- ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯತೆಯಾಗಿದೆ : ದುರ್ಗಾಪರಮೇಶ್ವರ ಭಟ್
ಪುತ್ತೂರು: ನೆಮ್ಮದಿಯ, ತೃಪ್ತಿದಾಯಕ ಜೀವನ ನಮ್ಮದಾಗಬೇಕಾದರೆ ನಮ್ಮಲ್ಲಿ ಸಂಸ್ಕಾರಯುತ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಗರ್ಭದಲ್ಲೇ ಮಗುವಿಗೆ ಸಂಸ್ಕಾರಯುತ ಶಿಕ್ಷಣವನ್ನು ಕೊಡಿಸುವ ಕೆಲಸ ತಾಯಂದಿರಿಂದ ಆಗಬೇಕು ಆಗ ಮಾತ್ರ ಸಂಸ್ಕಾರಯುತ ಮಗುವಿನ ಜನನವಾಗುತ್ತದೆ. ಒಳ್ಳೆಯ ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ನಮ್ಮ ಸನಾತನ ಹಿಂದೂ ಧರ್ಮ ಉಳಿಯಲು ಸಾಧ್ಯವಿದೆ ಎಂದು ಬೆಂಗಳೂರಿನಲ್ಲಿ ಗುರುಕುಲ ನಡೆಸುತ್ತಿರುವ ಧಾರ್ಮಿಕ ಚಿಂತಕರಾದ ದುರ್ಗಾಪರಮೇಶ್ವರ ಭಟ್ ಮಜ್ಜಾರಡ್ಕರವರು ಹೇಳಿದರು.
ಅವರು ಆ.31ರಿಂದ ಸೆ.02 ರ ತನಕ ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಆಶ್ರಯದಲ್ಲಿ ಭಜನಾ ಮಂದಿರದಲ್ಲಿ ನಡೆಯುತ್ತಿರುವ ೪೧ ನೇ ವರ್ಷದ ಶ್ರೀ ಗಣೋತ್ಸವದ ಆ.31 ರ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಮಗುವಿಗೆ ತಾಯ ಗರ್ಭದಿಂದಲೇ ಸಂಸ್ಕಾರಯುತ ಶಿಕ್ಷಣ ದೊರೆಯಬೇಕು ಇದಕ್ಕೆ ತಂದೆಯ ಸತ್‌ಚಿಂತನೆಗಳು ಕೂಡ ಮಿಲನವಾಗಬೇಕು ಆಗ ಒಂದು ಸಂಸ್ಕಾರಯುತ ಮಗುವಿನ ಜನನಕ್ಕೆ ಕಾರಣವಾಗುತ್ತದೆ ಎಂದ ಅವರು ನಾವು ಇಂದಿನ ದಿನಗಳಲ್ಲಿ ಸಂಸ್ಕಾರಯುತ ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ ಆದ್ದರಿಂದಲೇ ನಮ್ಮ ಮನಸ್ಸಲ್ಲಿ ಕೆಟ್ಟ ಭಾವನೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಮುಂದಿನ ಸಮಾಜಕ್ಕೆ ಒಬ್ಬ ಸಂಸ್ಕಾರಯುತ ಮಕ್ಕಳನ್ನು ಕೊಡುವ ಜವಬ್ದಾರಿ ಪ್ರತಿಯೊಬ್ಬ ಹೆತ್ತವರ ಮೇಲಿದೆ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಬಾಲ ಗಂಗಾಧರ್ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಪ್ರತಿ ಕಡೆಯಲ್ಲೂ ಅತ್ಯಂತ ವಿಜೃಂಭಣೆಯಿಂದ ಧಾರ್ಮಿಕತೆಯಿಂದ ನಡೆಯುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ಒಂದೇ ಮನಸ್ಸಿನಿಂದ ಗಣೇಶನ ಪೂಜಿಸಿದರೆ ಗಣೇಶನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಗಣೇಶ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿ ಶುಭ ಹಾರೈಸಿದರು. ಕುರಿಯ ಉಳ್ಳಾಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಮಧು ನರಿಯೂರುರವರು ಮಾತನಾಡಿ, ನಮ್ಮ ಮಕ್ಕಳಿಗೆ ಗಣೇಶೋತ್ಸವದ ಹಿಂದಿನ ಕಥೆಯನ್ನು ತಿಳಿಸುವ ಅಗತ್ಯತೆ ಇದೆ ಎಂದು ಹೇಳಿ ಶುಭಹಾರೈಸಿದರು. ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಮಾತನಾಡಿ, ಅಂದು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಿಲಕರು ಆರಂಭಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಂದು ನಮ್ಮೆಲ್ಲರನ್ನು ಒಟ್ಟಾಗಿ ಸೇರಿಸಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲೂ ಪ್ರತಿಯೊಬ್ಬರು ಒಗ್ಗಟ್ಟಿಂದ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜದ ಅಭಿವೃದ್ಧಿಯಲ್ಲೂ ಪಾಲುದಾರರಾಗಬೇಕು ಎಂದು ಹೇಳಿ ಶುಭ ಹಾರೈಸಿದರು.ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದ ಅಧ್ಯಕ್ಷ ಜೈಶಂಕರ ರೈ ಬೆದ್ರುಮಾರುರವರು ಮಾತನಾಡಿ, ಶೀಘ್ರದಲ್ಲಿ ಕುಂಬ್ರದಲ್ಲೂ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗಲಿ ಇದಕ್ಕೆ ನಮ್ಮೆಲ್ಲರ ಸಂಪೂರ್ಣ ಸಹಕಾರ ಇದೆ ಎಂದು ಹೇಳಿ ಶುಭಹಾರೈಸಿದರು. ಬೂಡಿಯಾರ್ ಇಂಡೆನ್ ಗ್ಯಾಸ್‌ನ ಮಾಲಕ, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ನಮ್ಮ ಧಾರ್ಮಿಕತೆಯ ಅರಿವು ಮೂಡಿಸುವ ಅಗತ್ಯತೆ ನಮ್ಮಲ್ಲಿದೆ ಎಂದು ಹೇಳಿ ಶುಭ ಹಾರೈಸಿದರು.ಕೊಡಗು ಸೋಮವಾರಪೇಟೆಯ ಅಗ್ನಿಶಾಮಕ ದಳದ ಅಧಿಕಾರಿ ಈಶ್ವರ ಪಿ.ಪಲ್ಲದಗುರಿಯವರು ಮಾತನಾಡಿ, ಕುಂಬ್ರದ ಗಣೇಶೋತ್ಸವಕ್ಕೆ ತನ್ನದೇ ಆದ ಮಹತ್ವ, ವಿಶೇಷತೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಭ್ರಮದಿಂದ ಗಣೇಶೋತ್ಸವ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿ ಸಂಚಾಲಕ ರಾಜಮೋಹನ್ ರೈ ನೀರಳ ಉಪಸ್ಥಿತರಿದ್ದರು. ಶ್ರೀ ರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಮಂದಿರಕ್ಕೆ ಸುಮಾರು ೧೫ ಸೆಂಟ್ಸ್ ಜಾಗ ಇದ್ದು ಇದಕ್ಕೆ ರೇಕಾರ್ಡ್ ಆಗಬೇಕಾಗಿದೆ. ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಒಂದು ಭವ್ಯವಾದ ಶ್ರೀರಾಮ ಭಜನಾ ಮಂದಿರ ನಿರ್ಮಾಣದ ಯೋಜನೆಯು ಇದೆ. ಇದಕ್ಕೆ ಸಮಸ್ತ ಭಕ್ತಾಧಿಗಳ ಸಹಕಾರದ ಅವಶ್ಯಕತೆ ಇದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಒಳಮೊಗ್ರು ಗ್ರಾಪಂ ಮಾಜಿ ಸದಸ್ಯೆ ಉಷಾ ನಾರಾಯಣ್ ಪ್ರಾರ್ಥಿಸಿದರು. ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಸ್ವಾಗತಿಸಿದರು. ಕೋಶಾಧಿಕಾರಿ ಚಂದ್ರಕಾಂತ ಶಾಂತಿವನ, ಉಪಾಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ,ಉಮೇಶ್ ಕುಮಾರ್ ಬರಮೇಲು, ಕರುಣಾ ರೈ ಬಿಜಳ, ಅಂಕಿತ್ ರೈ ಕುಯ್ಯಾರು, ಉಷಾ ನಾರಾಯಣ್, ಪುರಂದರ ಶೆಟ್ಟಿ ಮುಡಾಲ ಅತಿಥಿಗಳಿಗೆ ವೀಳ್ಯ ಅಡಿಕೆ, ಶಾಲು ನೀಡಿ ಸ್ವಾಗತಿಸಿದರು. ಮಂದಿರದ ಮಾಜಿ ಅಧ್ಯಕ್ಷ ರತನ್ ರೈ ಕುಂಬ್ರ ವಂದಿಸಿದರು. ಹರೀಶ್ ರೈ ಮುಗೇರು ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ/ ಸಾಂಸ್ಕೃತಿಕ ಕಾರ್ಯಕ್ರಮ
ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯರವರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ನಡೆಯಿತು ಬಳಿಕ ಶ್ರೀ ಗಣಪತಿ ಹೋಮ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಾಗ್ದೇವಿ ಸಂಗೀತ ಶಾಲೆಯ ಶಿಷ್ಯವೃಂದದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮನರಂಜಿಸಿತು.ಮಧ್ಯಾಹ್ನ ಮಹಾಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು ಬಳಿಕ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಧಾರ್ಮಿಕ ರಸಪ್ರಶ್ನೆ ನಡೆಯಿತು.