ಗುಡ್ಡ ಕತ್ತರಿಸಲು ಕಂದಾಯ ಇಲಾಖೆಯ ಪರವಾನಗೆ ಕಡ್ಡಾಯ-ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಿಗರಿಗೆ ಜಿಲ್ಲಾಧಿಕಾರಿ ಸುತ್ತೋಲೆ

0

ಪುತ್ತೂರು: ಕಟ್ಟಡ ನಿರ್ಮಿಸಲು ಅಥವಾ ಇತರ ಕಾಮಗಾರಿಗಳ ಸಲುವಾಗಿ 3 ಅಡಿ ಅಥವಾ 1 ಮೀಟರ್‌ಗಿಂತ ಎತ್ತರಕ್ಕೆ ಗುಡ್ಡ ಕತ್ತರಿಸಲು ಕಂದಾಯ ಇಲಾಖೆಯಿಂದ ಪರವಾನಗಿ ಪಡೆಯುವುದು ಕಡ್ಡಾಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಮ್ಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಗ್ರಾಮ ಲೆಕ್ಕಿಗರಿಗೆ ಸುತ್ತೋಲೆ ಕಳುಹಿಸಿದ್ದಾರೆ. ಜಿಲ್ಲೆಯಲ್ಲಿ ಗುಡ್ಡ ಕಡಿದು ಮನೆ ಕಟ್ಟುವುದು ಜಾಸ್ತಿಯಾಗುತ್ತಿದೆ. ವಾಣಿಜ್ಯ ರಸ್ತೆ ಇರುವ ಕಡೆ ಜನರು ಅದರ ಮಟ್ಟಕ್ಕೆ ಗುಡ್ಡ ಕತ್ತರಿಸಿ ಕಟ್ಟಡ ಕಟ್ಟುತ್ತಿದ್ದಾರೆ. ಇದರಿಂದಾಗಿ ಅನೇಕ ಕಡೆ ಮಳೆಗಾಲದಲ್ಲಿ ಕುಸಿತ ಉಂಟಾಗಿದೆ. ಗುಡ್ಡ ಕಡಿದರೆ ತೋಡುಗಳಲ್ಲಿ ಮಳೆ ನೀರು ಹರಿವಿನ ದಿಕ್ಕು ಬದಲಾಗುತ್ತದೆ. ನೀರು ಎಲ್ಲೆಲ್ಲೋ ಹರಿದು ಮಣ್ಣು ಸಡಿಲ ಆಗುತ್ತದೆ. ಇದು ಗುಡ್ಡ ಕುಸಿತಕ್ಕೆ ಕಾರಣವಾಗುತ್ತದೆ. ಭೂಪರಿವರ್ತನೆಗೊಂಡ ಜಾಗದಲ್ಲೂ ಗುಡ್ಡ ಕಡಿಯಲು ಅವಕಾಶ ಇರುವುದಿಲ್ಲ. ಭೌಗೋಳಿಕತೆ ಬದಲಾಯಿಸಲು ಭೂಕಂದಾಯ ಕಾಯ್ದೆಯ ಸೆಕ್ಷನ್ ೯೫ರ ಪ್ರಕಾರ ಕಂದಾಯ ಇಲಾಖೆಯಿಂದ ಪರವಾನಗಿ ಪಡೆಯುವ ಅಗತ್ಯವಿದೆ. ಮೂರು ಅಡಿ ಅಥವಾ ೧ ಮೀ.ಗಿಂತ ಜಾಸ್ತಿ ಎತ್ತರದ ಜಾಗ ಸಮತಟ್ಟು ಮಾಡಲು ಕಂದಾಯ ಇಲಾಖೆಯಿಂದ ಅನುಮತಿ ಪಡೆಯಲೇಬೇಕು. ಅವಘಡ ತಪ್ಪಿಸಲು ಗ್ರಾಪಂ ಪಿಡಿಒಗಳಿಗೆ ಹಾಗೂ ಗ್ರಾಮ ಲೆಕ್ಕಿಗರಿಗೆ ಸುತ್ತೋಲೆ ಕಳುಹಿಸಲಾಗಿದೆ.

ಜಮೀನಿನಲ್ಲಿ ಅಭಿವೃದ್ಧಿ ಚಟುವಟಿಕೆ, ಕಟ್ಟಡ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಒಂದು ಮೀಟರ್‌ಗಿಂತ ಅಧಿಕವಾಗಿ ಜಮೀನುಗಳನ್ನು ಕಡಿದು ಸಮತಟ್ಟುಗೊಳಿಸಬೇಕಾದ್ದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸ್ಪಷ್ಟ ಅಭಿಪ್ರಾಯ ಪಡೆಯತಕ್ಕದ್ದು, ಗ್ರಾಮ ಮಟ್ಟದಲ್ಲಿ ಆಯಾ ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಿಗರು ಹಾಗೂ ನಗರ ಪಟ್ಟಣ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಪ್ರಾಧಿಕಾರಿಗಳು, ತಹಶೀಲ್ದಾರರು ಪರಿಶೀಲನೆ ನಡೆಸಿದ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಭೂ ಪರಿವರ್ತನೆ ಕೋರಿಕೆಗಳಲ್ಲಿ ಸಹ ಕಂದಾಯ ನಿರೀಕ್ಷಕರು, ತಹಶೀಲ್ದಾರರು, ಸಹಾಯಕ ಆಯುಕ್ತರು ವರದಿ ಸಲ್ಲಿಸುವಾಗ ಹಾಗೂ ಸ್ಥಳೀಯ ಸಂಸ್ಥೆ,ಪ್ರಾಧಿಕಾರಿಗಳು ತಮ್ಮ ಅಭಿಪ್ರಾಯ ಸಲ್ಲಿಸುವಾಗ ಭೂ ಪರಿವರ್ತನೆ ಕೋರಿದ ಜಮೀನು ರಸ್ತೆ ಬದಿಯಲ್ಲಿ ಇದೆಯೇ? ಎತ್ತರ ಪ್ರದೇಶದಲ್ಲಿ ಬರುತ್ತದೆಯೋ ಹಾಗೂ ಮುಂದೆ ಭೂ ಪರಿವರ್ತನೆಗೆ ಕೋರಿದ ಜಮೀನುಗಳನ್ನು ಸಮತಟ್ಟುಗೊಳಿಸಿದ್ದಲ್ಲಿ ಗುಡ್ಡ ಜರಿತ, ಕೃತಕ ನೆರೆ ಮುಂತಾದ ವಿಪತ್ತುಗಳು ಸಂಭವಿಸುವ ಸಾಧ್ಯತೆಗಳಿದೆಯೇ ಎಂಬ ಬಗ್ಗೆ ಪರಿಶೀಲಿಸಿ ನಿಖರವಾದ ವರದಿಯನ್ನು ಸಲ್ಲಿಸತಕ್ಕದ್ದು ಒಂದು ವೇಳೆ ಈ ಬಗ್ಗೆ ವರದಿ ಸಲ್ಲಿಸದೇ ಇದ್ದಲ್ಲಿ ಮುಂದೆ ಯಾವುದೇ ಹಾನಿ ಸಂಭವಿಸಿದ್ದಲ್ಲಿ ಸಂಬಂಧಪಟ್ಟ ಕಂದಾಯ ನಿರೀಕ್ಷಕರು, ತಹಶೀಲ್ದಾರರು, ಸಹಾಯಕ ಆಯುಕ್ತರು, ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ನಗರ ಪಟ್ಟಣದ ಪ್ರಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸುವ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಗುಡ್ಡವನ್ನು ಲಂಬಕೋನದಲ್ಲಿ ಕತ್ತರಿಸದೇ, ಇಳಿಜಾರು ಇರುವಂತೆ ಕತ್ತರಿಸಬೇಕು. ಅಲ್ಲಿ ತಡೆಗೋಡೆ ನೀರ್ಮಿಸಬೇಕು. ಆದರೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗ್ರಾಮ ಪಂಚಾಯಿತಿ, ಲೋಕೋಪಯೋಗಿ ಇಲಾಖೆಯವರೂ ರಸ್ತೆ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕತ್ತರಿಸುತ್ತಾರೆ. ಕೆಲವೆಡೆ ಗುಡ್ಡ ಕಡಿದ ಬಳಿಕ ತಡೆಗೋಡೆ ನಿರ್ಮಿಸುತ್ತಿಲ್ಲ. ಅಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಜಾಸ್ತಿ, ಗುಡ್ಡ ಕತ್ತರಿಸುವುದನ್ನು ತಡೆಯಲು ಜನರ ಸಹಕಾರವೂ ಅಗತ್ಯ. ಗುಡ್ಡಗಳನ್ನು ಕಡಿಯದೆಯೇ ಕಟ್ಟಡ ನಿರ್ಮಿಸುವುದಕ್ಕೆ ಪೂರಕವಾದ ವಿನ್ಯಾಸ ರೂಪಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here