ಕುಂಜುರುಪಂಜ, ದೊಡ್ಡಡ್ಕ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಪ್ರದಾನ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕುಂಜೂರುಪಂಜ – ದೊಡ್ಡಡ್ಕ ಇದರ ಆಶ್ರಯದಲ್ಲಿ ಒಕ್ಕೂಟ ಪದಪ್ರದಾನ, ಧಾರ್ಮಿಕ ಸಭೆ ಹಾಗೂ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಸೆ. ೪ರಂದು ಕುಂಜೂರುಪಂಜ ದೇವಸ್ಯ ಶ್ರೀ ಮಂಜುನಾಥ ಸಭಾಭವನದಲ್ಲಿ ಜರಗಿತು.

ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ, ಧರ್ಮ ಎಂದರೆ ನಾವು ಧಾರಣೆ ಮಾಡಿಕೊಂಡಿರುವ ವಿಚಾರ. ಅಂದರೆ ಜೀವನದಲ್ಲಿ ನಾವು ಹೇಗಿರಬೇಕು ಎನ್ನುವುದನ್ನು ತಿಳಿಸಿಕೊಡುವುದೇ ಧರ್ಮ. ನಾವು ಮಾಡಬೇಕಾದ ಕರ್ತವ್ಯಗಳನ್ನು ನೆನಪಿಸುವುದೇ ಧರ್ಮ. ನಾವು ಮಾಡುವ ಕೆಲಸದಲ್ಲಿ ವಿಶ್ವಾಸ, ನಂಬಿಕೆ ಇಟ್ಟು ಕೆಲಸ ನಿರ್ವಹಿಸಿದಾಗ, ಧರ್ಮವನ್ನು ಸರಿಯಾದ ರೀತಿಯಲ್ಲಿ ಆಚರಣೆ ಮಾಡಿದಂತಾಗುತ್ತದೆ ಎಂದರು.

ಕಲಿಯುಗದಲ್ಲಿ 1 ಪಾಲು ಧರ್ಮ ಇದ್ದರೆ, ಉಳಿದ ೩ ಪಾಲು ಅಧರ್ಮವೇ ತುಂಬಿಕೊಂಡಿದೆ. ಇಂತಹ ಕಾಲಘಟ್ಟದಲ್ಲಿ ಅರಿಷಡ್ವೈರಿಗಳೇ ನಮ್ಮ ಶತ್ರುಗಳು. ನಮ್ಮ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಮಾತ್ರ ನಾವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದ ಅವರು, ಸೇವೆ ನಿಸ್ವಾರ್ಥವಾಗಿರಲಿ. ನಾವು ಮಾಡುವ ಸೇವೆ ಇನ್ನೊಬ್ಬರಿಗೆ ಉಪದ್ರವ ಆಗದಂತೆ ಎಚ್ಚರ ವಹಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಮುಂದೆ ಬಂದಿದ್ದಾರೆ. ಅನೇಕ ಉತ್ತಮ ವಿಚಾರಗಳು ಇಲ್ಲಿ ಮೂಡಿಬರುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದ.ಕ.-೦೨ ಜಿಲ್ಲೆಯ ಎಂಐಎಸ್ ಯೋಜನಾಧಿಕಾರಿ ಗೋಪಾಲ ಆಚಾರ್ಯ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಪದಾಧಿಕಾರಿಗಳು ನ್ಯಾಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಜನರನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ಬೆಳೆಸಿಕೊಳ್ಳಿ. ಸಿಎಸ್‌ಸಿ ಕೇಂದ್ರದಲ್ಲಿ ದೊರೆಯುವ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕು ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ ಮಾತನಾಡಿ, ಸಾಮಾನ್ಯವಾಗಿ ೪೦ ವರ್ಷ ಕೆಳಗಿನ ಯುವಕರೇ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು. ಈ ಹಿನ್ನೆಲೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾಳಜಿಯಂತೆ, ಜನಜಾಗೃತಿಯಿಂದ ಮದ್ಯವರ್ಜನ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ವ್ಯಸನಮುಕ್ತ ಸಮಾಜದ ಕನಸು ಕಂಡಿರುವ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಕನಸನ್ನು ನನಸು ಮಾಡಲು ಎಲ್ಲರೂ ಶ್ರಮಿಸಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಈಶ್ವರ ಎಂ.ಎಸ್. ಮಾತನಾಡಿ, ಜೀವನದಲ್ಲಿ ಹಣ ಮುಖ್ಯ ಅಲ್ಲ. ನೆಮ್ಮದಿ ಮುಖ್ಯ. ಹಣದ ಹಿಂದೆ ಹೋಗುವ ನಾವು ಬಳಸಿಕೊಂಡ ವಿಧಾನ ಬದಲಾಗಿದೆಯೇ ಹೊರತು, ನಮ್ಮ ಯೋಜನೆ ಬದಲಾಗಿಲ್ಲ ಎಂದರು.

ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇವಸ್ಯ ಶ್ರೀ ಮಂಜುನಾಥ ಸಭಾಭವನ ಕಟ್ಟಡ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೈನಿಕ ಶುಭಕರ ರಾವ್, ಕುಂಜೂರುಪಂಜ ಹಾಗೂ ದೊಡ್ಡಡ್ಕ ಒಕ್ಕೂಟದ ನಿಕಟಪೂರ್ವ ಪದಾಧಿಕಾರಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಹರೀಶ್ ಕುಲಾಲ್ ಸ್ವಾಗತಿಸಿ , ದೊಡ್ಡಡ್ಕ ಒಕ್ಕೂಟದ ಕಾರ್ಯದರ್ಶಿ ನಾರಾಯಣ ನಾಯ್ಕ ವಂದಿಸಿ , ಸಾಜ ಶಾಲೆಯ ಸಹಶಿಕ್ಷಕ ಶಶಿಕಾಂತ್ ಅಟ್ಲಾರು ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಸಾಧನ ವರದಿ ಕುಂಜೂರುಪಂಜ ಸೇವಾಪ್ರತಿನಿಧಿ ಆಶಾಲತಾ ಮಂಡಿಸಿದರು. ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು, ಬಳಿಕ ಒಕ್ಕೂಟಗಳ ಪದಪ್ರದಾನ ನಡೆಯಿತು.

LEAVE A REPLY

Please enter your comment!
Please enter your name here