ಸುಳ್ಯ ಕಾಮಧೇನು ಚಾರಿಟೇಬಲ್ ಟ್ರಸ್ಟ್‌ನಿಂದ 131 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣೆ

0

  • ನಿಮ್ಮ ಮಕ್ಕಳು ರಾಜಕೀಯದವರ ಕೈಗೆ ಸಿಗದಂತೆ ನೋಡಿಕೊಳ್ಳಿ: ದಿವ್ಯಪ್ರಭಾ ಚಿಲ್ತಡ್ಕ

ಪುತ್ತೂರು: ತಮ್ಮ ಮಕ್ಕಳು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಪ್ರತೀಯೊಬ್ಬ ತಂದೆ ತಾಯಿಯೂ ಆಸೆಪಡುತ್ತಾರೆ, ಮಕ್ಕಳ ವಿದ್ಯೆಗಾಗಿ ಯಾವುದೇ ತ್ಯಾಗಕ್ಕೂ ಅವರು ಸಿದ್ದರಿರುತ್ತಾರೆ ಆದರೆ ಅಂಥವರ ಮಕ್ಕಳನ್ನು ರಾಜಕೀಯದವರು ದುರ್ಬಳಕೆ ಮಾಡಿಕೊಂಡು ಅವರ ಜೀವನವನ್ನೇ ಹಾಳು ಮಾಡುತ್ತಿದ್ದು ರಾಜಕೀಯದವರ ಕೈಗೆ ನಿಮ್ಮ ಮಕ್ಕಳು ಸಿಗದಂತೆ ನೋಡಿಕೊಳ್ಳಿ ಎಂದು ಸಮಾಜ ಕಲ್ಯಾಣ ಮಂಡಳಿ ನಿಗಮ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಹೇಳಿದರು.

ಅವರು ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್ ಸುಳ್ಯ, ಸ್ಪರ್ಶ ಸಹಾಯವಾಣಿ ಮುಂಡೂರು ಹಾಗೂ ಬಾಂತಲಪ್ಪು ಸೇವಾ ಸಮಿತಿ ಕುಂಬ್ರ ಇದರ ಜಂಟಿ ಅಶ್ರಯದಲ್ಲಿ ಕುಂಬ್ರದ ಅಕ್ಷಯ ಸಭಾ ಭವನದಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಸಮಾಜ ಉದ್ದಾರಕ್ಕೆ ನಾವು ಮಾಡುವ ಘೋಷಣೆಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗದಿರಲಿ, ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವ ಕಾರ್ಯ ಎಲ್ಲೆಡೆ ನಡೆಯಬೇಕು. ಮುಂದಿನ ಯುವ ಪೀಳಿಗೆಗೆ ಸರಕಾರಿ ಉದ್ಯೋಗ ಸಿಗುವುದು ಕಷ್ಟಕರವಾಗಿದೆ, ಸರಕಾರ ಎಲ್ಲಾ ಕ್ಷೇತ್ರವನ್ನೂ ಖಾಸಗೀಕರಣ ಮಾಡುತ್ತಿದ್ದು ಇದು ಅತ್ಯಂತ ಅಪಾಯಕಾರಿ ನಡೆಯಾಗಿದೆ ಎಂದು ಹೇಳಿದರು. ಸರಕಾರಿ ಇಲಾಖೆ ಮತ್ತು ಸರಕಾರಿ ಸೌಲಭ್ಯವನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಯುವಕರ ಕೈಯ್ಯಲ್ಲಿದೆ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರು ಮಾತನಾಡಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯ ಉತ್ತಮವಾಗಿದ್ದು ಇದರಿಂದ ಪ್ರತಿಭೆ ಅರಳಲು ಅವಕಾಶ ನೀಡಿದಂತಾಗುತ್ತದೆ ಎಂದು ಹೇಳಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ವಿದ್ಯೆ ಕಡೆ ಹೆಚ್ಚಿನ ಒಲವು ತೋರುವಂತೆ ಪೋಷಕರು ಆಸಕ್ತಿವಹಿಸಬೇಕು. ವಿದ್ಯೆಯಿಲ್ಲದವರಿಗೆ ಸಮಾಜದಲ್ಲಿ ಮುಂದಿನ ದಿನಗಳಲ್ಲಿ ಬೆಲೆಯೂ ಇಲ್ಲದ ವಾತಾವರಣ ನಿರ್ಮಾಣವಾಗಬಹುದು. ವಿವಿಧ ಕ್ಷೇತ್ರದಲ್ಲಿ ನಮ್ಮೂರಿನ ಯುವಕರು ಸಾಧನೆಯನ್ನು ಮಾಡುವ ಮೂಲಕ ಗ್ರಾಮದ ಹಿರಿಮೆಯನ್ನು ಹೆಚ್ಚಿಸಬೇಕಿದೆ ಎಂದು ಹೇಳಿದರು.

ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು, ಮುಂಡೂರು ಸ್ಪರ್ಶ ಸಹಾಯವಾಣಿ ಸಂಚಾಲಕ ಶಿವನಾಥ ರೈ ಮೇಗಿನಗುತ್ತು , ಕಾಮಧೇನು ವಿವಿಧೋದ್ದೇಶ ಚಾಟರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷರಾದ ಮಾಧವ ಗೌಡ ಬೆಳ್ಳಾರೆ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಬಾಂತಲಪ್ಪು ಜನಸೇವಾ ಸಮಿತಿಯ ಗೌರವಾಧ್ಯಕ್ಷರಾದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷೆ ಸುಂದರಿ ಪರ್ಪುಂಜ, ಪುತ್ತೂರು ವಿದ್ಯಾಮಾತಾ ಅಕಾಡೆಮಿ ಸ್ಥಾಪಕಾಧ್ಯಕ್ಷರಾದ ಭಾಗ್ಯೇಶ್ ರೈ, ಅಕ್ಷಯ ಗ್ರೂಪ್ ಉದ್ಯಮಿ ಜಯಂತ್ ನಡುಬೈಲು, ಕುಂಬ್ರ ಮರ್ಕಝ್ ಮಹಿಳಾ ಕಾಲೇಜಿನ ಕಾರ್ಯಾಧ್ಯಕ್ಷರಾದ ಎಸ್ ಎಂ ಬಶೀರ್ ಶೇಕಮಲೆ,ಬಾಂತಲಪ್ಪು ಜನಸೇವಾ ಕೇಂದ್ರದ ಪ್ರ. ಕಾರ್ಯದರ್ಶಿ ಅಶೋಕ್‌ಪೂಜಾರಿ ಬೊಳ್ಳಾಡಿ, ಒಳಮೊಗ್ರು ಗ್ರಾಪಂ ಸದಸ್ಯರಯಗಳಾದ ವಿನೋದ್ ಶೆಟ್ಟಿ ಮುಡಾಲ, ಅಶ್ರಫ್ ಉಜಿರೋಡಿ, ಶೀನಪ್ಪ ನಾಯ್ಕ್, ಹಿರಿಯ ಕೃಷಿಕ ನಾರಾಯಣ ರೈ ಬಾರಿಕೆ, ಬಾಂತಲಪ್ಪು ಮಹಮ್ಮದ್ ಬಡಗನ್ನೂರು ಉಪಸ್ಥಿತರಿದ್ದರು.

ಬಾಂತಲಪ್ಪು ಜನಸೇವಾ ಸಮಿತಿಯ ಅಧ್ಯಕ್ಷರಾದ ರಕ್ಷಿತ್ ರೈ ಮುಗೇರು ಸ್ವಾಗತಿಸಿ,ಸಮಿತಿ ಸಂಚಾಲಕ ಶಶಿಕಿರಣ್ ರೈ ನೂಜಿಬೈಲು ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಪಂ ಸದಸ್ಯರುಗಳಾದ ಚಿತ್ರಾ ಬಿ ಸಿ, ಶಾರದಾ ಸಹಕರಿಸಿದರು. ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮದ ೧೧೮ ಹಾಗೂ ಹೊರಗಿನ ಗ್ರಾಮದ ೧೩ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಗ್ರಾಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾದನೆ ಮಾಡಿದವರಿಗೂ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾಮಾತಾ ಅಕಾಡೆಮಿ ಸ್ಥಾಪಕಾಧ್ಯಕ್ಷರಾದ ಬಾಗ್ಯೇಶ್ ರೈ ಯವರಿಂದ ಶಿಕ್ಷಣ ಮಾಹಿತಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here