ವಿದ್ಯಾಮಾತಾ ಅಕಾಡೆಮಿಯಿಂದ ತರಬೇತುಗೊಂಡ ಅಗ್ನಿವೀರ್ ನೇಮಕಾತಿಗಾಗಿ ಶಾಸಕ ಸಂಜೀವ ಮಠಂದೂರು ನೇತೃತ್ವದ ಉಚಿತ ಬಸ್‌ನಲ್ಲಿ ಹಾವೇರಿಗೆ

0
  • ಭಾರತ ಮಾತೆಯ ಸೇವೆ ಸಲ್ಲಿಸುವ ಮೂಲಕ ರೋಲ್ ಮಾಡೆಲ್ ಆಗಿ- ಸಂಜೀವ ಮಠಂದೂರು
  • ಸೈನ್ಯದ ಮುಖ್ಯಸ್ಥರಾಗಲು ದೇವರು ಅನುಗ್ರಹಿಸಲಿ – ಕೇಶವಪ್ರಸಾದ್ ಮುಳಿಯ
  • ಪುತ್ತೂರಿನವರು ಸರಕಾರಿ ಹುದ್ದೆಯನ್ನು ಅಲಂಕರಿಸುವಂತಾಗಲಿ – ಭಾಗ್ಯೇಶ್ ರೈ

ಪುತ್ತೂರು: ಸೆ.1ರಿಂದ ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿಪಥ್ ನೇಮಕಾತಿ 2022 ರ ಅಡಿಯಲ್ಲಿ ‘ಅಗ್ನಿವೀರ’ ಹುದ್ದೆಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯ ವತಿಯಿಂದ ತರಬೇತುಗೊಂಡ ಸುಮಾರು 95 ಮಂದಿ ಅಭ್ಯರ್ಥಿಗಳನ್ನು ಆ.31ರಂದು ಬೆಳಿಗ್ಗೆ ಶಾಸಕ ಸಂಜೀವ ಮಠಂದೂರು ಅವರು ತನ್ನ ನೇತೃತ್ವದ ಉಚಿತ ಬಸ್ ಸೌಲಭ್ಯದಲ್ಲಿ ಕಳುಹಿಸಿಕೊಡಲಾಯಿತು. ಬೆಳಿಗ್ಗೆ ದೇವಳದಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಬಳಿಕ 95 ಅಭ್ಯರ್ಥಿಗಳಿಗೆ ದೇವಳದಿಂದ ಫಲಹಾರ ನೀಡಿ ಬಳಿಕ ನೇಮಕಾತಿಗೆ ಕಳುಹಿಸಿಕೊಡಲಾಯಿತು.

ಭಾರತ ಮಾತೆಯ ಸೇವೆ ಸಲ್ಲಿಸುವ ಮೂಲಕ ರೋಲ್ ಮಾಡೆಲ್ ಆಗಿ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಯುವಕರಿಗೆ ವಿಶೇಷ ಅವಕಾಶ ಮಾಡಿಕೊಟ್ಟಿದ್ದಾರೆ. ಹಿಂದೆ ಸೈನ್ಯಕ್ಕೆ ಸೇರಬೇಕಾದರೆ ಒಂದಷ್ಟು ಪೂರ್ವಭಾವಿ ತರಬೇತಿ, ಶ್ರಮ ಬೇಕಿತ್ತು. ಆದರೆ ಒಬ್ಬ ಸಾಮಾನ್ಯ ಯುವಕ ಕೂಡಾ ಸೈನ್ಯಕ್ಕೆ ಸೇರಿ ದೇಶದ ಗಡಿ ಕಾಯುವ ಸೇವೆ ಮಾಡಲು ಇವತ್ತು ಅಗ್ನಿಪಥ್ ಯೋಜನೆ ಸಹಕಾರಿಯಾಗಿದೆ. ಇದನ್ನು ಸದುಪಯೋಗ ಮಾಡಿಕೊಂಡು ಎಲ್ಲರು ಭಾರತ ಮಾತೆಯ ಸೇವೆ ಸಲ್ಲಿಸುವ ಮೂಲಕ ರೋಲ್ ಮೊಡೆಲ್ ಆಗಿ ಎಂದರು.

ಸೈನ್ಯದ ಮುಖ್ಯರಸ್ತರಾಗುವಂತೆ ದೇವರು ಅನುಗ್ರಹವಿರಲಿ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಮಹಾಲಿಂಗೇಶ್ವರ ಸೇನಾನಿಗಳಾಗಿ ಪುತ್ತೂರಿನಿಂದ ಹೊರಟ ಎಲ್ಲಾ ಅಭ್ಯರ್ಥಿಗಳು ಆಯ್ಕೆಯಾಗಬೇಕು. ಪುತ್ತೂರಿಗೆ ಹೆಸರು ಬರುವಂತಹ ಕೆಲಸವಾಗಲಿ. ಮುಂದೆ ಭಾರತ ಸೈನ್ಯದ ಮುಖ್ಯಸ್ಥರಾಗುವ ರೀತಿಯಲ್ಲಿ ದೇವರ ಅನುಗ್ರಹ ನಿಮಗಿರಲಿ ಎಂದರು.

ಪುತ್ತೂರಿನವರು ಸರಕಾರಿ ಹುದ್ದೆಯನ್ನು ಅಲಂಕರಿಸುವಂತಾಗಲಿ:
ವಿದ್ಯಾಮಾತಾ ಅಕಾಡೆಮಿಯ ಅಧ್ಯಕ್ಷ ಭಾಗ್ಯೇಶ್ ರೈ ಅವರು ಮಾತನಾಡಿ ಪುತ್ತೂರಿನವರು ವಿವಿಧ ನೇಮಕಾತಿಯಲ್ಲಿ ಭಾಗವಹಿಸಿ ಸರಕಾರಿ ಹುದ್ದೆಯನ್ನು ಅಲಂಕರಿಸುವಂತಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾಮಾತ ಅಕಾಡೆಮಿ ಸತತ ಪ್ರಯತ್ನ ಮಾಡುತ್ತಿದೆ. ಅಗ್ನಿಪಥ್‌ಗೆ ಪುತ್ತೂರಿನಿಂದ ಯಾರು ಇಲ್ಲ ಎಂದಾಗ ನಾವು ಸತತ ಪ್ರಯತ್ನ ಮಾಡಿದಾಗ ಇವತ್ತು 95 ಮಂದಿ ಪುತ್ತೂರಿನಿಂದ ತೆರಳುವಂತಾಗಿದೆ. ಎಲ್ಲರು ಆಯ್ಕೆಯಾಗಬೇಕೆಂದು ನಮ್ಮ ಹಾರೈಕೆ ಎಂದರು. ಈ ಸಂದರ್ಭದಲ್ಲಿ ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here