ವಿಜ್ರಂಭಿಸಿದ ಫಿಲೋಮಿನಾ ಗಣೇಶೋತ್ಸವದ 40ರ ಸಂಭ್ರಮ

0

  • ಯುವಸಮೂಹದಿಂದ ಭಾರತ ಸೂಪರ್ ಪವರ್ ನೇಷನ್ ಸಾಧ್ಯ-ಮಠಂದೂರು

-ಸ್ನಾತಕ/ಸ್ನಾತಕೋತ್ತರ ರ್‍ಯಾಂಕ್ ವಿದ್ಯಾರ್ಥಿಗಳಿಗೆ ಸನ್ಮಾನ
-ಪಿಯುಸಿ ರ್‍ಯಾಂಕ್ ವಿಜೇತರಿಗೆ ಸನ್ಮಾನ
-ಕ್ರೀಡಾ/ಎನ್‌ಸಿಸಿ ಸಾಧಕರಿಗೆ ಸನ್ಮಾನ

ಪುತ್ತೂರು: ಜಾತಿ-ಮತ-ಧರ್ಮ ಮರೆತು ಭಾರತದಲ್ಲಿ ಶ್ರೀಗಣೇಶೋತ್ಸವನ್ನು ಶ್ರದ್ಧೆಯಿಂದ, ಭಕ್ತಿಯಿಂದ ಆಚರಿಸಲಾಗುತ್ತಿದೆ. ಭಾರತ ದೇಶವನ್ನು ಯಂಗ್ ಇಂಡಿಯಾ ಎಂದು ಕರೀತಾರೆ. ದೇಶದಲ್ಲಿ ಶೇ.೬೦ ಯುವಸಮೂಹ ಇದ್ದು ಈ ಯುವಸಮೂಹ ಮನಸ್ಸು ಮಾಡಿದರೆ ಏನೂ ಮಾಡಬಹುದು. ಯುವಸಮೂಹ ಎದ್ದು ನಿಂತಾಗ ಭಾರತ ಸೂಪರ್ ಪವರ್ ನೇಷನ್ ಆಗುವುದರಲ್ಲಿ ಸಂದೇಹವಿಲ್ಲ ಶಾಸಕ ಸಂಜೀವ ಮಠಂದೂರುರವರು ಹೇಳಿದರು.

ದರ್ಬೆ ವಿನಾಯಕ ನಗರದಲ್ಲಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟ ಶ್ರೀ ಗಣೇಶೋತ್ಸವಕ್ಕೆ ಪ್ರಸ್ತುತ ೪೦ನೇ ವರುಷದ ಸಂಭ್ರಮ. ಇದರ ಪ್ರಯುಕ್ತ ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆ.೩೧ ಹಾಗೂ ಸೆ.೧ ರಂದು ಎರಡು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತಿ-ಧರ್ಮ ಮರೆತು ಗಣೇಶನನ್ನು ಆರಾಧನೆ ಮಾಡುತ್ತಿರುವುದರಿಂದ ಗಣೇಶ ಸರ್ವವ್ಯಾಪಿ, ಸರ್ವಸ್ಪರ್ಶವಾಗಿ ಎಲ್ಲರಿಗೂ ಗಣನಾಥನಾಗಿದ್ದಾನೆ. ಮನೆ-ಮಂದಿರಗಳಲ್ಲಿ ಆಗುತ್ತಿದ್ದ ಗಣೇಶನ ಪೂಜೆಯು ಇಂದು ರಸ್ತೆ ಬದಿಗಳಲ್ಲಿ ಸರ್ವಧರ್ಮೀಯರು ಒಟ್ಟುಗೂಡಿ ಆಚರಣೆ ಮಾಡುವ ಮೂಲಕ ಗಣೇಶನ ಉತ್ಸವ ಸಾಮರಸ್ಯದ ಮತ್ತು ಸಹಬಾಳ್ವೆಯ ಬದುಕಿಗೆ ಪ್ರೇರಣೆಯಾಗಲಿದೆ ಎಂದರು.

ಹಿರಿ-ಕಿರಿಯರ ಸಮಾಗಮದಲ್ಲಿ ಆಚರಣೆ ಶ್ಲಾಘನೀಯ-ಶಕುಂತಳಾ ಶೆಟ್ಟಿ:
ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಗಣೇಶೋತ್ಸವ ಆಚರಣೆಯ ಮೂಲ ಉದ್ಧೇಶ ಸಾರ್ವಜನಿಕರಲ್ಲಿ ಶಾಂತಿ ಹಾಗೂ ಒಗ್ಗಟ್ಟು ಮೂಡಿಸುವುದಾಗಿದೆ. ತೀವೃಗಾಮಿಗಳು, ಮಂದಗಾಮಿಗಳು ಒಗ್ಗೂಡಿಸಲು ಅಂದು ಬಾಲಗಂಗಾಧರ್ ತಿಲಕ್‌ರವರು ಗಣೇಶೋತ್ಸವ ಆಚರಣೆಯನ್ನು ಮುನ್ನೆಲೆಗೆ ತಂದರು. ಇಲ್ಲಿಯೂ ಹಿರಿ-ಕಿರಿಯರ ಸಮಾಗಮದಲ್ಲಿ ೪೦ನೇ ವರುಷದ ಶ್ರೀಗಣೇಶೋತ್ಸವ ಆಚರಣೆ ನಡೀತಿದ್ದು, ಹಳೆ ಬೇರು, ಹೊಸ ಚಿಗುರು ಎಂಬಂತೆ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಅವರ ಪುತ್ರ ಪ್ರಜ್ವಲ್‌ರವರು ಒಟ್ಟಾಗಿ ಎಲ್ಲರೊಂದಿಗೆ ಆಚರಣೆ ಮಾಡುತ್ತಿರುವುದು ವೈಶಿಷ್ಟ್ಯವೆನಿಸಿದೆ. ಇಂದಿಲ್ಲಿ ೪೦ ಮಂದಿ ಪ್ರತಿಭಾವಂತರಿಗೆ ಸನ್ಮಾನಿಸಿದ್ದು ಇದು ಮುಂದಿನ ವರ್ಷ ೧೪೦ ಮಂದಿಗೆ ಸನ್ಮಾನಿಸುವ ಯೋಗ ಕೂಡಿ ಬರಲಿ ಎಂದರು.

ಗಣೇಶ ದೇವರು ಸಮೃದ್ಧಿ ಹಾಗೂ ಜ್ಞಾನದ ಪ್ರತೀಕ-ವಂ|ಆಂಟನಿ ಪ್ರಕಾಶ್:
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ಭಕ್ತಿ ಹಾಗೂ ಶ್ರದ್ಧೆಯಿಂದ ಶ್ರೀಗಣೇಶೋತ್ಸವನ್ನು ಆಚರಿಸುತ್ತಿರುವುದು ಹೆಮ್ಮೆಯಾಗಿದೆ. ಗಣೇಶ ದೇವರು ಸಮೃದ್ಧಿ ಹಾಗೂ ಜ್ಞಾನದ ಪ್ರತೀಕವಾಗಿದ್ದಾರೆ. ಸಮೃದ್ಧಿ ಹೊಂದಿದವರು ಜ್ಞಾನಿಗಳಾಗಿ ಬೆಳೆಯುವ ಅಧ್ಯಯನವನ್ನು ಮಾಡಬೇಕಿದೆ. ಎಲ್ಲಿ ನೀತಿ, ಸತ್ಯ, ಭ್ರಾತೃತ್ವ, ದಯೆ, ಸಹನೆ, ಶಾಂತಿ ಇದೆಯೋ ಅಲ್ಲಿ ಭಯದ ವಾತಾವರಣ ಇರೋದಿಲ್ಲ. ಜಾತಿ-ಧರ್ಮ ಮರೆತು ಎಲ್ಲರೂ ಒಂದಾದಾಗ ಅಲ್ಲಿ ಸಂತೋಷದ, ಸಾಮರಸ್ಯದ ಹಾಗೂ ಬಂಧುತ್ವ ಏರ್ಪಡಬಲ್ಲುದು ಎಂದರು.

ಹಿರಿಯ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕಾಲೇಜಿನ ಮೆಟ್ಟಿಲು ಹತ್ತಲು ಅವಕಾಶ-ವಂ|ಅಶೋಕ್ ರಾಯನ್:
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಹಬ್ಬಗಳ ಆಚರಣೆಯು ನಮ್ಮಲ್ಲಿನ ಸಹಬಾಳ್ವೆ ಹಾಗೂ ಪ್ರೀತಿಯನ್ನು ದ್ವಿಗುಣಗೊಳಿಸುತ್ತದೆ. ಎಲ್ಲಿ ಪ್ರೀತಿಯಿದೆಯೋ ಆಗ ಪರರಿಗೆ ನೆರವಾಗಲು ಸಹಕಾರಿಯಾಗುತ್ತದೆ. ಪ್ರತಿಯೊಂದು ಧರ್ಮವು ನಮ್ಮಲ್ಲಿ ಸಾಮರಸ್ಯವನ್ನು ಸೂಚಿಸುತ್ತದೆ. ಫಿಲೋಮಿನಾ ಕಾಲೇಜಿನಲ್ಲಿ ಕಲಿತು ಹೋದ ಹಿರಿಯ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕಾಲೇಜಿನ ಮೆಟ್ಟಿಲು ಹತ್ತಲು ಈ ಶ್ರೀಗಣೇಶೋತ್ಸವದ ಆಚರಣೆಯು ಅವಕಾಶ ಮಾಡಿಕೊಡುತ್ತದೆ ಎಂದರು.

ಹಬ್ಬಗಳ ಆಚರಣೆಯಿಂದ ಕುಟುಂಬದಲ್ಲಿ, ಸಮಾಜದಲ್ಲಿ ದೇವರ ಒಲುಮೆ ಪ್ರಾಪ್ತಿ-ವಂ|ಸ್ಟ್ಯಾನಿ ಪಿಂಟೋ:
ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ಮಾತನಾಡಿ, ಗಣಪನಿಗೆ ಮೊದಲು ವಂದಿಸಿದರೆ, ಪೂಜಿಸಿದರೆ ಸರ್ವ ವಿಘ್ನಗಳು ನಿವಾರಣೆಯಾಗಬಲ್ಲುದು, ಸುಖ-ಸಮೃದ್ಧಿ ನೆಲೆಯಾಗಬಲ್ಲುದು ಎಂಬುದು ನಮ್ಮ ನಂಬಿಕೆಯಾಗಿದೆ. ಹಬ್ಬಗಳನ್ನು ಭಕ್ತಿಪೂರ್ವಕವಾಗಿ ಆಚರಣೆ ಮಾಡುವ ಮೂಲಕ ನಾವು ದೇವರಿಗೆ ಮತ್ತಷ್ಟು ಹತ್ತಿರವಾಗುತ್ತೇವೆ. ಹಬ್ಬಗಳ ಆಚರಣೆಯಿಂದ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ದೇವರ ಒಲುಮೆ ಪ್ರಾಪ್ತಿಯಾಗಲಿ ಎಂದರು.

ಸ್ನಾತಕ/ಸ್ನಾತಕೋತ್ತರ ರ್‍ಯಾಂಕ್ ವಿದ್ಯಾರ್ಥಿಗಳಿಗೆ ಸನ್ಮಾನ:
2021-22ರಲ್ಲಿ ಸ್ನಾತಕ ವಿಭಾಗದಲ್ಲಿ ಫಿಲೋಮಿನಾ ಕಾಲೇಜಿನ ಬಿಎಸ್ಸಿಯ ಅನು ಡಿ(4ನೇ ರ್‍ಯಾಂಕ್), ಬಿಬಿಎ ವಿಭಾಗದ ರಾಶಿಯಾ ರೈ ಎಂ(5ನೇ ರ್‍ಯಾಂಕ್), ಬಿಎಸ್ಸಿ ವಿಭಾಗದ ರೆನಿಲ್ಡಾ ಜೋಯ್ಸ್ ಮಾರ್ಟಿಸ್(9ನೇ ರ್‍ಯಾಂಕ್), ಬಿಎಸ್ಸಿ ವಿಭಾಗದ ರಮ್ಯಶ್ರೀ ರೈ(10ನೇ ರ್‍ಯಾಂಕ್), ಸ್ನಾತಕೋತ್ತರ ಪದವಿಯಲ್ಲಿ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ನ ಜೈನಾಬತ್ ರಮ್ಸೀನಾ ಎನ್(ಪ್ರಥಮ ರ್‍ಯಾಂಕ್), ಎಂಎಸ್ಸಿ ಫಿಸಿಕ್ಸ್ ನ ಸುಶ್ಮಿತಾ ಕೆ(ಪ್ರಥಮ ರ್‍ಯಾಂಕ್), ಎಂಕಾನ ನಿರೀಶ್ಮಾ ಎನ್.ಸುವರ್ಣ(4ನೇ ರ್‍ಯಾಂಕ್), ಎಂಕಾಂನ ಯಶಸ್ವಿನಿ ಬಿ(5ನೇ ರ್‍ಯಾಂಕ್), ಎಂಕಾಂ ನ ರಕ್ಷಾ ಎಸ್.ವಿ(5ನೇ ರ್‍ಯಾಂಕ್), ಎಂಕಾಂನ ಶ್ರಾವ್ಯ ಎನ್.ಎಸ್(7ನೇ ರ್‍ಯಾಂಕ್), ಎಂಕಾಂನ ಭವ್ಯಶ್ರೀ ವೈ(7ನೇ ರ್‍ಯಾಂಕ್), ಎಂಕಾನ ರಮ್ಯ ಎಂ(9ನೇ ರ್‍ಯಾಂಕ್), ಎಂಕಾಂನ ಸ್ವಾತಿ ಎಂ(10ನೇ ರ್‍ಯಾಂಕ್)ರವರನ್ನು ಸನ್ಮಾನಿಸಲಾಯಿತು.

ಪಿಯುಸಿ ರ್‍ಯಾಂಕ್ ವಿಜೇತರಿಗೆ ಸನ್ಮಾನ:
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ 7ನೇ ರ್‍ಯಾಂಕ್ ಗಳಿಸಿದ ಕೃಪಾ ಎಸ್.ರೈ(592 ಅಂಕ), ರಾಜ್ಯದಲ್ಲಿ 9ನೇ ರ್‍ಯಾಂಕ್ ಗಳಿಸಿದ ವೈಷ್ಣವಿ(590 ಅಂಕ), ರಾಜ್ಯದಲ್ಲಿ 10ನೇ ರ್‍ಯಾಂಕ್ ಗಳಿಸಿದ ರೋಹನ್ ಜಿ.(589 ಅಂಕ), ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ 6ನೇ ರ್‍ಯಾಂಕ್ ಗಳಿಸಿದ ಶಾಂತೇರಿ ಶೆಣೈ(591 ಅಂಕ), ರಾಜ್ಯದಲ್ಲಿ 8ನೇ ಸ್ಥಾನ ಗಳಿಸಿದ ಸಿಮ್ರಾನ್ ತಾಜ್(589 ಅಂಕ)ರವರನ್ನು ಸನ್ಮಾನಿಸಲಾಯಿತು.

ಕ್ರೀಡಾ/ಎನ್‌ಸಿಸಿ ಸಾಧಕರಿಗೆ ಸನ್ಮಾನ:

ಫಿಲೋಮಿನಾ ಕಾಲೇಜಿನ ಕ್ರೀಡಾ ಸಾಧಕರಾದ ಸಿಂಚನಾ ಡಿ.ಗೌಡ(ಸರ್ಫಿಂಗ್), ನಾಚಪ್ಪ ಕೆ.ಡಿ(ಹಾಕಿ/ಫ್ಲೋರ್‌ಬಾಲ್), ತನ್ವೀರ್ ಪಿ.ಎ, ಸೊಲಮಾನ್ ರೋಶನ್ ಜೋಸೆಫ್, ಪ್ರಥಮೇಶ್ ಶ್ರೀಕಾಂತ್ ಮುರ್‍ಗೋಡು, ಮೊಹಮದ್ ಜುನೈದ್, ಪವನ್ ಟಿ.ಆರ್(ಫುಟ್‌ಬಾಲ್), ಎನ್‌ಸಿಸಿಯಲ್ಲಿ ದೆಹಲಿಯ ಆರ್‌ಡಿ ಪೆರೇಡ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ರಕ್ಷಾ ಅಂಚನ್, ಕಿರಣ್, ಚೇತನ್ ಪಿ, ಮಹಾಲಸಾ ಪೈರವರನ್ನು ಸನ್ಮಾನಿಸಲಾಯಿತು.

ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಕಾರ್ಯದರ್ಶಿ ಬೆಟ್ಟ ಪಿ.ಎಸ್ ನಾಗರಾಜ, ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಅಮೃತ್ ರೈ, ಜೊತೆ ಕಾರ್ಯದರ್ಶಿ ಸಾಯಿಲಿ ವಿ.ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತನ್ವಿ ಮತ್ತು ಬಳಗ ಪ್ರಾರ್ಥಿಸಿದರು. ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಜ್ವಲ್ ಪಿ ಸ್ವಾಗತಿಸಿ, ಕಾರ್ಯದರ್ಶಿ ಪ್ರಖ್ಯಾತ್ ಟಿ.ಜೆ ವಂದಿಸಿದರು. ಟ್ರಸ್ಟಿಗಳಾದ ದುರ್ಗಾಪ್ರಸಾದ್, ಡಾ.ಅಶೋಕ್ ಕುಮಾರ್ ರೈ, ಮಂಜುನಾಥ್ ಡಿ, ಸಿಎ ಅನಂತಪದ್ಮನಾಭ ಕೆ, ಜನಾರ್ದನ ಎಸ್.ಭಟ್, ನಾಗೇಶ್ ಪೈ, ಶಿವಪ್ರಸಾದ್ ಎ, ದೇಲಂತಿಮಾರು ನಿತ್ಯಾನಂದ ಶೆಟ್ಟಿ, ವೇಣುಗೋಪಾಲ್ ಪಿ.ಎಲ್, ಮಂಜುನಾಥ್ ಎನ್‌ರವರು ಅತಿಥಿಗಳಿಗೆ ಹೂ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ವಿದ್ಯಾರ್ಥಿನಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.

ವಿಗ್ರಹ ಪ್ರತಿಷ್ಠಾಪನೆ..
ಆ.೩೧ ರಂದು ಬೆಳಿಗ್ಗೆ ಪರ್ಲಡ್ಕದಿಂದ ಶ್ರೀ ಗಣೇಶನ ವಿಗ್ರಹವನ್ನು ತಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪ ಬೆಳಗಿಸಿ ಬಳಿಕ ಮುಖ್ಯರಸ್ತೆಯಾಗಿ ದರ್ಬೆ ವಿನಾಯಕ ನಗರದ ವಿನಾಯಕ ಮಂಟಪದಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಟಾಪನೆಗೊಳಿಸಲಾಯಿತು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಿದವು.

ಮನರಂಜಿಸಿದ ಗಿರ್‌ಗಿಟ್ ಗಿರಿಧರೆ..
ಆ.೩೧ ರಂದು ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ರಂಗ್‌ದ ರಾಜೆ ಸುಂದರ್ ರೈ ಮಂದಾರ ಸಾರಥ್ಯದ ತುಳು ಹಾಸ್ಯಮಯ ನಾಟಕ `ಗಿರಿಗಿಟ್ ಗಿರಿಧರೆ’ ಪ್ರೇಕ್ಷಕರನ್ನು ಮನರಂಜಿಸಿತು. ಸಾವಿರಾರು ಸಂಖ್ಯೆಯಲ್ಲಿ ತುಳು ನಾಟಕ ಪ್ರೇಮಿಗಳು ನಾಟಕವನ್ನು ವೀಕ್ಷಿಸಿದರು.

ಸ್ಮರಣಿಕೆ ನೀಡಿ ಗೌರವ..
ಕಳೆದ ಹಲವು ವರ್ಷಗಳಿಂದ ಫಿಲೋಮಿನಾ ಗಣೇಶೋತ್ಸವ ಸಂದರ್ಭದಲ್ಲಿ ಕಾರ್ಯಕ್ರಮದ ಭಾವಚಿತ್ರಗಳನ್ನು ತಮ್ಮ ಕ್ಯಾಮರಾದಿಂದ ಸೆರೆ ಹಿಡಿದು ಅವನ್ನು ಪೋಸ್ಟರ್‌ನಂತೆ ವಿನ್ಯಾಸಗೊಳಿಸಿ ಫೇಸ್‌ಬುಕ್, ವ್ಯಾಟ್ಸಾಫ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರಿಸುವ ಮೂಲಕ ಸಂಸ್ಥೆಗೆ ಉಚಿತ ಪ್ರಚಾರ ನೀಡುವ ಹಿರಿಯ ವಿದ್ಯಾರ್ಥಿಗಳಾದ ದಿವಿಶ್ ಬಲ್ಲಡ್ಕ, ಆಕಾಶ್ ಸಿ.ಭಟ್, ಅಭಿಷೇಕ್, ಪ್ರಜ್ವಲ್ ಎಸ್.ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here