ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಕಂಚಿನ ಪ್ರತಿಮೆಗೆ ಆ.29ರಂದು ಅದ್ದೂರಿ ಸ್ವಾಗತ

0

* ವಿವಿಧ ಸಮುದಾಯ, ಸಂಘಟನೆಗಳ ಪ್ರಮುಖರ ಸಭೆಯಲ್ಲಿ ನಿರ್ಧಾರ

ಪುತ್ತೂರು: ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಸ್ಥಾಪನೆಗೊಳ್ಳಲಿರುವ, ದಕ್ಷಿಣ ಕನ್ನಡದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮ ಕ್ರಾಂತಿಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯು ಆ.29ರಂದು ಸಂಪಾಜೆ, ಸುಳ್ಯದ ಮೂಲಕ ಪುತ್ತೂರಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಪುತ್ತೂರಿನ ಎಲ್ಲಾ ಸಮುದಾಯ, ಸಂಘಟನೆಗಳು ಸೇರಿಕೊಂಡು ಅದ್ದೂರಿಯಾಗಿ ಮೆರವಣಿಗೆ ಮಾಡಿ ಗೌರವಾರ್ಪಣೆ ಮಾಡಲು ನಿರ್ಧರಿಸಲಾಗಿದೆ ಪುತ್ತೂರು ಟೌನ್ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಆ.29ರಂದು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಸಮುದಾಯ ಮತ್ತು ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.

ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪೂರ್ವಾಹ್ನ 11 ಗಂಟೆಗೆ ತಾಲೂಕಿನ ಗಡಿಭಾಗವಾದ ಪೆರ್ನಾಜೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಸ್ವಾಗತಿಸಲಾಗುವುದು. ಪುತ್ತೂರು ದರ್ಬೆ ಬೈಪಾಸ್ ಫಾದರ್ ಪತ್ರಾವೋ ವೃತ್ತದ ಬಳಿ ನಗರಸಭೆ ವತಿಯಿಂದ ಸ್ವಾಗತಿಸಲಾಗುವುದು. ಗಾಂಧಿ ಕಟ್ಟೆಯ ಎದುರು ನಿವೃತ್ತ ಸೈನಿಕರ ಸಂಘದ ವತಿಯಿಂದ ಗೌರವಾರ್ಪಣೆ ನಡೆಯಲಿದೆ. ತಾಲೂಕು ಆಡಳಿತ ಮತ್ತು ನಾಗರಿಕರ ಪರವಾಗಿ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಹಾರಾರ್ಪಣೆ ನಡೆಯಲಿದೆ ಎಂದು ಹೇಳಿದರು.

ವಿಜಯವಾಡದಲ್ಲಿ ತಯಾರಾದ ಕಂಚಿನ ಮೂರ್ತಿ ಆ.29ರಂದು ಮಂಗಳೂರು ತಲುಪಲಿದೆ. ಸುಳ್ಯದಲ್ಲಿ ಸ್ವಾಗತ, ಗೌರವಾರ್ಪಣೆ ನಡೆದ ಬಳಿಕ ಪುತ್ತೂರು ಕಾರ್ಯಕ್ರಮ ನಡೆಯಲಿದೆ. ಕೊಡಾಜೆಯಲ್ಲಿ ಬಂಟ್ವಾಳ ತಾಲೂಕಿನವರು ಸ್ವಾಗತ, ಮಾಣಿಯಲ್ಲಿ ಕಡಬ ತಾಲೂಕಿನವರು ಗೌರವಾರ್ಪಣೆ, ಬಿ.ಸಿ. ರೋಡ್‌ನಲ್ಲಿ ಬಂಟ್ವಾಳ ತಾಲೂಕಿನ ಗೌರವಾರ್ಪಣೆ, ಪಡೀಲ್‌ನಲ್ಲಿ ಮಂಗಳೂರು ತಾಲೂಕಿನ ಸ್ವಾಗತ ಪ್ರಾಪ್ತವಾಗಲಿದೆ. 40 ಲಕ್ಷ ರೂ. ವೆಚ್ಚದ ಪ್ರತಿಮೆ ಮತ್ತು ಅದರ ಸ್ಥಾಪನೆ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆ ನಡೆಸಲಿದೆ ಎಂದು ಶಾಸಕರು ವಿವರಿಸಿದರು.


1857 ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಲ್ಲರಿಗೂ ಗೊತ್ತಿದೆ. ಅದಕ್ಕಿಂತಲೂ 20 ವರ್ಷ ಹಿಂದೆ 1837 ರಲ್ಲಿ ನಡೆದ ಅಮರ ಸುಳ್ಯ ಕ್ರಾಂತಿಯ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ರೈತರನ್ನೇ ಸೇರಿಸಿ ಸ್ವಾತಂತ್ರ್ಯ ಹೋರಾಟ ಮಾಡಿ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಬ್ರಿಟಿಷ್ ಧ್ವಜ ಇಳಿಸಿ, ದೇಶೀಯ ಧ್ವಜ ಹಾರಿಸಿ, 12 ದಿನಗಳ ಕಾಲ ಆಡಳಿತ ನಡೆಸಿದ ಕ್ರಾಂತಿಕಾರರ ಬಲಿದಾನ ಸ್ಮರಿಸುವ ಉದ್ದೇಶದಿಂದ ಮಂಗಳೂರಿನ ಬಾವುಟಗುಡ್ಡೆಯಲ್ಲಿ 11 ಅಡಿ ಎತ್ತರದ ಪೀಠದ ಮೇಲೆ 11 ಅಡಿ ಎತ್ತರದ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆಯಾಗಲಿದೆ ಎಂದು ಸಂಜೀವ ಮಠಂದೂರು ಹೇಳಿದರು.

ಮೂರ್ತಿ ತೆರೆದಿಡಲು ಆಗ್ರಹ   :                                                                                                                                                                  ವಿಜಯವಾಡದಿಂದ ಬರುವ ರಾಮಯ್ಯ ಗೌಡರವರ ಮೂರ್ತಿಯನ್ನು ಸಂಪೂರ್ಣ ಮುಚ್ಚಲಾಗಿರುತ್ತದೆ. ಆದರೆ ದ.ಕ.ದಲ್ಲಿ ನಡೆಯುವ ಮೆರವಣಿಗೆ ಸಂದರ್ಭ ತೆರೆದಿಡಬೇಕು. ಮೆರವಣಿಗೆಯಲ್ಲಿ ನೆರೆಯುವ ಸಾವಿರಾರು ಜನ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರನ ಮೂರ್ತಿ ನೋಡುವಂತಾಗಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿಬಂತು. ಪುತ್ತೂರಿನಲ್ಲಿ ನಡೆಯುವ ಮೆರವಣಿಗೆ ಸಂದರ್ಭ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವೃಂದವರನ್ನು ಬ್ಯಾಂಡ್‌ಸೆಟ್ ಸಹಿತ ಭಾಗವಹಿಸಬೇಕು ಎಂದು ಆಗ್ರಹಿಸಲಾಯಿತು.

ಒಕ್ಕಲಿಗ ಗೌಡ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಗರಸಭಾ ಅಧ್ಯಕ್ಷ ಜೀವಂಧರ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಹಿರಿಯ ವೈದ್ಯರಾದ ಡಾ.ಎಂ.ಕೆ. ಪ್ರಸಾದ್, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಕೋ.ಆಪರೇಟಿವ್ ಟೌನ್‌ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ, ಜಿ.ಎಲ್ ಆಚಾರ್ಯ ಜ್ಯುವೆಲ್ಲರ‍್ಸ್ ಮ್ಹಾಲಕ ಬಲರಾಮ ಆಚಾರ್ಯ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ, ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರವಿಂದ್ರನಾಥ ರೈ ಬಳ್ಳಮಜಲು, ರಾಮದಾಸ ಗೌಡ, ಐತ್ತಪ್ಪ ನಾಯ್ಕ, ಒಕ್ಕಲಿಗ ಗೌಡ ಸಂಘದ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಒಕ್ಕಲಿ ಸ್ವ-ಸಹಾಯ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮನೋಹರ್ ಡಿ.ವಿ., ಮಹಿಳಾ ಘಟಕದ ಅಧ್ಯಕ್ಷ ಮೀನಾಕ್ಷಿ ಡಿ ಗೌಡ, ಎ.ವಿ ನಾರಾಯಣ, ಒಕ್ಕಲಿಗ ಗೌಡ ಸಂಘದ ಮಾಹಿ ಅಧ್ಯಕ್ಷ ಶಿವರಾಮ ಎಚ್.ಡಿ., ವಿಶ್ವ ಬ್ರಾಹ್ಮಣ ಸೇವಾ ಸಂಘದ ಜಗದೀಶ್ ಎಸ್.ಎನ್., ನ್ಯಾಯವಾದಿ ಮಂಜುನಾಥ ಎನ್.ಎಸ್., ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ರಾಮಚಂದ್ರ ಪುಚ್ಚೇರಿ, ಸದಸ್ಯರಾದ ರಮೇಶ್ ಬಾಬು, ದಯಾನಂದ, ಸರಕಾರಿ ನೌಕರರ ಸಂಘದ ಪುರುಷೋತ್ತಮ, ರವಿ ಮುಂಗ್ಲಿಮನೆ, ಅಮರನಾಥ, ಶ್ರೀಧರ ಗೌಡ ಕಣಜಾಲು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here