ಚಿತ್ರ: ಜೀತ್ ಸ್ಟುಡಿಯೋ
- ಭೂತಕೋಲದ ಬಳಿಕ ಶೋಭಾಯಾತ್ರೆಗೆ ಚಾಲನೆ
- 7 ದಿನಗಳ ಗಣೇಶೋತ್ಸವದೊಂದಿಗೆ ಚೌತಿಯ ಸಂಭ್ರಮಕ್ಕೆ ತೆರೆ
ಪುತ್ತೂರು: ವಿಜೃಂಭಣೆಯಿಂದ ಜರಗಿದ ಪುತ್ತೂರಿನ ಕಿಲ್ಲೆ ಮೈದಾನದ 65ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಮಂಗಳವಾರ ಸಮಾಪನಗೊಂಡಿತು. ರಾತ್ರಿ ಬೃಹತ್ ಶೋಭಾಯಾತ್ರೆಯ ಮೂಲಕ ಮಹಾ ಗಣೇಶನ ಮೂರ್ತಿಯನ್ನು ಮಂಜಲ್ಪಡ್ಪುವಿಗೆ ಕೊಂಡೊಯ್ದು ಜಲಸ್ತಂಭನ ಮಾಡಲಾಯಿತು.
ಪುತ್ತೂರು ಕಿಲ್ಲೆ ಮೈದಾನದ ಶ್ರೀ ದೇವತಾ ಸಮಿತಿ ಆಶ್ರಯದಲ್ಲಿ ಆಗಸ್ಟ್ 31ರಿಂದ ಸೆ. 6ರವರೆಗೆ ನಡೆದ 65ನೇ ವರ್ಷದ ಮಹಾಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಪುರೋಹಿತ ಸುಬ್ರಹ್ಮಣ್ಯ ಹೊಳ್ಳ ವಹಿಸಿದ್ದರು. ಮಂಗಳವಾರ ಬೆಳಿಗ್ಗೆ 108 ಕಾಯಿ ಗಣಪತಿ ಹೋಮ, ಮಧ್ಯಾಹ್ನ ದೇವರ ಉತ್ಸವ ನಡೆಯಿತು. ಬಳಿಕ ಕೀರ್ತಿಶೇಷ ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನದೊಂದಿಗೆ ನಡೆದು ಬಂದ ಬಾರಿಸು ಕನ್ನಡ ಡಿಂಡಿಮವ ತಂಡದಿಂದ ಹಾಡು ಹಾಗೂ ನೃತ್ಯಗಳ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಸಂಜೆ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳ ಕೋಲದೊಂದಿಗೆ ಗಣಪತಿಯ ವೈಭವದ ಶೋಭಾಯಾತ್ರೆ ಮಂಜಲ್ಪಡ್ಪು ಕಡೆ ಹೊರಟಿತು. ಇಡೀಯ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸ್ವಯಂ ಸೇವಕರ ಶ್ರಮವನ್ನು ಗಮನಿಸಬಹುದು.
ಮಹಾ ಅನ್ನಸಂತರ್ಪಣೆ: ಕಳೆದ 7 ದಿನಗಳಿಂದ ಕಿಲ್ಲೆ ಮೈದಾನದಲ್ಲಿ ನಡೆದ ಗಣೇಶೋತ್ಸವದಲ್ಲಿ ಲಕ್ಷಾಂತರ ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಶ್ರೀ ದೇವತಾ ಸಮಿತಿಯ ನೇತೃತ್ವದಲ್ಲಿ ತುಳಸಿ ಕೆಟರರ್‍ಸ್‌ನ ಹರೀಶ್ ರಾವ್ ಅವರ ತಂಡ ನಳಪಾಕದ ಸವಿ ಉಣಬಡಿಸಿತು. ಅನ್ನಸಂತರ್ಪಣೆಯಲ್ಲಿ ಪ್ರತಿದಿನವೂ ವೈವಿಧ್ಯಮಯ ಪದಾರ್ಥ ಹಾಗೂ ಪಾಯಸವನ್ನು ಭಕ್ತರಿಗೆ ಉಣಬಡಿಸಲಾಯಿತು. ಅನ್ನಸಂತರ್ಪಣೆಗೆ ಪ್ರತ್ಯೇಕ ಸುಸಜ್ಜಿತ ವ್ಯವಸ್ಥೆಯನ್ನು ಮಾಡಿದ್ದು, ಒಟ್ಟು ವ್ಯವಸ್ಥೆ ಅಚ್ಚುಕಟ್ಟಾಗಿ ಮೂಡಿಬಂದಿತು.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ: 7 ದಿನದ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು. ಸರ್ವ ಧರ್ಮ ಸಮ್ಮಿಲನ ಇಲ್ಲಿಯ ಧಾರ್ಮಿಕ ಸಭೆಯ ವೈಶಿಷ್ಟ್ಯತೆ. ಭಜನೆ, ಸ್ಯಾಕ್ಸೋಫೋನ್ ವಾದನ, ಸಂಗೀತ ಕಛೇರಿ, ನೃತ್ಯ ವೈವಿಧ್ಯ, ಯಕ್ಷಗಾನ, ನಾಟಕ, ಪಿಲಿ ನಲಿಕೆ, ಗೊಂಬೆ ಕುಣಿತ ಮೊದಲಾದ ಕಾರ್ಯಕ್ರಮಗಳಿಗೆ ವೇದಿಕೆ ಸಾಕ್ಷಿಯಾಯಿತು.
ಬೃಹತ್ ಮಾಲೆ: ನೆಲ್ಲಿಕಟ್ಟೆ ಮಿತ್ರವೃಂದದಿಂದ ಕಿಲ್ಲೆ ಗಣಪನಿಗೆ ಬೃಹತ್ ಮಾಲೆಯನ್ನು ಅರ್ಪಿಸಲಾಯಿತು. ಮಂಗಳವಾರ ಸಂಜೆ ನೆಲ್ಲಿಕಟ್ಟೆಯಿಂದ ಮೆರವಣಿಗೆ ಮೂಲಕ ಕಿಲ್ಲೆ ಮೈದಾನಕ್ಕೆ ಬೃಹತ್ ಮಾಲೆಯನ್ನು ತಂದು ಮಹಾಗಣಪತಿಗೆ ಅರ್ಪಿಸಲಾಯಿತು.
ಸುಡುಮದ್ದು ಪ್ರದರ್ಶನ: ಪುತ್ತೂರಿನ 2ನೇ ಜಾತ್ರೆ ಎಂದೇ ಖ್ಯಾತಿ ಪಡೆದ ಕಿಲ್ಲೆ ಮೈದಾನದ ಗಣೇಶೋತ್ಸವದಲ್ಲಿ ಸುಡುಮದ್ದು ಪ್ರದರ್ಶನ ಇನ್ನೊಂದು ವಿಶೇಷತೆ. ಶೋಭಾಯಾತ್ರೆಗೆ ಮೊದಲು ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಶೋಭಾಯಾತ್ರೆಗೆ ಸುಡುಮದ್ದು ಪ್ರದರ್ಶನ ಹೊಸ ಕಳೆ ನೀಡಿತು.
ಶೋಭಾಯಾತ್ರೆ: ಕಿಲ್ಲೆ ಶ್ರೀ ಮಹಾಗಣಪತಿಯ ಶೋಭಾಯಾತ್ರೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ದೊಡ್ಡ ಭಾವಚಿತ್ರ ಹೊತ್ತ ವಾಹನ, ತಾಲೀಮು, ಪಿಲಿ ಕುಣಿತ, ಗೊಂಬೆ ಕುಣಿತದ ಜೊತೆಗೆ ಚೆಂಡೆ ಸದ್ದು ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿತು. ಗಣಪತಿ ಮೂರ್ತಿಯ ಜೊತೆಗೆ ದೈವಗಳು ಸಾಗುತ್ತಿದ್ದರೆ, ಸ್ಯಾಕ್ಸೋಫೋನ್ ಹಾಗೂ ತಾಸೆ ಸದ್ದು ಧಾರ್ಮಿಕ ಟಚ್ ನೀಡಿತು. ಇದರೊಂದಿಗೆ ಡಿಜೆ ಸದ್ದಿಗೆ ಯುವಕರು ಹೆಜ್ಜೆ ಹಾಕಿದರು.
ಶ್ರೀ ದೇವತಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ದಿವ್ಯಪ್ರಭಾ ಚಿಲ್ತಡ್ಕ ದೇವತಾ ಸಮಿತಿ ಸದಸ್ಯರಾದ ಸುದೇಶ್ ಕುಮಾರ್ ಚಿಕ್ಕಪುತ್ತೂರು, ಶ್ರೀಧರ್ ನಾಯಕ್, ರಮೇಶ್ ಟಿ., ಕಿಟ್ಟಣ್ಣ ಗೌಡ ಬಪ್ಪಳಿಗೆ, ಚಂದ್ರಶೇಖರ್ ಮುಂಗ್ಲಿಮನೆ, ಗಣಪತಿ ಪೈ, ವಸಂತ ನಾಯಕ್, ರತ್ನಾಕರ ಆಚಾರ್ಯ, ಸುದರ್ಶನ್, ಅಭಿಷೇಕ್ ಶೆಟ್ಟಿ ನೆಲ್ಲಿಕಟ್ಟೆ, ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ, ಪಂಜಿಗುಡ್ಡೆ ಈಶ್ವರ ಭಟ್, ಭರತ್ ಕುಮಾರ್ ಆರಿಗ, ಎನ್. ಚಂದ್ರಹಾಸ ಶೆಟ್ಟಿ, ಗೌರವ್ ಶೆಟ್ಟಿ ನೆಲ್ಲಿಕಟ್ಟೆ, ಪಿ.ಕೆ. ಗಣೇಶ್ ನೆಲ್ಲಿಕಟ್ಟೆ, ದಿನೇಶ್ ಪಿ.ವಿ., ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಬಾಲಕೃಷ್ಣ ಉಪ್ಪಳಿಗೆ, ಹರಿಕಿಶನ್, ಕೃಷ್ಣಪ್ರಸಾದ್ ಆಳ್ವ, ಗೀತಾ ಸುಧಾಕರ್ ಶೆಟ್ಟಿ, ರೂಪಾ ಬಿ., ನಯನಾ ರೈ, ಶೈಲಜಾ ಅಮರನಾಥ್, ರೋಶನ್ ರೈ ಬನ್ನೂರು, ಸುಂದರ ಸಾಲ್ಯಾನ್ ಬಾರ್ಪದೆ, ಜಿನ್ನಪ್ಪ ಪೂಜಾರಿ ಮುರ, ದಿನೇಶ್ ರೈ ಮೊಡಪ್ಪಾಡಿ, ಡಾ| ರಾಜೇಶ್ ಬೆಜ್ಜಂಗಳ, ಸುರೇಶ್ ಶೆಟ್ಟಿ, ಪೂರ್ಣೇಶ್ ಸೇರಿದಂತೆ ಹಲವಾರು ಗಣ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಭೂತಕೋಲ
ಕರಾವಳಿಯ ಗಣೇಶೋತ್ಸವಗಳಲ್ಲೇ ಪುತ್ತೂರು ಕಿಲ್ಲೆ ಮೈದಾನದ ಸಾರ್ವಜನಿಕ ಶ್ರೀ ಮಹಾ ಗಣೇಶೋತ್ಸವ ವಿಶೇಷ ಪ್ರಾಧಾನ್ಯತೆ ಪಡೆದುಕೊಳ್ಳಲು ಒಂದು ಕಾರಣ ಭೂತಕೋಲ. 7ನೇ ದಿನದಂದು ರಾತ್ರಿ ನಡೆಯುವ ವೈಭವದ ಗಣೇಶೋತ್ಸವದ ಶೋಭಾಯಾತ್ರೆ ಆರಂಭವಾಗುವುದೇ ಭೂತಕೋಲದಿಂದ. ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳ ಕೋಲ ನಡೆದು, ನುಡಿ ಕೊಟ್ಟ ಬಳಿಕ ಕಿಲ್ಲೆ ಗಣಪನ ಶೋಭಾಯಾತ್ರೆ ಹೊರಡುವುದು ಇಲ್ಲಿನ ವಾಡಿಕೆ. ಪರಂಪರೆಯಿಂದ ನಡೆದುಕೊಂಡು ಬಂದ ಕ್ರಮದಂತೆ ಈ ಬಾರಿಯೂ ದೈವಗಳ ಕೋಲ ನಡೆದು, ನುಡಿಯಾದ ಬಳಿಕ ಶೋಭಾಯಾತ್ರೆ ಹೊರಟಿತು.
ಶೋಭಾಯಾತ್ರೆ
7 ದಿನಗಳ ಪರ್ಯಂತ ನಡೆದ ಶ್ರೀ ಮಹಾಗಣಪತಿಯ ಶೋಭಾಯಾತ್ರೆ ಮಂಗಳವಾರ ರಾತ್ರಿ ಕೋರ್ಟ್‌ರಸ್ತೆಯಿಂದ ಹೊರಟು ಮುಖ್ಯರಸ್ತೆಯನ್ನು ಸಂಪರ್ಕಿಸಿ, ಅಲ್ಲಿಂದ ದರ್ಬೆ, ಪರ್ಲಡ್ಕ, ತಾಲೂಕು ಆಫೀಸ್ ರಸ್ತೆಯಾಗಿ ರಾಧಾಕೃಷ್ಣ ಮಂದಿರದ ಬಳಿಯಿಂದ ಬೊಳುವಾರು ಮಾರ್ಗವಾಗಿ ತೆರಳಿ ಮಂಜಲ್ಪಡ್ಪು ಕೆರೆಯಲ್ಲಿ ವಿಗ್ರಹ ವಿಸರ್ಜನೆ ನಡೆಯಿತು.