ಪುತ್ತೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕುರಿತು ತನಿಖೆಗೆ ರಚಿಸಲಾಗಿರುವ 18 ಮಂದಿ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುವ ವಿಶೇಷ ತನಿಖಾ ತಂಡದಲ್ಲಿ ಈ ಹಿಂದೆ ಪುತ್ತೂರಿನಲ್ಲಿ ಪ್ರೊಬೆಷನರಿ ಡಿವೈಎಸ್‌ಪಿಯಾಗಿದ್ದು ಪ್ರಸ್ತುತ ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿರುವ ಧನ್ಯಾ ನಾಯಕ್‌ರವರನ್ನು ನೇಮಕ ಮಾಡಲಾಗಿದೆ.
ಐಪಿಎಸ್ ಅಧಿಕಾರಿ ಬಿ.ಕೆ. ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡದಲ್ಲಿ ಒಟ್ಟು 18 ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಇಬ್ಬರು ಮಹಿಳೆಯರು ಸೇರಿ ಮೂವರು ಎಸಿಪಿ ಮಟ್ಟದ ಅಧಿಕಾರಿಗಳು, ಮೂರು ಮಂದಿ ಮಹಿಳಾ ಅಧಿಕಾರಿ ಸೇರಿ ಐದು ಮಂದಿ ಇನ್ಸ್‌ಪೆಕ್ಟರ್ ಗಳನ್ನು ತಂಡದಲ್ಲಿ ನೇಮಕ ಮಾಡಲಾಗಿದೆ. ಮೂರು ಮಂದಿ ಮಹಿಳಾ ಎಸ್‌ಐ ಸೇರಿ ಒಟ್ಟು ನಾಲ್ಕು ಮಂದಿ ಎಸ್‌ಐಗಳು ತಂಡದಲ್ಲಿದ್ದಾರೆ. ಧನ್ಯಾ ನಾಯಕ್ ಅವರು ಪುತ್ತೂರಿನಲ್ಲಿ ಪ್ರೊಬೆಷನರಿ ಡಿವೈಎಸ್ಪಿಯಾಗಿದ್ದ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು.