ಸುಬ್ರಹ್ಮಣ್ಯ:ಮನೆ ಮೇಲೆ ಬರೆ ಜರಿದು ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಸರಕಾರದಿಂದ ರೂ.11.05 ಲಕ್ಷ ಪರಿಹಾರ ವಿತರಣೆ

0

ಪುತ್ತೂರು:ಆ.1ರಂದು ರಾತ್ರಿ ಮಳೆಯ ಆರ್ಭಟದಿಂದಾಗಿ ಸುಬ್ರಹ್ಮಣ್ಯದಲ್ಲಿ ಗುಡ್ಡ ಜರಿದು ಮನೆ ಮೇಲೆ ಬಿದ್ದು ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಇಬ್ಬರು ಸಹೋದರಿಯರ ಕುಟುಂಬಕ್ಕೆ ಸರಕಾರದಿಂದ ಪರಿಹಾರವಾಗಿ 11,05,000 ರೂ.ನೀಡಲಾಗಿದೆ.ಈ ಸಂಬಂಧ ಒಟ್ಟು 3 ಚೆಕ್‌ಗಳನ್ನು ಸಚಿವ ಎಸ್.ಅಂಗಾರ ಆ.2ರಂದು ಮೃತ ಮಕ್ಕಳ ತಂದೆ ಕುಸುಮಾಧರ ಅವರಿಗೆ ಕುಸುಮಾಧರರ ತಂದೆ ಬೊಮ್ಮಣ ಗೌಡ ಕರಿಮಜಲುರವರ ನಿವಾಸದಲ್ಲಿ ವಿತರಿಸಿದರು.

ಕುಸುಮಾಧರ-ರೂಪಶ್ರೀ ದಂಪತಿಯ ಮನೆ ಕುಸಿದು ಮೈಮೇಲೆಯೇ ಬಿದ್ದ ಪರಿಣಾಮ ಅವರ ಮಕ್ಕಳಾದ ಶ್ರುತಿ(11ವ.) ಮತ್ತು ಜ್ಞಾನಶ್ರೀ(8ವ.)ಮಣ್ಣಿನಡಿಯಲ್ಲಿ ಸಿಲುಕಿ ಉಸಿರುಕಟ್ಟಿ ಮೃತಪಟ್ಟಿದ್ದ ದಾರುಣ ಘಟನೆ ನಡೆದಿತ್ತು.ಮೃತ ಇಬ್ಬರು ಮಕ್ಕಳಿಗಾಗಿ ಸರಕಾರದಿಂದ ಪರಿಹಾರವಾಗಿ ತಲಾ ರೂ.5 ಲಕ್ಷ ಹಾಗೂ ಮನೆ ನಾಶಕ್ಕಾಗಿ ರೂ.95 ಸಾವಿರದ 100 ಮತ್ತು ಮನೆಯೊಳಗಿದ್ದ ವಸ್ತುಗಳು ನಾಶವಾಗಿರುವುದಕ್ಕೆ ರೂ.10 ಸಾವಿರ ಸೇರಿ ಒಟ್ಟು 11 ಲಕ್ಷ 5 ಸಾವಿರದ 100 ರೂ.ಗಳ ಚೆಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬಿ.ಜೆ.ಪಿ.ಉಪಾಧ್ಯಕ್ಷ ವೆಂಕಟ್ ವಳಲಂಬೆ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಡಬ ತಹಶಿಲ್ದಾರ್ ಅನಂತಶಂಕರ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ, ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್, ಸುಬ್ರಹ್ಮಣ್ಯ ಐನೆಕಿದು ಸಹಕಾರಿ ಸಂಘದ ನಿರ್ದೇಶಕ ವೆಂಕಟೇಶ್ ಹೆಚ್.ಎಲ್., ಸುಬ್ರಹ್ಮಣ್ಯದ ಉದ್ಯಮಿ ರವಿ ಕಕ್ಕೆಪದವು ಮತ್ತಿತರರು ಉಪಸ್ಥಿತರಿದ್ದರು.

ಮನೆಯಿಂದ ಹೊರಗೆ ಓಡಿ ಬರುವಷ್ಟರಲ್ಲಿ ಮನೆ ಬಿದ್ದಿತ್ತು..:

ಕುಸುಮಾಧರ ಅವರು ಪರ್ವತಮುಖಿ ಬಳಿ ಅಂಗಡಿ ಹೊಂದಿದ್ದು ಅಲ್ಲಿಗೆ ಹೋಗಿದ್ದರು.ಪತ್ನಿ ರೂಪಶ್ರೀ ಹಾಗೂ ಮೂವರು ಮಕ್ಕಳು ಮನೆಯಲ್ಲಿದ್ದರು.ಮಳೆಯ ಆರ್ಭಟ ಜೋರಾಗುತ್ತಿದ್ದಂತೆಯೇ ರೂಪಶ್ರೀಯವರು ನಾಲ್ಕು ತಿಂಗಳ ಮಗುವನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದರು.ಪುತ್ರಿಯರಾದ ಶ್ರುತಿ ಹಾಗೂ ಜ್ಞಾನಶ್ರೀಯವರೂ ಅವರಾಗಿಯೇ ಮನೆಯಿಂದ ಹೊರಗೆ ಓಡಿ ಬರಬಹುದು ಎಂದು ರೂಪಶ್ರೀಯವರು ತಿಳಿದುಕೊಂಡಿದ್ದರು. ಅದರಂತೆ, ಶ್ರುತಿ ಮತ್ತು ಜ್ಞಾನಶ್ರೀ ಸಹೋದರಿಯರೂ ಮನೆಯಿಂದ ಇನ್ನೇನು ಓಡಿ ಹೊರಗಡೆ ಬರುವಷ್ಟರಲ್ಲಿಯೇ ಸಾವು ಅವರ ಬೆನ್ನು ಹತ್ತಿತ್ತು. ಮನೆಯಿಂದ ಹೊರಗಡೆ ಬರುತ್ತಿದ್ದಂತೆಯೇ ಮನೆ ಕುಸಿದು ಬಿದ್ದ ಪರಿಣಾಮ ಅವರೀರ್ವರೂ ಮಣ್ಣಿನಡಿಯಲ್ಲಿ ಸಿಲುಕಿಕೊಂಡರು.ಇತ್ತ ರಣಭೀಕರ ಮಳೆಯಿಂದಾಗಿ ರಸ್ತೆಗಳು ಬ್ಲಾಕ್ ಆಗಿದ್ದರಿಂದ ಕಾರ್ಯಾಚರಣೆಗಾಗಿ ಜೆಸಿಬಿಯನ್ನೂ ತರಿಸುವ ಸ್ಥಿತಿ ಇರಲಿಲ್ಲ ವಿದ್ಯುತ್ ಸಂಪರ್ಕವೂ ಕಡಿತಗೊಂಡು ಪರಿಸರದಲ್ಲಿ ಕತ್ತಲೆ ಆವರಿಸಿತ್ತು. ಕೊನೆಗೂ ಹರಸಾಹಸ ಪಟ್ಟು ಜೆಸಿಬಿಯನ್ನು ತರಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತಾದರೂ ಫಲಪ್ರದವಾಗಲಿಲ್ಲ.ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದ ಶ್ರುತಿ ಹಾಗೂ ಜ್ಞಾನಶ್ರೀ ಅವರ ಪ್ರಾಣಪಕ್ಷಿ ಆವೇಳೆಗಾಗಲೇ ಹಾರಿಹೋಗಿತ್ತು. ಈ ಘಟನೆಯಿಂದಾಗಿ ಪರಿಸರದೆಲ್ಲೆಡೆ ನೀರವ ಮೌನ ಆವರಿಸಿದೆ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

LEAVE A REPLY

Please enter your comment!
Please enter your name here