ಬಲ್ನಾಡು ಗ್ರಾ.ಪಂನಲ್ಲಿ ಜಿಮ್ ಕಟ್ಟಡ, ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ,ಸ್ವಚ್ಚವಾಹಿನಿ ವಾಹನ ಲೋಕಾರ್ಪಣೆ

0

ಪುತ್ತೂರು:ಬಲ್ನಾಡು ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಅನುದಾನ ನೀಡಲಾಗಿದೆ. ಈ ಅವಧಿಯ ಎಂಟು ತಿಂಗಳು ಬಾಕಿಯಿದ್ದು ಬೇಡಿಕೆಗಳ ಗರೀಷ್ಠ ಈಡೇರಿಕೆಗೆ ಪ್ರಯತ್ನಿಸಲಾಗುವುದು. ಅಮೃತಯೋಜನೆಯಲ್ಲಿ ಬಲ್ನಾಡು ಗ್ರಾಮವನ್ನು ಆಧ್ಯತೆಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ಬಲ್ನಾಡು ಗ್ರಾ.ಪಂನಲ್ಲಿ ಜು.12ರಂದು ನಡೆದ ಜಿಮ್ ಕಟ್ಟಡ, ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಹಾಗೂ ಸ್ವಚ್ಚವಾಹಿನಿ ವಾಹನ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಬಲ್ನಾಡಿನ ಸಾಜದಿಂದ ಕುದ್ದುಪದವು ರಸ್ತೆಯನ್ನು ಮೇಲ್ದರ್ಜೆಗೆ, ಬೆಳಿಯೂರುಕಟ್ಟೆ ವಿಟ್ಲ ರಸ್ತೆಯನ್ನು ರಾಜ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಪ್ರತಿ ಬೂತ್‌ಗಳಿಗೆ ರೂ.೩೦ಲಕ್ಷ ಅನುದಾನ ನೀಡಿ ಕಿಂಡಿ ಅಣೆಕಟ್ಟು, ತಡೆಗೋಡೆ, ರಸ್ತೆ ಕಾಂಕ್ರಿಟೀಕರಣ ಮೊದಲಾದ ಕಾಮಗಾರಿಗಳನ್ನು ನಡೆಸಲಾಗಿದೆ. ಪ್ರತಿ ಪಂಚಾಯತ್‌ಗಳಿಗೆ ೩೦ರಿಂದ೫೦ಮನೆ, ನಿವೇಶನ ರಹಿತರಿಗೆ ನಿವೇಶನ, ೯೪ಸಿಯಲ್ಲಿ ಹಕ್ಕುಪತ್ರ ಹಾಗೂ ಅಕ್ರಮ-ಸಕ್ರಮದಲ್ಲಿ ಸಾಗುವಳಿ ಚೀಟಿಯನ್ನು ವಿತರಿಸಲಾಗಿದೆ ಎಂದ ಶಾಸಕರು ನಾಗರೀಕ ಪ್ರಜ್ಞೆಯಿಂದ ಪ್ರತಿಯೊಬ್ಬರು ಸ್ವಚ್ಚತೆಯಲ್ಲಿ ಕೈಜೋಡಿಸಬೇಕು. ಗ್ರಾಮೀಣ ಭಾಗದ ಯುವಕರಿಗೂ ಜಿಮ್ ಕೇಂದ್ರವನ್ನು ತೆರೆದಿದ್ದು, ಅಭಿವೃದ್ಧಿಯಲ್ಲಿ ಬಲ್ನಾಡು ಆದರ್ಶ ಪಂಚಾಯತ್ ಆಗಿ ಮೂಡಿಬರಬೇಕು ಎಂದರು.


ನರೇಗಾ ಯೋಜನೆಯ ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮಾತನಾಡಿ, ನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗಳಿಗೂ ಅನುದಾನ ನೀಡಲಾಗುತ್ತಿದ್ದು ಗ್ರಾಮೀಣ ಪ್ರದೇಶಲ್ಲಿ ಜನರ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿದೆ. ಬಲ್ನಾಡು ಗ್ರಾ.ಪಂನಲ್ಲಿ ನರೇಗಾ ಯೋಜನೆಯು ಉತ್ತಮ ರೀತಿಯಲ್ಲಿ ಅನುಷ್ಠಾನವಾಗುತ್ತಿದೆ ಎಂದ ಅವರು ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸಮಪರ್ಕವಾಗಿ ನಿರ್ವಹಣೆ ಮಾಡಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಇಂದಿರಾ ಎಸ್.ರೈ ಮಾತನಾಡಿ, ಬಲ್ನಾಡು ಗ್ರಾಮಕ್ಕೆ ಸುಮಾರು ರೂ.೯ಕೋಟಿ ಅನುದಾನ ನೀಡಿ ಸಮಗ್ರ ಅಭಿವೃದ್ಧಿ ಸಹಕರಿಸಿದ ಶಾಸಕರನ್ನು ಅಭಿನಂದಿಸಿದರು. ಸದಸ್ಯರೆಲ್ಲರು ಒಮ್ಮತದಿಂದ ಗ್ರಾಮ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದ್ದು ಪಂಚಾಯತ್‌ನಲ್ಲಿ ಭ್ರಷ್ಠಾಚಾರ ರಹಿತವಾಗಿ ಆಡಳಿತ ನಡೆಸಿ ಜನರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ ಎಂದರು.

ಸದಸ್ಯರಾದ ಬಾಲಸುಬ್ರಹ್ಮಣ್ಯ, ಚಂದ್ರಾವತಿ, ಅಂಬ್ರೋಸ್ ಡಿ’ಸೋಜ, ಗಣೇಶ್ ಗೌಡ, ರವಿಚಂದ್ರ ಎಸ್., ಶೋಭಾ, ವಿನಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪಾಧ್ಯಕ್ಷೆ ಪರಮೇಶ್ವರಿ ಭಟ್ ಬಬ್ಬಿಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಓ ಶರೀಫ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲಕ್ಷ್ಮೀ ವಂದಿಸಿದರು.

LEAVE A REPLY

Please enter your comment!
Please enter your name here