ಪ್ರೀತಿಯಿಂದ ಮಾಡಿದ ಅಡುಗೆಯ ಗುಣ ಹೆಚ್ಚು – ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ, ಕಾನೂನು ಕಾರ್ಯಗಾರದಲ್ಲಿ ನ್ಯಾಯಾಧೀಶೆ ಅರ್ಚನಾ ಕೆ

0

  • ಪೌಷ್ಠಿಕ ಆಹಾರದ ಜೊತೆ ಆರೋಗ್ಯದ ಕಡೆ ಗಮನವಿರಲಿ – ಮನೋಹರ್ ಕೆ.ವಿ
  • ಪೌಷ್ಠಿಕ ಆಹಾರ ಕುರಿತು ವಿವಿಧ ಕಾರ್ಯಕ್ರಮ – ಶ್ರೀಲತಾ

ಪುತ್ತೂರು: ಅಡುಗೆ ಮನೆಯಲ್ಲಿ ನಾವು ರಾಜರಿದ್ದಂತೆ. ಅಲ್ಲಿನ ಶುಚಿತ್ವದಿಂದ ಹಿಡಿದು ಅಲ್ಲಿನ ಅಡುಗೆ ತಯಾರಿ, ರುಚಿಯಲ್ಲೂ ನಮ್ಮದೆ ಸಾಮ್ರಾಜ್ಯ. ಇದನ್ನು ನಾವು ಹೆಮ್ಮೆಯಿಂದ ಹೇಳಬೇಕು. ಅದೇ ರೀತಿ ಪ್ರೀತಿಯಿಂದ ಮಾಡಿದ ಅಡುಗೆಯ ಗುಣವೂ ಹೆಚ್ಚು ಇರುತ್ತದೆ ಎಂದು ಪುತ್ತೂರು ಪ್ರಧಾನ ವ್ಯವಹಾರಿಕ ನ್ಯಾಯಾಧೀಶೆ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾಗಿರುವ ತಾಲೂಕು ಕಾನೂನು ಸೇವೆಗಳ ಸಮಿತಿ ಸದ್ಯ ಕಾರ್ಯದರ್ಶಿ ಅರ್ಚನಾ ಕೆ.ಉಣ್ಣಿತಾನ್ ಅವರು ಹೇಳಿದರು.

ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಶಿಶು ಅಭಿವೃದ್ಧಿ ಯೋಜನೆ, ಸ್ತ್ರಶಕ್ತಿ ಬ್ಲಾಕ್ ಸೊಸೈಟಿಯ ಸಹಭಾಗಿತ್ವದಲ್ಲಿ ಪುತ್ತೂರು ದರ್ಬೆ ಸಿಟಿಒ ರಸ್ತೆಯಲ್ಲಿರುವ ಸ್ತ್ರೀಶಕ್ತಿ ಭವನದಲ್ಲಿರುವ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯಲ್ಲಿ ಸೆ. 7ರಂದು ನಡೆದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಮತ್ತು ಕಾನೂನು ಸೇವಾ ಸಮಿತಿಯಿಂದ ನಡೆದ ಕಾನೂನು ಕಾರ್ಯಗಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳಿಗೆ ದೌರ್ಜನ್ಯ, ತೊಂದರೆ ಕುರಿತು ಮಾತನಾಡುತ್ತೇವೆ ಹೊರತು ನಮ್ಮ ಗುಣಗಳನ್ನು ಯಾರು ಕೇಳುವುದೇ ಇಲ್ಲ. ಹೆಣ್ಮಕ್ಕಳು ಮನೆಯಲ್ಲಿ ವಹಿಸುವ ದೊಡ್ ಜವಾಬ್ದಾರಿಯುತ ಪಾತ್ರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪೌಷ್ಠಿಕ ಆಹಾರದ ಕಾರ್ಯಕ್ರಮ ಅನಿವಾರ್ಯ. ಅಡುಗೆ ಮನೆಯಲ್ಲಿ ನಮ್ಮ ಮಹತ್ವ ನಮ್ಮ ಮಕ್ಕಳಲ್ಲಿ ಕಾಣಸಿಗುತ್ತದೆ. ಅವರಿಗೆ ಸದೃಢವಾದ ಶರೀರ ನಮ್ಮ ಸಫಲತೆ ಎಂದ ಅವರು ಒಟ್ಟಿನಲ್ಲಿ ನಾವು ಮಾಡಿದ ಪ್ರೀತಿಯ ಅಡುಗೆ ಎಲ್ಲಾ ಗುಣವನ್ನು ಹೆಚ್ಚಿಸುತ್ತದೆ ಎಂದರು.

ಪೌಷ್ಠಿಕ ಆಹಾರದ ಜೊತೆ ಆರೋಗ್ಯದ ಕಡೆ ಗಮನವಿರಲಿ:
ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ಅಡುಗೆ ಮನೆಯ ಶುಚಿತ್ವ ಮತ್ತು ಶೌಚಾಲಯದ ಶುಚಿತ್ವದಿಂದ ಬಹಳ ಅಗತ್ಯ. ಹಾಗಾಗಿ ಪೌಷ್ಠಿಕ ಆಹಾರ ಸೇವಿಸುವುದು ಮಾತ್ರವಲ್ಲ. ನಮ್ಮ ಶುಚಿತ್ವ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದ ಅವರು ಮಹಿಳೆಯರು ಉಚಿತ ಕಾನೂನಿನ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದರು.

ಪೌಷ್ಠಿಕ ಆಹಾರ ಕುರಿತು ವಿವಿಧ ಕಾರ್ಯಕ್ರಮ:
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರು ಸ್ವಾಗತಿಸಿ ಮಾತನಾಡಿ ಪೌಷ್ಠಿಕ ಆಹಾರ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮೀಣ ಪ್ರದೇಶದ ಎಲ್ಲಾ ಜನತೆಗೂ ಅದರಲ್ಲೂ ವಿಶೇಷವಾಗಿ ಗರ್ಭಿಣಿ ಭಾಣಂತಿಯರ ಹದಿಹರೆಯದವರ ಹೆಣ್ಣು ಮಕ್ಕಳಿಗೆ, ಪೌಷ್ಠಿಕ ಆಹಾರ ಕುರಿತು ಸಮಗ್ರ ಮಾಹಿತಿಯನ್ನು ತಲುಪಿಸಲಾಗುತ್ತಿದೆ. ಸ್ಥಳಿಯ ಆಹಾರ ಪದಾರ್ಥಗಳ ಉಪಯುಕ್ತತೆ ಮಳಕೆ ಕಾಳು, ಕಾಲಕಾಲಕ್ಕೆ ದೊರೆಯುವ ಹಣ್ಣು-ಹಂಪಲಗಳು, ತರಕಾರಿ ಇವುಗಳ ಮಹತ್ವದ ಪ್ರಾಮುಖ್ಯತೆಯ ಬಗ್ಗೆ ಜನಸಾಮಾನ್ಯರಿಗೆ ಉತ್ತಮ ಆರೋಗ್ಯಕ್ಕಾಗಿ ಆಹಾರ ಸುಭದ್ರತೆ ಸಂದೇಶವನ್ನು ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದ ಅವರು ಮಾತೃವಂದನಾ ಸಪ್ತಾಹದ ಸಮಾರೋಪ ಸಮಾರಂಭವು ನಡೆಯುತ್ತಿದೆ ಎಂದರು.

2ನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಯೋಗೇಂದ್ರ ಶೆಟ್ಟಿಯವರು ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಅವರು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತ ಕಾನೂನು ಅರಿವು ಕುರಿತು ಮಾಹಿತಿ ನೀಡಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ, ಜೊತೆಕಾರ್ಯದರ್ಶಿ ಸೀಮಾನಾಗರಾಜ್, ತಾಲೂಕು ಸ್ತ್ರಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ವೇದಾವತಿ, ಕಾರ್ಯದರ್ಶಿ ಮಮತಾಂಜಲಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಕಮಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಿಕಲಾ ಪ್ರಾರ್ಥಿಸಿದರು. ಸಿಡಿಪಿಒ ಮೇಲ್ವಿಚಾರಕಿ ಜಲಜಾಕ್ಷಿ ವಂದಿಸಿದರು. ಸಹಾಯಕ ಶಿಶುಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಜೆ ಕಾರ್ಯಕ್ರಮ ನಿರೂಪಿಸಿದರು. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು, ಅರಣ್ಯ ಇಲಾಖೆ ಹಾಗೂ ವಿಜಯಪುರ ಉಸ್ತುವಾರಿ ಸಚಿವ ಉಮೇಶ್ ಕತ್ತಿ ನಿಧನದ ಹಿನ್ನಲೆಯಲ್ಲಿ ಕಾರ್ಯಕ್ರಮದ ಆರಂಭದಲ್ಲಿ ಒಂದು ನಿಮಿಷ ಮೌನ ಪಾರ್ಥನೆಯೊಂದಿಗೆ ನುಡಿನ ನಮನ ಸಲ್ಲಿಸಲಾಯಿತು. ಸಭೆಯಲ್ಲಿ ನ್ಯಾಯಾಲಯದ ಕಾನೂನು ಸೇವಾ ವಿಭಾಗದ ಸಿಬ್ಬಂದಿಗಳಾದ ಹರೀಶ್, ಜ್ಯೋತಿ ಉಪಸ್ಥಿತರಿದ್ದರು.

ಪೌಷ್ಠಿಕ ಆಹಾರ ಪ್ರದರ್ಶನ:
ಅಂಗನವಾಡಿ ಕಾರ್ಯಕರ್ತರು, ಸ್ತ್ರೀಶಕ್ತಿ ಸೊಸೈಟಿಯ ಸದಸ್ಯರು ತಯಾರಿಸಿದ ಪೌಷ್ಠಿಕ ಆಹಾರನ್ನು ಪ್ರದರ್ಶನಕ್ಕೆ ಇಡಲಾಯಿತ್ತಲದೆ ತಾವು ತಯಾರಿಸಿದ ಪೌಷ್ಠಿಕ ಆಹಾರದ ಪ್ರಾಮುಖ್ಯತೆಯನ್ನು ವಿವರಿಸಲಾಯಿತು. ನ್ಯಾಯಾಧೀಶರು ಮತ್ತು ವಕೀಲರ ಸಂಘದ ಅಧ್ಯಕ್ಷರು ಪೌಷ್ಠಿಕ ಆಹಾರದ ರುಚಿ ಸವಿದರು.

LEAVE A REPLY

Please enter your comment!
Please enter your name here