ಪುತ್ತೂರು:ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ತಂಡಬೈಲು ಸುರತ್ಕಲ್ ಇದರ ವತಿಯಿಂದ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಹಾಗೂ ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘ ಹಾಗೂ ಕರಿಕಥಾ ಪರಿಷತ್ ಮಂಗಳೂರು ಇದರ ಸಹಯೋಗದಲ್ಲಿ ಏಳು ದಿನಗಳ ಕಾಲ ನಡೆಯಲಿರುವ ಶೇಣಿ ಸಂಸ್ಮರಣೆ-ಹರಿಕಥಾ ಸಪ್ತಾಹದ ಉದ್ಘಾಟನೆಯು ಸೆ.5ರಂದು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.
ಹರಿಕಥಾ ಸಪ್ತಾಹವನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹರಿಕಥಾ ಸಪ್ತಾಹವು ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬರಲಿ. ಕಳೆದ ಧನುರ್ಮಾಸದಲ್ಲಿ ಪ್ರತಿ ಶನಿವಾರ ಹರಿಕಥೆ ನಡೆಸಲಾಗಿದೆ. ತನ್ನ ಪುತ್ರಿಯು ಹರಿಕಥೆ ಅಭ್ಯಾಸ ಮಾಡುತ್ತಿದ್ದು ಸಂ.ನಾ ಡಿಗರವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ತಮ್ಮ ನಿವಾಸದಲ್ಲಿ ಹರಿಕಥೆ ನಡೆಸಲು ಸಹಕಾರ ನೀಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿ ಅಂಬಿಕಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಶೇಣಿಯವರು ಯಕ್ಷಗಾನ ಕ್ಷೇತ್ರದ ಭೀಷ್ಮ. ಅವರ ಸ್ಮರಣಿಯವಾಗಿ ಕಾರ್ಯಕ್ರಮ ಮೂಡಿಬಂದಿರುವ ಅರ್ಥಪೂರ್ಣವಾಗಿದೆ. ಹರಿಕಥೆ ಹಾಗೂ ಯಕ್ಷಗಾನಗಳ ಮೂಲಕ ನಮ್ಮ ಪರಂಪರೆ ಮುಂದಿನ ಜೀವಂತವಾಗಿ ಉಳಿದುಕೊಂಡಿದೆ. ಡಿ.ಜೆ ಹಾಕಿ ಕುಣಿಯುವುದಾದರೆ ಗಣೇಶೋತ್ಸವ ಅಗತ್ಯವಿದೆಯಾ ಎಂದು ಪ್ರಶ್ನಿಸಿದ ಅವರು ಅರಣ್ಯರೋದನವಾಗಿರುವ ಪುರಾತನ ಕಲೆಗಳನ್ನು ಬಡಿದೆಬ್ಬುಸಬೇಕಾದ ಹೊಣೆ ಯುವ ಜನತೆ ಮೇಲಿದೆ ಎಂದರು.
ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಮಾತನಾಡಿ, ಪೌರಾನಿಕತೆಗಳ ಬಗ್ಗೆ ಆಳವಾದ ಜ್ಞಾನ ಪಡೆಯಲು ಹರಿಕಥೆ ಸಹಕಾರಿ. ಮನುಷ್ಯನನ್ನು ಬದಲಾವಣೆ ಮಾಡುವ ಶಕ್ತಿಯಿದೆ ಎಂದ ಅವರು ಹರಿಕಥಾ ಸಪ್ತಾಹವು ಅರ್ಥ ಪೂರ್ಣವಾಗಿ ನಡೆಯಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಚೇತನ ಆಸ್ಪತ್ರೆಯ ಡಾ.ಜೆ.ಸಿ ಅಡಿಗ ಮಾತನಾಡಿ, ಹರಿಕಥೆ ಯಕ್ಷಗಾನಗಳು ಜಿಲ್ಲೆಯಲ್ಲಿ ಬಹಳಷ್ಟು ಪ್ರಸಿದ್ದಿ ಪಡೆದಿದೆ. ಅದು ಯೋಗದ ಒಂದು ಭಾಗ. ಮನುಷ್ಯನ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿ. ದೃಶ್ಯ ಮಾಧ್ಯಮಗಳಲ್ಲಿ ಹರಿಕಥೆ, ಯಕ್ಷಗಾನಗಳನ್ನು ಅಪಹಾಸ್ಯ ಮಾಡುವವರು ಅಧಿಕ. ಹರಿಕಥೆಗಳನ್ನು ನಿತ್ಯ ಕಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನೀತಿ ಪಾಠವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶೇಣಿ ಗೋಪಾಲಕರಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ನ ಗೌರವ ಸಲಹೆಗಾರ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಮಾತನಾಡಿ, ಹರಿಕಥೆ ಮೂಲಕ ಪ್ರತಿಯೊಬ್ಬರ ಶೇಣಿ ಗೋಪಾಲಕೃಷ್ಣ ಭಟ್ ಪ್ರತಿ ಮನೆ ಮನಗಳನ್ನು ತಲುಪಿದ್ದಾರೆ. ಅವರ ಕಲೋಪಾಸನೆ ಸ್ಮರಿಸಬೇಕಾಗಿದೆ. ಜನರಲ್ಲಿ ಇನ್ನಷ್ಟು ಅಭಿಮಾನ ಮೂಡಲು ಹರಿಕಥಾ ಸಪ್ತಾಹ ಸಹಕಾರಿಯಾಗಲಿದೆ ಎಂದರು.
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ನ ಕೋಶಾಧಿಕಾರಿ ಜಿ.ಕೆ ಭಟ್ ಸೇರಾಜೆ ಸ್ವಾಗತಿಸಿದರು. ಉಪಾಧ್ಯಕ್ಷ ಮಹಾಬಲ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪಿ.ವಿ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹರಿದಾಸ ಎಚ್ ಯಜ್ಞೇಶ್ ಆಚಾರ್‌ವರು `ಬೇಡರ ಕಣ್ಣಪ್ಪ’ ಹರಿಕಥೆ ನಡೆಸಿಕೊಟ್ಟರು.
ಸಪ್ತಾಹದಲ್ಲಿ ಪ್ರತಿದಿನ ಸಂಜೆ 5 ಗಂಟೆಯಿಂದ ಹರಿಕಥೆ ನಡೆಯಲಿದ್ದು ಸೆ.6 ತ್ರಿಪುರ ಮಥನ, ಸೆ.7 ಭೂ ಕೈಲಾಸ, ಸೆ.8 ಪಾಶುಪತಾಸ್ತç, ಸೆ.9 ದಕ್ಷಧ್ವರ, ಸೆ.10ರಂದು ಸಂಜೆ 4 ಗಂಟೆಯಿಂದ ಉಪನ್ಯಾಸ-ಹರಿಭಕ್ತಿಸಾರ, 5 ಗಂಟೆಯಿಂದ ಭಕ್ತ ಮಾರ್ಕಂಡೇಯ, ಸೆ.11ರಂದು ಮಧ್ಯಾಹ್ನ 2 ಗಂಟೆಯಿಂದ ಗಿರಿಜಾ ಕಲ್ಯಾಣ ಹರಿಕಥೆ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆದು ಸಂಜೆ 5 ಗಂಟೆಯಿಂದ `ಶ್ರೀರಾಮ ವನಗಮನ’ ಯಕ್ಷಗಾನ ತಾಳೆಮದ್ದಳೆ ನಡೆಯಲಿದೆ ಎಂದು ಚಾರಿಟೇಬಲ್ ಟ್ರಸ್ಟ್ನ ಪ್ರಕಟಣೆ ತಿಳಿಸಿದೆ.