





- 71 ಅಭಿಮಾನಿಗಳಿಂದ ರಕ್ತದಾನ ಸಂಕಲ್ಪ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಪುತ್ತೂರು: ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟು ಹಬ್ಬ ಅಭಿನಂದನ ಸಮಿತಿ, ಯುವ ಕಾಂಗ್ರೆಸ್ ವಿಟ್ಲ-ಉಪ್ಪಿನಂಗಡಿ ಮತ್ತು ಪೆರ್ನೆ-ಬಿಳಿಯೂರು ವಲಯ ಕಾಂಗ್ರೆಸ್ ಇವುಗಳ ಜಂಟಿ ಆಶ್ರಯದಲ್ಲಿ ಮಾಜಿ ಸಚಿವ ರಮಾನಾಥ ರೈಯವರ ೭೧ನೇ ಹುಟ್ಟು ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲು ಮುಂದಾಗಿದೆ. ೭೧ನೇ ಹುಟ್ಟು ಹಬ್ಬದ ಅಂಗವಾಗಿ ೭೧ ಅಭಿಮಾನಿಗಳಿಂದ ರಕ್ತದಾನ ಸಂಕಲ್ಪ ಹಾಗೂ ಸಮಾಜವ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಸೆ.೧೪ರಂದು ಪೆರ್ನೆ ಎ.ಎಂ ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಹೇಳಿದರು.








ಸೆ.೧೨ರಂದು ಸುದ್ದಿ ಸ್ಟುಡಿಯೋದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವರು, ದ.ಕ ಜಿಲ್ಲೆಯ ಧೀಮಂತ ನಾಯಕರಾಗಿರುವ ರಮಾನಾಥ ರೈಯವರು ಬೆಳ್ಳಿಪ್ಪಾಡಿಯವರಾಗಿದ್ದರೂ ಅವರು ಹುಟ್ಟಿದ್ದು ಪೆರ್ನೆಯಲ್ಲಿ. ಅವರ ಪ್ರಾಥಮಿಕ ವಿದ್ಯಾಭ್ಯಾಸಗಳು ನಡೆದಿರುವುದು ಪೆರ್ನೆಯಲ್ಲಿ ಹೀಗಾಗಿ ಅವರ ೭೧ನೇ ಹುಟ್ಟು ಹಬ್ಬವನ್ನು ಪೆರ್ನೆಯಲ್ಲಿಯೇ ಆಯೋಜಿಸಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ೭೧ ಅಭಿಮಾನಿಗಳಿಂದ ರಕ್ತದಾನದ ಸಂಕಲ್ಪ ನಡೆಯಲಿದೆ. ರಕ್ತದಾನ ಶಿಬಿರವನ್ನು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಉದ್ಘಾಟಿಸಲಿದ್ದಾರೆ ಎಂದರು.
ನಂತರ ನಡೆಯುವ ಕಾರ್ಯಕ್ರಮದಲ್ಲಿ ರಮಾನಾಥ ರೈಯವರನ್ನು ಪೆರ್ನೆ ಜಂಕ್ಷನ್‌ನಿಂದ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಗುವುದು. ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವರು, ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಮಧು ಬಂಗಾರಪ್ಪರವರು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರು, ದ.ಕ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವೇ.ಮೂ. ಪರ್ನೆ-ಕಳೆಂಜ ಶಂಕರಾಯರಪಾಲು ಕೆ.ಕೃಷ್ಣಮೂರ್ತಿ ಕಾರಂತ, ಕೆಮ್ಮಾರ ಸಂಶುಲ್ ಉಲೇಮ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಎಸ್.ಬಿ ಮಹಮ್ಮದ್ ದಾರಿಮಿ, ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಧರ್ಮಗುರು ಲಾರೆನ್ಸ್ ಮಸ್ಕರೇಂಞಸ್ ಶುಭಾಶೀರ್ವಾದ ನೀಡಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್‌ಮಾನ್ ಬಂಟ್ವಾಳ, ರಾಜೀವ ಗಾಂಧೀ ವಿಶ್ವ ವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಬಿ ರಘು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಗೌರವ ಉಪಸ್ಥಿತಿಯಿರುವರು ಎಂದರು.
ಸಾಧಕರಿಗೆ ಸನ್ಮಾನ:
ಈ ಕಾರ್ಯಕ್ರಮದಲ್ಲಿ ಸುಮಾರು ೨೫ ಮಂದಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ರಮಾನಾಥ ರೈಯವರು ಸನ್ಮಾನಿಸಲಿದ್ದಾರೆ ಎಂದು ಮುರಳೀಧರ ರೈಯವರು ತಿಳಿಸಿದರು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಅಭಿನಂದನಾ ಸಮಿತಿ ಗೌರವಾಧ್ಯಕ್ಷರಾಗಿರುವ ಡಾ.ರಾಜಾರಾಂ ಕೆ.ಬಿ ಮಾತನಾಡಿ, ರಮಾನಾಥ ರೈಯವರದ್ದು ವಿಶಿಷ್ಠ ವ್ಯಕ್ತಿತ್ವ. ಬಡವರ ಪಾಲಿನ ಆಶಾಕಿರಣ. ಜಾತ್ಯಾತೀತ, ಪಕ್ಷಾತೀತವಾಗಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಮೂಗೂಡಿಸಿಗೊಂಡು ದುರ್ಬಲ ವರ್ಗದವರ ಸೇವೆ ಸಲ್ಲಿಸಿದ್ದಾರೆ. ನಮ್ಮದು ವ್ಯಕ್ತಿಯ ಆರಾಧನೆಯಲ್ಲ. ವ್ಯಕ್ತಿತ್ವದ ಆರಾಧನೆ. ಅವರ ವ್ಯಕ್ತಿತ್ವ, ನಾಯಕತ್ವಗುಣ, ಶ್ರೇರ್ಷತೆಗಳು, ಸಮಾಜ ಸೇವೆಗಳು ಯುವ ಸಮುದಾಯಕ್ಕೆ ಮಾದರಿಯಾಗಿದ್ದು ಅದನ್ನು ಸಾರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿಕೊಳ್ಳಲಾಗಿದೆ ಎಂದರು.
ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಮಾತನಾಡಿ, ಜಿಲ್ಲೆ ಕಂಡ ಧೀಮಂತ ನಾಯಕರಾಗಿರುವ ರಮಾನಾಥ ರೈಯವರ ೭೧ನೇ ಹುಟ್ಟು ಹಬ್ಬವನ್ನು ವೈಶಿಷ್ಠ್ಯಪೂರ್ಣವಾಗಿ ಆಚರಿಸಲಾಗುತ್ತಿದೆ. ೭೧ ಅಭಿಮಾನಿಗಳಿಂದ ರಕ್ತದಾನದ ಮೂಲಕ ಜೀವ ಉಳಿಸುವ ಸಂಕಲ್ಪ ಮಾಡಲಾಗವುದು. ಅವರು ಪ್ರಾಥಮಿಕ ವಿದ್ಯಾಭ್ಯಾಸ ಪಡೆದಿದ್ದು ಪೆರ್ನೆ ಮಜೀದಿಯ ದೋರ್ಮೆ ಶಾಲೆಯ ಅಂದಿನ ಸಹಪಾಠಿಗಳು, ಈಗಿನ ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಹುಟ್ಟು ಹಬ್ಬದ ಕೇಕ್ ಕತ್ತರಿಸಲಾಗುವುದು. ಅಂದಿನ ಸಹಪಾಠಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು. ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಸಹಿತ ಸಮಾಜ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಫಾರೂಕ್ ಪೆರ್ನೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.









