ ಪರಿಶೀಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಕಾರ್ಯ ಆಗಲಿದೆ ಎಂದು ಸಚಿವರು ಹೇಳಿದರು.
ಜ್ಞಾನವಿಲ್ಲದಿದ್ದರೆ ಭವಿಷ್ಯವಿಲ್ಲ: ಜ್ಞಾನವೇ ಭವಿಷ್ಯದ ಸಂಪತ್ತು. ಜ್ಞಾನ ಇಲ್ಲದಿದ್ದರೆ ಭವಿಷ್ಯವಿಲ್ಲ. ನಮ್ಮ ಶಿಕ್ಷಣದ ಗುಣಮಟ್ಟವನ್ನು ಉಳಿಸಿಕೊಂಡು ಜಗತ್ತಿನ ಸ್ಪರ್ಧೆಯಲ್ಲಿ ನಾವೂ ಮುಂದೆ ಸಾಗಲೇಬೇಕಿದೆ. ಇದಕ್ಕೆ ಜ್ಞಾನ ಅತ್ಯಗತ್ಯ. ಇದಕ್ಕಾಗಿ ಸರಕಾರ ಖರ್ಚು ಮಾಡುತ್ತಿದೆ. ಕೇವಲ ಹಣದ ರೂಪದ ಖರ್ಚು ಮಾತ್ರವಲ್ಲದೇ ಗುಣಮಟ್ಟ ಹೆಚ್ಚಿಸುವಿಕೆಗೆ ಸುಧಾರಣೆಯ ಕೆಲಸವನ್ನು ಸರಕಾರ ಮಾಡುತ್ತಿದೆ’ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ `ಪ್ರಧಾನಿಯವರ ಆತ್ಮ ನಿರ್ಭರ ಭಾರತದ ಕನಸಿನಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ತಂತ್ರಜ್ಞಾನ ಆಧಾರಿತ ಶಿಕ್ಷಣ ಪಡೆದು ಉದ್ಯೋಗ ಪಡೆಯಬೇಕೆಂಬ ಹಿನ್ನೆಲೆಯಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆ ಮತ್ತು ಸಚಿವರು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಸಚಿವರ ಕಾರ್ಯತತ್ಪರತೆಯಿಂದಾಗಿ ಇಡೀ ದೇಶದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವ ಕಾರ್ಯ ಆಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿಯವರು `ಬೆಟ್ಟಂಪಾಡಿಯಲ್ಲಿ ಕಾಲೇಜು ಕಾರ್ಯಾರಂಭವಾಗಿ ೩೦ ವರ್ಷಗಳ ಸುದೀರ್ಘ ಇತಿಹಾಸಕ್ಕೆ ಮತ್ತೊಂದು ಹೊಸ ಕಟ್ಟಡ ಸೇರ್ಪಡೆಯಾಗಿ ಅದರ ಉದ್ಘಾಟನೆಗೆ ಉನ್ನತ ಶಿಕ್ಷಣ ಸಚಿವರೇ ಬಂದಿರುವುದು ನಮಗೆಲ್ಲಾ ಸಂತೋಷ, ಉತ್ಸಾಹ ತಂದಿದೆ. ಹಂತಹಂತವಾಗಿ ಅಭಿವೃದ್ಧಿಗೊಳ್ಳುತ್ತಾ ಬಂದ ಕಾಲೇಜು ಇನ್ನಷ್ಟು ವಿಸ್ತರಣೆಯಾಗುವುದಕ್ಕೆ ಇದು ಮುನ್ನುಡಿಯಾಗಿದೆ’ ಎಂದು ಹೇಳಿ ಕಾಲೇಜಿನ ಸಾಧನೆಗಳ ಸಂಕ್ಷಿಪ್ತ ನೋಟವನ್ನು ಸಚಿವರ ಮುಂದಿಟ್ಟರು.

ವೇದಿಕೆಯಲ್ಲಿ ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಡಿ., ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೀತಾ, ಕಾಲೇಜು ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯ ಕೆ.ಎಸ್. ರಂಗನಾಥ ರೈ, ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಡಾ. ಜೆನ್ನಿಫರ್ ಲೊಲಿಟ ಸಿ., ಪುತ್ತೂರಿನ ತಹಶಿಲ್ದಾರ್ ನಿಸರ್ಗಪ್ರಿಯ ಉಪಸ್ಥಿತರಿದ್ದರು.

ಕಾಲೇಜಿನ ಲಿಖಿತಾ ಮತ್ತು ತಂಡದವರಿಂದ ನಾಡಗೀತೆ ನಡೆಯಿತು. ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ನಿರೀಕ್ಷಣ್ ಸಿಂಗ್ ಗೌಗಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಸಹಕರಿಸಿದರು. ಚೆಂಡೆಮೇಳದೊಂದಿಗೆ ಗಣ್ಯರಿಗೆ ಸ್ವಾಗತ ನೀಡಲಾಯಿತು. ಕರ್ನಾಟಕ ಗೃಹಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎ. ವಿಜಯ ಕುಮಾರ್ ಭಂಡಾರಿ, ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸದಸ್ಯರುಗಳು, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬೆಟ್ಟಂಪಾಡಿ ಹಾಗೂ ನಿಡ್ಪಳ್ಳಿ ಗ್ರಾ.ಪಂ. ಸದಸ್ಯರುಗಳು ಸೇರಿದಂತೆ ಜನಪ್ರತಿನಿಧಿಗಳು, ಊರಿನ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಟಾಪ್ 7 ಸರಕಾರಿ ಕಾಲೇಜುಗಳು

ಸುಧಾರಿತ ತಂತ್ರಜ್ಞಾನ ಭರಿತ ಕಲಿಕಾ ಪ್ರೋಗ್ರಾಮ್‌ಗಳನ್ನು ಬಳಸುತ್ತಿರುವ ರಾಜ್ಯದ ಟಾಪ್ 10  ಕಾಲೇಜುಗಳಲ್ಲಿ 7ಸರಕಾರಿ ಕಾಲೇಜುಗಳು ಸೇರಿವೆ. ಇದು ಸರಕಾರಿ ಕಾಲೇಜುಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಪ್ರತಿನಿಧಿಸುತ್ತಿದೆ’ ಎಂದು ಸಚಿವರು ಹೇಳಿದರು.

ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಪೇಕ್ಷೆ – ಸಂಜೀವ ಮಠಂದೂರು

ಅಧ್ಯಕ್ಷೀಯ ಭಾಷಣದಲ್ಲಿ ಶಾಸಕ ಸಂಜೀವ ಮಠಂದೂರುರವರು `ಗಡಿನಾಡ ಕನ್ನಡಿಗರಿಗೆ ಗ್ರಾಮೀಣ ಪರಿಸರದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೇಕು ಎನ್ನುವ ಅಪೇಕ್ಷೆ ಇದೆ. ಪಟ್ಟಣ ಪ್ರದೇಶಕ್ಕಿಂತಲೂ ಸುಂದರ ಮತ್ತು ಕಲಿಕಾ ಪೂರಕ ವಾತಾವರಣವಿರುವ ಬೆಟ್ಟಂಪಾಡಿಯ ಗ್ರಾಮೀಣ ಪ್ರದೇಶದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆಯುವಲ್ಲಿ ಸಚಿವರು ಮನಸ್ಸು ಮಾಡಬೇಕು’ ಎಂದು ಹೇಳಿದರು. ವೇದಿಕೆಯಲ್ಲಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯರಾದ ಕೆ.ಎಸ್. ರಂಗನಾಥ ರೈ ಗುತ್ತು ಸಚಿವರಿಗೆ ಮನವಿ ಸಲ್ಲಿಸಿದರು.

ಪುತ್ತೂರು ಮಾದರಿ ಸಮಾಜ -ಡಾ| ಅಶ್ವಥ್

ತನ್ನ ಮಾತಿನ ಮಧ್ಯೆ ಪುತ್ತೂರಿನ ಜನತೆಯನ್ನು ಹೊಗಳಿದ ಸಚಿವ ಡಾ| ಅಶ್ವಥ್ ನಾರಾಯಣರವರು `ಪುತ್ತೂರಿನ ಜನತೆ ಪ್ರಗತಿಪರರು, ಇಲ್ಲಿನ ಸಮಾಜ ಕರ್ನಾಟಕದಲ್ಲಿಯೇ ಮಾದರಿ ಸಮಾಜವಾಗಿದೆ. ಎಳೆಯ ವಯಸ್ಸಿನಿಂದಲೇ ಪುತ್ತೂರಿನ ಬಗ್ಗೆ ತಿಳಿದುಕೊಂಡಿದ್ದೇನೆ. ಬೆಂಗಳೂರಿನಲ್ಲಿ ಕುಳಿತು ನಾವು ಉತ್ತಮ ಸಮಾಜಕ್ಕೆ ಪುತ್ತೂರನ್ನು ಹೆಸರಿಸುತ್ತೇವೆ’ ಎಂದರು.

ಒಂದು ದಿನದಲ್ಲಾದ ಕಾರ್ಯಕ್ರಮ
ಬೆಟ್ಟಂಪಾಡಿ ಕಾಲೇಜಿನ ವಿಸ್ತರಿತ ಕಟ್ಟಡ ಸಚಿವರಿಂದ ಉದ್ಘಾಟನಾ ಕಾರ್ಯಕ್ರಮ ಕೇವಲ ಒಂದು ದಿನದಲ್ಲಿ ನಿಗದಿಯಾಗಿ ಆಗಿರುವ ಕಾರ್ಯಕ್ರಮವಾಗಿದೆ. ಸಚಿವರ ಪ್ರವಾಸ ವೇಳಾಪಟ್ಟಿಯ ಅನ್ವಯ ಹೊಂದಾಣಿಕೆ ಮಾಡಿಕೊಂಡು ಶಾಸಕ ಸಂಜೀವ ಮಠಂದೂರುರವರ ಕೇಳಿಕೆಯಂತೆ ಈ ಕಾರ್ಯಕ್ರಮವನ್ನು ನಿಗದಿಗೊಳಿಸಲಾಗಿದೆ. ಕೇವಲ ಒಂದು ದಿನದ ಪೂರ್ವ ಸಿದ್ದತೆಯಲ್ಲಿ ಕಾಲೇಜಿನ ಉಪನ್ಯಾಸಕ ಮತ್ತು ವಿದ್ಯಾರ್ಥಿ ತಂಡ ಅವಿರತವಾಗಿ ಶ್ರಮಿಸಿ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದೆ.

LEAVE A REPLY

Please enter your comment!
Please enter your name here