ಎಸ್‌ಡಿಪಿ ಪಂಚಕಷಾಯಂ ನೂತನ ಸೋಪ್ ಅನಾವರಣ

0

  • ಎಸ್‌ಡಿಪಿ ರೆಮಿಡೀಸ್ ಆಂಡ್ ರೀಸರ್ಚ್ ಸೆಂಟರ್‌ನ ಹೊಸ ಉತ್ಪನ್ನ

ಪುತ್ತೂರು: ಮುಂಡೂರು ಉದಯಗಿರಿ ಎಸ್‌ಡಿಪಿ ರೆಮೆಡೀಸ್ ಆಂಡ್ ರಿಸರ್ಚ್ ಸೆಂಟರ್ ಉತ್ಪಾದಿಸಿದ ಪಂಚ ಕಷಾಯಂ ನೂತನ ಸೋಪ್ ಆ. 31ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಕಾರ್ಯಕ್ರಮವನ್ನು ಸುಶ್ರುತ ಆಸ್ಪತ್ರೆಯ ಡಾ. ರವಿಶಂಕರ್ ಪೆರ್ವಾಜೆ ಉದ್ಘಾಟಿಸಿದರು 

ಪಂಚ ಕಷಾಯಂ ಅನ್ನು ಅನಾವರಣ ಮಾಡಿ ಮಾತನಾಡಿದ ಡಾ. ನರಸಿಂಹ ಶರ್ಮಾ ಕೆ., ಚರ್ಮದ ಆರೈಕೆ, ಶುಚಿತ್ವಕ್ಕೆ, ಮಾಯಿಶ್ಚರೈಸ್ ಹಾಗೂ ಬಿಸಿಲಿನಿಂದ ಚರ್ಮದ ರಕ್ಷಣೆಗೆ ಇಂದು ಎಲ್ಲರೂ ಪ್ರಾಮುಖ್ಯತೆ ನೀಡುತ್ತಾರೆ. ಇದಕ್ಕೆ ಪೂರಕವಾಗಿ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್‌ನ ಡಾ. ಹರಿಕೃಷ್ಣ ಪಾಣಾಜೆ ಅವರು ಎಸ್‌ಡಿಪಿ ಪಂಚ ಕಷಾಯಂ ಸೋಪನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ಸೋಪ್ ಗುಣಮಟ್ಟದಿಂದ ಕೂಡಿದ್ದು, ಪರಿಶುದ್ಧತೆಗೂ ಒತ್ತು ನೀಡಲಾಗಿದೆ. ಡಾ. ಹರಿಕೃಷ್ಣ ಪಾಣಾಜೆ ಎಂದರೆ ಪರಿಶುದ್ಧತೆಗೆ ಇನ್ನೊಂದು ಹೆಸರು. ಆದ್ದರಿಂದ ಅವರು ತಯಾರಿಸಿರುವ ಎಸ್‌ಡಿಪಿ ಪಂಚ ಕಷಾಯಂ ಪರಿಶುದ್ಧವಾಗಿಯೇ ಇರುತ್ತದೆ. ಈ ಉತ್ಪನ್ನ ಜನರಿಗೆ ಆಪ್ತವಾಗಿ, ಪ್ರತಿಯೊಬ್ಬರಿಗೂ ತಲುಪುತ್ತದೆ. ಮಾತ್ರವಲ್ಲ, ಚೌತಿಯ ದಿನದಂದೇ ಈ ಉತ್ಪನ್ನವನ್ನು ಅನಾವರಣಗೊಳಿಸಿರುವುದರಿಂದ ಹೆಸರುವಾಸಿಯಾಗುತ್ತದೆ ಎಂದು ಶುಭಹಾರೈಸಿದರು.

ಎಸ್‌ಡಿಪಿ ಪಂಚ ಕಷಾಯಂ ಪ್ರಯೋಜನಕಾರಿ:
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುತ್ತೂರು ಸುಶ್ರುತ ಆಸ್ಪತ್ರೆಯ ಡಾ. ರವಿಶಂಕರ್ ಪೆರ್ವಾಜೆ, ೨ ಸಾವಿರ ವರ್ಷಗಳ ಹಿಂದೆಯೇ ಸುಶ್ರುತ ಸಂಹಿತೆಯಲ್ಲಿ ಸೂಕ್ಷ್ಮಾಣು, ಕ್ರಿಮಿಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದಕ್ಕೆ ಕ್ಷಾರೋಧಕ ಎಂಬ ಪರಿಹಾರವನ್ನು ಅಲ್ಲಿ ನೀಡಿದ್ದಾರೆ. ಸಂಸ್ಕೃತ ಶಬ್ದ ಕ್ಷಾರೋಧಕ ಎಂದರೆ ಸೋಪ್ ಎಂದರ್ಥ. ಮಾಯಿಶ್ಚರೈಸ್‌ಗೆ ಸೋಪ್ ಅಥವಾ ಕ್ಷಾರೋಧಕ ತುಂಬಾ ಅಗತ್ಯ. ಆದ್ದರಿಂದ ಎಸ್‌ಡಿಪಿ ಪಂಚ ಕಷಾಯಂ ಜನರಿಗೆ ತುಂಬಾ ಪ್ರಯೋಜನಕಾರಿ ಉತ್ಪನ್ನವಾಗುತ್ತದೆ. ಇದು ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿ, ಪುತ್ತೂರಿಗೂ ಕೀರ್ತಿ ತರುವಂತಾಗಲಿ ಎಂದು ಶುಭಹಾರೈಸಿದರು.

ಎಸ್‌ಡಿಪಿ ಪಂಚಕಷಾಯಂ ಅನ್ನು ಡಾ. ನರಸಿಂಹ ಶರ್ಮಾ ಕೆ. ಅನಾವರಣಗೊಳಿಸಿದರು

ಔಷಧೀಯ ಸಾಬೂನು ಎಸ್‌ಡಿಪಿ ಪಂಷಕಷಾಯಂ:
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ವರ್ಷಕ್ಕೆ ೨೦೦ಕ್ಕೂ ಅಧಿಕ ಔಷಧಿಗಳನ್ನು ತಯಾರಿಸುತ್ತದೆ. ಎಲ್ಲರಿಗೂ ನಿತ್ಯವೂ ಅಗತ್ಯವಿರುವ ಒಂದು ಪರಿಪೂರ್ಣ ಸಾಬೂನನ್ನು ಸಮಾಜಕ್ಕೆ ನೀಡಬೇಕೆಂಬ ಉದ್ದೇಶದಿಂದ ಎಸ್‌ಡಿಪಿ ಪಂಚ ಕಷಾಯಂ ಸೋಪನ್ನು ಪರಿಚಯಿಸಲಾಗುತ್ತಿದೆ. ಸಾಮಾನ್ಯವಾಗಿ ಔಷಧಿಯುಕ್ತ ಸಾಬೂನು ಬಳಕೆಯಿಂದ ಸಣ್ಣ ಪುಟ್ಟ ಚರ್ಮ ರೋಗಗಳು ತಡೆಗಟ್ಟಲ್ಪಡುತ್ತದೆ. ಆದರೆ ಚರ್ಮದ ಕೆಲವು ತೊಂದರೆ ಇರುವವರಿಗೆ, ಕೂದಲು ಉದುರುವವರಿಗೆ, ತಲೆಹೊಟ್ಟು ಇರುವವರಿಗೆ ಅಗತ್ಯವಾಗಿ ಔಷಧಿಯ ಸಾಬೂನು ಬೇಕು. ಅಲ್ಲದೇ, ಜನರು ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್‌ನ ಮೇಲೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಆದ್ದರಿಂದ ನಾವು ಹೊಸ ಉತ್ಪನ್ನವನ್ನು ತಯಾರಿಸಿ ಕೊಡುವಾಗ ಅದು ಉತ್ತಮವಾಗಿರಲೇಬೇಕು ಎಂದರು.

ಮೇಘನಾ ಪಾಣಾಜೆ ಪ್ರಾರ್ಥಿಸಿದರು. ರೂಪಲೇಖಾ ಅವರು ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಾಮ್‌ನಾಥ್ ವಂದಿಸಿದರು.

ಎಸ್‌ಡಿಪಿ ಪಂಚ ಕಷಾಯಂ
ಅಶ್ವತ್ತ, ಉದುಂಬರ, ನೈಗ್ರೋದ, ಫ್ಲಕ್ಷ ಹಾಗೂ ಕಹಿ ಬೇವು ಇದರ ಕಷಾಯ ಹಾಗೂ ಕಹಿ ಬೇವಿನ ತೈಲದೊಂದಿಗೆ ತಯಾರಿಸಿದ ವಿಶಿಷ್ಟ ಸಾಬೂನು ಎಸ್‌ಡಿಪಿ ಪಂಚ ಕಷಾಯಂ. ಇದು ಒಂದು ಪರಿಪೂರ್ಣ ಸಾಬೂನು ಆಗಿದೆ. ಈ ೫ ಮರದ ತೊಗಟೆಯ ಕಷಾಯ ಬ್ಯಾಕ್ಟೀರಿಯಾ ನಾಶ ಮಾಡುತ್ತದೆ, ಗಾಯ ಒಣಗಿಸುತ್ತದೆ, ಚರ್ಮದ ಊತವನ್ನು ಕಡಿಮೆ ಮಾಡುತ್ತದೆ, ಮಾಂಸ ಖಂಡಗಳ ನೋವು ಕಡಿಮೆ ಮಾಡುತ್ತದೆ, ತುರಿಕೆ ಕಡಿಮೆ ಮಾಡುವ ಗುಣ ಹೊಂದಿದೆ. ಕಹಿ ಬೇವಿನ ಎಣ್ಣೆ ಉತ್ತಮ ಕ್ರಿಮಿನಾಶಕವೆಂದು ಎಲ್ಲರಿಗೂ ತಿಳಿದಿದೆ. ಐದು ದ್ರವ್ಯ ಪಂಚ ಕಷಾಯಂ ಸಾಬೂನಿನಲ್ಲಿ ಸೇರಿರುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಈ ಸಾಬೂನು ಉತ್ತಮ ಪರಿಮಳ ಮನಸ್ಸಿಗೆ ಮುದವನ್ನು ನೀಡುತ್ತದೆ ಎಂದು ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್‌ನ ಡಾ. ಹರಿಕೃಷ್ಣ ಪಾಣಾಜೆ ವಿವರಿಸಿದರು.

LEAVE A REPLY

Please enter your comment!
Please enter your name here