ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ನೌಕರಿ: ರಾಜ್ಯ ಸಂಪುಟ ಸಭೆ ತೀರ್ಮಾನ

0

  • ಕೆಪಿಎಸ್‌ಸಿ ಡಿ ಗ್ರೂಪ್ ಹುದ್ದೆಗೆ ಪರೀಕ್ಷೆ ಮೂಲಕ ನೇರ ನೇಮಕ
  • 4244 ಅಂಗನವಾಡಿಗಳ ಸ್ಥಾಪನೆಗೆ ಸಮ್ಮತಿ

ಬೆಂಗಳೂರು: ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ ಸೈನಿಕರ ಕುಟುಂಬದ ಸದಸ್ಯರ ಜೀವನ ಭದ್ರತೆ ಕಲ್ಪಿಸುವ ಉದ್ದೇಶದಿಂದ ಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರಕಾರಿ ನೌಕರಿ ನೀಡಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಮಾಡಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಘೋಷಣೆ ಮಾಡಿದ್ದರು.ಇದೀಗ ಸಂಪುಟ ಒಪ್ಪಿಗೆ ನೀಡಿದೆ’ ಎಂದರು.

ರಾಜ್ಯದಲ್ಲಿ ಒಟ್ಟು 400 ಮಂದಿ ಸೈನಿಕರು ಕರ್ತವ್ಯದಲ್ಲಿದ್ದ ವೇಳೆ ಅಸುನೀಗಿದ್ದು, ಆ ಪೈಕಿ 200 ಮಂದಿ ಕುಟುಂಬದ ಸದಸ್ಯರು ಸರಕಾರಿ ನೌಕರಿಗೆ ಅರ್ಹರಿದ್ದು ಅವರಿಗೆ ಸರಕಾರಿ ಉದ್ಯೋಗ ನೀಡಲು ಕ್ರಮ ವಹಿಸಲಾಗುವುದು.ಮೃತ ಸೈನಿಕರಿಗೆ 25 ಲಕ್ಷ ರೂ.ಮೊತ್ತದ ಪರಿಹಾರ ಹಾಗೂ ನಿವೇಶನ ನೀಡುವ ಬದಲಿಗೆ ಅವರ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿಯನ್ನು ನೀಡಲಾಗುವುದು’ ಎಂದು ಮಾಧುಸ್ವಾಮಿ ವಿವರ ನೀಡಿದರು.

ಇತರೆ ತೀರ್ಮಾನಗಳು: ಕೆಪಿಎಸ್ಸಿ ನೇಮಕಾತಿಯಲ್ಲಿ ಡಿ ಗ್ರೂಪ್ ಹುದ್ದೆಗಳಿಗೆ ಇನ್ನು ಮುಂದೆ ಸಂದರ್ಶನ ಇರುವುದಿಲ್ಲ. ಬದಲಾಗಿ ಪರೀಕ್ಷೆ ಮೂಲಕ ನೇರವಾಗಿ ನೇಮಕ ಮಾಡುವ ಸಂಬಂಧ ತಿದ್ದುಪಡಿ ಮಾಡಲಾಗಿದೆ.

ಲೋಕಾಯುಕ್ತ ಸಂಸ್ಥೆಯಲ್ಲಿನ ಖಾಲಿ ಹುದ್ದೆ ಭರ್ತಿಗೆ ಒಪ್ಪಿಗೆ, ಲೋಕಾಯುಕ್ತದ ನಿವೃತ್ತ ಏಳು ಮಂದಿ ಪಿಪಿಗಳನ್ನು ವರ್ಷದ ಅವಧಿ ಮುಂದುವರಿಸಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.ರಾಜ್ಯದಲ್ಲಿ 4,244 ಹೊಸ ಅಂಗನವಾಡಿ ಸ್ಥಾಪನೆಗೆ ಸಂಪುಟ ಸಭೆಯಲ್ಲಿ ಸಮ್ಮತಿಸಿದೆ.ಯೋಜನಾ ಆಯೋಗ ರದ್ದುಗೊಳಿಸಿ ಕೇಂದ್ರ ಸರಕಾರ ನೀತಿ ಆಯೋಗ ರಚನೆ ಮಾಡಿದ್ದು, ಅದೇ ಮಾದರಿಯಲ್ಲಿ ರಾಜ್ಯ ನೀತಿ ಆಯೋಗ ರಚನೆಗೆ ನಿಯಮ ರೂಪಿಸಲು ಒಪ್ಪಿಗೆ ನೀಡಲಾಗಿದೆ.

ಭೂರಹಿತ ಕೃಷಿಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ: ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ,ಶಿವಮೊಗ್ಗ, ಭದ್ರಾವತಿಯಲ್ಲಿ ಕುಡಿಯುವ ನೀರು ಯೋಜನೆಗೆ 48 ಕೋಟಿ ರೂ., ಸೇಡಂನಲ್ಲಿ ಎಸ್ಸಿ-ಎಸ್ಟಿ ವರ್ಗದ ಮಕ್ಕಳ ತರಬೇತಿ ಉದ್ದೇಶಕ್ಕಾಗಿ ಕೆಎಸ್ಸಾರ್ಟಿಸಿ ಚಾಲನಾ ಮತ್ತು ಮೆಕ್ಯಾನಿಕಲ್ ತರಬೇತಿ ಕೇಂದ್ರ ಸ್ಥಾಪನೆ ಸೇರಿದಂತೆ ಇನ್ನೂ ಕೆಲವೊಂದು ತೀರ್ಮಾನಗಳನ್ನು ಮಾಡಲಾಗಿದೆ.

LEAVE A REPLY

Please enter your comment!
Please enter your name here