- ದೇವಸ್ಥಾನಗಳು ಧರ್ಮಜಾಗೃತಿ ಕೇಂದ್ರಗಳಾಗಬೇಕು : ಮುಳಿಯ ಕೇಶವ ಭಟ್
ಪುತ್ತೂರು: ಹಿಂದೂ ಧರ್ಮ ಸನಾತನ ಧರ್ಮವಾಗಿದೆ. ಹಿಂದೂ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು ಎಂಬುದಕ್ಕೆ ಉತ್ತರವಿಲ್ಲ ಆದ್ದರಿಂದಲೇ ಆದಿ ಇಲ್ಲದ ಧರ್ಮ ಎಂದರೆ ಅದು ಹಿಂದೂ ಧರ್ಮ ಆಗಿದೆ. ಇಂತಹ ಸನಾತನ ಧರ್ಮದಲ್ಲಿ ಹುಟ್ಟಿರುವ ನಾವುಗಳು ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿದುಕೊಳ್ಳುವುದು ಬಹಳ ಅವಶ್ಯಕವಾಗಿದೆ. ಇದಕ್ಕೆ ದೇವಾಲಯಗಳು ಮುಖ್ಯ ಪಾತ್ರ ವಹಿಸುತ್ತವೆ. ಆದ್ದರಿಂದಲೇ ದೇವಸ್ಥಾನಗಳ ಮೂಲಕ ಧರ್ಮಜಾಗೃತಿ ಕೆಲಸ ನಡೆಯುತ್ತಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಹೇಳಿದರು.
ಅವರು ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುತ್ತಿರುವ ೪೧ ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ೨ ದಿನದ ಧಾರ್ಮಿಕ ಸಭೆಯಲ್ಲಿ ದೇವಾಲಯಗಳು ಮತ್ತು ಧರ್ಮಜಾಗೃತಿ ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಿಲಕರು ಜನರನ್ನು ಒಗ್ಗೂಡಿಸಲು ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಆಚರಿಸಲು ಕರೆ ನೀಡಿದರು.ಅದರಂತೆ ಇಂದು ನಾವೆಲ್ಲರೂ ಒಗ್ಗಟ್ಟಿನಿಂದ ಒಂದೇ ಮನಸ್ಸಿನಿಂದ ಗಣೇಶ ಹಬ್ಬವನ್ನು ಮಾಡುತ್ತಿದ್ದೇವೆ ಆ ಮೂಲಕ ನಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವ ಕೆಲಸವೂ ನಡೆಯುತ್ತಿದೆ ಎಂದು ಹೇಳಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಅರಿಯಡ್ಕ ಗ್ರಾಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಕುಕ್ಕುಮುಗೇರು ಶ್ರೀ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ಎ.ಜಿ ವಿಜಯಕುಮಾರ್ ರೈ ಮುಗೇರು, ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಆಳ್ವ ಬೋಳೋಡಿ, ತಿಂಗಳಾಡಿ ಶ್ರೀ ದೇವತಾ ಸಮಿತಿ ಶ್ರೀ ಕ್ಷೇತ್ರ ದೇವಗಿರಿಯ ಅಧ್ಯಕ್ಷ ಜಯರಾಮ ರೈ ಮಿತ್ರಂಪಾಡಿ, ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಪಲ್ಲತ್ತಾರು ಮಲೆಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ ರೈ ಚೆಲ್ಯಡ್ಕರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಉಪಾಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಗಣೇಶೋತ್ಸವ ಸಮಿತಿ ಸಂಚಾಲಕ ರಾಜಮೋಹನ್ ರೈ ನೀರಳ ಉಪಸ್ಥಿತರಿದ್ದರು. ಶ್ರೀ ರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ದುರ್ಗಾಪ್ರಸಾದ್ ರೈ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಸುಂದರ ರೈ ಮಂದಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂದಿರದ ಕೋಶಾಧಿಕಾರಿ ಚಂದ್ರಕಾಂತ ಶಾಂತಿವನ ವಂದಿಸಿದರು. ಸಮಿತಿಯ ಪದಾಧಿಕಾರಿಗಳು ಸಹಕರಿಸಿದ್ದರು.
ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮ
ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯರವರ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸ್ಥಳೀಯ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ, ಹೂ ಕಟ್ಟುವ ಸ್ಪರ್ಧೆ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಭಕ್ತಿಗೀತೆ ಸ್ಪರ್ಧೆ, ತುಳು ಭಾಷೆಯಲ್ಲಿ ಅಜ್ಜಿ ಕಥೆ ಹೇಳುವ ಸ್ಪರ್ಧೆ ನಡೆಯಿತು.