ಪುತ್ತೂರು ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ರಾಷ್ಟ್ರಪತಿ ಪದಕಕ್ಕೆ ಆಯ್ಕೆ

0

  • 2014ರಲ್ಲಿ ಚಿನ್ನದ ಪದಕ ಪುರಸ್ಕೃತರು.
  • ಸಂಪ್ಯ, ಉಪ್ಪಿನಂಗಡಿಯಲ್ಲಿ ಎಸ್.ಐ. ಆಗಿದ್ದ ರವಿ

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಚೇರಿ ಹೊಂದಿರುವ ಸಂಪ್ಯ, ಕಡಬ, ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ (ಸಿ.ಪಿ.ಐ.) ರವಿ ಬಿ.ಎಸ್.ಯವರು ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ರವಿ ಬಿ.ಎಸ್. ಅವರು ಹಲವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಈ ನಿಟ್ಟಿನಲ್ಲಿ ಇವರ ಶ್ಲಾಘನೀಯ ಸೇವೆಯನ್ನು ಗುರುತಿಸಿ ಕರ್ನಾಟಕ ಪೊಲೀಸ್ ಇಲಾಖೆ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು, ಅದರಂತೆ ಭಾರತ ಸರ್ಕಾರ ರಾಷ್ಟ್ರಪತಿ ಪದಕ ಗೌರವವನ್ನು ಘೋಷಣೆ ಮಾಡಿದೆ. ೨೦೧೪ರಲ್ಲಿ ಚಿನ್ನದ ಪದಕ ಪಡೆದಿದ್ದರು.

ಕೆಲ ವರ್ಷಗಳ ಹಿಂದೆ ಮಣಿಪಾಲದಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಂದ ಕೇರಳ ಮೂಲದ ವಿದ್ಯಾರ್ಥಿನಿಯೋರ್ವಳ ಗ್ಯಾಂಗ್ ರೇಪ್ ಪ್ರಕರಣ ಪತ್ತೆ ಹಾಗೂ ಕುಖ್ಯಾತ ರೌಡಿ ಬನ್ನೆಂಜೆ ರಾಜ ಬಂಧನ ಮೊದಲಾದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿರುವುದನ್ನು ಗುರುತಿಸಿ ಅವರು ಶ್ಲಾಘನೀಯ ಸೇವೆಯನ್ನು ಗುರುತಿಸಿ ೨೦೧೪ರಲ್ಲಿ ಕರ್ನಾಟಕ ಸರ್ಕಾರದ ಚಿನ್ನನ ಪದಕಕ್ಕೆ ಭಾಜನರಾಗಿದ್ದರು.

ಬಿ.ಎಸ್. ರವಿಯವರು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದವರು ವಾರದ ಹಿಂದೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾಗಿ ವರ್ಗಾವಣೆಗೊಂಡು ಇಲ್ಲಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರವಿಯವರು ೨೦೧೨ ಮಾರ್ಚ್ ೫ರಂದು ಕಾರ್ಕಳ ಪೊಲೀಸ್ ಠಾಣೆಯಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆ ಹೊಂದಿ ಆಗಮಿಸಿ ೨೦೧೩ ಸೆಪ್ಟೆಂಬರ್ ೧೧ರ ತನಕ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದರು. ಬಳಿಕ ಸುಳ್ಯ, ಪುತ್ತೂರು ಗ್ರಾಮಾಂತರ (ಸಂಪ್ಯ) ಆ ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದು, ಅಲ್ಲಿಂದ ಇನ್ಸ್‌ಪೆಕ್ಟರ್ ಹುದ್ದೆಗೆ ಭಡ್ತಿ ಹೊಂದಿ ದ.ಕ. ಜಿಲ್ಲಾ ಪೊಲೀಸ್ ವಿಶೇಷ ಘಟಕದಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿ ಹೆಸರು ಗಳಿಸಿದ್ದರು.

ಖಡಕ್ ಅಧಿಕಾರಿ:
ರವಿಯವರು ನಿಷ್ಟಾವಂತ, ಪ್ರಾಮಾಣಿಕ ಮತ್ತು ಖಡಕ್ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿರುತ್ತಾರೆ. ಸೈಬರ್ ಕ್ರೈಂ ಪತ್ತೆ ಕಾರ್‍ಯದಲ್ಲಿ ಹೆಚ್ಚು ಸಾಧನೆ ತೋರುವ ಮೂಲಕ ಈ ವಿಭಾಗದಲ್ಲಿ ಅವರದು ಎತ್ತಿದ ಕೈ ಎಂಬ ಹೆಗ್ಗಳಿಕೆಯೂ ಅವರಿಗಿದೆ. ನಕ್ಸಲ್ ತಂಡಗಳ ಜಾಡು ಪತ್ತೆಯಲ್ಲಿ ಪರಿಣತರಾಗಿರುವ ರವಿಯವರು ಕೆಲ ವರ್ಷಗಳ ಹಿಂದೆ ಉಪ್ಪಿನಂಗಡಿ, ಬೆಳ್ತಂಗಡಿ, ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ನಕ್ಸಲ್ ತಂಡ ಬೀಡುಬಿಟ್ಟಿದ್ದ ಸಂದರ್ಭಗಳಲ್ಲಿ ಅವರುಗಳ ಅಡಗುತಾಣವನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಕರ್ತವ್ಯ ನಿಷ್ಠೆಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

LEAVE A REPLY

Please enter your comment!
Please enter your name here