ನೆಲ್ಯಾಡಿ: ಟ್ಯಾಂಕರ್ ಡಿಕ್ಕಿಯಾಗಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಸೆ.5ರಂದು ಮಧ್ಯಾಹ್ನದ ವೇಳೆ ನಡೆದಿದೆ. ಈ ಮಧ್ಯೆ ಅಪಘಾತವಾದರೂ ನಿಲ್ಲಿಸದೇ ಪರಾರಿಯಾಗಿದ್ದ ಟ್ಯಾಂಕರ್‌ಗೆ ಬೆದ್ರೋಡಿಯಲ್ಲಿ ಸಾರ್ವಜನಿಕರು ತಡೆಯೊಡ್ಡಿ ಪೊಲೀಸ್ ವಶಕ್ಕೊಪ್ಪಿಸಿರುವುದಾಗಿ ವರದಿಯಾಗಿದೆ.
ಹಾಸನದಿಂದ ಮಂಗಳೂರಿಗೆ ಬರುತ್ತಿದ್ದ ಟ್ಯಾಂಕರ್ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿ ನಿವಾಸಿ ಗೋಪಾಲ ಪೂಜಾರಿ(45ವ.)ಎಂಬವರಿಗೆ ಡಿಕ್ಕಿಯಾಗಿ ಬಳಿಕ ಅಲ್ಲೇ ನಿಂತು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಮೇಲ್ವಿಚಾರಣೆ ಮಾಡುತ್ತಿದ್ದ ಉತ್ತರ ಭಾರತ ಮೂಲದ ವ್ಯಕ್ತಿಯೋರ್ವರಿಗೂ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದು ತಲೆಗೆ ಗಾಯವಾಗಿರುವ ಸಣ್ಣಂಪಾಡಿ ನಿವಾಸಿ ಗೋಪಾಲ ಪೂಜಾರಿಯವರು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ನೀರಕಟ್ಟೆಯ ಬೀಡಿ ಬ್ರಾಂಚ್‌ಗೆ ಬೀಡಿ ಕೊಟ್ಟು ವಾಪಸ್ ಮನೆ ಕಡೆ ಹೋಗುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಇನ್ನೋರ್ವ ಗಾಯಾಳು ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಪರಾರಿಯಾಗಿದ್ದ ಟ್ಯಾಂಕರ್ ವಶ:
ಇಬ್ಬರಿಗೆ ಡಿಕ್ಕಿಯಾಗಿದ್ದರೂ ಚಾಲಕ ಟ್ಯಾಂಕರ್ ನಿಲ್ಲಿಸದೇ ಪರಾರಿಯಾಗಿದ್ದ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಸಾರ್ವಜನಿಕರು ಬೆದ್ರೋಡಿಯಲ್ಲಿ ಲಾರಿಗೆ ತಡೆಯೊಡ್ಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.