ಹೈಡ್ರಾಮಕ್ಕೆ ಸಾಕ್ಷಿಯಾದ ಪುತ್ತೂರು ಪತ್ರಕರ್ತರ ಸಂಘದ ಮಹಾಸಭೆ

0

  • ಸದಸ್ಯರ ಆಕ್ಷೇಪಣೆ ಚುನಾವಣೆ ಮುಂದೂಡಿಕೆ
  • ಶ್ರವಣ್ ನೇತೃತ್ವದ ಆಡಳಿತ ಮಂಡಳಿ ಮುಂದುವರಿಕೆ: ಕೆಳಗಿಳಿಸಲೇಬೇಕು ಎಂದು ಪಣ ತೊಟ್ಟಿದ್ದ ಬಣಕ್ಕೆ ಹಿನ್ನಡೆ
  • ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿ ವಿಷಾದ ಪತ್ರ ನೀಡಿದ  ಅನೀಶ್ ಕುಮಾರ್

ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಹಾಸಭೆಯಲ್ಲಿ ಹೈಡ್ರಾಮ ನಡೆದಿದೆ. ಪರಸ್ಪರ ಚಕಮಕಿ ಮತ್ತು ವಾಗ್ವಾದಕ್ಕೆ ಮಹಾಸಭೆ ಸಾಕ್ಷಿಯಾಗಿದೆ. ಸಂಘದ ಮಹಾಸಭೆಗೆ ಬಂದು ಕುಳಿತಿದ್ದ ಉಚ್ಛಾಟಿತ ಸದಸ್ಯ ಅನೀಶ್ ಕುಮಾರ್‌ರವರನ್ನು ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರು ಏರು ಧ್ವನಿಯಲ್ಲಿ ಜೋರು ಮಾಡಿ ಸಭೆಯಿಂದ ಹೊರಗೆ ಕಳುಹಿಸಿದ ಮತ್ತು ಅನೀಶ್ ಪರವಾಗಿ ಹಿರಿಯ ಸದಸ್ಯರಾದ ಶಶಿಧರ ರೈ ಕುತ್ಯಾಳ, ಮೇಘ ಪಾಲೆತ್ತಡಿ ಮತ್ತು ಅಜಿತ್ ಕುಮಾರ್‌ರವರು ಬ್ಯಾಟಿಂಗ್ ನಡೆಸಿದ ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡು ಇನ್ನು ಮುಂದಕ್ಕೆ ಆ ರೀತಿ ಮಾಡುವುದಿಲ್ಲ ಎಂದು ಅನೀಶ್ ಕುಮಾರ್ ಸಲ್ಲಿಸಿದ ಕ್ಷಮಾಪಣಾ ಪತ್ರವನ್ನು ಅಂಗೀಕರಿಸಿದ ಘಟನೆ ನಡೆಯಿತು. ಮಾತ್ರವಲ್ಲದೆ, ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೆದು ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ಆಸೆ ಪಟ್ಟಿದ್ದ ಕೆಲವರಿಗೆ ನಿರಾಶೆಯಾದ ಘಟನೆಯೂ ಮಹಾಸಭೆಯಲ್ಲಿ ಜರಗಿತು. ಸಂಘದಲ್ಲಿ ಕೈಗೊಂಡಿರುವ ನಿರ್ಣಯಕ್ಕೆ ಅನುಗುಣವಾಗಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿಲ್ಲ. ಆದ್ದರಿಂದ ಪದಾಧಿಕಾರಿಗಳ ಆಯ್ಕೆಗೆ ತಡೆ ನೀಡಬೇಕು ಎಂದು ಸದಸ್ಯರಾದ ದೀಪಕ್ ಉಬಾರ್ ಮತ್ತು ನಝೀರ್ ಕೊಯಿಲರವರು ಆಕ್ಷೇಪಣಾ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸುಧಾಕರ ಪಡೀಲ್‌ರವರು ಚುನಾವಣೆಗೆ ತಡೆ ನೀಡಿದ್ದು ಕೆಲವು ಸದಸ್ಯರ ನಿರಾಶೆಗೆ ಕಾರಣವಾಯಿತು. ಚುನಾವಣಾಧಿಕಾರಿಯವರ ಈ ನಡೆಯಿಂದಾಗಿ ಶ್ರವಣ್ ಕುಮಾರ್ ನಾಳರವರನ್ನು ಇಂದೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪಣ ತೊಟ್ಟಿದ್ದ ಮತ್ತು ಶ್ರಾವಣ ಮಾಸ (ಶ್ರವಣ್‌ರವರ ಅಧ್ಯಕ್ಷತೆಯ ಅವಧಿ) ಅಂತ್ಯವಾಗುತ್ತದೆ ಎಂದು ನಿರೀಕ್ಷಿಸಿದ್ದ ಬಣಕ್ಕೆ ಅದಕ್ಕಾಗಿ ಪೂರ್ವ ತಯಾರಿ ಮಾಡಿ ಬಂದಿದ್ದವರಿಗೆ ಈ ದಿಡೀರ್ ಬೆಳವಣಿಗೆಯಿಂದ ತೀವ್ರ ನಿರಾಶೆ ಉಂಟಾಯಿತು. ಈ ಘಟನೆಯಿಂದಾಗಿ ಪುತ್ತೂರು ತಾಲೂಕು ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಕುತೂಹಲದ ಕೇಂದ್ರಬಿಂದುವಾಗಿ ಮುಂದುವರಿಯಿತು.

ಮಹಾಸಭೆಯ ಡಿಟೇಲ್ಸ್: ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಜುಲೈ 9ರಂದು ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ಮಹಾಸಭೆಯಲ್ಲಿ `ಸ್ವಾಗತ, ವರದಿ ವಾಚನ, ಲೆಕ್ಕಪತ್ರ ಮಂಡನೆ, ಲೆಕ್ಕಪತ್ರಕ್ಕೆ ಅನುಮೋದನೆ, ಸದಸ್ಯತ್ವ ಬಯಸಿ ಬಂದ ಅರ್ಜಿಗಳ ಬಗ್ಗೆ ಚರ್ಚೆ, ಇತರ ವಿಚಾರಗಳು ನಡೆದು ಮತ್ತೆ ಹೊಸ ಪದಾಧಿಕಾರಿಗಳ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ನಡೆಸುವುದು’ ಎಂದು ಅಜೆಂಡಾ ಸಿದ್ಧಪಡಿಸಲಾಗಿತ್ತು. ಸಭೆಯ ಆರಂಭದಲ್ಲಿ ಅಧ್ಯಕ್ಷರಾದಿಯಾಗಿ ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು. ಸದಸ್ಯರು ವೇದಿಕೆಯ ಮುಂಭಾಗದಲ್ಲಿ ಕುಳಿತಿದಿದ್ದರು. ಕಾರ್ಯದರ್ಶಿ ಐ.ಬಿ. ಸಂದೀಪ್ ಕುಮಾರ್‌ರವರು ಸ್ವಾಗತಿಸಿ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದಂತೆಯೇ ಸಭೆಯಲ್ಲಿ ಗೊಂದಲ ಪ್ರಾರಂಭವಾಯಿತು. ಪ್ರತಿಷ್ಠಿತ ಪತ್ರಿಕಾ ಭವನದಲ್ಲಿ ಕುಡಿಯುವುದು, ಕುಡಿದು ಮಲಗುವುದು, ಗುಟ್ಕಾ ತಿಂದು ಉಗುಳುವುದು, ರಾತ್ರಿ ವೇಳೆ ಮಹಿಳೆಯನ್ನು ಪತ್ರಿಕಾ ಭವನಕ್ಕೆ ಕರೆ ತರುವುದು, ಬ್ಲ್ಯಾಕ್‌ಮೇಲ್ ಮಾಡುವುದು ಇತ್ಯಾದಿ ಕಾನೂನು ಬಾಹಿರ ಕಾರ್ಯ ಚಟುವಟಿಕೆಗಳ ಮೂಲಕ ಪತ್ರಿಕಾ ಭವನವನ್ನು ದುರ್ಬಳಕೆ ಮಾಡಿಕೊಂಡಿರುವ ಕಾರಣಕ್ಕಾಗಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮತ್ತು ಸದಸ್ಯ ಸ್ಥಾನದಿಂದ ಉಚ್ಚಾಟಿಸಲ್ಪಟ್ಟಿದ್ದರೂ ಮತ್ತು ಉಚ್ಛಾಟನೆಯ ಆದೇಶ ಜಾರಿಯಲ್ಲಿದ್ದರೂ ಅನೀಶ್ ಕುಮಾರ್‌ರವರು ಸಭೆಯಲ್ಲಿ ಬಂದು ಕುಳಿತಿರುವುದು ಅಧ್ಯಕ್ಷ ಶ್ರವಣ್ ಕುಮಾರ್‌ರವರನ್ನು ಕೆರಳಿಸಿತು. `ಸದಸ್ಯರಲ್ಲದವರು ಸಭೆಯಿಂದ ಹೊರಗೆ ಹೋಗಬೇಕು’ ಎಂದು ಅಧ್ಯಕ್ಷ ಶ್ರವಣ್ ಕುಮಾರ್ ಹೇಳಿದಾಗ `ಸದಸ್ಯರಲ್ಲದವರು ಸಭೆಯಲ್ಲಿ ಯಾರೂ ಇಲ್ಲವಲ್ಲ’ ಎಂದು ಶಶಿಧರ ರೈ ಕುತ್ಯಾಳ ಹೇಳಿದರು. ಈ ವೇಳೆ ಗರಂ ಆದ ಅಧ್ಯಕ್ಷರು `ಅನೀಶ ಸಭೆಯಿಂದ ಹೊರಗೆ ಹೋಗು’ ಎಂದರು. ಈ ವೇಳೆ ಶಶಿಧರ ರೈ ಕುತ್ಯಾಳ, ಮೇಘ ಪಾಲೆತ್ತಡಿ, ಪ್ರವೀಣ್ ಕುಮಾರ್ ಬೊಳುವಾರು ಮತ್ತು ಅಜಿತ್ ಕುಮಾರ್‌ರವರು ಅಧ್ಯಕ್ಷರು ಒಬ್ಬರೇ ತೀರ್ಮಾನ ಕೈಗೊಳ್ಳುವಂತಿಲ್ಲ, ಸದಸ್ಯರ ಅಭಿಪ್ರಾಯ ಮುಖ್ಯ ಎಂದು ಅನೀಶ್ ಕುಮಾರ್ ಪರ ಧ್ವನಿ ಎತ್ತಿದರು. ಪತ್ರಿಕಾ ಭವನವನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕಾಗಿ ಅನೀಶ್ ಕುಮಾರ್‌ರವರನ್ನು ಈಗಾಗಲೇ ಸಂಘದಿಂದ ಉಚ್ಚಾಟಿಸಲಾಗಿದೆ. ಅಂದಿನ ಅನಿವಾರ್ಯ ಸಂದರ್ಭದಲ್ಲಿ ತುರ್ತು ಕ್ರಮ ಕೈಗೊಳ್ಳಲಾಗಿದೆ, ಸದಸ್ಯರ ಅಭಿಪ್ರಾಯಗಳಿಗೂ ಮನ್ನಣೆ ನೀಡಲಾಗುವುದು ಎಂದು ಶ್ರವಣ್ ಕುಮಾರ್ ನಾಳ ಹೇಳಿದರು. ಆದರೆ, ಅನೀಶ್ ಕುಮಾರ್ ಸಭೆಯಿಂದ ಹೊರಗೆ ಹೋಗದೆ ಅಲ್ಲಿಯೇ ಕುಳಿತಾಗ ಏರು ಧ್ವನಿಯಲ್ಲಿ ಮಾತನಾಡಿದ ಶ್ರವಣ್‌ರವರು ಅನೀಶ್ ಹೊರಗೆ ಹೋಗದೇ ಇದ್ದರೆ ಸಭೆ ನಡೆಸುವುದಿಲ್ಲ ಎಂದರು. `ನಾನು ಹೋಗುವುದಿಲ್ಲ’ ಎಂದು ಅನೀಶ್ ಹೇಳಿದರು. `ನಿನ್ನಲ್ಲಿ ಮಾತನಾಡಿಲ್ಲ, ಹೋಗದೇ ಸಭೆ ಆರಂಭಿಸುವುದಿಲ್ಲ’ ಎಂದು ಹೇಳಿದ ಶ್ರವಣ್‌ರವರು ಉಚ್ಚಾಟಿಸಲ್ಪಟ್ಟವರು ಸಭೆಯಲ್ಲಿ ಇರುವುದಾದರೆ ನಾನು ಹೊರಗೆ ಹೋಗುತ್ತೇನೆ ಎಂದೂ ಹೇಳಿದರು. `ಅಧ್ಯಕ್ಷರು ಹೊರಗೆ ಹೋದ್ರೆ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸುತ್ತೇವೆ’ ಎಂದು ಮೇಘ ಪಾಲೆತ್ತಡಿ ಹೇಳಿದರು. `ನಾನು ಅಧ್ಯಕ್ಷತೆ ವಹಿಸಿಕೊಳ್ಳುವುದಿಲ್ಲ’ ಎಂದು ಸಂಘದ ಉಪಾಧ್ಯಕ್ಷ ಸರ್ವೇಶ್ ಕುಮಾರ್ ಉಪ್ಪಿನಂಗಡಿ ಹೇಳುವ ಮೂಲಕ ಮೇಘ ಪಾಲೆತ್ತಡಿಗೆ ಟಾಂಗ್ ನೀಡಿದರು. ಶ್ರವಣ್ ಕುಮಾರ್‌ರವರು ದಿಟ್ಟ ನಿರ್ಧಾರದಿಂದ ಹಿಂದೆ ಸರಿಯದೇ ಇರುವುದನ್ನು ಗಮನಿಸಿದ ಶಶಿಧರ ರೈ ಕುತ್ಯಾಳರವರು `ಅನೀಶ್ ಈರ್ ಪಿದಾಯಿ ಪೋಲೆ ಬುಕ್ಕ ತೂಕ’ ಎಂದರು. ನಂತರ ಅನೀಶ್ ಅವರನ್ನು ಹಿರಿಯ ಸದಸ್ಯ ಉಮಾಶಂಕರ್ ಪಾಂಗಳಾಯಿರವರು ಹೊರಗೆ ಕರೆದುಕೊಂಡು ಹೋದರು.

ಲೆಕ್ಕಪತ್ರ ಮರು ಪರಿಶೀಲನೆ: ಬಳಿಕ ಕಾರ್ಯದರ್ಶಿ ಐ.ಬಿ. ಸಂದೀಪ್ ಕುಮಾರ್ ವರದಿ ವಾಚಿಸಿ ಸದಸ್ಯರಿಂದ ಅಂಗೀಕಾರ ಪಡೆದುಕೊಂಡರು. ಕೋಶಾಧಿಕಾರಿ ಕೃಷ್ಣಪ್ರಸಾದ್ ಬಲ್ನಾಡುರವರು ಲೆಕ್ಕಪತ್ರ ಮಂಡಿಸಬೇಕಾಗಿತ್ತಾದರೂ ಅವರ ಉಪಸ್ಥಿತಿಯಲ್ಲಿ ಅಧ್ಯಕ್ಷರು ಲೆಕ್ಕಪತ್ರ ಮಂಡಿಸಿದರು. ಶ್ರವಣ್ ಕುಮಾರ್ ನೇತೃತ್ವದಲ್ಲಿ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸಿರುವುದು, ಪತ್ರಿಕಾ ಭವನವನ್ನು ಅಭಿವೃದ್ಧಿ ಪಡಿಸಿರುವುದು ಮುಂತಾದ ವಿಚಾರಗಳನ್ನು ಶ್ಲಾಸಿ ಮಾತನಾಡಿದ ಉದಯ ಕುಮಾರ್ ಯು.ಎಲ್. ಉಪ್ಪಿನಂಗಡಿ, ಸರ್ವೇಶ್ ಕುಮಾರ್, ಸಿದ್ದೀಕ್ ಕುಂಬ್ರ, ದೀಪಕ್ ಉಬಾರ್, ಸಿದ್ದೀಕ್ ನೀರಾಜೆ, ನಝೀರ್ ಕೊಯಿಲ ಮತ್ತಿತರರು ಲೆಕ್ಕಪತ್ರದಲ್ಲಿ ಸಣ್ಣ ಪುಟ್ಟ ಗೊಂದಲ ಇರುವುದರಿಂದ ಲೆಕ್ಕಪತ್ರವನ್ನು ಮರು ಪರಿಶೀಲಿಸಬೇಕು ಮತ್ತು ದೊಡ್ಡ ಬಜೆಟ್‌ನ ಲೆಕ್ಕ ಇರುವುದರಿಂದ ಈ ಬಗ್ಗೆ ಇನ್ನೊಂದು ಸಭೆ ಕರೆಯಬೇಕು ಎಂದು ಒತ್ತಾಯಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ನಝೀರ್ ಕೊಯಿಲ ಹೇಳಿಕೆಯಿಂದ ಕೆರಳಿದರು: ಈ ಮಧ್ಯೆ, ಲೆಕ್ಕಪತ್ರ ಇನ್ನೊಮ್ಮೆ ಮಂಡನೆ ಆಗುವವರೆಗೆ ಶ್ರವಣ್ ಕುಮಾರ್‌ರವರೇ ಅಧ್ಯಕ್ಷರಾಗಿ ಮುಂದುವರಿಯಲಿ ಎಂದು ನಝೀರ್ ಕೊಯಿಲ ಹೇಳಿದ್ದು ಶಶಿಧರ ರೈ ಕುತ್ಯಾಳ, ಮೇಘ ಪಾಲೆತ್ತಡಿ ಮತ್ತು ಅಜಿತ್ ಕುಮಾರ್‌ರವರನ್ನು ಕೆರಳಿಸಿತು. ಅವರೇ ಮುಂದುವರಿಯುವುದಾದರೆ ಮಹಾಸಭೆ ಯಾಕೆ, ಚುನಾವಣೆ ಯಾಕೆ ಎಂದು ಶಶಿ, ಮೇಘ, ಅಜಿತ್ ಪ್ರಶ್ನಿಸಿದರು. ನಾನು ನಾಮಿನೇಶನ್ ಹಾಕಿ ಅಧ್ಯಕ್ಷನಾಗಿ ಆಯ್ಕೆಯಾದರೆ ಲೆಕ್ಕಪತ್ರದ ಜವಾಬ್ದಾರಿ ನನ್ನ ಮೇಲೆ ಬರುತ್ತದೆ, ಹಾಗಾಗಿ ಲೆಕ್ಕಪತ್ರ ಅಂಗೀಕಾರ ಆಗುವವರೆಗೆ ಶ್ರವಣ್ ಅಧ್ಯಕ್ಷರಾಗಿ ಮುಂದುವರಿಯಲಿ ಎಂದು ನಝೀರ್ ಹೇಳಿದರು. ಅಧ್ಯಕ್ಷರ ನಿಲುವಿಗೆ ನಮ್ಮ ಬೆಂಬಲ ಎಂದು ಉದಯ ಕುಮಾರ್ ಹೇಳಿದಾಗ ಇತರ ಸದಸ್ಯರು ಬೆಂಬಲ ಸೂಚಿಸಿದರು. ಬಳಿಕ ಈ ಚರ್ಚೆಗೆ ತೆರೆ ಬಿತ್ತು. ನಂತರ `ಇತರ ವಿಚಾರಗಳು’ ಅಜೆಂಡಾದಲ್ಲಿ ಚರ್ಚೆ ನಡೆದಾಗ ಸಂಘಕ್ಕೆ ಸದಸ್ಯತ್ವ ಬಯಸಿ ಬಂದಿರುವ ಅರ್ಜಿಗಳ ಬಗ್ಗೆ ಚರ್ಚೆ ನಡೆಯಿತು. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆ ನಡೆಸುವ ಎಂದು ಶಶಿಧರ ರೈ ಹೇಳಿದರು. ಈ ಸಭೆಯಲ್ಲಿಯೇ ತೀರ್ಮಾನ ಕೈಗೊಳ್ಳೋಣ, ಎರಡು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿರುವವರಿಗೆ ನಾವು ಸ್ಪಂದಿಸುತ್ತಿಲ್ಲ ಎಂದಾದರೆ ಏನರ್ಥ ಎಂದು ಉದಯ ಕುಮಾರ್ ಹೇಳಿದರಲ್ಲದೆ, ಎಷ್ಟು ಮಂದಿ ಅರ್ಜಿ ಸಲ್ಲಿಸಿ ಸದಸ್ಯತ್ವಕ್ಕಾಗಿ ಕಾಯಬೇಕು ಎಂದು ಪ್ರಶ್ನಿಸಿದರು. ಹೊಸ ಟೀಂ ಬಂದ ನಂತರ ಅರ್ಜಿಯ ಬಗ್ಗೆ ಚರ್ಚೆ ನಡೆಸುವುದು ಎಂದು ಎಂದು ಶಶಿಧರ ರೈ ಹೇಳಿದರು. ಆ ವಿಷಯದ ಬಗ್ಗೆ ಸಭೆಯಲ್ಲಿ ಯಾವುದೇ ತೀರ್ಮಾನವಾಗಲಿಲ್ಲ. ಸಂಘದ ಇತರ ವಿಚಾರಕ್ಕೆ ಸಂಬಂಧಿಸಿ ಸಂಘಕ್ಕೆ ಹೊಸ ಬೈಲಾ ರಚಿಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತಲ್ಲದೆ ಹೊಸ ಬೈಲಾ ರಚನೆಯ ಜವಾಬ್ದಾರಿಯನ್ನು ಉದಯ ಕುಮಾರ್, ಮೇಘ ಪಾಲೆತ್ತಡಿ, ಶಶಿಧರ ರೈ, ಸಂಶುದ್ದೀನ್ ಸಂಪ್ಯ, ಸುಧಾಕರ ಸುವರ್ಣರವರಿಗೆ ವಹಿಸಲಾಯಿತು. ಪತ್ರಿಕಾ ಭವನದಲ್ಲಿ ನಮ್ಮ ಸಂಘದ ಕಾರ್ಯ ಚಟುವಟಿಕೆಗೂ ಅವಕಾಶ ನೀಡಬೇಕು ಎಂದು ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ಘಟಕದ ಪದಾಧಿಕಾರಿಗಳು ನೀಡಿರುವ ಅರ್ಜಿಯ ವಿಚಾರ ಚರ್ಚೆಗೆ ಬಂದಾಗ ಕರ್ನಾಟಕ ಪತ್ರಕರ್ತರ ಸಂಘದವರು ನಮಗೆ ನೇರವಾಗಿ ಅರ್ಜಿ ನೀಡಿಲ್ಲ. ಜಿಲ್ಲಾಧಿಕಾರಿಯವರಿಗೆ ನೀಡಿದ ಮನವಿಯ ಯಥಾಪ್ರತಿಯನ್ನಷ್ಟೇ ನಮಗೆ ನೀಡಿದ್ದಾರೆ. ಹಾಗಾಗಿ ಅದನ್ನು ನಮಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತವಾಯಿತು. ಮುಂದೆ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಎಂದು ಹೇಳಿ ಚರ್ಚೆಗೆ ತೆರೆ ಎಳೆಯಲಾಯಿತು.

ಶಶಿಧರ್ ರೈ, ಮೇಘ ಪಾಲೆತ್ತಡಿ ಪಟ್ಟು: ಈ ವೇಳೆ ಮತ್ತೆ ಅನೀಶ್ ಕುಮಾರ್ ವಿಚಾರ ಪ್ರಸ್ತಾಪವಾಯಿತು. ಅನೀಶ್ ಕುಮಾರ್ ಅವರನ್ನು ಸಭೆಗೆ ಕರೆಯುವಂತೆ ಶಶಿಧರ ರೈ ಮತ್ತು ಮೇಘ ಪಾಲೆತ್ತಡಿ ಪಟ್ಟು ಹಿಡಿದರು. ಅನೀಶ್ ಕುಮಾರ್‌ರವರನ್ನು ಸಂಘದಿಂದ ಉಚ್ಚಾಟಿಸಲಾಗಿದೆ. ಅವರಿಗೆ ಪ್ರತಿಕ್ರಿಯೆ ನೀಡಲು ಕಾಲಾವಕಾಶ ನೀಡಲಾಗಿದೆ. ಅವರಿಂದ ಇದುವರೆಗೂ ಉತ್ತರ ಬಂದಿಲ್ಲ ಎಂದು ಶ್ರವಣ್ ಕುಮಾರ್ ಹೇಳಿದರು. `ಉತ್ತರ ಬಂದಿದೆಯಲ್ವ’ ಎಂದು ಕಾರ್ಯದರ್ಶಿ ಸಂದೀಪ್ ಕುಮಾರ್ ಹೇಳಿದರು. ಬಂದಿದ್ದರೆ ನನಗೆ ತಿಳಿಸಿಲ್ಲವಲ್ಲ, ನನ್ನ ಗಮನಕ್ಕೆ ಬಂದಿಲ್ಲವಲ್ಲ ಎಂದು ಶ್ರವಣ್ ಕುಮಾರ್ ಹೇಳಿದರು. ಅನೀಶ್ ಅವರ ಬಿಹೇವಿಯರ್ ಈಗ ತುಂಬಾ ಸರಿಯಾಗಿದೆ ಎಂದು ಶಶಿಧರ ರೈ ಹೇಳಿದರು. ಅನೀಶ್‌ರವರು ರಾತ್ರಿವೇಳೆ ಪತ್ರಿಕಾ ಭವನದ ಎ.ಸಿ. ಕೊಠಡಿಯಲ್ಲಿ ಮಲಗಿದ್ದದ್ದು ಸತ್ಯ, ಅವರು ಇನ್ನು ಮುಂದೆ ಹಾಗೆ ಮಾಡಲಿಕ್ಕೆ ಇಲ್ಲ ಎಂದು ಅನಿಶರ ಬಗ್ಗೆ ಗ್ಯಾರೆಂಟಿ ನೀಡಿದ ಶಶಿಧರ್ ರೈರವರು ಅನೀಶರನ್ನು ಮತ್ತೆ ಸಂಘಕ್ಕೆ ಕರೆಯಬೇಕು ಎಂದರು. ಸದಸ್ಯರು ಏನೇ ಹೇಳಲಿ, ಅಧ್ಯಕ್ಷರ ನಿರ್ಣಯಕ್ಕೆ ತಲೆ ಬಾಗಲೇಬೇಕು ಎಂದು ಉದಯ ಕುಮಾರ್ ಹೇಳಿದರು. ಚರ್ಚೆ ನಡೆಯುತ್ತಿದ್ದಂತೆಯೇ ಅನೀಶ್ ಕುಮಾರ್‌ರವರ ಕ್ಷಮಾಪಣಾ ಪತ್ರ ಓದಲಾಯಿತು. ತಪ್ಪನ್ನು ಒಪ್ಪಿಕೊಂಡು ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಎಂದು ವಿಷಾದ ವ್ಯಕ್ಷಪಡಿಸಿ ಅನೀಶ್ ಕುಮಾರ್ ಸಲ್ಲಿಸಿದ್ದ ಕ್ಷಮಾಪಣಾ ಪತ್ರವನ್ನು ಅಂಗೀಕರಿಸಲಾಯಿತು. ನಂತರ ಅನೀಶ್ ಸಭೆಗೆ ಹಾಜರಾದರು.

ಇನ್ನು ಮಲಗಲು ಇಲ್ಲ: ಪತ್ರಿಕಾಭವನದಲ್ಲಿ ಇನ್ನು ಮುಂದೆ ಯಾರೂ ಕೂಡ ರಾತ್ರಿ ಮಲಗುವಂತಿಲ್ಲ. ಬೆಳಿಗ್ಗೆ 9.30ರಿಂದ ಸಂಜೆ 7.30ರವರೆಗೆ ಪತ್ರಿಕಾಭವನ ತೆರೆದಿಡುವುದು. ಆ ಬಳಿಕ ಅನಿವಾರ್ಯವಾಗಿ ಪತ್ರಿಕಾಭವನದಲ್ಲಿ ಇರಬೇಕೆಂದಾದರೆ ಮೆನೇಜರ್‌ರವರಿಗೆ ಮಾಹಿತಿ ನೀಡಬೇಕು. ಮೆನೇಜರ್ ಕೀ ಪಡೆದು ಮಲಗಬಹುದು. ಯಾರೆಲ್ಲಾ ವಾಸವಾಗುತ್ತಾರೆ ಎಂದು ಮೆನೇಜರ್ ಮಾಹಿತಿ ದಾಖಲಿಸುವ ಕೆಲಸವಾಗಬೇಕು. ಆದರೆ ಪತ್ರಿಕಾಗೋಷ್ಠಿ ನಡೆಯುವ ಹವಾನಿಯಂತ್ರಿತ ಕೊಠಡಿ ಬಳಕೆ ಮಾಡುವಂತಿಲ್ಲ, ಇತರ ಸಾಮಾನ್ಯ ಕೊಠಡಿ ಬಳಕೆ ಮಾಡಬಹುದು ಆದರೆ ಇದು ಪ್ರತಿ ದಿನ ಪುನಾರಾವರ್ತನೆ ಆಗಲು ಅವಕಾಶವಿಲ್ಲ ಎಂದು ಚರ್ಚೆ ನಡೆಯಿತು. ರಾಜೇಶ್ ಪಟ್ಟೆ, ಹರೀಶ್ ಕೃಷ್ಣಾ ಸ್ಟುಡಿಯೋ, ಕುಮಾರ್ ಕಲ್ಲಾರೆ ಸಹಿತ ಸಂಘದ ಎಲ್ಲಾ ಸದಸ್ಯರು ಮಹಾಸಭೆಗೆ ಹಾಜರಾಗಿದ್ದರು.

`ಅನೀಶ್ ಈರ್ ಪಿದಾಯಿ ಪೋಲೆ ಬುಕ್ಕ ತೂಕ’ ಎಂದು ಅನೀಶರನ್ನು ಸಭೆಯಿಂದ ಹೊರ ಕಳುಹಿಸಿ, ಅನೀಶ್ ಅವರ ಬಿಹೇವಿಯರ್ ಈಗ ತುಂಬಾ ಸರಿಯಾಗಿದೆ, ಅವರು ಇನ್ನು ಮುಂದೆ ಹಾಗೆ ಮಾಡಲಿಕ್ಕೆ ಇಲ್ಲ ಎಂದು ಅನೀಶ್‌ರವರ ಬಗ್ಗೆ ಗ್ಯಾರೆಂಟಿ ನೀಡಿದ ಶಶಿಧರ್ ರೈ ಕುತ್ಯಾಳ


ಚುನಾವಣಾ ಪ್ರಕ್ರಿಯೆಗೆ ಈರ್ವರಿಂದ ಆಕ್ಷೇಪಣೆ ಸಲ್ಲಿಕೆ ಚುನಾವಣೆ ಮುಂದೂಡಿ ಆದೇಶಿಸಿದ ಚುನಾವಣಾಧಿಕಾರಿ

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಹಾಸಭೆಯ ಬಳಿಕ ನಡೆಯಬೇಕಿದ್ದ ನೂತನ ಪದಾಧಿಕಾರಿಗಳ ಆಯ್ಕೆಗಾಗಿನ ಚುನಾವಣೆಯನ್ನು ಚುನಾವಣಾಧಿಕಾರಿ ಮುಂದೂಡಿದ ಘಟನೆ ಸಭೆಯಲ್ಲಿ ನಡೆಯಿತು. ಚುನಾವಣಾ ಪ್ರಕ್ರಿಯೆಗೆ ಆಕ್ಷೇಪ ಸೂಚಿಸಿ ದೀಪಕ್ ಉಬಾರ್ ಮತ್ತು ನಝೀರ್ ಕೊಯಿಲ ಸಲ್ಲಿಸಿದ್ದ ಮನವಿ ಪತ್ರದ ಬಗ್ಗೆ ಚರ್ಚೆ ನಡೆಯಿತು. ಪದಾಧಿಕಾರಿಗಳ ಆಯ್ಕೆ ನಡೆಸಲು ಚುನಾವಣೆ ಮಾಡುವ ಕುರಿತು ಪತ್ರಕರ್ತರ ಸಂಘದಲ್ಲಿ ಕೈಗೊಂಡಿರುವ ನಿರ್ಣಯದಂತೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿಲ್ಲ. ನಿರ್ಣಯದ ಪ್ರಕಾರ, ಈಗಾಗಲೇ ಅಧ್ಯಕ್ಷರ ಸಹಿತ ಪದಾಧಿಕಾರಿಗಳ ಸ್ಥಾನಕ್ಕೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಬೇಕಿತ್ತು. ನಾಮಪತ್ರ ಸ್ವೀಕಾರ, ಪರಿಶೀಲನೆ, ನಾಮಪತ್ರ ವಾಪಸ್ ಪಡೆಯುವಿಕೆ, ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಘೋಷಣೆ ಇತ್ಯಾದಿ ನಡೆಯಬೇಕಿತ್ತು. ಅಧ್ಯಾವುದೂ ನಡೆದಿಲ್ಲ. ಈಗ ಏಕಾಏಕಿ ಚುನಾವಣೆ ನಡೆಯುವುದರಿಂದ ಕೆಲವರಿಗಷ್ಟೇ ಅವಕಾಶ ದೊರೆತು ಹಲವರು ತಮ್ಮ ಹಕ್ಕಿನಿಂದ ವಂಚಿತರಾಗುತ್ತಾರೆ. ಆದ್ದರಿಂದ ಚುನಾವಣೆ ಮುಂದೂಡಬೇಕು. ಇಲ್ಲದೇ ಇದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಕರಾರು ಅರ್ಜಿಯಲ್ಲಿ ದೀಪಕ್ ಮತ್ತು ನಝೀರ್ ತಿಳಿಸಿದ್ದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆಯೇ ಚುನಾವಣೆ ನಡೆಯಲೇಬೇಕು, ಹೊಸ ಪದಾಧಿಕಾರಿಗಳ ಆಯ್ಕೆ ಆಗಲೇಬೇಕು ಎಂದು ಮೇಘ ಪಾಲೆತ್ತಡಿ, ಶಶಿಧರ ರೈ ಕುತ್ಯಾಳ, ಪ್ರವೀಣ್ ಕುಮಾರ್, ಪ್ರಸಾದ್ ಬಲ್ನಾಡು ಮತ್ತು ಅಜಿತ್ ಕುಮಾರ್ ಒತ್ತಾಯಿಸಿದರು. ಸಂಘದಲ್ಲಿ ಕೈಗೊಂಡಿರುವ ನಿರ್ಣಯಕ್ಕೂ ಈಗ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಗೂ ಬಹಳಷ್ಟು ವ್ಯತ್ಯಾಸ ಇರುವುದರಿಂದ ಮತ್ತು ಚುನಾವಣೆಗೆ ಆಕ್ಷೇಪಣೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಸತ್ಯಾಂಶ ಇರುವುದರಿಂದ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡುವುದಾಗಿ ಆವರೆಗೆ ಹಾಲಿ ಆಡಳಿತ ಮಂಡಳಿ ಮುಂದುವರಿಯಲಿ ಎಂದು ಚುನಾವಣಾಧಿಕಾರಿ ಸುಧಾಕರ್ ಪಡೀಲ್ ಘೋಷಿಸಿದರು. ಅದರಂತೆ ಆಗಸ್ಟ್ ೬ರಂದು ಚುನಾವಣೆ ನಡೆಸುವುದು ಎಂದೂ ಅದಕ್ಕೆ ಮೊದಲು ಚುನಾವಣೆಗೆ ಬೇಕಾದ ಪ್ರಕ್ರಿಯೆಗಳನ್ನು ಮುಗಿಸುವುದೂ ಎಂದು ನಿರ್ಣಯಿಸಲಾಯಿತು. ಚುನಾವಣೆ ಇರುವುದರಿಂದ ನೀತಿ ಸಂಹಿತೆ ಇರುತ್ತದೆ ಹಾಗಾಗಿ ಆಡಳಿತ ಮಂಡಳಿ ಮುಂದೆ ಏನೂ ಮಾಡುವಂತಿಲ್ಲ ಎಂದು ಅಜಿತ್ ಕುಮಾರ್ ಹೇಳಿದರು. ಅದು ಚುನಾವಣಾ ಪ್ರಕ್ರಿಯೆಗೆ ಮಾತ್ರ, ಸಂಘದ ಇತರ ಚಟುವಟಿಕೆಗಳಿಗೆ ಅನ್ವಯವಾಗುವುದಿಲ್ಲ ಅಲ್ಲಿಯವರೆಗೆ ಈಗಿನ ಅಧ್ಯಕ್ಷ ಶ್ರವಣ್‌ರವರೇ ಮುಂದುವರಿಯುತ್ತಾರೆ ಎಂದು ಉದಯ ಕುಮಾರ್ ಹೇಳಿದರು. ಅಲ್ಲಿಗೆ ಚರ್ಚೆಗೆ ತೆರೆ ಬಿತ್ತು.

 

LEAVE A REPLY

Please enter your comment!
Please enter your name here