ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಬೀತಲಪ್ಪು ನಿವಾಸಿ ಯಮುನರವರಿಗೆ ಮನೆ ನಿರ್ಮಿಸಲು ಸಹಕಾರ ನೀಡುವುದಾಗಿ ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಭರವಸೆ ನೀಡಿದ್ದಾರೆ.
ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಾ ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿರುವ ಯಮುನಾರವರಿಗೆ ಮನೆ ಕಟ್ಟಲು ಸರಕಾರದಿಂದ ಸಹಾಯಧನ ಮಂಜೂರಾಗಿದ್ದರೂ ಮನೆ ರಚನೆ ಮಾಡಲು ಕೈಯಲ್ಲಿ ಬಿಡಿಗಾಸು ಇಲ್ಲದೆ ತೊಂದರೆಯಲ್ಲಿರುವ ಕುರಿತು ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದವರು ಉದ್ಯಮಿ ಅಶೋಕ್ ಕುಮಾರ್ ರೈಯವರ ಗಮನಕ್ಕೆ ತಂದಿದ್ದರು. ಕೂಡಲೇ ಸ್ಪಂದಿಸಿದ ಅಶೋಕ್ ರೈಯವರು ಬೀತಲಪ್ಪುಗೆ ಭೇಟಿ ನೀಡಿದರಲ್ಲದೆ ಯಮುನಾರವರಿಗೆ ಮನೆ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ ಅದೇ ಪರಿಸರದಲ್ಲಿ ಮನೆಯ ಛಾವಣಿ ಕುಸಿದು ಬೀಳುವ ಹಂತದಲ್ಲಿರುವುದರಿಂದ ಆತಂಕದಲ್ಲಿರುವ ಗೀತಾ ಎಂಬವರಿಗೂ ನೆರವು ನೀಡುವುದಾಗಿ ಅಶೋಕ್ ರೈ ಭರವಸೆ ನೀಡಿದರು. ಬಳಿಕ ಬೀತಲಪ್ಪು ನಿವಾಸಿ ಸುನೀತಾರವರ ಮನೆಗೂ ಅಶೋಕ್ ರೈ ಭೇಟಿ ನೀಡಿದರು. 94ಸಿಗೆ ಅರ್ಜಿ ನೀಡಿ 3 ವರ್ಷ ಕಳೆದರೂ ಹಕ್ಕು ಪತ್ರ ಇನ್ನೂ ಸಿಕ್ಕಿಲ್ಲ. ಮನೆಯ ಛಾವಣಿ ಕುಸಿದು ಬೀಳುವ ಹಂತದಲ್ಲಿದೆ. ಮಕ್ಕಳ ಜನನ ಸರ್ಟಿಫಿಕೇಟ್ ಪಡೆದುಕೊಳ್ಳಲೂ ಆಗಿಲ್ಲ ಎಂದು ಸುನೀತಾರವರು ಅಳಲು ತೋಡಿಕೊಂಡರು. ತಮ್ಮ ಸಮಸ್ಯೆಗೆ ಸ್ಪಂದಿಸಿ ಸಹಕಾರ ನೀಡುವುದಾಗಿ ಅಶೋಕ್ ರೈ ಭರವಸೆ ನೀಡಿದರು.
ಅಶೋಕ್ ರೈ ಭೇಟಿ ವೇಳೆ ಎ.ಜತೀಂದ್ರ ಶೆಟ್ಟಿ ಅಲಿಮಾರ, ಜಯಶೀಲ ಶೆಟ್ಟಿ ಶಾಂತಿನಗರ, ಸತ್ಯವತಿ ಹರೀಶ್ ಪೂಂಜ ಅಲಿಮಾರ, ಮಾರ್ಕೋ ಕೊಳಕ್ಕೆ ಮತ್ತಿತರರು ಉಪಸ್ಥಿತರಿದ್ದರು.