ಪ್ರಧಾನಿ ಮೋದೀಜಿಯವರೇ, ದೇಶಕಂಡ ಶ್ರೇಷ್ಠ ಪ್ರಧಾನಿ ನೀವು, ಹಳ್ಳಿಯಿಂದ ಡೆಲ್ಲಿಗೆ ಗ್ರಾಮ ಸ್ವರಾಜ್ಯದ ಆಡಳಿತ ನೀಡಿ ಲಂಚ, ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಮಹಾತ್ಮಗಾಂಧಿಯಂತೆ ಜಗತ್ತಿಗೆ ಶ್ರೇಷ್ಠರಾಗಿರಿ

0

ನಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ಪುರಾವೆ ಕೇಳುತ್ತಿದೆ, ಮೋಹನ್ ದಾಸ್ ಪೈಯವರ ದೂರು ಸಾಲದೇ ?, ನಿಮ್ಮನ್ನು ನೋಡಲು ಇಂದು ಬರುವ ಲಕ್ಷಾಂತರ ಅಭಿಮಾನಿಗಳನ್ನು ಕೇಳಿ – ಪುರಾವೆ ನೀಡುತ್ತಾರೆ

ಮಾನ್ಯ ಮೋದೀಜಿಯವರೇ… ಆ.29ರ ಪತ್ರಿಕೆಯಲ್ಲಿ ಸರ್ಕಾರದ ಶೇ.40% ಭ್ರಷ್ಟಾಚಾರದ ವಿಷಯ ಪ್ರಸ್ತಾಪಿಸುತ್ತಾ ಲಂಚ, ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸಲು ನಿಮ್ಮಿಂದ ಖಂಡಿತ ಸಾಧ್ಯ ಎಂಬ ನೆಲೆಯಲ್ಲಿ ಲೇಖನವನ್ನು ಬರೆದಿದ್ದೆ. ಲಂಚ, ಭ್ರಷ್ಟಾಚಾರಕ್ಕೆ ಬೇಕಾದ ಪುರಾವೆಯನ್ನು ನಾನು ಕೊಡುತ್ತೇನೆ, ಸರ್ಕಾರಿ ಕಚೇರಿಗಳ ಕಂಬ ಕಂಬಗಳನ್ನು, ಡೆಸ್ಕ್‌ಗಳನ್ನು, ಜನಸಾಮಾನ್ಯರನ್ನೂ ವಿಚಾರಿಸಿದರೆ ಯಾರ‍್ಯಾರಿಗೆ ಎಷ್ಟೆಷ್ಟು ಎಂಬ ಪಟ್ಟಿ ಸಿಗುತ್ತದೆ ಎಂದು ಹೇಳಿದ್ದೆ. ಆದರೂ ನಮ್ಮ ರಾಜ್ಯಸರ್ಕಾರ ಲಂಚ, ಭ್ರಷ್ಟಾಚಾರ ನಡೆಯುತ್ತಲೇ ಇಲ್ಲ, ದೂರು ಕೊಟ್ಟವರು ಷಡ್ಯಂತ್ರ ಮಾಡುತ್ತಿದ್ದಾರೆ, ಕಾಂಗ್ರೆಸ್ ಅಥವಾ ಯಾವುದೇ ಪಕ್ಷದ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ ಹೆದರಿಸುತ್ತಿದ್ದಾರೆ, ದಾರಿ ತಪ್ಪಿಸುತ್ತಿದ್ದಾರೆ. ನಿಮಗೆ ನೇರವಾಗಿ ದೂರುಗಳು ಬಂದಿದ್ದರೂ ಹೆದರದೇ ತಮ್ಮ ಹಿಂದಿನ ಕಾರ್ಯಾಚರಣೆಯನ್ನೇ ಮುಂದುವರಿಸುತ್ತಿದ್ದಾರೆ. ಇತ್ತೀಚೆಗೆ ನೀವು ಬೆಂಗಳೂರು, ಮೈಸೂರಿಗೆ ಬಂದಿದ್ದಾಗ ರಸ್ತೆಗಳಲ್ಲಿ ಎಷ್ಟೋ ಸಮಯದಿಂದ ಇದ್ದ, ಜನರ ಜೀವ ತೆಗೆದಿದ್ದ ಗುಂಡಿಗಳಿಗೆ ಡಾಂಬರು ಹಾಕಿ ಮುಚ್ಚಿದ್ದಾರೆ. ನೀವು ಹೋದ ಕೂಡಲೇ ಅದು ಎದ್ದು ಹೋಗಿದೆ. ಈಗ ಮಂಗಳೂರಿಗೆ ಬರುವಾಗ ಹಾಗೆಯೇ ಕೂಳೂರು ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆ. ಅದು ಎಷ್ಟು ದಿವಸ ಮುಚ್ಚಿರುತ್ತದೆ ಎಂದು ಕಾದುನೋಡಬೇಕಷ್ಟೆ.

ನಿಮ್ಮ ಕಡು ಅಭಿಮಾನಿ ಮತ್ತು ಬೆಂಬಲಿಗರಾಗಿರುವ ಉದ್ಯಮಿ ಟಿ. ಮೋಹನ್ ದಾಸ್ ಪೈಯವರು ಬೆಂಗಳೂರಿನಲ್ಲಿಯ ರಸ್ತೆಯ ಅವ್ಯವಸ್ಥೆಯ ಬಗ್ಗೆ ಮತ್ತು ಅದಕ್ಕೆ ಕಾರಣವಾಗಿರುವ ಭ್ರಷ್ಟಾಚಾರದ ಬಗ್ಗೆ ಈ ಹಿಂದೆ ಮಾಧ್ಯಮಗಳಲ್ಲಿ ಹೇಳಿದ್ದಾರೆ. ಅದು ಕಿವುಡು ಕಿವಿಗಳಿಗೆ ಬಿದ್ದಿರುವುದರಿಂದ ಇದೀಗ ನೇರವಾಗಿ ಅದರ ಬಗ್ಗೆ ಪ್ರಧಾನಿಯಾದ ತಮಗೆ ಬರೆದಿದ್ದಾರೆ. ಅದನ್ನು ಸರಿಪಡಿಸಲು ತಾವೇ ಮುಂದೆ ಬರಬೇಕೆಂದು ಆಗ್ರಹಿಸಿದ್ದಾರೆ.

ಮೋಹನ್ ದಾಸ್ ಪೈಯವರಲ್ಲಿ ಈ ಸರ್ಕಾರ ಪುರಾವೆ ಕೇಳುವುದಿಲ್ಲ. ಅವರನ್ನು ಕಾಂಗ್ರೆಸ್ ಏಜೆಂಟರು ಎಂದು ಹೇಳುವುದಿಲ್ಲ. ಯಾಕೆಂದರೆ ಅದನ್ನು ಯಾರೂ ನಂಬುವುದಿಲ್ಲ. ಆದರೆ ಅವರ ದೂರಿಗೆ ಮೂರುಕಾಸಿನ ಬೆಲೆಕೊಡದೇ ಅಸಡ್ಡೆ ಮಾಡುತ್ತಾರೆ. ಕಾರಣವೇನೆಂದರೆ ಎಷ್ಟೇ ಭ್ರಷ್ಟಾಚಾರ ಮಾಡಿದರೂ ಮುಂದಿನ ಚುನಾವಣೆಯಲ್ಲಿ ಅವರಿಗೆ ನಿಮ್ಮ ಹೆಸರಿನಲ್ಲಿ ಓಟು ಸಿಕ್ಕಿಯೇ ಸಿಗುತ್ತದೆ, ಗೆಲ್ಲುವುದು ಗ್ಯಾರಂಟಿ ಎಂದು ತಿಳಿದಿದೆ. ನಾನಿಲ್ಲಿ ಮೋಹನ್ ದಾಸ್ ಪೈಯವರನ್ನು ನೇರವಾಗಿ ಕೇಳಬಯಸುತ್ತೇನೆ. ಅಷ್ಟೊಂದು ಸಾಮರ್ಥ್ಯವಿರುವ, ಮೀಡಿಯಾಗಳ ಬೆಂಬಲವಿರುವ, ಸಾರ್ವಜನಿಕ ಮುಖವಾಣಿಯಾಗಿರುವ ನಿಮ್ಮ ಮಾತನ್ನು ಸ್ಥಳೀಯ ಕಾರ್ಪೊರೇಟರುಗಳು, ಶಾಸಕರು, ಸಂಸದರು ಕೇಳುವುದಿಲ್ಲ ಯಾಕೆ? ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳುವುದು ಬಿಟ್ಟು ಪ್ರಧಾನಿಯಾದ ನಿಮಗೆ ನೇರವಾಗಿ ಬರೆಯಬೇಕಾದ ದರ್ದು ಪರಿಸ್ಥಿತಿ ರಾಜ್ಯದಲ್ಲಿ ಉಂಟಾಗಿದೆಯೇ?

ಎಷ್ಟೇ ಲಂಚ, ಭ್ರಷ್ಟಾಚಾರ ಮಾಡಿದರೂ ಸೀಟು ಸಿಕ್ಕಿದರೆ ನಿಮ್ಮ ಹೆಸರಿನಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ಅವರಲ್ಲಿದೆ

ಮೋಹನ್ ದಾಸ್ ಪೈಯವರು ಸ್ಥಳೀಯ ಪ್ರತಿನಿಧಿಗಳಿಗೆ, ಶಾಸಕರಿಗೆ, ಸಂಸದರಿಗೆಂದು ಓಟು ಕೊಟ್ಟಿರುವುದಿಲ್ಲ. ಮೋಹನ್ ದಾಸ್ ಪೈಯವರು ಪ್ರಧಾನಿಯಾದ ಮೋದಿಯವರಿಗೇ ಓಟು ಎಂದು ಅವರಿಗೆಲ್ಲಾ ಓಟು ನೀಡಿದ್ದಾರೆ, ಗೆಲ್ಲಿಸಿದ್ದಾರೆ. ಮುಂದಿನ ಸಲವೂ ಅನಿವಾರ್ಯವಾಗಿ ಭ್ರಷ್ಟಾಚಾರ ಮಾಡಿದ ಅದೇ ಪ್ರತಿನಿಧಿಗಳನ್ನು ತಾವು ಓಟಿಗೆ ನಿಲ್ಲಿಸಿದರೆ ಪುನಃ ಆ ಪ್ರತಿನಿಧಿಗಳನ್ನು ಮೋಹನ್ ದಾಸ್ ಪೈಯವರಂತಹ ರೋಷವುಳ್ಳ ಸಾತ್ವಿಕರು ಓಟು ಹಾಕಿ ಗೆಲ್ಲಿಸುತ್ತಾರೆ, ಯಾಕೆ ಎಂದು ಹೇಳಬೇಕಾಗಿಲ್ಲವಲ್ಲ. ಮೋಹನ್ ದಾಸ್ ಪೈಯವರಂತಹ ಪ್ರಮುಖರು ನಿಮ್ಮನ್ನು ನೇರವಾಗಿ ಸಂಪರ್ಕಿಸಬಹುದು. ಆದರೆ ನೀವು ಪ್ರತಿನಿಧಿಸುವ ಕ್ಷೇತ್ರದ ಮತದಾರರನ್ನು ಬಿಟ್ಟು ದೇಶದ 130 ಕೋಟಿ ಜನರು ಅವರಿಗೆ ಅನ್ಯಾಯವಾದಾಗ ಅವರ ಪ್ರತಿನಿಧಿಗಳು, ಶಾಸಕರು, ಸಂಸದರೂ ಕೆಲಸ ಮಾಡದಿದ್ದಾಗ ಭ್ರಷ್ಟಾಚಾರ ಮಾಡುವಾಗ ನಿಮ್ಮನ್ನು ತಲುಪಲು ಸಾಧ್ಯವೇ? ನಿಮಗೆ ಬರೆಯಲು ಸಾಧ್ಯವೇ? ಅದು ಸಾಧ್ಯವಿಲ್ಲವೆಂದಲ್ಲ. ಅದರ ಅಗತ್ಯ ಬರಬಾರದು. ಯಾಕೆಂದರೆ ನಮ್ಮದು ಪಾರ್ಲಿಮೆಂಟರಿ ಪ್ರಜಾಪ್ರಭುತ್ವ. ನಾವು ನಮ್ಮ ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕು ಅವರು ನಿಮ್ಮನ್ನು ಪ್ರಶ್ನಿಸಬೇಕು. ಈ ಮೇಲಿನ ಕಾರಣಕ್ಕೆ ನಾವು ಆರಿಸಿದ ನಮ್ಮ ಜನಪ್ರತಿನಿಧಿಗಳು ನಮ್ಮ ಸೇವಕರಾಗಿ ಕೆಲಸ ಮಾಡಬೇಕು. ನಿಮ್ಮ ಸೇವೆಯ ನೆಪದಲ್ಲಿ ನಮ್ಮನ್ನು ಕಡೆಗಣಿಸಬಾರದು ಎಂಬುದನ್ನು ಪ್ರತಿಪಾದಿಸಲು ನಿಮ್ಮ ಮತ್ತು ರಾಹುಲ್ ಗಾಂಧಿಯವರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು  ಬಂದಿದ್ದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ನಾನು ಕೂಡ ಈಗ ಮೋಹನ್ ದಾಸ್ ಪೈಯವರಂತೆ ನಿಮ್ಮನ್ನೇ ಕೇಳುವಂತೆ, ನಿಮಗೆ ಮೊರೆಹೋಗುವಂತೆ ಜನರಿಗೆ ಕರೆ ಕೊಡುತ್ತಿದ್ದೇನೆ.

ನೀವು ಹೇಗಿದ್ದರೂ ಇಂದು ಮಂಗಳೂರಿಗೆ ಬರುತ್ತಿದ್ದೀರಿ. ನಿಮ್ಮ ಲಕ್ಷಾಂತರ ಅಭಿಮಾನಿಗಳು, ಕಾರ್ಯಕರ್ತರು ನಿಮ್ಮನ್ನು ನೋಡಲು ನಿಮ್ಮ ಮಾತು ಕೇಳಲು ಅಲ್ಲಿಗೆ ಬರುತ್ತಿದ್ದಾರೆ. ಅವರು ಯಾರೂ ಇತರ ಪಕ್ಷಗಳ ಬೆಂಬಲಿಗರಲ್ಲ. ಷಡ್ಯಂತರ ಮಾಡುವವರೂ ಅಲ್ಲ. ನೀವು ಅವರೊಂದಿಗೆ ರಾಜ್ಯ ಸರಕಾರದ, ಜನಪ್ರತಿನಿಧಿಗಳ, ಇಲಾಖೆಗಳ ಲಂಚ, ಭ್ರಷ್ಟಾಚಾರದ ಅನುಭವವನ್ನು ಅದರಿಂದ ಅವರಿಗೆ ಆಗಿರುವ ತೊಂದರೆಗಳನ್ನು ಕೇಳಿನೋಡಿ-ಪುರಾವೆಗಳೊಂದಿಗೆ ನಿಮಗೆ ವಿವರ ನೀಡುತ್ತಾರೆ ಎಂದು ಖಡಾಖಂಡಿತವಾಗಿ ಹೇಳಬಲ್ಲೆ.

ದೇಶ ಲಂಚ, ಭ್ರಷ್ಟಾಚಾರ ಮುಕ್ತವಾದರೆ ನಿಮ್ಮದು ಜಗತ್ತಿಗೇ ಶ್ರೇಷ್ಠ ಸಾಧನೆ, ಇಲ್ಲದಿದ್ದರೆ ಕಪ್ಪು ಚುಕ್ಕೆ ಉಳಿಯಬಹುದು

ಮೋದೀಜಿಯವರೇ… ನೋಟ್ ಬ್ಯಾನ್ ಮತ್ತು ಕೊರೋನಾ ಬಂದ್‌ನಿಂದ ಜನತೆಗೆ ತೊಂದರೆಯಾಗಿದ್ದರೂ ನೋಟ್ ಬ್ಯಾನ್‌ನ ಉದ್ದೇಶ ಜನತೆಯನ್ನು , ದೇಶವನ್ನು ಭಯೋತ್ಪಾದನೆಯಿಂದ ಮತ್ತು ಕಪ್ಪುಹಣದಿಂದ ರಕ್ಷಿಸುವುದು ಆಗಿತ್ತು. ಕೊರೋನಾ ಬಂದ್‌ಗೆ ನೀವು ನೀಡಿದ ಕರೆ ಕಾಯಿಲೆಯಿಂದ ಜನತೆಯನ್ನು ಬಚಾವ್ ಮಾಡಲು ಆಗಿತ್ತು. ನೀವು ಎಂದೂ ಜನತೆಗೆ ತೊಂದರೆ ಕೊಡುವ ಉದ್ದೇಶದಿಂದ ಮಾಡಿರುವುದಿಲ್ಲ ಎಂಬ ನಿಮ್ಮ ಮೇಲಿನ ಜನರ ವಿಶ್ವಾಸ ನಿಮ್ಮನ್ನು, ನಿಮ್ಮ ಪಕ್ಷವನ್ನು ಪುನಃ ಗೆಲ್ಲಿಸಲು ಕಾರಣವಾಗಿದೆ. ಜನತೆಗೆ ತೊಂದರೆಯಾಗಿದೆ ಎಂಬ ಕಾರಣ ನೀಡಿ ಆ ವಿಶ್ವಾಸವನ್ನು ಅಲುಗಾಡಿಸಲು ವಿರೋಧ ಪಕ್ಷಗಳು ಪ್ರಯತ್ನಿಸಿವೆ. ಆದರೆ ಸಾಧ್ಯವಾಗದಿದ್ದುದರಿಂದ ವಿರೋಧ ಪಕ್ಷಗಳು ಕಂಗೆಟ್ಟಿವೆ, ಸೋಲನ್ನು ಅಪ್ಪಿವೆ ಎಂದು ಎಲ್ಲರಿಗೂ ತಿಳಿದಿದೆ. ನಿಮ್ಮ ಮೇಲೆ ಜನರ ಅಂತಹ ವಿಶ್ವಾಸ ಮಾತ್ರವಲ್ಲ ನೀವು ಕೈಗೊಂಡಿರುವ ಕೆಲವು ಯೋಜನೆಗಳು, ನಿರ್ಣಯಗಳು ರಾಷ್ಟ್ರವನ್ನು ವಿಶ್ವಗುರು ಮಾಡುತ್ತದೆ ಎಂಬ ನಂಬಿಕೆ ನಿಮ್ಮನ್ನು ಭಾರತ ದೇಶದ ಶ್ರೇಷ್ಠ ನಾಯಕರೆಂದು, ವಿಶ್ವದ ನಾಯಕತ್ವ ವಹಿಸಿಕೊಳ್ಳಬಲ್ಲವರೆಂದು ತೋರಿಸಿಕೊಟ್ಟಿದೆ. ನೀವು ಕೊಡುವ ಯಾವುದೇ ಕರೆಯನ್ನು ಜನರು ಪಾಲಿಸುತ್ತಾರೆ. ಚಪ್ಪಾಳೆ ತಟ್ಟಿ, ದೀಪ ಹಚ್ಚುವ ಮೂಲಕ ಜನರು ಅದನ್ನು ತೋರಿಸಿಕೊಟ್ಟಿದ್ದಾರೆ. ಹೀಗಿರುವಾಗ ತಾವು ಲಂಚ, ಭ್ರಷ್ಟಾಚಾರದ ವಿರುದ್ಧ ಕೆಂಪುಕೋಟೆಯಿಂದ ಘೋಷಣೆ ಕೂಗಿದ್ದರೂ ನಿಮ್ಮ ಆಡಳಿತದ ಕರ್ನಾಟಕ ರಾಜ್ಯದಲ್ಲಿ ಅದು ಯಾಕೆ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ಯಕ್ಷಪ್ರಶ್ನೆಯಲ್ಲವೇ?! ನಿಮ್ಮ ಅಭಿಮಾನಿಯೂ, ಉದ್ಯಮಿಯೂ ಆಗಿರುವ ಮೋಹನ್ ದಾಸ್ ಪೈಯವರ ಮೊರೆ ಇಲ್ಲಿಯ ಪರಿಸ್ಥಿತಿ ಅದೆಷ್ಟು ಹದಗೆಟ್ಟಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಲ್ಲವೇ? ಮೋದೀಜಿಯವರೇ… ನೀವು ಬಿಡುವಿಲ್ಲದೇ ರಾತ್ರಿ-ಹಗಲು ದುಡಿಯುತ್ತಿರುವುದು ದೇಶದ ಜನತೆಗೆ ಗೊತ್ತಿದೆ. ನಿಮ್ಮ ಎಲ್ಲಾ ಸಾಧನೆಗಳ ಪಟ್ಟಿ ಮಾಡಿದರೆ ನೀವು ದೇಶಕಂಡ ಶ್ರೇಷ್ಠ ಪ್ರಧಾನಿ ಎಂದೇ ಪರಿಗಣಿಸಲ್ಪಡುತ್ತೀರಿ. ಆದರೆ ನೀವು ಘೋಷಿಸಿದ ನಂತರವೂ ನಮ್ಮ ದೇಶ ಭ್ರಷ್ಟಾಚಾರ ಮುಕ್ತವಾಗದಿದ್ದರೆ, ಜಾಸ್ತಿ ಆಗುತ್ತಾ ಹೋದರೆ ಅದು ನಿಮ್ಮ ಸಾಧನೆಯಲ್ಲಿ ಕಪ್ಪುಚುಕ್ಕೆಯಾಗಿ ಚರಿತ್ರೆಯಲ್ಲಿ ಉಳಿಯಬಹುದು.

ನಿಮ್ಮಿಂದ ಅಧಿಕಾರ ಪಡೆದು ಲಂಚ, ಭ್ರಷ್ಟಾಚಾರ ಮಾಡುವ ಪಕ್ಷದವರನ್ನು ಶಿಕ್ಷಿಸಬೇಕು

ನಿಮ್ಮಿಂದ ಅಧಿಕಾರ ಪಡೆದು ನಿಮ್ಮ ಬೆನ್ನಹಿಂದೆ ಜನವಿರೋಧಿ ಕೆಲಸ ಮಾಡುತ್ತಿರುವವರ ಮೇಲೆ ತಾವು ಕ್ರಮ ತೆಗೆದುಕೊಳ್ಳಲೇ ಬೇಕು. ಅದನ್ನು ವಿರೋಧ ಪಕ್ಷದವರು ಮಾಡುವ ಭ್ರಷ್ಟಾಚಾರಕ್ಕಿಂತ ಗಂಭೀರವಾಗಿ ಪರಿಗಣಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ನಿಮ್ಮ ಆಡಳಿತದಲ್ಲಿ ಗೃಹ ಸಚಿವ ಅಮಿತ್ ಶಾ ರವರನ್ನು ಹೊರತುಪಡಿಸಿದರೆ ನಿಮಗೆ ನೇರವಾಗಿ ವಿಷಯವನ್ನು ಹೇಳುವ, ಚರ್ಚಿಸುವ ಶಕ್ತಿ, ಸಾಮರ್ಥ್ಯ ಯಾರಿಗೂ ಇಲ್ಲ. ನಮ್ಮ ಮುಖ್ಯಮಂತ್ರಿ ಸೇರಿದಂತೆ ಕರ್ನಾಟಕದ ಯಾವುದೇ ಮಂತ್ರಿಗಳಿಗೂ ನಿಮ್ಮ ಎದುರು ನಿಲ್ಲುವ, ಹೇಳುವ ಶಕ್ತಿಯೂ ಇಲ್ಲ. ಅದಕ್ಕಾಗಿ ಹಿಂದಿನ ಕಾಲದಲ್ಲಿ ರಾಜರುಗಳು ಮಾಡಿದಂತೆ, ರಾಜ ಅಕ್ಬರ್ ಮತ್ತು ಮಂತ್ರಿ ಬೀರಬಲ್ ಮಾರುವೇಷ ಧರಿಸಿ ಜನರ ನಡುವೆ ಹೋಗಿ ತಿಳಿದುಕೊಂಡಂತೆ ಮಾಡಬಹುದಿತ್ತೋ ಏನೋ? ಸೆಕ್ಯುರಿಟಿ ಕಾರಣಗಳಿಗಾಗಿ ಮತ್ತು ಸಮಯದ ಅಭಾವದಿಂದಾಗಿ ತಮಗೆ ಆ ರೀತಿ ಮಾಡಲು ಸಾಧ್ಯವಾಗದಿದ್ದರೂ ತಾವು ಮೋಹನ್ ದಾಸ್ ಪೈ ಅಂತಹವರಿಂದ, ಇತರರಿಂದ ರಾಜ್ಯದ ಬಗ್ಗೆ ತಿಳಿದುಕೊಂಡು ರಾಜ್ಯವನ್ನು ಸರಿದಾರಿಗೆ ತರಬೇಕೆಂದು ವಿನಂತಿಸುತ್ತಿದ್ದೇನೆ. ತಾವುಗಳು ಸೂಕ್ತ ಕ್ರಮಕೈಗೊಂಡು ನಿಮ್ಮ ಮೇಲೆ ವಿಶ್ವಾಸವಿರಿಸಿರುವ 130 ಕೋಟಿ ಜನರ ಕಣ್ಣೀರು ಒರೆಸಿ, ಸಂತೋಷದ ಹೊಳೆ ಹರಿಸಲಿಕ್ಕಾಗಿ ‘ಮಹಾತ್ಮ ಗಾಂಧಿಯವರ ಆಶಯದ ಹಳ್ಳಿಯಿಂದ ಡೆಲ್ಲಿಗೆ, ಗ್ರಾಮಸ್ವರಾಜ್ಯದ ಆಡಳಿತ’ವನ್ನು ತಂದು ನಮ್ಮ ದೇಶವನ್ನು ಲಂಚ, ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡುವ ಮೂಲಕ ಜಗತ್ತಿನ ಶ್ರೇಷ್ಠರಲ್ಲಿ ಓರ್ವನಾಗಬೇಕೆಂದು ಹಾರೈಸುತ್ತಿದ್ದೇನೆ. ಅದು ನಿಮಗೆ ಸಾಧ್ಯವಿದೆ ಎಂದು ಖಂಡಿತಾ ನಂಬಿದ್ದೇನೆ.

ಲಂಚ, ಭ್ರಷ್ಟಾಚಾರ ಮುಕ್ತ ಆಂದೋಲನವನ್ನು ರಾಜ್ಯಕ್ಕೆ ವಿಸ್ತರಿಸಲಿದ್ದೇವೆ

ನಾನು 37 ವರ್ಷಗಳ ಹಿಂದೆ ಸುಳ್ಯದಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿದ್ದೆ. ಜನರು ಆಗಿನ ಸಬ್‌ಇನ್ಸ್‌ಪೆಕ್ಟರ್ ಕಾಂಬ್ಲೆಯವರನ್ನು ಅತೀ ದೊಡ್ಡ ಭ್ರಷ್ಟಾಚಾರಿಯಾಗಿ ಗುರುತಿಸಿದ್ದರು. ಅದರ ಪರಿಣಾಮವಾಗಿ ಪೊಲೀಸ್ ಕೇಸುಗಳನ್ನು ಮತ್ತು ತೊಂದರೆಗಳನ್ನು ಎದುರಿಸಬೇಕಾಗಿ ಬಂದಿತ್ತು. ಅದರಿಂದ ಹೊರಗೆ ಬರಲು ಮತ್ತು ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟವನ್ನು ಪ್ರಚಾರ ಮಾಡಲು ಸಂಭಾವ್ಯ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗ್ಗಡೆ, ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರವರ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೆ. ಆ ನಂತರ ಪತ್ರಿಕೆ ಪ್ರಾರಂಭಿಸಿ 37 ವರ್ಷಗಳು ಜನರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಅಂದು ಪ್ರಾರಂಭಿಸಿದ ಆಂದೋಲನವನ್ನು ಇಂದು ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಬಿಸಿ ರಾಜ್ಯ ಮತ್ತು ದೇಶದಾದ್ಯಂತ ಹರಡಲು, ಜನಜಾಗೃತಿ ಉಂಟುಮಾಡುತ್ತಿದ್ದೇನೆ. ಮುಖ್ಯವಾಗಿ ಕೃಷಿಕರ ಹಿತಾಸಕ್ತಿಯನ್ನು ಕಾಪಾಡುವ ಸ್ವಾತಂತ್ರ್ಯವನ್ನು ಘೋಷಿಸುತ್ತಿದ್ದೇವೆ. ಅದಕ್ಕೆ ನೀವು ಬೆಂಬಲ ನೀಡುತ್ತೀರಿ ಎಂಬ ಭರವಸೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ.

LEAVE A REPLY

Please enter your comment!
Please enter your name here