ಲಂಚ, ಭ್ರಷ್ಟಾಚಾರ ಆರೋಪದ ಸಾರ್ವಜನಿಕ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸಿ : ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಎಡಿಜಿಪಿ ಸೂಚನೆ

0

ಬೆಂಗಳೂರು:ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಗೆ ಅಧಿಕಾರ ನೀಡಿದ್ದ ಹೈಕೋರ್ಟ್ ಆದೇಶದಂತೆ ಕರ್ನಾಟಕ ಲೋಕಾಯುಕ್ತ ಸಂಸ್ಥೆ ತನ್ನ ಕಾರ್ಯಾರಂಭ ಮಾಡಿದೆ.ಲಂಚ, ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಸಾರ್ವಜನಿಕರಿಂದ ಬರುವ ದೂರುಗಳನ್ನು ಸ್ವೀಕರಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಅಡಿಯಲ್ಲಿ ದಾಖಲಿಸಿಕೊಂಡು ಕಾನೂನಿನಡಿಯಲ್ಲಿ ತನಿಖೆ ನಡೆಸುವಂತೆ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಸಂಸ್ಥೆಯ ಪೊಲೀಸ್ ಅಧಿಕಾರಿಗಳಿಗೆ ಶುಕ್ರವಾರ ಸೂಚನೆ ನೀಡಿದ್ದಾರೆ.
ಈ ಸಂಬಂಧ ಹೊರಡಿಸಲಾಗಿರುವ ಸುತ್ತೋಲೆಯಲ್ಲಿ, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದುಗೊಳಿಸಿ ಹೈಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಈ ಪ್ರಕರಣದಲ್ಲಿ ಹೈಕೋರ್ಟ್ ಶಿಫಾರಸು ಮತ್ತು ನಿರ್ದೇಶನಗಳ ಕಾರಣದಿಂದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ, ತನಿಖೆ ನಡೆಸುವಂತೆ ಸಂಸ್ಥೆಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲು ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಲೋಕಾಯುಕ್ತದ ಎಸ್‌ಪಿಗಳು, ಡಿವೈಎಸ್‌ಪಿಗಳು ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಈ ಸುತ್ತೋಲೆಯನ್ನು ರವಾನಿಸಲಾಗಿದೆ. ಲಂಚದ ಆರೋಪ, ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ, ತನಿಖೆ ಆರಂಭಿಸುವ ಲೋಕಾಯುಕ್ತರ ನಿರ್ಧಾರದಂತೆ ಈ ಸುತ್ತೋಲೆ ಹೊರಡಿಸಲಾಗಿದೆ.
ಎಸಿಬಿ ರಚನೆಯ ಅಧಿಸೂಚನೆಯನ್ನು ರದ್ದುಗೊಳಿಸಿ ಆಗಸ್ಟ್ 11ರಂದು ತೀರ್ಪು ನೀಡಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಅಡಿಯಲ್ಲಿ ಲೋಕಾಯುಕ್ತ ಸಂಸ್ಥೆಗೆ ಈ ಹಿಂದೆ ನೀಡಿದ್ದ ಅಧಿಕಾರವನ್ನು ಮರುಸ್ಥಾಪಿಸಿತ್ತು. ಎಸಿಬಿಯಲ್ಲಿ ತನಿಖಾ ಹಂತದಲ್ಲಿರುವ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಹಸ್ತಾಂತರ ಮಾಡುವಂತೆ ಆದೇಶಿಸಿತ್ತು.ಹೈಕೋರ್ಟ್ ಆದೇಶದಂತೆ, ಎಸಿಬಿಯಲ್ಲಿರುವ ಎಲ್ಲ ಸಿಬ್ಬಂದಿಗಳು ಮತ್ತು ಪ್ರಕರಣಗಳನ್ನು ಕೂಡಲೇ ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಈಗಾಗಲೇ ಕರ್ನಾಟಕ ಲೋಕಾಯುಕ್ತದಿಂದ ರಾಜ್ಯ ಸರಕಾರಕ್ಕೆ ಸೂಚನೆ ನೀಡಲಾಗಿದೆ.ಆದರೂ, ತನಿಖಾ ಹಂತದಲ್ಲಿರುವ ಪ್ರಕರಣಗಳನ್ನು ಎಸಿಬಿ ಅಧಿಕಾರಿಗಳು ಇನ್ನೂ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಹಸ್ತಾಂತರ ಮಾಡಿಲ್ಲ ಎನ್ನಲಾಗುತ್ತಿದೆ.ಹೊಸ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ಪೊಲೀಸ್ ಕಚೇರಿಗಳಿಗೆ ದೂರುಗಳು ಬರುತ್ತಿದ್ದು ಅವುಗಳನ್ನು ಪರಿಶೀಲಿಸಿ ಲೋಕಾಯುಕ್ತ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಾರೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here