ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ-ಪಂಜಿಗ ರಸ್ತೆಯ ಮೂಡಾಯೂರು ಎಂಬಲ್ಲಿ ಸ್ಥಳೀಯರು ಶ್ರಮದಾನದ ಮೂಲಕ ರಸ್ತೆ ದುರಸ್ತಿ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಲ್ಲಿ ಡಾಮಾರು ರಸ್ತೆಯನ್ನು ಅಗೆದು ಪೈಪ್ ಲೈನ್ ಹಾಕಲಾಗಿತ್ತು. ಈ ಬಾರಿ ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ಹೊಂಡ ನಿರ್ಮಾಣಗೊಂಡಿತ್ತು. ಇದರಿಂದಾಗಿ ಈ ಸ್ಥಳದಲ್ಲಿ ಅಪಘಾತ ಸಂಭವಿಸುವ ಅಪಾಯ ಇತ್ತು. ದ್ವಿಚಕ್ರ ವಾಹನ ಸವಾರರು ಸಂಚರಿಸಲು ಪರದಾಡುವಂತ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಮನಗಂಡ ಸ್ಥಳೀಯರು ಸೇರಿಕೊಂಡು ರಸ್ತೆಯನ್ನು ದುರಸ್ತಿಗೊಳಿಸುವ ಕಾರ್ಯ ಮಾಡಿದ್ದಾರೆ. ಇಂಟರ್ ಲಾಕ್ ಹಾಗೂ ಮಣ್ಣಿನಿಂದ ರಸ್ತೆಯ ಹೊಂಡವನ್ನು ಮುಚ್ಚಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಸ್ಥಳೀಯರಾದ ಬನ್ನೂರು ಗ್ರಾಮ ಪಂಚಾಯತ್ ಸದಸ್ಯ ತಿಮ್ಮಪ್ಪ ಪೂಜಾರಿ, ಶ್ರೀ ದೇವಿ ಜ್ಯುವೆಲ್ಲರ್ಸ್ ನ ರಾಜೇಶ್ ಆಚಾರ್ಯ, ಕೇಶವ, ಹರೀಶ್, ಸುರೇಶ್, ಅಭಿಷೇಕ್, ವೀಣಾ, ಉಷಾ, ಲೀಲಾವತಿ ಆರಿಗೊ,ಲೀಲಾವತಿ ಮೂಡಾಯೂರು ರಸ್ತೆ ದುರಸ್ತಿ ಕಾರ್ಯದಲ್ಲಿ ಭಾಗವಹಿಸಿದ್ದರು. ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಾ ಏಕರವರು ಶ್ರಮದಾನದ ವೇಳೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.