ನೆಲ್ಯಾಡಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಾಗೂ 2021-2022ನೇ ಸಾಲಿನ ಕೇಂದ್ರದ 14ನೇ ಮತ್ತು 15ನೇ ಹಣಕಾಸು ಯೋಜನೆಯಡಿ ಬಜತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾದ ಕಾಮಗಾರಿಗಳ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಸೆ.6ರಂದು ಬೆಳಿಗ್ಗೆ ಬಜತ್ತೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿದ್ದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ(ಪ್ರೌಢ) ಹರಿಪ್ರಸಾದ್ ಎಂ.,ರವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಕಾಮಗಾರಿ ನಿರ್ವಹಿಸುವ ಮೂಲಕ ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಬಹುದಾಗಿದೆ. ಫಲಾನುಭವಿಗಳು ಯೋಜನೆಯ ನಿಯಮಗಳನ್ನು ಪಂಚಾಯತ್‌ನಿಂದ ಸರಿಯಾಗಿ ತಿಳಿದುಕೊಂಡು ಕಾಮಗಾರಿ ಅನುಷ್ಠಾನಗೊಳಿಸಬೇಕು. ಈ ಯೋಜನೆಯ ಬಗ್ಗೆ ತಾವೂ ಪ್ರಯೋಜನ ಪಡೆಯುವುದರೊಂದಿಗೆ ಇತರರಿಗೂ ಪ್ರೇರಣೆ ನೀಡಬೇಕೆಂದು ಹೇಳಿದರು. ಯೋಜನೆಯ ಕಡಬ ತಾಲೂಕು ಸಂಯೋಜಕ ಪ್ರವೀಣ್‌ರವರು ಮಾಹಿತಿ ನೀಡಿ, 2021ರ ಅ.1ರಿಂದ 2022ರ ಮಾ.31ರ ತನಕದ ಅವಧಿಯಲ್ಲಿ ಬಜತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 86 ಕಾಮಗಾರಿಗಳು ಅನುಷ್ಠಾನಗೊಂಡಿದ್ದು ಎಲ್ಲವೂ ಅಚ್ಚುಕಟ್ಟಾಗಿ ನಡೆದಿವೆ ಎಂದರು. ಕೃಷಿ ಅಧಿಕಾರಿ ಟಿ.ಎನ್.ಭರಮಣ್ಣವರರವರು, ಇ-ಕೆವೈಸಿ ಹಾಗೂ ಬೆಳೆ ಸರ್ವೆ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ಪ್ರೇಮ ಬಿ., ಉಪಾಧ್ಯಕ್ಷೆ ಸ್ಮಿತಾ ಪಿ.,ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯರಾದ ಗಂಗಾಧರ ಪಿ.ಎನ್., ಮೋನಪ್ಪ ಗೌಡ ಬೆದ್ರೋಡಿ, ಗಂಗಾಧರ ಕೆ.ಎಸ್., ಭಾಗೀರಥಿ, ಪ್ರೆಸಿಲ್ಲಾ ಡಿ.ಸೋಜ, ಉಮೇಶ ಓಡ್ರಪಾಲ್ ಹಾಗೂ ಫಲಾನುಭವಿಗಳು, ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಪ್ರವೀಣ್‌ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.
34.52 ಲಕ್ಷ ರೂ.ಖರ್ಚು:
1-10-2021ರಿಂದ 31-3-2022ರ ತನಕದ ಅವಧಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಡಿ ಬಜತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 86 ಕಾಮಗಾರಿಗಳು ಅನುಷ್ಠಾನಗೊಂಡಿದೆ. ಈ ಕಾಮಗಾರಿಗಳಿಗೆ 26,75,273 ರೂ.ಕೂಲಿ ಹಾಗೂ 7,77,356 ರೂ.,ಸಾಮಾಗ್ರಿ ಮೊತ್ತ ಸೇರಿ ಒಟ್ಟು 34,52,629 ರೂ., ಪಾವತಿಯಾಗಿದೆ. 9257 ಮಾನವ ದಿನ ಸೃಜನೆಯಾಗಿದೆ ಎಂದು ತಾಲೂಕು ಸಂಯೋಜಕ ಪ್ರವೀಣ್ ಮಾಹಿತಿ ನೀಡಿದರು.
14 & 15ನೇ ಹಣಕಾಸು:
2021-22ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಡಿ 2 ಕಾಮಗಾರಿ ಅನುಷ್ಠಾನಗೊಂಡಿದ್ದು 76,673 ರೂ.,ಪಾವತಿಯಾಗಿದೆ. 15ನೇ ಹಣಕಾಸು ಯೋಜನೆಯಡಿ 24 ಕಾಮಗಾರಿ ಅನುಷ್ಠಾನಗೊಂಡಿದ್ದು 27,59,444 ರೂ.,ಪಾವತಿಯಾಗಿದೆ ಎಂದು ತಾಲೂಕು ಸಂಯೋಜಕ ಪ್ರವೀಣ್ ಮಾಹಿತಿ ನೀಡಿದರು.