ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ, ಆಧ್ಯಾತ್ಮಿಕ ಪಂಡಿತ ಕೇರಳದ ಕ್ಯಾಲಿಕಟ್ ಜಿಲ್ಲೆಯನಾದಾಪುರಂ ಸಮೀಪದ ಚೇಲಕ್ಕಾಡ್ ಎಂಬಲ್ಲಿ ವಾಸವಾಗಿದ್ದ ಶೈಖುನಾ ಚೇಲಕ್ಕಾಡ್ ಮಹಮ್ಮದ್ ಮುಸ್ಲಿಯಾರ್(88.ವ) ಆ.28ರಂದು ನಿಧನರಾದರು.
ಪ್ರಸ್ತುತ ಸಮಸ್ತ ಕೇಂದ್ರ ಮುಶಾವರ ಸದಸ್ಯರ ಪೈಕಿ ಅತ್ಯಂತ ಹಿರಿಯ ವಿದ್ವಾಂಸರಾಗಿದ್ದ ಚೇಲಕ್ಕಾಡ್ ಮಹಮ್ಮದ್ ಮುಸ್ಲಿಯಾರ್‌ರವರು ಪ್ರಮುಖ ಕರ್ಮ ಶಾಸ್ತ್ರ ಪಂಡಿತರೂ ಆಗಿದ್ದರು. ಧಾರ್ಮಿಕ ವಿಷಯಗಳಲ್ಲಿ ಸಂಶಯ ನಿವಾರಣೆ ಮತ್ತು ಅಂತಿಮ ತೀರ್ಪಿಗಾಗಿ ಚೇಲಕ್ಕಾಡ್ ಉಸ್ತಾದರ ಬಳಿ ಜನರು ಹೋಗುತ್ತಿದ್ದರು. ಕರ್ಮಶಾಸ್ತ್ರ, ಅರಬಿ ವ್ಯಾಕರಣ ಸೇರಿದಂತೆ ಅಗಾಧ ಜ್ಞಾನವನ್ನು ಹೊಂದಿದ್ದ ಇವರು ಸರಳ ಜೀವನ ಸಾಗಿಸುತ್ತಿದ್ದರು.
ಈ ಹಿಂದೆ ಪುತ್ತೂರಿನ ವಿವಿಧ ಕಡೆಗಳಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಬರುತ್ತಿದ್ದರು. ಮಾಡನ್ನೂರು ನೂರುಲ್ ಹುದಾ ಆಶ್ರಯದಲ್ಲಿ ಕೆಲವು ಸಮಯಗಳ ಹಿಂದೆ ನಡೆದ ಮಜ್ಲಿಸುನ್ನೂರ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿರುವುದು ಚೇಲಕ್ಕಾಡ್ ಉಸ್ತಾದರು ಪುತ್ತೂರು ಭಾಗದಲ್ಲಿ ಭಾಗವಹಿಸಿದ ಕೊನೆಯ ಕಾರ್ಯಕ್ರಮವಾಗಿದೆ.
ಚೇಲಕ್ಕಾಡ್ ಉಸ್ತಾದರ ನಿಧನಕ್ಕೆ ಉಲಮಾ, ಉಮರಾ ನಾಯಕರು, ಸುನ್ನೀ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿದೆ.