ಬಾಲವನದಲ್ಲಿ ದ.ಕ. ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿ

0
  • ಸಾಹಿತ್ಯ ಕಾರ್ಯಕ್ರಮಕ್ಕೆ ಬಾಲವನ ಸದಾ ಸ್ವಾಗತ: ಎಸಿ
ಪುತ್ತೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಬಾಲವನ ಸಮಿತಿ ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಇದರ ಆಶ್ರಯದಲ್ಲಿ ಬಾಲವನ ತಿಂಗಳ ಸಂಭ್ರಮ ಹಾಗೂ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಲ್ಲಿ ದ.ಕ. ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿ ಆ. 27ರಂದು ಪರ್ಲಡ್ಕ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಜರಗಿತು.
ಕವಿಗೋಷ್ಠಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ., ಬಾಲವನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮಾಡಲು ಅವಕಾಶವಿದೆ. ಇದರ ಜೊತೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉಸ್ತುವಾರಿ ಸಚಿವರು ಈ ಬಗ್ಗೆ ಸೂಚನೆ ನೀಡಿದ್ದು, ಸೂಕ್ತ ರೂಪುರೇಷೆ ತಯಾರಿಸಲಾಗುವುದು. ಈ ಹಿನ್ನೆಲೆಯಲ್ಲಿ ಬಾಲವನದ ಜೊತೆ ಒಡನಾಟ ಹೊಂದಿರುವವರನ್ನು ಜೊತೆ ಸೇರಿಸುವ ಪ್ರಯತ್ನ ನಡೆಸಲಾಗುವುದು. ಈಗಾಗಲೇ ವಾಟ್ಸ್‌ಆಪ್ ಗ್ರೂಪ್ ರಚಿಸಿದ್ದೇವೆ. ಇವರೆಲ್ಲರ ಸಹಕಾರ ಪಡೆದುಕೊಂಡು ಬಾಲವನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ನಗರಸಭೆ ಸದಸ್ಯೆ ದೀಕ್ಷಾ ಪೈ ಮಾತನಾಡಿ, ಕೋರೊನಾ ಸಂದರ್ಭದಲ್ಲಿ ಆನ್‌ಲೈನ್ ಕಾರ್ಯಕ್ರಮ ಮಾಡಿದ್ದು, ಯಶಸ್ವಿಯಾಗಿ ನಡೆದಿದೆ. ಗಿರೀಶ್ ನಂದನ್ ಅವರು ಸಹಾಯಕ ಆಯುಕ್ತರಾಗಿ ಬಂದ ಬಳಿಕ ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮುಂದೆ ಸಾಹಿತ್ಯ ರಚನೆಗೆ ಒಂದು ಕೊಠಡಿಯ ಅಗತ್ಯವಿದೆ. ಯುವ ಕವಿಗಳು ಇಲ್ಲಿಗೆ ಬಂದ ಆ ಕೊಠಡಿಯಲ್ಲಿ ಸಾಹಿತ್ಯ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಇದರ ಜೊತೆಗೆ ಯೋಗ ತರಗತಿಯನ್ನು ನಡೆಸಲು ಬಾಲವನದಲ್ಲಿ ಅವಕಾಶ ನೀಡಬೇಕು ಎಂದು ಸಹಾಯಕ ಆಯುಕ್ತರಲ್ಲಿ ಮನವಿ ಮಾಡಿಕೊಂಡರು.
ಕಸಾಪ ಪುತ್ತೂರು ಘಟಕ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಮಾತನಾಡಿ, ಕಾರಂತರ ಕರ್ಮಭೂಮಿಯಲ್ಲಿ ಸಾಹಿತ್ಯ ಚಟುವಟಿಕೆ ಆಗಬೇಕು ಎನ್ನುವ ಆಶಯಕ್ಕೆ ಪೂರಕವಾಗಿ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿ ನಡೆಯುತ್ತಿದೆ. ಸಾಹಿತ್ಯ ರಚಿಸುವಾಗ ಕೆಲವು ನಮ್ಮ ಅನುಭವಗಳನ್ನು ಬರೆಯುತ್ತೇವೆ. ಇನ್ನು ಕೆಲವು ವಿಶೇಷ ಚೈತನ್ಯದಿಂದ ಸ್ಫೂರ್ತಿ ಪಡೆದುಕೊಳ್ಳುತ್ತೇವೆ. ಇಂತಹ ಸಾಹಿತ್ಯ ಶ್ರೇಷ್ಠ ಎನಿಸಿಕೊಳ್ಳುತ್ತವೆ. ಶಿವರಾಮ ಕಾರಂತರು ಅಂತಹ ವಿಶೇಷ ಚೈತನ್ಯ ಸಿದ್ಧಿಸಿಕೊಂಡಿದ್ದು, ಆ ಕಾರಣಕ್ಕೆ ಅವರ ಸಾಹಿತ್ಯ ಶ್ರೇಷ್ಠ ಎನಿಸಿಕೊಂಡಿವೆ. ಅವರನ್ನು ಬಾಲ್ಯದಲ್ಲಿ ನೋಡಿದ ನೆನಪಿದ್ದು, ಅವರ ಆಶೀರ್ವಾದದಿಂದ ಸಾಹಿತ್ಯ ಪರಿಷತ್‌ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದು ಸ್ಮರಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ನಿಸರ್ಗಪ್ರಿಯ ಮಾತನಾಡಿ, ಕಾರಂತರು ಎಂದರೆ ಜೀವನ ಪ್ರೀತಿ. ಬದುಕು ದೊಡ್ಡದು ಎನ್ನುವ ಆಶಯವನ್ನು ಅವರು ವ್ಯಕ್ತಪಡಿಸುತ್ತಿದ್ದರು. ಅವರು ನಮಗೆ ನೀಡಿರುವ ಆದರ್ಶದಂತೆ ಜೀವನವನ್ನು ನಡೆಸಿಕೊಂಡು, ಉತ್ತಮ ಸಾಧನೆಯ ಪಥದಲ್ಲಿ ಸಾಗುವಂತಾಗಬೇಕು ಎಂದು ಆಶಿಸಿದರು.
ಅಪೂರ್ವ ಕಾರಂತ್ ಪ್ರಾರ್ಥಿಸಿದರು. ಬಾಲವನದ ಕಾರ್ಯಕ್ರಮ ಸಂಯೋಜಕ ಜಗನ್ನಾಥ್ ಅರಿಯಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಸಿಡಿಪಿಓ ಶಾಂತಿ ಹೆಗಡೆ ವಂದಿಸಿದರು. ಗಣೇಶ್ ಎನ್. ಕಲ್ಲರ್ಪೆ ಹಾಗೂ ಚೈತ್ರ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ದ.ಕ. ಜಿಲ್ಲಾ ಮಟ್ಟದ ಕವಿಗೋಷ್ಠಿ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಮೇಶ ಉಳಯ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

LEAVE A REPLY

Please enter your comment!
Please enter your name here