ಜಿಂಕ್ ಕಾರ್ನರ್ ರಚನೆಗೆ ಕ್ರಮ ಜಿ.ಪಂ.ಸಿಇಒ ಡಾ|ಕುಮಾರ್

0

ಮಂಗಳೂರು:ಆರೋಗ್ಯ ಸಂಸ್ಥೆಗಳು ಮತ್ತು ಉಪಕೇಂದ್ರಗಳಲ್ಲಿ ಓ.ಆರ್.ಎಸ್ ಮತ್ತು ಜಿಂಕ್ ಕಾರ್ನರ್ ರಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಕುಮಾರ್ ಅವರು ಹೇಳಿದರು.

 


ಜಿಲ್ಲಾ ಪಂಚಾಯತ್‌ನ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ರಾಷ್ಟ್ರೀಯ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಐ.ಡಿ.ಎಫ್.ಸಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ತೀವ್ರತರ ಅತಿಸಾರ ಭೇದಿಯಿಂದ ಶೂನ್ಯ ಮಕ್ಕಳ ಮರಣ’ ಎಂಬ ಧ್ಯೆಯ ವಾಕ್ಯದೊಂದಿಗೆ 2022-23ನೇ ಸಾಲಿನಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ರಾಷ್ಟ್ರೀಯ ಐ.ಡಿ.ಎಫ್.ಸಿ(ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ)ಕಾರ್ಯಕ್ರಮವನ್ನು ಆಗಸ್ಟ್ ೦೧ ರಿಂದ ೧೫ರವರೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳುವಂತೆ ಸೂಚಿಸಿದ ಅವರು, ೦೫ ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಸಂಖ್ಯೆಯನ್ನು ಕಡಿಮೆ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ೦೫ ವರ್ಷದೊಳಗಿನ ಮಕ್ಕಳಿರುವ ಎಲ್ಲಾ ಮನೆಗಳಿಗೆ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಓ.ಆರ್.ಎಸ್ ಪ್ಯಾಕೆಟ್ ವಿತರಿಸಬೇಕು ಹಾಗೂ ಓ.ಆರ್.ಎಸ್ ದ್ರಾವಣ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಬೇಕು, ತೀವ್ರ ನಿರ್ಜಲೀಕರಣ ಇರುವ ಪ್ರಕರಣಗಳಿಗೆ ನಗರ, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನವಜಾತ ಮತ್ತು ಎಳೆಯ ಮಕ್ಕಳಿಗೆ ೬ ತಿಂಗಳವರೆಗೆ ಕಡ್ಡಾಯವಾಗಿ ತಾಯಿ ಎದೆ ಹಾಲು ಮಾತ್ರ ನೀಡುವ ಬಗ್ಗೆ ಮನವೊಲಿಸುವುದು ಮತ್ತು ೬ ತಿಂಗಳ ನಂತರ ತಾಯಿಯ ಎದೆ ಹಾಲಿನೊಂದಿಗೆ ಪೂರಕ ಆಹಾರ ನೀಡುವ ಬಗ್ಗೆ ಉತ್ತೇಜಿಸುತ್ತಾರೆ.ವೈಜ್ಞಾನಿಕವಾಗಿ ಕೈತೊಳೆಯುವ ಬಗ್ಗೆ ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ವಿದ್ಯಾರ್ಥಿಗಳಿಗೆ, ಅಡುಗೆಯವರಿಗೆ ಮತ್ತು ಅಂಗನವಾಡಿ ಸಹಾಯಕರಿಯರಿಗೆ ಹಾಗೂ ಮಕ್ಕಳಿಗೆ ಆರ್.ಬಿ.ಎಸ್.ಕೆ ತಂಡದಿಂದ ಮಾರ್ಗದರ್ಶನವನ್ನು ಕೊಡಿಸಬೇಕು, ೨೦೨೨-೨೩ನೇ ಸಾಲಿನಲ್ಲಿ ೧,೪೩,೦೬೭ ಮಕ್ಕಳ ಗುರಿ ಹೊಂದಿದ್ದು, ಪ್ರತೀ ಮನೆಗಳಿಗೆ ಓ.ಆರ್.ಎಸ್ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಈ ಕಾರ್ಯಕ್ರಮದಡಿ ಒಟ್ಟು ೨,೧೦೮ ಅಂಗನವಾಡಿ ಕಾರ್ಯಕರ್ತೆಯರು, ೧,೩೬೧ ಆಶಾ ಕಾರ್ಯಕರ್ತೆಯರು, ೨೯೮ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ೧೬ ಆರ್.ಬಿ.ಎಸ್.ಕೆ ತಂಡದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಮೇಲ್ವಿಚಾರಣೆಗಾಗಿ ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗಿದೆ ಹಾಗೂ ತುರ್ತು ನಿಗಾ ತಂಡವನ್ನು ರಚಿಸಲಾಗಿದೆ ಎಂದು ಡಾ|ಕುಮಾರ್ ಹೇಳಿದರು. ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ರಾಜೇಶ್ ಬಿ.ವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಾಪಬೋವಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಣ್ಣ ಸಿ.ಡಿ., ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುಧಾಕರ ಕೆ., ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here