ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಪ್ರಕಾಶ್ ಬದಿನಾರುರವರ ನಾಮಪತ್ರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಪುತ್ತೂರು ನ್ಯಾಯಾಲಯದಲ್ಲಿ ಹೂಡಲಾಗಿದ್ದ ಚುನಾವಣಾ ತಕರಾರು ದಾವೆ ವಜಾಗೊಂಡಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕೆ.ರಾಮಚಂದ್ರ ಪೂಜಾರಿ ಶಾಂತಿನಗರರವರು ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಪುತ್ತೂರು ಸಿವಿಲ್ ನ್ಯಾಯಾಲಯದಲ್ಲಿ 2021 ಮಾರ್ಚ್ 4ರಂದು ಜಯಪ್ರಕಾಶ್ ಬದಿನಾರು ಅವರಿಂದ ಚುನಾವಣಾ ತಕರಾರು ದಾವೆ ದಾಖಲಾಗಿತ್ತು. ಚುನಾವಣಾಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಸಿ. ಮತ್ತು ಗ್ರಾ.ಪಂ. ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರರವರನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು.
ಕೋರ್ಟ್‌ನಲ್ಲಿ ತಕರಾರು ದಾವೆ ಸಲ್ಲಿಸಿದ್ದ ಜಯಪ್ರಕಾಶ್ ಬದಿನಾರು:
ಕೋಡಿಂಬಾಡಿ ಗ್ರಾಮ ಪಂಚಾಯತ್‌ನ 11 ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತ ಸದಸ್ಯರಾಗಿ ಕೋಡಿಂಬಾಡಿ ವಾರ್ಡ್ 2ರಿಂದ ವಿಶ್ವನಾಥ ಕೃಷ್ಣಗಿರಿ, ಬೆಳ್ಳಿಪ್ಪಾಡಿ ವಾರ್ಡ್ 1ರಿಂದ ರಾಮಣ್ಣ ಗೌಡ ಗುಂಡೋಳೆ, ಉಷಾ ಲಕ್ಷ್ಮಣ ಪೂಜಾರಿ ಕೋರ‍್ಯ, ಪುಷ್ಪಾ ಲೋಕಯ್ಯ ನಾಯ್ಕ ಕಠಾರ, ಬೆಳ್ಳಿಪ್ಪಾಡಿ ವಾರ್ಡ್ 2ರಿಂದ ರಾಮಚಂದ್ರ ಪೂಜಾರಿ ಶಾಂತಿನಗರ, ಮೋಹಿನಿ ಜನಾರ್ದನ ಗೌಡ ಕೋಡಿರವರು ಚುನಾಯಿತರಾಗಿದ್ದರು. ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಕೋಡಿಂಬಾಡಿ ವಾರ್ಡ್ 1ರಿಂದ ಜಗನ್ನಾಥ ಶೆಟ್ಟಿ ನಡುಮನೆ, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಗೀತಾ ಕೋಡಿ ಮೋನಡ್ಕ, ಕೋಡಿಂಬಾಡಿ ವಾರ್ಡ್ 2ರಿಂದ ಜಯಪ್ರಕಾಶ್ ಬದಿನಾರು ಮತ್ತು ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲುರವರು ಆಯ್ಕೆಯಾಗಿದ್ದರು. ಬಳಿಕ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ’ಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ’ಗೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ರಾಮಚಂದ್ರ ಪೂಜಾರಿ ಮತ್ತು ಕಾಂಗ್ರೆಸ್ ಬೆಂಬಲಿತ ಜಯಪ್ರಕಾಶ್ ಬದಿನಾರುರವರು ನಾಮಪತ್ರ ಸಲ್ಲಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಉಷಾ ಲಕ್ಷ್ಮಣ ಪೂಜಾರಿ ಮತ್ತು ಕಾಂಗ್ರೆಸ್ ಬೆಂಬಲಿತ ಪೂರ್ಣಿಮಾ ಯತೀಶ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜಯಪ್ರಕಾಶ್ ಬದಿನಾರುರವರ ನಾಮಪತ್ರವನ್ನು ಚುನಾವಣಾಽಕಾರಿಯಾಗಿದ್ದ ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.ರವರು ತಿರಸ್ಕರಿಸಿದ್ದರು. ಉಪಾಧ್ಯಕ್ಷ ಸ್ಥಾನದಲ್ಲಿ 6 ಮತ ಪಡೆದ ಉಷಾ ಲಕ್ಷ್ಮಣ ಪೂಜಾರಿಯವರು ವಿಜೇತರಾಗಿದ್ದು 5 ಮತ ಪಡೆದಿದ್ದ ಪೂರ್ಣಿಮಾ ಯತೀಶ್ ಶೆಟ್ಟಿ ಪರಾಜಿತರಾಗಿದ್ದರು. ಜಯಪ್ರಕಾಶ್ ಬದಿನಾರುರವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ವೇಳೆ ತಾನು ಹಿಂದುಳಿದ ವರ್ಗ ಎ’ಗೆ ಸೇರಿದವರೆಂದು ನೀಡಿದ ಜಾತಿ ಪ್ರಮಾಣ ಪತ್ರದಲ್ಲಿ ಚುನಾವಣೆ ಬಗ್ಗೆ ನೀಡಲಾಗಿರುವ ಪ್ರಮಾಣ ಪತ್ರ ಎಂಬ ಸ್ಪಷ್ಟತೆ ಇಲ್ಲ ಎಂಬ ಕಾರಣಕ್ಕೆ ನಾಮಪತ್ರ ತಿರಸ್ಕರಿಸಿರುವುದಾಗಿ ಚುನಾವಣಾಧಿಕಾರಿ ತಿಳಿಸಿದ್ದರು. ಚುನಾವಣಾಧಿಕಾರಿಯವರ ಈ ನಡೆಯನ್ನು ಪ್ರಶ್ನಿಸಿ ಜಯಪ್ರಕಾಶ್ ಬದಿನಾರುರವರು, ಚುನಾವಣಾಧಿಕಾರಿಯವರು ಕಾನೂನು ಉಲ್ಲಂಸಿ ಈ ಕ್ರಮ ಕೈಗೊಂಡಿದ್ದಾರೆ ಎಂಬ ಕಾರಣ ನೀಡಿ ಪುತ್ತೂರಿನ ಸಿವಿಲ್ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ದಾವೆ ಸಲ್ಲಿಸಿದ್ದರು. ನ್ಯಾಯಾಽಶ ಮಂಜುನಾಥರವರು ತಕರಾರು ಅರ್ಜಿಯನ್ನು ವಿಚಾರಣೆಗಾಗಿ ಅಂಗೀಕರಿಸಿದ್ದರು. ಬಳಿಕ ಪ್ರತಿವಾದಿಗಳಿಗೆ ನ್ಯಾಯಾಲಯದಿಂದ ನೊಟೀಸ್ ಜಾರಿಯಾಗಿ ವಾದ-ಪ್ರತಿವಾದ ನಡೆದಿತ್ತು. ನ್ಯಾಯಾಧೀಶ ರಮೇಶ್‌ರವರು ವಿಚಾರಣೆ ಮುಂದುವರಿಸಿದ್ದರು. ಇದೀಗ ವಿಚಾರಣೆ ಪೂರ್ಣಗೊಳಿಸಿ ಅಂತಿಮ ತೀರ್ಪು ಪ್ರಕಟಿಸಿರುವ ನ್ಯಾಯಾಧೀಶ ಆರ್.ಪಿ.ಗೌಡರವರು ಜಯಪ್ರಕಾಶ್ ಬದಿನಾರು ಅವರ ಅರ್ಜಿಯನ್ನು ವಜಾಗೊಳಿಸಿ ರಾಮಚಂದ್ರ ಪೂಜಾರಿ ಪರ ತೀರ್ಪು ನೀಡಿದ್ದಾರೆ. ಚುನಾವಣಾಽಕಾರಿ ಲೋಕೆಶ್ ಪರ ನ್ಯಾಯವಾದಿ ಪ್ರವೀಣ್‌ಕುಮಾರ್, ರಾಮಚಂದ್ರ ಪೂಜಾರಿ ಪರ ನ್ಯಾಯವಾದಿಗಳಾದ ದೇವಾನಂದ ಕೆ. ಮತ್ತು ವಿವೇಕ್ ಕೆ.ಎಸ್. ವಾದಿಸಿದ್ದರು.
ನ್ಯಾಯಾಲಯದಲ್ಲಿ ನ್ಯಾಯ ದೊರಕಿದೆ-ರಾಮಚಂದ್ರ ಪೂಜಾರಿ
ಪಂಚಾಯತ್ ರಾಜ್ ಕಾಯ್ದೆಯ ಕುರಿತು ಜ್ಞಾನ ಇಲ್ಲದೆ ಅವರು ಹೋರಾಟ ನಡೆಸಿದ್ದರು. ಸರಿಯಾದ ಜಾತಿ ಪ್ರಮಾಣ ಪತ್ರ ನೀಡದೇ ನಾಮಪತ್ರ ಸಲ್ಲಿಸಿದ್ದರು. ಅದನ್ನು ಚುನಾವಣಾಽಕಾರಿ ತಿರಸ್ಕರಿಸಿದ್ದರು. ಅದರಲ್ಲಿ ನಮ್ಮ ಪಾತ್ರ ಇಲ್ಲ. ಏನಿದ್ದರೂ ನಮಗೆ ನ್ಯಾಯಾಲಯದ ಮೂಲಕ ನ್ಯಾಯ ದೊರಕಿದೆ ಎಂದು ಗ್ರಾ.ಪಂ.ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.
ಮೇಲ್ಮನವಿ ಸಲ್ಲಿಸಲಾಗುವುದು- ಜಯಪ್ರಕಾಶ್
ನಾನು ಸಲ್ಲಿಸಿದ್ದ ಚುನಾವಣಾ ತಕರಾರು ದಾವೆಯನ್ನು ವಜಾಗೊಳಿಸಿರುವುದರ ಕುರಿತು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು, ಈ ಬಗ್ಗೆ ಈಗಾಗಲೇ ವಕೀಲರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಗ್ರಾ.ಪಂ. ಸದಸ್ಯ ಜಯಪ್ರಕಾಶ್ ಬದಿನಾರು ತಿಳಿಸಿದ್ದಾರೆ.