ಹಿಂದೂಗಳು ಹಿಂದೂಗಳನ್ನು ಕೊಂದರೆ, ಮುಸ್ಲಿಮರು ಮುಸ್ಲಿಮರನ್ನು ಕೊಂದರೆ ಯಾವುದೇ ಗಲಭೆಯಿಲ್ಲ ಯಾಕೆ?

0

ಕೊಂದವರು, ಸತ್ತವರು ಸ್ವರ್ಗಕ್ಕೆ ಹೋಗುತ್ತಾರೆ ಎಂದೇ?

ಮುಸ್ಲಿಮರನ್ನು ಹಿಂದೂಗಳು, ಹಿಂದೂಗಳನ್ನು ಮುಸ್ಲಿಮರು ಕೊಂದರೆ ಬೆಂಕಿ ಬೀಳುತ್ತದೆ ಯಾಕೆ?

ಸತ್ತವರು ನರಕಕ್ಕೆ ಹೋಗುತ್ತಾರೆಂದೇ?

ಜಾಗತಿಕ (ಬಾಹ್ಯ) ಭಯೋತ್ಪಾದನೆಗಿಂತ ಆಂತರಿಕ ಭಯೋತ್ಪಾದನೆ ಅಪಾಯಕಾರಿ

75ನೇ ವರ್ಷದ ಸ್ವಾತಂತ್ರ್ಯೋತ್ಸವ ದ.ಕ. ಜಿಲ್ಲೆಯನ್ನು ಸರ್ವಧರ್ಮಗಳ ಶಾಂತಿಯ ತೋಟವನ್ನಾಗಿಸಲಿ

ನಾವೆಲ್ಲಾ ಸಣ್ಣದಿರುವಾಗ, ಶಾಲೆಗಳಲ್ಲಿ ಓದುವಾಗ, ವೈದ್ಯಕೀಯ ವೃತ್ತಿ ಮಾಡುತ್ತಿದ್ದಾಗ, ಪತ್ರಿಕೋದ್ಯಮ ಪ್ರಾರಂಭ ಮಾಡಿದಾಗ ನಮ್ಮಲ್ಲಿ ಕೆಲಸ ಮಾಡುವವರು ನಮ್ಮ ಸ್ನೇಹಿತರು ಹಿಂದುವೇ, ಕ್ರಿಶ್ಚಿಯನ್ನೇ, ಮುಸ್ಲಿಂ ಅಥವಾ ಯಾವ ಜಾತಿಯವ ಎಂಬ ಯೋಚನೆ ಇರಲಿಲ್ಲ. ಎಲ್ಲರ ಧರ್ಮದ ಆಚರಣೆಯಲ್ಲಿ ನಾವು ಭಾಗವಹಿಸುತ್ತಿದ್ದೆವು. ಅದು ಸಂಭ್ರಮದ ದಿನಗಳಾಗಿದ್ದವು. ಗಲಾಟೆ, ಹೊಡೆದಾಟ ಇದ್ದವು. ಆದರೆ ಅದು ಕೋಮು ಗಲಭೆಗಳಾಗಿ ಪರಿವರ್ತನೆಗೊಳ್ಳುತ್ತಿರಲಿಲ್ಲ, ಕೋಮಿಗಾಗಿ ಆಗುತ್ತಿರಲಿಲ್ಲ. ಈವಾಗಲೂ ನಮ್ಮ ಸುಳ್ಯ, ಪುತ್ತೂರು, ಬೆಳ್ತಂಗಡಿ ಕಛೇರಿಗಳಲ್ಲಿ ಎಲ್ಲಾ ಧರ್ಮದವರು, ಜಾತಿಯವರು ಇದ್ದಾರೆ. ಅವರ ಹಬ್ಬವು ನಮಗೂ ಸಂಭ್ರಮದ ದಿನಗಳಾಗುತ್ತವೆ. ನಮ್ಮಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತಿತರ ಧರ್ಮದ ಯುವಕ ಯುವತಿಯರು ಬದಿ ಬದಿಯಲ್ಲಿ ಕುಳಿತು ಕೆಲಸ ಮಾಡುತ್ತಾರೆ. ವಾಹನಗಳಲ್ಲಿ ಒಟ್ಟಿಗೆ ಹೋಗುತ್ತಾರೆ. ಯಾವುದೇ ಕೆಲಸದ ಸ್ಥಳದಲ್ಲಿ ಯಾವುದೇ ವಿಶೇಷ ವಸ ಧರಿಸದೆ ಎಲ್ಲಾ ಧರ್ಮದ ಮಹಿಳೆಯರು, ಯುವಕರು ನಮ್ಮಲ್ಲಿ ಕೆಲಸ ಮಾಡಿದ್ದಾರೆ. ಅವರಲ್ಲಿ ಯಾರಿಗೇ ಆದರೂ ಯಾವುದೇ ಜಾತಿ, ಧರ್ಮದವರಿಗೆ ತೊಂದರೆಯಾಗಿರುವುದಿಲ್ಲ. ಸಾರ್ವಜನಿಕರಿಂದಲು ಏನೂ ತೊಂದರೆಯಾಗಿಲ್ಲ. ಹೀಗಿದ್ದರೂ ಕೋಮು ಗಲಭೆ ಪ್ರಾರಂಭವಾದಾಗ, ಬಂದ್‌ಗಳಾದಾಗ ನಾವು ನಮ್ಮ ಸಿಬ್ಬಂದಿಗಳು ಚಿಂತಿತರಾಗುತ್ತಾರೆ. ಕೋಮುವಿನ ಕಾರಣಕ್ಕೆ ಹೊರಗಡೆ ಹಲ್ಲೆಗಳಾಗುತ್ತಿದ್ದರೂ ಏನು ಮಾಡುವುದೆಂದು, ನಮ್ಮವರನ್ನು ರಕ್ಷಿಸುವುದು ಹೇಗೆಂಬ ಹೆದರಿಕೆ, ಆತಂಕ ನಮ್ಮಲ್ಲಿ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೋಮು ಭಾವನೆ, ಸಂಘರ್ಷ ಯುವ ಜನರಲ್ಲಿ ಜಾಸ್ತಿಯಾಗುತ್ತಾ ಇರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗುತ್ತಿದೆ. ತಮ್ಮ ಧರ್ಮವನ್ನು ಪ್ರೀತಿಸುವುದು ಎಂದರೆ ಇನ್ನೊಂದು ಧರ್ಮವನ್ನು ದ್ವೇಷಿಸುವುದು, ಅದನ್ನು ಅವಮಾನಿಸುವುದು, ಆ ಧರ್ಮದವರನ್ನು ಪರಿವರ್ತನೆ ಮಾಡುವುದು ಅಥವಾ ನಾಶ ಮಾಡುವುದು ಎಂಬ ಭಾವನೆ ಬೆಳೆಯುತ್ತಿದೆ. ಅದು ಸರಿಯಲ್ಲ. ಆ ಭಾವನೆಯನ್ನು ಪುತ್ತೂರಿನಲ್ಲಿ ಕೆಲಸ ಮಾಡುವ ಪೊಲೀಸ್ ಮಿತ್ರರು ಹಂಚಿಕೊಂಡಿದ್ದಾರೆ. ಪುತ್ತೂರು, ದ.ಕ. ಜಿಲ್ಲೆಯಲ್ಲಿ ಕೆಲಸ ಮಾಡುವುದು ಪೊಲೀಸ್ ಇಲಾಖೆಗೆ ಬಹಳ ಕಷ್ಟದ ಕೆಲಸ. ಸಹಜವಾಗಿ ನಡೆಯುವ ಸಣ್ಣಪುಟ್ಟ ಕ್ರಿಯೆಗಳು ಕೋಮು ವಿಷಯವಾಗಿ ಪರಿವರ್ತಿತವಾಗುತ್ತದೆ ಎಂದಿದ್ದಾರೆ.

ಈ ಮೇಲಿನ ವಿಷಯಕ್ಕೆ ಪೂರಕವಾಗಿ 2015ರಲ್ಲಿ ಟಿಪ್ಪು ಜಯಂತಿ ಆಚರಣೆಯ ಪ್ರತಿಭಟನೆ ಸಂದರ್ಭದಲ್ಲಿ ಬಿ.ಸಿ. ರೋಡ್‌ನಲ್ಲಿ ಹರೀಶ್ ಪೂಜಾರಿ ಮತ್ತು ಸಮೀವುಲ್ಲಾ ಎಂಬ ಸ್ನೇಹಿತರು ಒಟ್ಟಿಗೆ ಇರುವಾಗ ಕೋಮು ಗಲಭೆ ಉಂಟುಮಾಡಲಿಕ್ಕಾಗಿಯೇ ಹರೀಶ್ ಪೂಜಾರಿ ದುಷ್ಕರ್ಮಿಗಳಿಂದ ಹತ್ಯೆಯಾದ ಮತ್ತು ಅದರ ಪರಿಣಾಮವಾಗಿ ನಡೆದ ಗಲಭೆಗಳ ಸಂದರ್ಭದಲ್ಲಿ 14-11-2015 ರಂದು ಬರೆದ ಗಾಂಧಿ ಜನಿಸಿದ ನಾಡಿನಲ್ಲಿ ’ಸಬ್ ಕೇ ಸಾಥ್’ ಘೋಷಣೆ ಮೊಳಗಲಿ ಎಂಬ ಲೇಖನದ ಅಂಶವನ್ನು ಈ ಕೆಳಗೆ ನೀಡಿದ್ದೇನೆ.

ಈ ಊರಿನಲ್ಲಿ ಯಾವುದೇ ಹಿಂದೂ ತನ್ನದೇ ಆದ ಹಿಂದೂ ಸಮಾಜದವರಿಂದ ತೊಂದರೆಗೊಳಗಾದರೆ, ಹಲ್ಲೆಗೊಳಗಾದರೆ, ಹತ್ಯೆಯಾದರೂ ಏನೂ ಗಲಭೆ ಆಗುವುದಿಲ್ಲ. ಪರಿಹಾರ ಸಿಗುವುದಿಲ್ಲ ಯಾಕೆ? ಒಂದು ವೇಳೆ ಹಲ್ಲೆ ಅಥವಾ ಹತ್ಯೆ ಮಾಡಿದವ ಶ್ರೀಮಂತ ಅಥವಾ ಅಧಿಕಾರಸ್ಥ ಆಗಿದ್ದರೆ ಅವನ ಕಡೆಗೇ ಬೆಂಬಲ ದೊರಕುತ್ತದೆ. ಅದೇ ರೀತಿ ಮುಸ್ಲಿಮರ ಮೇಲೆ ಮುಸ್ಲಿಂ ಸಮುದಾಯದ ಯಾರೇ ಹಲ್ಲೆ ಮಾಡಿ ಹತ್ಯೆ ಮಾಡಿದರೂ ಅಲ್ಲಿಯೂ ಏನೂ ಆಗುವುದಿಲ್ಲ. ಪರಿಹಾರವೂ ಸಿಗುವುದಿಲ್ಲ ಯಾಕೆ? ಹತ್ಯೆ ಮಾಡಿದವರು ಶ್ರೀಮಂತ ಅಧಿಕಾರಸ್ಥರಾದರೆ ಅವರ ಕಡೆ ನಿಲ್ಲುವವರೇ ಜಾಸ್ತಿ. ಆದರೆ ಹಿಂದೂಗಳ ಮೇಲೆ ಮುಸ್ಲಿಂ ಅಥವಾ ಮುಸ್ಲಿಮರ ಮೇಲೆ ಹಿಂದೂ ಸಮುದಾಯದವರು ಹತ್ಯೆ ಮಾಡುವುದಲ್ಲ, ಕೇವಲ ಮೈಮುಟ್ಟಿದರೂ ಸಾಕು ಪ್ರತಿಭಟನೆ ನಡೆಯುತ್ತದೆ. ಹತ್ಯೆ ಮಾಡಿದರೆ ಊರಿಗೇ ಬೆಂಕಿ ಬೀಳುತ್ತದೆ. ಪ್ರತೀಕಾರವಾಗಿ ಹಲ್ಲೆ ಕೂಡ ನಡೆಯುತ್ತದೆ. ಯಾಕೆ? ಅಂದರೆ ಹಿಂದೂಗಳನ್ನು ಹಿಂದೂಗಳು ಕೊಂದರೆ (ಅದು ಪುಣ್ಯದ ಕೆಲಸ) ಸತ್ತವರು, ಕೊಂದವರು ಸ್ವರ್ಗಕ್ಕೆ ಹೋಗುತ್ತಾರೆ. ಇತರರು ಕೊಂದರೆ ಆ ಸತ್ತ ಹಿಂದೂ ನರಕಕ್ಕೆ ಹೋಗುತ್ತಾನೆ ಎಂದು ಅರ್ಥವೇ? ಅದೇ ರೀತಿಯಲ್ಲಿ ಮುಸ್ಲಿಂರನ್ನು ಮುಸ್ಲಿಮರು ಕೊಂದರೆ (ಅದು ಪುಣ್ಯದ ಕೆಲಸ) ಇಬ್ಬರೂ ಸ್ವರ್ಗಕ್ಕೆ ಹೋಗುತ್ತಾರೆ. ಇತರರು ಕೊಂದರೆ ಸತ್ತ ಮುಸ್ಲಿಂ ನರಕಕ್ಕೆ ಹೋಗುತ್ತಾನೆ ಎಂದು ಅರ್ಥವೇ? ಅದಕ್ಕಾಗಿ ತಮ್ಮಿಂದ ಸತ್ತರೆ ಪರವಾಗಿಲ್ಲ. ಇತರ ಸಮುದಾಯದಿಂದ ಆಗಬಾರದು ಎಂದು ಈ ಗಲಭೆಯೇ? ಈ ರೀತಿ ಹಿಂದೂ ಮುಸ್ಲಿಂ ವಿರೋಧವನ್ನು ಬಂಡವಾಳ ಮಾಡಿಕೊಂಡಿರುವ ಸಂಘಟನೆಗಳು ಪರಸ್ಪರ ದ್ವೇಷಕ್ಕೆ ಕಾರಣವಾಗುವ ತಮ್ಮ ಶಕ್ತಿಯ ಪ್ರದರ್ಶನದಿಂದ ಮತ್ತು ಬಂದ್, ಗಲಭೆಗಳಿಂದ ಜನರ ಜೀವನವನ್ನು ಹಾಳು ಮಾಡಬೇಡಿ.

ಕೋಮು ಸೌಹಾರ್ದತೆ ಎಂದರೆ ಹಿಂದೂಗಳ ತಪ್ಪನ್ನು ಎತ್ತಿ ಹಿಡಿಯಲು, ಅವರಿಗೆ ರಕ್ಷಣೆ ನೀಡದೆ, ಮುಸ್ಲಿಮರ ತಪ್ಪುಗಳನ್ನು ಮುಚ್ಚಿಡಲು, ಅವರನ್ನು ರಕ್ಷಿಸಲು ಎಂಬ ಭಾವನೆಯಲ್ಲದೆ ಮುಸ್ಲಿಮರ ತಪ್ಪುಗಳನ್ನು ಎತ್ತಿತೋರಿಸುವ ಧೈರ್ಯ ಅವರಿಗಿಲ್ಲ ಎಂಬ ಅಭಿಪ್ರಾಯವಿದೆ. ಅದು ದಕ್ಷಿಣ ಕನ್ನಡದಲ್ಲಿ ವ್ಯಾಪಕವಾಗಿದೆ. ಕಾಂಗ್ರೆಸ್ ಪಕ್ಷದ ಕೆಲವರ ಮೇಲೂ ಅಂತಹುದೇ ಅಭಿಪ್ರಾಯವಿದೆ. ಆ ಭಾವನೆ ತೊಲಗಿಸಲು ಬೇಕಾದ ವಾತಾವರಣ ಸೃಷ್ಟಿಯಾಗಬೇಕು. ಅದನ್ನು ಸರಿಪಡಿಸಲು ಅವರೆಲ್ಲರಲ್ಲದೆ ಎಲ್ಲಾ ಸಮುದಾಯವರು ಮುಂದೆ ಬರಬೇಕಾಗಿದೆ. ಆ ಮೂಲಕ ಕೋಮು ಸೌಹಾರ್ದತೆಗೆ ಪರಸ್ಪರ ವಿಶ್ವಾಸಕ್ಕೆ ಬೇಕಾದ ವಾತಾವರಣ ನಮ್ಮಲ್ಲಿ ಉಂಟಾಗಬೇಕು. ಯಾಕೆಂದರೆ ಜಾಗತಿಕ ಭಯೋತ್ಪಾದನೆ ನಮ್ಮನ್ನು ಇಲ್ಲಿ ಹೆಚ್ಚು ತಟ್ಟುವುದಿಲ್ಲ. ಆದರೆ ನಮ್ಮ ನಮ್ಮೊಳಗೆ ಜಗಳವಾದರೆ ಪರಸ್ಪರ ದ್ವೇಷದಿಂದ ನಾಶಕ್ಕೆ ಕಾಯುತ್ತಿದ್ದರೆ ಅದರಿಂದ ಉಂಟಾಗುವ ಆಂತರಿಕ ಭಯೋತ್ಪಾದನೆ, ಹೆದರಿಕೆ, ಹೊರಗಿನಿಂದ ಜನರು ಬಂದು ನಮ್ಮನ್ನು ಆಕ್ರಮಣ, ನಾಶ ಮಾಡಲು ಸಹಾಯಕಾರಿಯಾಗಬಹುದು. ಆದುದರಿಂದ ಆಂತರಿಕ ಭಯೋತ್ಪಾದನೆ ಜಾಗತಿಕ ಭಯೋತ್ಪಾದನೆಗಿಂತ ಹೆಚ್ಚು ಅಪಾಯಕಾರಿ.

ಆದುದರಿಂದ ಎಲ್ಲಾ ಧರ್ಮಗಳು ಸಮಾನ. ಯಾವುದು ಮೇಲು, ಯಾವುದೂ ಕೀಳಲ್ಲ ಎಂಬ ಭಾವನೆಯಿಂದ ಪರಸ್ಪರ ಗೌರವದಿಂದ, ಪ್ರೀತಿಯಿಂದ, ವಿಶ್ವಾಸದಿಂದ, ಸಂಭ್ರಮದಿಂದ ಬಾಳುವ. ಸರ್ವ ಜನಾಂಗದ ಶಾಂತಿಯ ತೋಟ ನಮ್ಮದಾಗಲಿ.

LEAVE A REPLY

Please enter your comment!
Please enter your name here