- ಜಾಗರಣ ವೇದಿಕೆಯಿಂದ ಸಮಾಜಮುಖಿ ಕಾರ್ಯಗಳು ನಡೆಯುತ್ತಿದೆ: ಕಡಮಜಲು ಸುಭಾಷ್ ರೈ
ಪುತ್ತೂರು: ಗಣೇಶೋತ್ಸವಕ್ಕೆ ತನ್ನದೇ ಆದ ಮಹತ್ವ ಇದೆ. ಅಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗ್ರಾಮಸ್ಥರನ್ನು ಒಟ್ಟು ಸೇರಿಸಲು ತಿಲಕರು ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಜಾರಿಗೆ ತಂದರು. ಅಂದಿನಿಂದ ಇಂದಿನ ವರೇಗೆ ದೇಶದೆಲ್ಲೆಡೆ ಸಾರ್ವಜನಿಕ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಒಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಗಣೇಶನ ಕೃಪೆಗೆ ಪಾತ್ರರಾಗಬೇಕು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ ಹೇಳಿದರು.
ಅವರು ಕೆದಂಬಾಡಿ ಗ್ರಾಮದ ತ್ಯಾಗರಾಜನಗರದಲ್ಲಿರುವ ಹಿಂದು ಜಾಗರಣ ವೇದಿಕೆಯ ವತಿಯಿಂದ ಸೆ.02 ರಂದು ನಡೆದ 20 ನೇ ವಾರ್ಷಿಕ ಸಮಾರಂಭ ಮತ್ತು ಸಾಮೂಹಿಕ ಗಣಪತಿ ಹವನ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ತ್ಯಾಗರಾಜನಗರದಲ್ಲಿರುವ ಹಿಂದು ಜಾಗರಣ ವೇದಿಕೆ ಒಂದು ಒಳ್ಳೆಯ ಸಂಘಟನೆಯಾಗಿದ್ದು ಒಂದಷ್ಟು ಒಳ್ಳೆಯ ಮನಸ್ಸುಗಳು ಈ ಸಂಘಟನೆಯಲ್ಲಿವೆ ಎಂದ ಕಡಮಜಲು ಸುಭಾಷ್ ರೈಯವರು, ಸಂಘಟನೆಯಿಂದ ಆರ್ಥಿಕ ಸಹಾಯ ಹಸ್ತಾದಂತಹ ಹಲವು ಸಮಾಜಮುಖಿ ಕಾರ್ಯಗಳು ನಡೆಯುತ್ತಿರುವುದು ಖುಷಿ ತಂದಿದೆ. ಮುಂದೆಯೂ ನನ್ನಿಂದ ಸಂಪೂರ್ಣ ಸಹಕಾರ ಜಾಗರಣ ವೇದಿಕೆಗೆ ಇದೆ ಎಂದು ಹೇಳಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಹಿಂಜಾವೇ ನಗರ ಸಂಯೋಜಕ ಸ್ವಸ್ತಿಕ್ ಮೇಗಿನಗುತ್ತು ಮಾತನಾಡಿ, ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಮಾತೆಯರು ಸೇರಿರುವ ಖುಷಿ ತಂದಿದೆ. ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ನಮ್ಮ ಸಂಸ್ಕಾರ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸ ಕೂಡ ಆಗಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ತ್ಯಾಗರಾಜನಗರ ಹಿಂಜಾವೇ ಸಂಯೋಜಕ ಸುನಿಲ್ ತ್ಯಾಗರಾಜನಗರ ಉಪಸ್ಥಿತರಿದ್ದರು. ಸೌಮ್ಯ ಕಡಮಜಲು ಸ್ವಾಗತಿಸಿದರು. ಸಹ ಸಂಯೋಜಕರಾದ ಕೇಶವ ಸ್ವಾಮಿನಗರ ಮತ್ತು ಪ್ರವೀಣ್ ಪಾಪೆಮಜಲು ಹಾಗೂ ಲೋಕೇಶ್ ಸ್ವಾಮಿನಗರ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಶಿವರಾಮ್ ಅಮೈ ವಂದಿಸಿದರು. ದಿವ್ಯ ತ್ಯಾಗರಾಜನಗರ ಕಾರ್ಯಕ್ರಮ ನಿರೂಪಿಸಿದರು. ಹಿಂಜಾವೇಯ ಸರ್ವ ಸದಸ್ಯರುಗಳು ಸಹಕರಿಸಿದ್ದರು.
ಶ್ರೀ ಗಣಪತಿ ಹವನ, ಧಾರ್ಮಿಕ/ ಆಟೋಟ ಸ್ಪರ್ಧೆಗಳು
ಅರ್ಚಕ ಪಟ್ಲಮೂಲೆ ಶ್ರೀಕೃಷ್ಣ ಉಪಾಧ್ಯಾಯರವರ ನೇತೃತ್ವದಲ್ಲಿ ಬೆಳಿಗ್ಗೆ ಸಾಮೂಹಿಕ ಶ್ರೀ ಗಣಪತಿ ಹವನ ಆರಂಭಗೊಂಡು ಮಧ್ಯಾಹ್ನ ಸಮಾಪ್ತಿಯಾಯಿತು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು ಬಳಿಕ ಕೆದಂಬಾಡಿ ಮತ್ತು ಅರಿಯಡ್ಕ ಗ್ರಾಮ ವ್ಯಾಪ್ತಿಯ ಅಂಗನವಾಡಿ ಶಾಲಾ ಮಕ್ಕಳಿಗೆ, ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ರಾತ್ರಿ ತಿಂಗಳಾಡಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣೇಶನ ಶೋಭಾಯಾತ್ರೆಯನ್ನು ಬರಮಾಡಿಕೊಂಡು ಭಕ್ತಾಧಿಗಳಿಂದ ಹಣ್ಣುಕಾಯಿ ಸಮರ್ಪಣೆ, ಮಂಗಳಾರತಿ ನಡೆಯಿತು.