ಗೋಳಿತ್ತಟ್ಟು ಶಾಲೆಯಲ್ಲಿ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಉದ್ಘಾಟನೆ

0

ನೆಲ್ಯಾಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಗೋಳಿತ್ತಟ್ಟು ಇದರ ಸಹಯೋಗದಲ್ಲಿ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯಾಟ ಸೆ.೯ರಂದು ಗೋಳಿತ್ತಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.


ರಾಷ್ಟ್ರೀಯ ಕ್ರೀಡಾಪಟು ಯೇಸುದಾಸ್‌ರವರು ಪಂದ್ಯಾಟ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲಿಯೇ ಕ್ರೀಡಾಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದಲ್ಲಿ ಮುಂದೆ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ರವರು ಮಾತನಾಡಿ, ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷ ಶಾಲೆಗಳಲ್ಲಿ ಯಾವುದೇ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ನಡೆದಿರಲಿಲ್ಲ. ಕ್ರೀಡೆಯಿಂದ ಮಾನಸಿಕ, ದೈಹಿಕ ಸಾಮರ್ಥ್ಯ ಹೆಚ್ಚಾಗಿ ಸದೃಢರಾಗಿ ಬೆಳೆಯಲು ಸಾಧ್ಯವಿದೆ. ಕ್ರೀಡಾಪಟುಗಳಿಗೆ ಉದ್ಯೋಗದಲ್ಲೂ ಸರಕಾರ ಶೇ.೨ರಷ್ಟು ಮೀಸಲಾತಿ ನೀಡಿದೆ ಎಂದರು. ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ:
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ರೀಡಾಪಟು, ರೈಲ್ವೆ ಇಲಾಖೆಯ ಉದ್ಯೋಗಿ ಯೇಸುದಾಸ್, ರಾಷ್ಟ್ರೀಯ ವಾಲಿಬಾಲ್ ಆಟಗಾರ, ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮನೋಜ್ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಚಂದ್ರರವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ತೇಜಸ್ವಿ, ದೈಹಿಕ ಶಿಕ್ಷಣ ಶಿಕ್ಷಕ ಜಾನ್‌ರವರು ಸನ್ಮಾನಿತರನ್ನು ಪರಿಚಯಿಸಿದರು.

 

ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ., ಗೋಳಿತ್ತೊಟ್ಟು ಗ್ರಾ.ಪಂ.ಉಪಾಧ್ಯಕ್ಷೆ ಶೋಭಾಲತಾ, ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಮಂಜುನಾಥ್ ಕೆ.ವಿ.ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕಿ ಜಯಂತಿ ಬಿ.ಎಂ.ಸ್ವಾಗತಿಸಿ, ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ವಂದಿಸಿದರು. ಶಿಕ್ಷಕಿ ಸೀಮಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here