ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಿರ್ವಹಣೆಯಲ್ಲಿ ಅವೈಜ್ಞಾನಿಕತೆ; ಸ್ಪೋಟಕ ಬಳಸಿ ಬಂಡೆ ಸಿಗಿತ, ಎಲ್ಲೆಡೆ ಕಂಪನ, ಗ್ರಾಮಸ್ಥರಲ್ಲಿ ಆತಂಕ

0

  •  ಭೂಮಿ ಅಲುಗಾಡಿದಂತಾಗುತ್ತದೆ, ಪಾತ್ರೆ ಸಾಮಾಗ್ರಿ ನೆಲಕ್ಕೆ ಬೀಳುತ್ತಿದೆ.
  •  ಎಲ್ಲೆಡೆ ತೂರಿ ಹೋಗುವ ಕಲ್ಲುಗಳು.

ವಿಶೇಷ ವರದಿ/ಚಿತ್ರಗಳು: ಸಿದ್ದಿಕ್ ನೀರಾಜೆ.

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆಯುವ ಚತುಷ್ಪಥ ಕಾಮಗಾರಿ ಸಲುವಾಗಿ ಅಲ್ಲಲ್ಲಿ ಗುಡ್ಡ-ಬೆಟ್ಟಗಳ ಅಗೆತ ನಡೆಯುತ್ತಿದ್ದು, ಈ ಮಧ್ಯೆ ಇರುವ ಕ್ವಾರೆ, ಬಂಡೆ ಕಲ್ಲುಗಳನ್ನು ಸಿಗಿಯುವುದಕ್ಕೆ ಅವೈಜ್ಞಾನಿಕ ರೀತಿಯಲ್ಲಿ ಸ್ಪೋಟಕವನ್ನು ಬಳಸಲಾಗುತ್ತಿದ್ದು, ಭಾರೀ ಶಬ್ದದೊಂದಿಗೆ ಪರಿಸರದಲ್ಲಿ ಭೂಮಿ ಕಂಪಿಸುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಲುವಾಗಿ ರಸ್ತೆ ಅಗಲೀಕರಣದ ನಿಮಿತ್ತ ಹೆದ್ದಾರಿ ಬದಿಯಲ್ಲಿ ಇರುವ ಗುಡ್ಡವನ್ನು ಸಮತಟ್ಟು ಮಾಡುತ್ತಿದ್ದು, ಅದರಂತೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಂಜಾಳ ಎಂಬಲ್ಲಿ ಭಾರೀ ಗುಡ್ಡದಲ್ಲಿ ಇರುವ ಬಂಡೆ ಕಲ್ಲುಗಳನ್ನು ಸ್ಪೋಟಕ ಬಳಸಿ ಸಿಗಿಸುತ್ತಿದ್ದು, ಇದರಿಂದಾಗಿ ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸುತ್ತಿದೆ ಮತ್ತು ಭೂಮಿ ಅದುರುವಂತೆ ಭಾಸವಾಗುತ್ತದೆ, ಮನೆಯೊಳಗೆ ಕಪಾಟಿನಲ್ಲಿ ಇರಿಸಿದ್ದ ಪಾತ್ರೆ ಪಗಡಿಗಳೂ ನೆಲಕ್ಕಪ್ಪಳಿಸಿ ಬೀಳಲಾರಂಭಿಸಿದ್ದು, ಮನೆಯೇ ಬಿರುಕು ಬಿಡುವ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ.

ಎಲ್ಲೆಡೆ ತೂರಿ ಹೋಗುವ ಕಲ್ಲುಗಳು:

ಸ್ಪೋಟಕ ಸಿಡಿದಾಗ ಬಂಡೆ ಸಿಗಿಯಲ್ಪಟ್ಟು ಬಂಡೆ ಕಲ್ಲುಗಳ ಮೇಲ್ಪದರದ ಕಲ್ಲುಗಳು ಎಲ್ಲೆಡೆ ತೂರಲ್ಪಡುತ್ತದೆ. ಹೀಗೆ ತೂರಿ ಹೋದ ಕಲ್ಲುಗಳು ಮನೆಯಂಗಳಕ್ಕೆ ಬಂದು ಬೀಳುತ್ತಿದೆ. 4 ದಿನಗಳ ಹಿಂದೆ ತೂರಿ ಹೋದ ಬೃಹತ್ ಕಲ್ಲಿನ ತುಂಡು ವಿದ್ಯುತ್ ಕಂಬದ ಮೇಲೆ ಇರುವ ಪಿಂಗಾಣಿಯಂತಿರುವ ಇನ್ಸ್‌ಟ್ರುಲೇಷನ್ ಮೇಲೆ ಬಿದ್ದಿದ್ದು, ಅಲ್ಲಿ ಬೆಂಕಿಯ ಕಿಡಿ ಎದ್ದು ಕೆಲಕ್ಕೆ ಬಿದ್ದಿತ್ತು. ಇದರಿಂದಾಗಿ ಈ ರೀತಿಯ ಅಪಾಯಗಳು ಎದುರಾಗುತ್ತಿದೆ ಎಂದು ದೂರು ವ್ಯಕ್ತವಾಗಿದೆ.

ಸನಿಹದಲ್ಲೇ ಅಪಾಯ ಇದೆ:

ಬಂಡೆ ಸಿಗಿಯಲ್ಪಡುವ ತುಸು ದೂರದಲ್ಲಿ ಪೆಟ್ರೋಲ್ ಬಂಕ್ ಇದೆ. ಅದಾಗ್ಯೂ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಬಂಡೆ ಸಿಗಿಯಲ್ಪಡುತ್ತಿದ್ದು, ಹೆದ್ದಾರಿಯಲ್ಲಿ ನಿರಂತರವಾಗಿ ವಾಹನಗಳು ಓಡಾಡುತ್ತಲೇ ಇರುತ್ತದೆ. ಇಲ್ಲಿಂದ ತೂರಲ್ಪಡುವ ಕಲ್ಲು ವಾಹನಗಳ ಮೇಲೆ ಬೀಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.

ಭೀತಿ ಎದುರಾಗಿದೆ-ತಾಳ್ತಜೆ ಚಂದ್ರಶೇಖರ:

ರಸ್ತೆ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಸ್ಪೋಟಕ ಬಳಸಿ ಬಂಡೆ ಸಿಗಿಯುತ್ತಿದ್ದಾರೆ. ಈ ಬಗ್ಗೆ ಆಕ್ಷೇಪಿಸಿದರೆ ರಸ್ತೆ ಅಭಿವೃದ್ಧಿಗಾಗಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ರಸ್ತೆ ಅಭಿವೃದ್ಧಿ ಮಾಡುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ ಬಂಡೆ ಸಿಗಿಯುವುದಕ್ಕೆ ವೈಜ್ಞಾನಿಕ ಯುಗದಲ್ಲಿ ಬಹಳಷ್ಟು ವಿಧಾನಗಳಿವೆ. ಅದನ್ನು ಬಿಟ್ಟು ಸ್ಪೋಟಕ ಬಳಸಿ ಮಾಡುತ್ತಿದ್ದಾರೆ. ಸ್ಥಳೀಯರಾದ ನಾವುಗಳು ಆತಂಕ ಎದುರಿಸುವಂತಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಸಂಭವನೀಯ ಅವಘಡ ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು.

-ತಾಳ್ತಜೆ ಚಂದ್ರಶೇಖರ್, ನೊಂದ ಗ್ರಾಮಸ್ಥರು.

 

ಪರಿಶೀಲನೆ ನಡೆಸಲಾಗಿ ವರದಿ ತರಿಸಿ ಕ್ರಮಕೈಗೊಳ್ಳುವೆ-ತಹಸೀಲ್ದಾರ್

ಸ್ಪೋಟಕ ಬಳಕೆ ಮಾಡುವ ಹಾಗೆ ಇದ್ದರೂ ಅದರದ್ದೇ ಆದ ನಿಯಮಗಳಿವೆ. ಅದಾಗ್ಯೂ ಅದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುವಂತೆ ಮಾಡುವಂತಿಲ್ಲ. ಏನಿದ್ದರೂ
ಉಪ್ಪಿನಂಗಡಿಯ ಕಂದಾಯ ನಿರೀಕ್ಷಕರ ಮೂಲಕ ಸ್ಥಳ ಪರಿಶೀಲನೆ ನಡೆಸಲಾಗಿ ವರದಿ ತರಿಸಿಕೊಂಡು ಅಗತ್ಯ ಕ್ರಮಕೈಗೊಳ್ಳಲಾಗುವುದು.

-ನಿಸರ್ಗ ಪ್ರಿಯ, ತಹಸೀಲ್ದಾರ್, ಪುತ್ತೂರು ತಾಲ್ಲೂಕು.

LEAVE A REPLY

Please enter your comment!
Please enter your name here