ಮಸೂದ್ ಸಾವು ಕೋಮುದ್ವೇಷದಿಂದ ನಡೆಯಿತೇ ? ಗುಂಪು ಹಲ್ಲೆ ನಡೆಸಿದವರಿಗೆ ಮಸೂದ್ ಹತ್ಯೆಯ ಉದ್ದೇಶವಿತ್ತೇ ?

0

ಪುತ್ತೂರು: ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಹತ್ಯೆ ಇಡೀ ರಾಜ್ಯದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಕಾರ್ಯಕರ್ತರ ಆಕ್ರೋಶಕ್ಕೆ ನಾಯಕರು ಬೆದರಿ ಬೆಂಡಾಗಿದ್ದಾರೆ. ಯಾವ ಕ್ರಿಮಿನಲ್ ಚಟುವಟಿಕೆಯಲ್ಲೂ ಇಲ್ಲದ, ದ್ವೇಷದ ರಾಜಕೀಯವನ್ನು ಮಾಡದ ಯುವಕ ಪ್ರವೀಣ್ ನೆಟ್ಟಾರು ಹತ್ಯೆ ಜನರಲ್ಲಿ ತೀವ್ರ ಬೇಸರವನ್ನು, ಅಸಮಾಧಾನವನ್ನು ಆಕ್ರೋಶವನ್ನು ಉಂಟುಮಾಡಿದೆ. ಈ ಆಕ್ರೋಶ ರಾಜ್ಯದ ಬಿಜೆಪಿ ಸರಕಾರವನ್ನೇ ಪತರಗುಟ್ಟಿಸಿದೆ.

ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯನಾಗಿದ್ದರೂ, ಸುಳ್ಯ ತಾಲೂಕಲ್ಲಿ ಪ್ರವೀಣ್ ಮುಂಚೂಣಿ ರಾಜಕೀಯ ನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ತನ್ನ ವ್ಯಾಪ್ತಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡುವ ಮತ್ತು ತನಗೊಪ್ಪಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಪಕ್ಷ ಪ್ರೇಮಿ, ದೇಶಪ್ರೇಮಿ ಯುವಕನಾಗಿ ತನ್ನಷ್ಟಕ್ಕೆ ತಾನಿದ್ದ ಯುವಕನನ್ನು ಯಾಕೆ ಬರ್ಬರವಾಗಿ ಹತ್ಯೆ ಮಾಡಲಾಯಿತು ಎಂಬುದಕ್ಕೆ ಕೆಲವರಿಂದ ಕೆಲವು ವಿಶ್ಲೇಷಣೆಗಳು ಬರುತ್ತವೆ.

ಅದರಲ್ಲಿ ಪ್ರಮುಖವಾದುದು ಕೆಲವೇ ದಿನಗಳ ಹಿಂದೆ ಕಳಂಜದಲ್ಲಿ ನಡೆದ ಮಸೂದ್ ಹತ್ಯೆ ಪ್ರಕರಣ. ಕೋಳಿ ವ್ಯವಹಾರದ ಮಾಫಿಯಾ ಮತ್ತೊಂದು ಕಾರಣ. ಇದಾವುದನ್ನೂ ಪೊಲೀಸ್ ಇಲಾಖೆ ಇದುವರೆಗೆ ದೃಢಪಡಿಸಿಲ್ಲ. ಆದರೆ ಈಗ ಮೇಲ್ನೋಟಕ್ಕೆ ಕಾಣುತ್ತಿರುವ ಕಾರಣ ಮಸೂದ್ ಹತ್ಯೆಯಿಂದಾಗಿ ಪ್ರವೀಣ್ ನೆಟ್ಟಾರು ಹತ್ಯೆಯಾಯಿತು ಎಂಬುದು. ಈಗ ಪೊಲೀಸರು ಇಬ್ಬರನ್ನು ಬಂಧಿಸಿರುವುದು ಕೂಡಾ ಆ ಕಡೆಗೆ ಬೆರಳು ತೋರಿಸುತ್ತಿದೆ.

ಹಾಗಾದರೆ ಮಸೂದ್ ಹತ್ಯೆಗೂ ಪ್ರವೀಣ್ ನೆಟ್ಟಾರು ಹತ್ಯೆಗೂ ಸಾಮ್ಯತೆ ಇದೆಯೇ ? ಮಸೂದ್ ಹತ್ಯೆಯ ಹಿನ್ನೆಲೆ ಮುನ್ನೆಲೆ ಏನು ?

ಮಸೂದ್ ಪ್ರಕರಣ: ಪರಸ್ಪರ ಮೈ ತಾಗಿತೆಂಬ ಕ್ಷುಲ್ಲಕ ಕಾರಣವೇ, ಬಾಳಿ ಬದುಕಬೇಕಾಗಿದ್ದ ಎಳೆಯ ಯುವಕ ಮಸೂದ್ ನ ಹತ್ಯೆಗೆ ಹೇತುವಾದುದಂತೂ ನಿಜ.
ಜುಲೈ 19 ರಂದು ರಾತ್ರಿ ಸುಮಾರು 7- 8 ಗಂಟೆಯ ನಡುವೆ ಕಳಂಜದ ವಿಷ್ಣು ನಗರದಲ್ಲಿರುವ ಅಬ್ದುಲ್ ಖಾದರ್ ಎಂಬವರ ಅಂಗಡಿಗೆ ಸ್ಥಳೀಯ ಯುವಕ ಸುಧೀರ್ ಎಂಬವರು ಬರುತ್ತಾರೆ. ಆ ಹೊತ್ತಿಗೆ ಅಲ್ಲಿ ಮಸೂದ್ ಎಂಬ ಯುವಕ ಇರುತ್ತಾನೆ. ಸುಧೀರ್ ಮತ್ತು ಮಸೂದ್ ನ ಮೈ ಪರಸ್ಪರ ತಾಗಿಕೊಳ್ಳುತ್ತದೆ. ‘ದಾನೆ ತಾಂಟುವ’ ಎಂಬ ಮಾತಿನೊಂದಿಗೆ ವಿವಾದ ಆರಂಭಗೊಳ್ಳುತ್ತದೆ. ಮಾತಿಗೆ ಮಾತು ಬೆಳೆದು ಇಬ್ಬರೂ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ. ಆದರೆ ಸ್ಥಳೀಯರ ಮಧ್ಯಪ್ರವೇಶದಿಂದ ಹೊಡೆದಾಟ ನಿಲ್ಲುತ್ತದೆ. ಇಬ್ಬರೂ ತೆರಳುತ್ತಾರೆ.

ಮಸೂದ್ ತನಗೆ ಹೊಡೆದನೆಂಬ ಆಕ್ರೋಶದಿಂದ ಸುಧೀರ್ ತನ್ನ ಗೆಳೆಯರನ್ನೆಲ್ಲ ಫೋನ್ ಮಾಡಿ ಕರೆಯುತ್ತಾನೆ. ರಾತ್ರಿ ಕೆಲವರು ಅಮಲಿನ ಚಟವಿದ್ದವರು ಕೂಡ ಈ ವಿಷಯ ಕೇಳಿ ಜತೆಯಾಗುತ್ತಾರೆ. ಬೇರೆ ಸಂದರ್ಭವಾಗಿದ್ದರೆ ಈ ಜಗಳ ಅಲ್ಲಿಗೆ ಮುಗಿದು ಹೋಗುತ್ತಿತ್ತು. ಆದರೆ ಮಸೂದ್ ಮುಸ್ಲಿಂ ಯುವಕನಾದುದರಿಂದ ಅವನನ್ನು ಬಿಡಬಾರದು – ತಿರುಗಿಸಿ ಹೊಡೆಯಬೇಕು ಎಂಬ ಭಾವನೆಯಿಂದ ಅವರೆಲ್ಲ ಸೇರಿದ್ದರೆಂದು ಗೊತ್ತಾಗುತ್ತದೆ.

ಅಲ್ಲಿ ಸೇರಿದ್ದ ಬಹುತೇಕರು ಪರಸ್ಪರ ಮುಖ ನೋಡುವ ಊರವರೇ ಆಗಿದ್ದರು. ಮಸೂದ್ ಕಾಸರಗೋಡಿನ ಮೊಗ್ರಾಲ್ ಪುತ್ತೂರಿನವನಾಗಿದ್ದರೂ ಅಜ್ಜನಮನೆ ಕಳಂಜವಾದುದರಿಂದ ಚಿಕ್ಕಂದಿನಿಂದಲೂ ಕಳಂಜಕ್ಕೆ ಆಗಾಗ ಬರುತ್ತಿದ್ದ. ಸ್ಥಳೀಯ ಯುವಕರಿಗೆ ಪರಿಚಿತನೇ ಆಗಿದ್ದ . ಸ್ಥಳೀಯರಾದ ಅಬ್ಬು ಮುಕ್ರಿಯವರ ಮಗಳು ಸಾರಮ್ಮ ಅವರನ್ನು ಕಾಸರಗೋಡಿನ ಮೊಗ್ರಾಲ್ ಪುತ್ತೂರಿಗೆ ಮದುವೆ ಮಾಡಿ ಕೊಡಲಾಗಿತ್ತು. ಸಾರಮ್ಮರಿಗೆ 5 ಮಂದಿ ಮಕ್ಕಳು. ಇಬ್ಬರು ಹುಡುಗಿಯರು ಮತ್ತು ಮೂವರು ಹುಡುಗರು. ಅವರಲ್ಲಿ ಮಸೂದ್ ಮೂರನೆಯವ. ಹತ್ತೊಂಬತ್ತು ವರ್ಷದ ಹುಡುಗ. ಅವನ ಬಗ್ಗೆ ನೆರೆಕರೆಯವರು ಒಳ್ಳೆಯ ಅಭಿಪ್ರಾಯವನ್ನೇ ಹೇಳುತ್ತಾರೆ.

ಮಸೂದ್ ನಿಗೆ ತಿರುಗಿ ಹೊಡೆಯಬೇಕೆಂದು ಸೇರಿದ ಯುವಕರು ಆತನ ಸಂಬಂಧೀ ಶಾನಿಫ್ ಎಂಬ ಯುವಕನನ್ನು ಕರೆದು ರಾಜಿ ಪಂಚಾತಿಕೆ ಮಾಡಿ ವಿವಾದ ಇತ್ಯರ್ಥ ಮಾಡಿಬಿಡೋಣ ಎಂದು ಹೇಳುತ್ತಾರೆ. ಪಂಚಾತಿಕೆಗೆ ಕರೆದ ಸುನಿಲ್ ಎಂಬಾತ ಮತ್ತು ಶಾನಿಫ್ ಅಕ್ಕ ಪಕ್ಕದ ಮನೆಯವರು. ಈ ಸುನಿಲ್ ಗೆ ಅಪರಾಧದ ಹಿನ್ನೆಲೆ ಇದ್ದರೂ ಶಾನಿಫ್ ನೊಂದಿಗೆ ಒಳ್ಳೆಯ ನೆರೆಕರೆ ಸಂಬಂಧ ಇದ್ದುದರಿಂದ ಮಸೂದ್ ನನ್ನು ಕರೆತರಲು ಶಾನಿಫ್ ಒಪ್ಪಿಕೊಳ್ಳುತ್ತಾನೆ. ಜತೆಗೆ ಸ್ಥಳೀಯ ಕಾರಣಿಕದ ದೈವವಾದ ವಿಷ್ಣುಮೂರ್ತಿಯ ಮೇಲೆ ಆಣೆ ಮಾಡಿ ಮಸೂದ್ ನ ಮೈ ಮುಟ್ಟುವುದಿಲ್ಲವೆಂದು ಭರವಸೆ ನೀಡಿದ್ದರಿಂದ ಶಾನಿಫ್, ನಾಸಿರ್ ಎಂಬಾತನೊಂದಿಗೆ ಹೋಗಿ ಧೈರ್ಯವಾಗಿ ಮಸೂದನನ್ನು ಕರೆತರುತ್ತಾನೆ.‌

ಅವನು ಬಂದ ಕೂಡಲೇ ಕಾದು ನಿಂತಿದ್ದ ಸುಧೀರ್, ಸುನಿಲ್, ಅಭಿಲಾಷ್, ರಂಜಿತ್, ಸದಾಶಿವ, ಜಿಮ್ ರಂಜಿತ್, ಶಿವಪ್ರಸಾದ್, ಭಾಸ್ಕರ ಮೊದಲಾದ ಹಿಂದೂ ಯುವಕರು ಅವನ ಮೇಲೆ ಮುಗಿಬೀಳುತ್ತಾರೆ. ಇದನ್ನು ನಿರೀಕ್ಷಿಸಿರದ ಶಾನಿಫ್ ಮತ್ತು ನಾಸಿರ್ ಎಂಬವರು ತಡೆಯಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಅವರಿಗೆ ಪೆಟ್ಟುಗಳು ಬೀಳುತ್ತವೆ. ಆ ವೇಳೆ ಮಸೂದ್ ಗೆ ಹೊಡೆಯಲೆಂದೇ ಬೆಳ್ಳಾರೆಯಿಂದ ರಿಕ್ಷಾ ಮಾಡಿಕೊಂಡು ಕಳಂಜಕ್ಕೆ ಬಂದು ಈ ಗುಂಪಿನಲ್ಲಿದ್ದ ಅಭಿಲಾಷ್ ಮತ್ತಿತರರು ಮಾಡಿದ ಯಡವಟ್ಟು ಮಸೂದ್ ಗೆ ಮಾರಣಾಂತಿಕವಾಗುತ್ತದೆ. ಅಭಿಲಾಷ್ ಅಲ್ಲಿ ಅಂಗಡಿ ಬದಿಯಲ್ಲಿದ್ದ ಸೋಡಾ ಬಾಟ್ಲಿಯಿಂದ ಮಸೂದನ ತಲೆಗೆ ಬಲವಾಗಿ ಬಾರಿಸುತ್ತಾನೆ. ಈ ಘಟನೆಯಿಂದ ತತ್ತರಿಸಿ ಹೋದ ಮಸೂದ್ ತಪ್ಪಿಸಿಕೊಳ್ಳುವುದಕ್ಕಾಗಿ ಓಡುತ್ತಾನೆ. ಬಳಿಕ ಹೊಡೆದಾಟ ನಿಲ್ಲುತ್ತದೆ. ಹೊಡೆದ ಯುವಕರು ಅವರವರ ದಿಕ್ಕಿಗೆ ಹೋಗುತ್ತಾರೆ. ಶಾನಿಫ್, ನಾಸಿರ್ ಮತ್ತು ಇತರ ಅವರ ಸಂಬಂಧಿಕರು ಸೇರಿ ಓಡಿಹೋದ ಮಸೂದ್ ಎಲ್ಲಿದ್ದಾನೆಂದು ಹುಡುಕಲಾರಂಭಿಸುತ್ತಾರೆ. ಸ್ವಲ್ಪ ಹೊತ್ತು ಹುಡುಕಾಡಿದಾಗ ಅಲ್ಲೇ ಸಮೀಪ ಅಬೂಬಕ್ಕರ್ ಎಂಬವರ ಬಾವಿಯ ಬಳಿಯಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದ ಮಸೂದ್ ಇವರಿಗೆ ಕಾಣಿಸುತ್ತಾನೆ. ಅವನ ಪರಿಸ್ಥಿತಿ ಗಂಭೀರವಾಗಿರುವ ತಿಳಿದು ಇವರು ಗಾಬರಿಗೊಳ್ಳುತ್ತಾರೆ.

ಹೊಡೆದವರು ಆಸ್ಪತ್ರೆಗೆ ಕರೆದೊಯ್ಯಲೂ ಬಂದಿದ್ದರು: ಹೊಡೆದ ಗುಂಪಿನಲ್ಲಿದ್ದ ಸುನಿಲ್ , ಶಿವ, ಸುಧೀರರಿಗೆ ಕೂಡ ಇವರು ಫೋನಾಯಿಸುತ್ತಾರೆ. ಅವರಲ್ಲಿ ಪಕ್ಕದಲ್ಲೇ ಮನೆ ಇದ್ದ ಸುನಿಲ್ ಬರುತ್ತಾನೆ. ಸುನಿಲ್, ಶಾನಿಫ್, ತೌಸೀರ್ ಮತ್ತು ಮಸೂದ್ ನ ಮಾವ ಶೌಕತ್ ಮೊದಲಾದವರು ಶಾಫಿ ಎಂಬವರ ಕಾರಲ್ಲಿ ಮಸೂದ್ ನನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆ ತರುತ್ತಾರೆ. ಮಸೂದ್ ನ ಪರಿಸ್ಥಿತಿ ಗಂಭೀರವಾಗಿರುವ ವಿಷಯ ತಿಳಿದು ಶಿವಪ್ರಸಾದ್, ಸುಧೀರ್ ಮತ್ತಿತರರು ಕೂಡ ಬೇರೆ ವಾಹನದಲ್ಲಿ ಆಸ್ಪತ್ರೆಗೆ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್ ಮಾಡಿದ ವೈದ್ಯರು ತಕ್ಷಣ ಇವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರಿಂದ ಅಲ್ಲಿಯ ಆಂಬ್ಯುಲೆನ್ಸ್ ನಲ್ಲಿ ಶೌಕತ್ ಮತ್ತು ಶಾನಿಫ್ ಮಸೂದ್ ನನ್ನು ಮಂಗಳೂರಿಗೆ ಕರೆದೊಯ್ಯುತ್ತಾರೆ. ಉಳಿದವರು ಕಳಂಜಕ್ಕೆ ಹಿಂತಿರುಗುತ್ತಾರೆ.‌

ಸ್ಕಲ್ ಒಡೆದಿತ್ತು: ಸೋಡಾ ಬಾಟ್ಲಿಯಲ್ಲಿ ಹೊಡೆದ ಪೆಟ್ಟು ಮಸೂದನ ತಲೆಬುರುಡೆಯನ್ನು ಒಡೆದಿರುತ್ತದೆ. ಆದರೆ ಮೇಲ್ನೋಟಕ್ಕೆ ರಕ್ತ ಬರುವ ಗಾಯವಾಗಿರಲಿಲ್ಲ. ಆದರೆ ಒಳಭಾಗದಲ್ಲಿ ತಲೆ ಬುರುಡೆ ಒಡೆದು ರಕ್ತಸ್ರಾವವಾಗಿ ಮಿದುಳಿಗೆ ರಕ್ತ ಹರಡಿತ್ತು ಎನ್ನಲಾಗಿದೆ. ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಎರಡನೇ ದಿನ ಜುಲೈ 21 ರಂದು ಅಪರಾಹ್ನ ಮೂರೂವರೆ ಗಂಟೆ ಸುಮಾರಿಗೆ ಮಸೂದ್ ಕೊನೆಯುಸಿರೆಳೆಯುತ್ತಾನೆ.‌

ಕೊಲೆ ಕೇಸಾಗಿ ಪರಿವರ್ತನೆ : ಶಾನಿಫ್ ನೀಡಿದ ದೂರನ್ನು ಜುಲೈ 20ರಂದು ಬೆಳಿಗ್ಗೆ ದಾಖಲಿಸಿಕೊಂಡಿದ್ದ ಬೆಳ್ಳಾರೆ ಪೊಲೀಸರು, ಗುಂಪು ಹಲ್ಲೆಯಲ್ಲಿ ಭಾಗಿಯಾಗಿದ್ದ ಸುಧೀರ್, ಅಭಿಲಾಷ್, ರಂಜಿತ್, ಸದಾಶಿವ, ಸುನಿಲ್, ಶಿವಪ್ರಸಾದ್, ಜಿಮ್ ರಂಜಿತ್, ಭಾಸ್ಕರ್ ಎಂಬ 8 ಮಂದಿಯನ್ನು ವಶಕ್ಕೆ ಪಡೆದು ಮಾರಣಾಂತಿಕ ಹಲ್ಲೆಯ ಕೇಸು ದಾಖಲಿಸಿರುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಮಸೂದ್ ಮೃತನಾದ ಸುದ್ದಿ ಬರುತ್ತದೆ. ಬಳಿಕ ಮರ್ಡರ್ ಕೇಸ್ ಆಗಿ ಪ್ರಕರಣ ಪರಿವರ್ತಿತಗೊಳ್ಳುತ್ತದೆ. 8 ಮಂದಿ ಆರೋಪಿಗಳಿಗೂ ನ್ಯಾಯಾಂಗ ಬಂಧನವಾಗುತ್ತದೆ.

ಬಡ ಕುಟುಂಬದ ಮಸೂದ್: ಹತ್ಯೆಗೀಡಾದ ಮಸೂದ್ ನದ್ದು ಬಡ ಕುಟುಂಬ. ಮಸೂದನ ತಂದೆ 6 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಐವರು ಮಕ್ಕಳನ್ನು ಸಾಕುವ ಹೊಣೆಗಾರಿಕೆ ಸಾರಮ್ಮರ ಹೆಗಲೇರಿದಾಗ ಅವರು ಕಳಂಜದಲ್ಲಿರುವ ತಂದೆ ಮನೆಯನ್ನು ಅವಲಂಬಿಸಿರುತ್ತಾರೆ. ಮೊಗ್ರಾಲ್ ಪುತ್ತೂರಿನಲ್ಲಿ ಸ್ವಂತ ಮನೆ ಇರುವುದಿಲ್ಲ. ಎರಡು ವರ್ಷದ ಹಿಂದೆ ಸಾರಮ್ಮರನ್ನು ಮೂಡಿಗೆರೆಯವರೊಬ್ಬರಿಗೆ ಮದುವೆ ಮಾಡಿಕೊಡಲಾಗಿದೆ.

ಗಾಂಜಾ ಹವ್ಯಾಸ ಕಾರಣವೇ ?: ಕಳಂಜದಲ್ಲಿ ಈ ಹಿಂದೆ ಗಾಂಜಾ ವಿಚಾರವಾಗಿ ಬೇರೆಯವರ ಮೇಲೆ ಕೇಸ್ ಆಗಿದ್ದು, ಮಸೂದ್ ಮೇಲೆ ಅದನ್ನು ತಳಕು ಹಾಕಿ ಮಾತನಾಡುವವರಿದ್ದಾರೆ. ಆದರೆ ಮಸೂದ್ ವಿಚಾರವಾಗಿ ಅಂತಹ ಅಭಿಪ್ರಾಯ ಕೇಳಿ ಬರುತ್ತಿಲ್ಲ.

ಮಸೂದ್ ಮನೆಯಲ್ಲಿ ಸರಣಿ ಸಾವು: ಮಸೂದ್ ಮನೆಯಲ್ಲಿ 4 ತಿಂಗಳಲ್ಲಿ 4 ಸಾವು ಸಂಭವಿಸಿದೆ. 4 ತಿಂಗಳ ಹಿಂದೆ ಮಸೂದನ ಅಕ್ಕ ಆಯಿಷಾರ ಪತಿ ನಿಧನರಾದರು. ಇದಾದ ಕೆಲವೇ ದಿನಗಳಲ್ಲಿ ಮಸೂದ್ ಅಜ್ಜ ಅಬ್ಬು ಮುಕ್ರಿಯವರು ತೀರಿಕೊಂಡರು. ಮಸೂದ್ ಕೊನೆಯುಸಿರೆಳೆದ ಜುಲೈ 20 ರ 4 ದಿನಗಳ ಮೊದಲು ಮಸೂದನ ಚಿಕ್ಕಮ್ಮನ 4 ದಿನದ ಮಗು ತೀರಿಕೊಂಡಿತ್ತು.

ಮಸೂದನ ಪ್ರೀತಿಯ ಎತ್ತಿನ ಕರು ಸಾವು : ಮಸೂದ್ ಒಂದೆರಡು ತಿಂಗಳ ಹಿಂದೆ ಕಳಂಜಕ್ಕೆ ಅಜ್ಜನ ಮನೆಗೆ ಬಂದವ ಪೈಂಟಿಂಗ್ ಕೆಲಸಕ್ಕೆ ಹೆಲ್ಪರ್ ಆಗಿ ಹೋಗಲು ಆರಂಭಿಸಿದ್ದ. ಅಜ್ಜನ ಮನೆಯಲ್ಲಿ ಒಂದು ಹೋರಿ ಕರು ಇತ್ತು. ಅದನ್ನು ಮಸೂದ್ ಹಗ್ಗದಲ್ಲಿ ಹಿಡಿದುಕೊಂಡು ಮೇಯಿಸಲು ಕಳಂಜ ವಿಷ್ಣು ನಗರದಲ್ಲಿ ಕೊಂಡೊಯ್ಯುತ್ತಿದ್ದ. ಮಸೂದ್ ಯಾರೆಂದರೆ ‘ಆ ಹೋರಿ ಕರುವನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದನಲ್ಲ…ಆ ಹುಡುಗ’ ಎಂದು ಊರವರು ಹೇಳುತ್ತಾರೆ. ಅಂತಹ ಪ್ರೀತಿಯ ಕರು ಮಸೂದ್ ತೀರಿಕೊಂಡಾಗ ತಾನೂ ಕೊನೆಯುಸಿರೆಳೆದುದು ಅತ್ಯಾಶ್ಚರ್ಯದ ವಿಷಯವಾಗಿದೆ. ಮಸೂದನ ಮೃತದೇಹ ಬೆಳ್ಳಾರೆಗೆ ಬರುವುದಕ್ಕಿಂತ ಮೊದಲು ಅದನ್ನು ಗುಂಡಿ ತೋಡಿ ಸಮಾಧಿ ಮಾಡಲಾಯಿತು.

ನಮ್ಮಲ್ಲಿ ಕೋಮುಭಾವನೆಗಳು ಇರಲಿಲ್ಲ. ಎಲ್ಲರೂ ಒಳ್ಳೆಯದರಲ್ಲೇ ಇದ್ದೆವು. ಆದರೆ ಅವರ ಮನಸ್ಸಿನೊಳಗೆ ಏನಿತ್ತೆಂದು ನಮಗೆ ಗೊತ್ತಾಗುವುದು ಹೇಗೆ?. ಕೊಲ್ಲಬೇಕೆಂಬ ಉದ್ದೇಶದಿಂದ ಹೊಡೆದುದು ಅಲ್ಲದಿರಬಹುದು. ಆದರೆ ಅವರು ಹೊಡೆದ ಪೆಟ್ಟಿನಿಂದ ಇವನು ಸಾವನ್ನಪ್ಪಿದ್ದಾನೆ. ಸರಕಾರ ತಾರತಮ್ಯ ಮಾಡುವುದು ಸರಿಯೇ?

-ಶೌಕತ್ ಅಲಿ ಮಸೂದ್ ಮಾವ

ನಮ್ಮಲ್ಲಿ ಕೋಮುಭಾವನೆಗಳು ಇರಲಿಲ್ಲ. ಎಲ್ಲರೂ ಒಳ್ಳೆಯದರಲ್ಲೇ ಇದ್ದೆವು. ಆದರೆ ಅವರ ಮನಸ್ಸಿನೊಳಗೆ ಏನಿತ್ತೆಂದು ನಮಗೆ ಗೊತ್ತಾಗುವುದು ಹೇಗೆ?. ಕೊಲ್ಲಬೇಕೆಂಬ ಉದ್ದೇಶದಿಂದ ಹೊಡೆದುದು ಅಲ್ಲದಿರಬಹುದು. ಆದರೆ ಅವರು ಹೊಡೆದ ಪೆಟ್ಟಿನಿಂದ ಇವನು ಸಾವನ್ನಪ್ಪಿದ್ದಾನೆ. ಸರಕಾರ ತಾರತಮ್ಯ ಮಾಡುವುದು ಸರಿಯೇ?

-ಶೌಕತ್ ಅಲಿ ಮಸೂದ್ ಮಾವ

LEAVE A REPLY

Please enter your comment!
Please enter your name here