- ರೂ.4.11ಲಕ್ಷ ಲಾಭ, ಶೇ.25 ಡಿವಿಡೆಂಡ್, 88 ಪೈಸೆ ಬೋನಸ್
ಪುತ್ತೂರು; ಕರ್ಕುಂಜ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ರೂ.4,11,643.43 ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಪ್ರತಿ ಲೀ.ಹಾಲಿಗೆ 81 ಪೈಸೆ ಬೋನಸ್ ನೀಡಲಾಗವುದು ಎಂದು ಸಂಘದ ಅಧ್ಯಕ್ಷ ಸರೋಜಿನಿ ಕೆ.ಎಸ್‌ರವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಿದರು.
ಸಭೆಯು ಸೆ.6ರಂದು ಸಂಘದ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷದಲ್ಲಿ ಸಂಘವು 2,42,165.8 ಲೀಟರ್ ಹಾಲನ್ನು ರೈತರಿಂದ ಸಂಗ್ರಹಿಸಿದೆ. 15,625.5 ಲೀ. ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಸ್ಥಳೀಯ ಮಾರಾಟದಿಂದ 6,88,490 ಹಾಗೂ ಒಕ್ಕೂಟಕ್ಕೆ ನೀಡದ ಹಾಲಿನಿಂದ ರೂ.72.82.375.79 ಆದಾಯ ಬಂದಿರುತ್ತದೆ ಎಂದರು.
ಬಿಎಸಿ ಸ್ಥಾಪನೆಗೆ ಅನುಮೋದನೆ:
ಸಂಘದ ವತಿಯಿಂದ ಬೃಹತ್ ಹಾಲು ಸಂಗ್ರಹಣ ಘಟಕ(ಬಿಎಂಸಿ) ಸ್ಥಾಪಿಸುವ ಯೋಜನೆಯ ಬಗ್ಗೆ ಅಧ್ಯಕ್ಷೆ ಸರೋಜಿಯವರು ಸಭೆಯಲ್ಲಿ ಮಂಡಿಸಿ, ಸದಸ್ಯರ ಅಭಿಪ್ರಾಯ ಕೇಳಿದಾಗ ಸಭೆಯಲ್ಲಿ ಸದಸ್ಯರು ಬಿಎಂಸಿ ಸ್ಥಾಪನೆಗೆ ಅನುಮೋದನೆ ನೀಡಿದರು.
ಪಶು ಆಹಾರ ಮಾಹಿತಿ:
ಕಾರ್ಯಕ್ರಮದಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿಯ ಸಂಜೀವಿನಿಯ ಯೋಜನೆಯಡಿಯಲ್ಲಿ ಜಾನುವಾರು ಪಶು ಆಹಾರದ ಮಾಹಿತಿ ಶಿಬಿರ ನಡೆಯಿತು. ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕಿ ಶೃತಿ ಟಿ.ಕೆಯವರು ಜಾನುವಾರು ಪಶು ಆಹಾರದ ಬಗ್ಗೆ ಮಾಹಿತಿ ನೀಡಿದರು.
ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ, ರಾಸುಗಳ ನಿರ್ವಹಣೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಹೈನುಗಾರರಿಗೆ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳು, ರಾಸುಗಳ ಸಾಕಾಣಿಕೆ ಕುರಿತು ಮಾಹಿತಿ ನೀಡಿದರು.
ಸನ್ಮಾನ:
ದ.ಕ ಹಾಲು ಒಕ್ಕೂಟ ಹಾಗೂ ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನಳಿನಾಕ್ಷಿ ಹಾಗೂ ಬಿ.ಕೆ ಜನಾರ್ದನ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚ ಹಾಲು ನೀಡಿದ ಕಾವ್ಯಶ್ರೀ(ಪ್ರ), ನಳಿನಿ(ದ್ವಿ), ಕೃಷ್ಣಮ್ಮ(ತೃ) ಬಹುಮಾನ ಹಾಗೂ ಹೈನುಗಾರರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.
ಪ್ರತಿಭಾ ಪುರಸ್ಕಾರ;
ಸಂಘದ ಸದಸ್ಯರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಹೇಮಶ್ರೀ, ಧನ್ಯಶ್ರೀ, ಎಸ್.ಎಸ್.ಎಲ್.ಸಿ ಅತೀ ಹೆಚ್ಚು ಅಂಕಗಳಿಸಿದ ಸ್ನೇಹಿತ್, ಸಾತ್ವಿಕರವರಿಗೆ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷೆ ಗೀತಾ ಜೆ.ಎಸ್., ನಿರ್ದೇಶಕರಾದ ರಾಜೀವಿ, ಪುಷ್ಪಾವತಿ, ಶಶಿಕಲಾ, ಜಯಶ್ರೀ, ಸರಸ್ವತಿ, ಕಮಲಾಕ್ಷಿ, ದಮಯಂತಿ ಹಾಗೂ ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕ ಜಯಂತಿ ಎಸ್ ಸ್ವಾಗತಿಸಿದರು. ಕಾರ್ಯದರ್ಶಿ ನಳಿನಾಕ್ಷಿ ಕೆ. ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕಿ ಶೋಭಾ ವಂದಿಸಿದರು. ಹಾಲು ಪರೀಕ್ಷಕಿ ನಳಿನಿ ಸಹಕರಿಸಿದರು.