ಪುತ್ತೂರು: ನರಿಮೊಗರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಅಡುಗೆ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗಡಿಪ್ಪಿಲ ನಿವಾಸಿ ಗುಲಾಬಿರವರಿಗೆ ಶಾಲಾ ವತಿಯಿಂದ ವಿಭಿನ್ನ ಮತ್ತು ಅರ್ಥಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಶಾಲಾ ದೈ.ಶಿ.ಶಿಕ್ಷಕಿ ಶ್ರೀಲತಾರವರ ನೇತೃತ್ವದಲ್ಲಿ ಎಸ್‌ಡಿಎಂಸಿಯವರು, ದಾನಿಗಳು ಹಾಗೂ ಶಿಕ್ಷಕರ ಸಹಕಾರದೊಂದಿಗೆ ಗುಲಾಬಿಯವರ ಹೆಸರಿನಲ್ಲಿ ರೂ.20 ಸಾವಿರ ನಗದು ಮೊತ್ತವನ್ನು ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡುವ ಮೂಲಕ ಅಡುಗೆ ಸಿಬ್ಬಂದಿಗೆ ಮಾದರಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿದ್ದಾರೆ. ಶಾಲಾ ದಾನಿಯಾಗಿರುವ ನಳಿನಿ ಲೋಕಪ್ಪ ಗೌಡರವರು ಡೆಪಾಸಿಟ್‌ನ ವೋಚರ್‌ನ್ನು ಗುಲಾಬಿವರಿಗೆ ಹಸ್ತಾಂತರಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
ಸಾಮಾನ್ಯವಾಗಿ ಅಡುಗೆ ಸಿಬ್ಬಂಗಳಿಗೆ ನಿವೃತ್ತಿಯಾಗುವ ಸಂದರ್ಭದಲ್ಲಿ ಅವರಿಗೆ ಯಾವುದೇ ಸೌಲಭ್ಯಗಳು ದೊರಕುವುದಿಲ್ಲ. ಈ ಬಗ್ಗೆ ಅಡುಗೆ ಸಿಬ್ಬಂದಿಗಳ ತಂಡ ಮನವಿ ಮಾಡುತ್ತಾ ಬಂದಿದ್ದರೂ ಅದು ಈಡೇರಿಲ್ಲ. ಆದರೆ ನರಿಮೊಗರು ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ 20 ವರ್ಷ ಪ್ರಾಮಾಣಿಕ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಶಿಕ್ಷಕರ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾಗಿರುವ ಗುಲಾಬಿಯವರಿಗೆ ಶಾಲಾ ವತಿಯಿಂದ ಸಣ್ಣ ಮಟ್ಟದ ಆರ್ಥಿಕ ನೆರವನ್ನಾದರೂ ನೀಡಬೇಕೆಂದು ನಿರ್ಧರಿಸಿ ಶಾಲಾ ದೈ.ಶಿ.ಶಿಕ್ಷಕಿ ಶ್ರೀಲತಾರವರ ಮುಂದಾಳತ್ವದಲ್ಲಿ ದಾನಿಗಳ, ಎಸ್‌ಡಿಎಂಸಿಯವರ, ಶಿಕ್ಷಕ ವೃಂದದವರ ಸಹಕಾರ ಪಡೆದುಕೊಂಡು ನಿರ್ಧಿಷ್ಟ ಮೊತ್ತವನ್ನು ಡೆಪಾಸಿಟ್ ರೂಪದಲ್ಲಿ ಗುಲಾಬಿಯವರ ಬ್ಯಾಂಕ್ ಖಾತೆಯಲ್ಲಿ ಇಟ್ಟು ಅವರಿಗೆ ಗೌರವಪೂರ್ವಕ ವಿದಾಯ ಸಮಾರಂಭವನ್ನು ಏರ್ಪಡಿಲಾಗಿತ್ತು. ಇದು ಸ್ಥಳೀಯವಾಗಿ ಪ್ರಶಂಸೆಗೂ ಪಾತ್ರವಾಯಿತು.
ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನಡೆದ ಬೀಳ್ಕೊಡುಗೆ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ದಾನಿಗಳಾದ ನಳಿನಿ ಲೋಕಪ್ಪ ಗೌಡ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣರಾಜ ಜೈನ್, ತಾ.ಪಂ ಮಾಜಿ ಸದಸ್ಯ ಮೋಹನ್ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಂಗಾಧರ ಸುವರ್ಣ, ವೇದನಾಥ ಸುವರ್ಣ, ನರಿಮೊಗರು ಗ್ರಾ.ಪಂ ಸದಸ್ಯ ಉಮೇಶ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಉಸ್ಮಾನ್ ನೆಕ್ಕಿಲು. ಎಸ್‌ಡಿಎಂಸಿ ಸದಸ್ಯರಾದ ಪ್ರವೀಣ್ ಆಚಾರ್ಯ, ದಿನೇಶ್ ಪೂಜಾರಿ ಕೈಪಂಗಳದೋಳ, ಉಮೇಶ್, ಸುನೀತಾ ಡಿಸೋಜ, ಉಪಾಧ್ಯಕ್ಷರಾದ ಪ್ರತಿಭಾ ಆಚಾರ್ಯ, ಸೌಮ್ಯ, ಗುಲಾಬಿ, ನಸೀಮ ಬಾನು, ಗಣೇಶ್ ಪೂಜಾರಿ ಕೈಪಂಗಳದೋಳ, ಮಹಮ್ಮದ್ ಕೆ.ಯು, ಬೀಟ್ ಪೋಲೀಸ್ ಗಿರಿ ಪ್ರಶಾಂತ್, ವಿವೇಕಾನಂದ ಭಟ್, ನಿವೃತ್ತ ಶಿಕ್ಷಕಿ ಮೋಂತಿ ಮೇರಿ ರೊಡ್ರಿಗಸ್, ನಿವೃತ್ತ ಅಬಕಾರಿ ಎಸ್.ಐ ಮಹಾಲಿಂಗ ನಾಯ್ಕ, ಪ್ರಭಾರ ಮುಖ್ಯಗುರು ಜುಸ್ತಿನ್ ಲಿಡ್ವಿನ್ ಡಿಸೋಜ ಉಪಸ್ಥತರಿದ್ದರು. ಸಹಶಿಕ್ಷಕಿ ಜೋಸ್ಲಿನ್ ಪಸನ್ಹ ನಿರೂಪಿಸಿದರು. ದೈ.ಶಿ.ಶಿಕ್ಷಕಿ ಶ್ರೀಲತಾ ಎ ವಂದಿಸಿದರು.
ಅಡುಗೆ ಸಿಬ್ಬಂದಿಗಳಿಗೆ ಅವರ ನಿವೃತ್ತಿ ಸಂದರ್ಭ ಯಾವುದೇ ಪಿಂಚಣಿ ವ್ಯವಸ್ಥೆ ಇಲ್ಲದೇ ಇರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ನರಿಮೊಗರು ಶಾಲಾ ಅಡುಗೆ ಸಿಬ್ಬಂದಿ ಗುಲಾಬಿಯವರಿಗೆ ಶಾಲೆಯವರು ಮತ್ತು ನಾವೆಲ್ಲಾ ಸೇರಿಕೊಂಡು ನಿರ್ಧಿಷ್ಟ ಮೊತ್ತವೊಂದನ್ನು ಡೆಪಾಸಿಟ್ ಮಾಡಿದ್ದೇವೆ. ಅಡುಗೆ ಸಿಬ್ಬಂದಿಗಳಿಗೆ ಮುಂದಿನ ದಿನಗಳಲ್ಲಿ ಪಿಂಚಣಿ ಸೌಲಭ್ಯ ಒದಗಿಸಿಕೊಡುವ ಬಗ್ಗೆ ಸಂಬಂಧಪಟ್ಟವರು ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ.
-ನಳಿನಿ ಲೋಕಪ್ಪ ಗೌಡ ಕರೆಮನೆ, ಶಾಲಾ ದಾನಿ
ನರಿಮೊಗರು ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಪ್ರಾಮಾಣಿಕವಾಗಿ ಕಳೆದ 20 ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಗುಲಾಬಿಯವರಿಗೆ ನಗದು ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿ ನಮ್ಮಿಂದಾಗುವ ನೆರವು ನೀಡಿದ್ದೇವೆ. ಇದಕ್ಕೆ ಶಾಲಾ ದೈ.ಶಿಶಿಕ್ಷಕಿ ಶ್ರೀಲತಾ ಮತ್ತು ಶಿಕ್ಷಕ ವೃಂದದವರು, ದಾನಿಗಳು, ಎಸ್‌ಡಿಎಂಸಿಯವರು ಸಹಕಾರ ನೀಡಿದ್ದಾರೆ. ಅಕ್ಷರ ದಾಸೋಹ ಸಿಬ್ಬಂದಿಗಳು ಕನಿಷ್ಠ ಸಂಬಳ ಪಡೆದು ದುಡಿಯುತ್ತಿದ್ದು ಅವರಿಗೆ ವೇತನ ಹಾಗೂ ನಿವೃತ್ತಿ ವೇತನ ನೀಡುವ ಬಗ್ಗೆ ಸಂಬಂಧಪಟ್ಟವರು ಗಮನಹರಿಸುವ ಮೂಲಕ ಅಕ್ಷರ ದಾಸೋಹ ಸಿಬ್ಬಂದಿಗಳ ಬೇಡಿಕೆಯನ್ನು ಪೂರೈಸಬೇಕೆಂಬುವುದು ನಮ್ಮ ಆಗ್ರಹ.
-ಪ್ರವೀಣ್ ಆಚಾರ್ಯ, ಎಸ್‌ಡಿಎಂಸಿ ಸದಸ್ಯರು