ಪುತ್ತೂರು: ಬೊಳುವಾರು ಪ್ರಗತಿ ಸ್ಪೆಷಾಲಿಟಿ ಹಾಸ್ಪಿಟಲ್‌ನ ಪ್ರಗತಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್‌ನ ವಾರ್ಷಿಕ ಫೆಸ್ಟ್ ೨೦೨೨ ಪ್ರಗತಿ ಸಂಭ್ರಮ ಸೆ. ೧೧ರಂದು ಪುತ್ತೂರು ರಾಜ್ಯ ಸರ್ಕಾರಿ ನೌಕರರ ಅಡಿಟೋರಿಯಂನಲ್ಲಿ ನಡೆಯಿತು.
ಯಂತ್ರ ಮನಸ್ಥಿತಿಯಿಂದ ಹೊರತರುವುದೇ ಸವಾಲು: ಡಾ. ನರೇಂದ್ರ ರೈ ದೇರ್ಲ
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುತ್ತೂರು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರೊಫೆಸರ್ ಡಾ. ನರೇಂದ್ರ ರೈ ದೇರ್ಲ, ಶಿಕ್ಷಣ ವಿಮುಖತೆಯ ಕಡೆ ಚಲಿಸುತ್ತಿದೆ. ಗುರುಮುಖೇನ, ವಿದ್ಯಾರ್ಥಿ ಕೇಂದ್ರತ ಹಾಗೂ ಪೋಷಕ ಕೇಂದ್ರಿತ ವ್ಯವಸ್ಥೆಯಿಂದ, ಯಂತ್ರದ ದಾರಿಯಲ್ಲಿ ಶಿಕ್ಷಣ ವ್ಯವಸ್ಥೆ ಸಾಗುತ್ತಿದೆ. ಪೋಷಕ ಕೇಂದ್ರಿತ ಶಿಕ್ಷಣದಲ್ಲಿ ಪ್ರತಿಷ್ಠೆಯೇ ಹೆಚ್ಚು ಅಗತ್ಯವಾಗಿತ್ತು. ಕೊರೋನಾ ಕಾಲಘಟ್ಟದ ಬಳಿಕ ಮಕ್ಕಳ ಕೈಗೆ ಲ್ಯಾಪ್‌ಟಾಪ್ ಸಿಕ್ಕಿತು, ಲ್ಯಾಪ್‌ಟಾಪ್ ಬಂದವು. ಇದರಿಂದಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಸಾಂಸ್ಕೃತಿಕ ಚಹರೆಯಿಂದ ಹೊರಬರುವಂತಾಯಿತು. ಈ ಯಂತ್ರದ ಮನಸ್ಥಿತಿಯಿಂದ ಮಕ್ಕಳನ್ನು ಹೊರತರುವುದೇ ಶಿಕ್ಷಕರ ಮುಂದಿರುವ ಬಹುದೊಡ್ಡ ಸವಾಲು. ವಿದ್ಯಾರ್ಥಿಗಳನ್ನು ಮತ್ತೊಮ್ಮೆ ಧ್ಯಾನಸ್ಥ ಸ್ಥಿತಿಯತ್ತ ಕೊಂಡೊಯ್ಯುವ ಅಗತ್ಯವಿದೆ. ಸಾಮಾಜಿಕ ಜಾಲತಾಣದ ಆಚೆಗೆ ಇರುವ ಜಗತ್ತನ್ನು ನೋಡುವ ಅಥವಾ ಸತ್ಯಶೋಧನೆಗೆ ಇಳಿಯುವ ಅಗತ್ಯ ಇಂದು ಇದೆ ಎಂದರು.
ಯುವಕರು ಸಹನೆ, ತಾಳ್ಮೆ, ಸಂವೇದನೆ, ಸಂಯಮವನ್ನು ಕಳೆದುಕೊಂಡಿದ್ದಾರೆ. ತರಗತಿಯಲ್ಲಿ ಒಂದು ಗಂಟೆಯ ಪಾಠವನ್ನು ಕೇಳುವ ತಾಳ್ಮೆ ವಿದ್ಯಾರ್ಥಿಗಳಿಗಿಲ್ಲವಾಗಿದೆ. ಕೊರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕೈಗೆ ನೀಡಿದ ಮೊಬೈಲ್ ಹಾಗೂ ಎಡ – ಬಲ ಎಂಬಂತೆ ಪ್ರತ್ಯೇಕಗೊಳಿಸುವ ನಮ್ಮ ಮನೆಯ ಟಿವಿ ಇವೆಲ್ಲವುಗಳ ಕಾರಣದಿಂದಾಗಿ ನಮ್ಮ ಮನಸ್ಸು, ಸಂಬಂಧ ಶಿಥಿಲಗೊಳ್ಳಲು ಆರಂಭಗೊಂಡಿತು. ಆದ್ದರಿಂದ ವಿದ್ಯಾರ್ಥಿಗಳು, ಯುವಜನತೆಯ ಬದ್ಧತೆ ಇಂದು ಬಹುಮುಖ್ಯ ಎನಿಸತೊಡಗಿದೆ. ಹಿಂದೆ ಮನೆಯ ಮುಂದೆ ಉರಿಯುತ್ತಿದ್ದ ದೀಪ, ಮನೆಯನ್ನಷ್ಟೇ ಅಲ್ಲ ದಾರಿಹೋಕರಿಗೆ ಸರಿಯಾದ ದಾರಿಯನ್ನು ತೋರಿಸಲು ಉಪಯೋಗವಾಗುತ್ತಿತ್ತು. ಅದೇ ರೀತಿಯಲ್ಲಿ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತಲುಪಬೇಕಾದ ದಾರಿಯನ್ನು ತೋರಿಸಲಿ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಮಾಜಕ್ಕೆ ಕೊಡುಗೆ ಅಗತ್ಯ: ಡಾ. ದೀಪಕ್ ರೈ
ಮುಖ್ಯ ಅತಿಥಿಯಾಗಿದ್ದ ಡಾ. ದೀಪಕ್ ರೈ ಮಾತನಾಡಿ, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ತೆರೆಮರೆಯಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಎಲ್ಲೂ ಕೂಡ ಸಮಾಜಕ್ಕೆ ಕಾಣಸಿಗುವುದಿಲ್ಲ. ವೈದ್ಯರೇ ಮುನ್ನೆಲೆಯಲ್ಲಿ ಇರುವುದರಿಂದ, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಪರಿಚಯ ಆಗದೇ ಹೋಗಬಹುದು. ಆದರೆ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಕೊಡುಗೆಯೂ ವೈದ್ಯಕೀಯ ರಂಗದಲ್ಲಿ ಬಹಳ ಮಹತ್ವಪೂರ್ಣ. ಆದರೆ ನಮ್ಮಲ್ಲಿ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ಕೊರತೆ ತುಂಬಾ ಇದೆ. ಪ್ಯಾರಾ ಮೆಡಿಕಲ್ ಪದವಿ ಪಡೆದ ಬಳಿಕ ಹೆಚ್ಚಿನ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗಲು ಬಯಸುತ್ತಾರೆ. ವಿದೇಶಗಳಿಗೆ ಹೋಗಬೇಕು ಎನ್ನುವ ನಿಮ್ಮ ಭಾವನೆ ತಪ್ಪಲ್ಲ. ಆದರೆ ಸಮಾಜಕ್ಕೆ ನಮ್ಮ ಕೊಡುಗೆಯ ಅಗತ್ಯವಿದೆ ಎನ್ನುವ ಜವಾಬ್ದಾರಿಯನ್ನು ಮರೆಯದಿರಿ ಎಂದು ಕಿವಿಮಾತು ಹೇಳಿದರು.
ಇನ್ನಷ್ಟು ಕಲಿಯುವ ಮನಸ್ಥಿತಿ ಬೆಳೆಸಿಕೊಳ್ಳಿ: ಡಾ. ಸುಧಾ ಎಸ್. ರಾವ್
ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿ ಡಾ. ಸುಧಾ ಎಸ್. ರಾವ್ ಮಾತನಾಡಿ, ವೃತ್ತಿನಿರತರು ವೃತ್ತಿಯಲ್ಲಿ ಪರಿಣತಿ ಪಡೆದುಕೊಂಡಷ್ಟು ಇನ್ನಷ್ಟು ಕಲಿಯುವ ಮನಸ್ಥಿತಿ ಬೆಳೆಯುತ್ತದೆ. ಅಂತಹ ಮಾನಸಿಕತೆ ಹುಟ್ಟಿಕೊಂಡಾಗ ಮಾತ್ರ ಬೆಳೆಯಲು ಸಾಧ್ಯ. ಈ ಬೆಳವಣಿಗೆ ನಮ್ಮ ಪರಿಸರದ ಆಗುಹೋಗುಗಳಿಗೆ ಅನುಸಾರವಾಗಿರಲಿ. ಆಗ ಮಾತ್ರ ನಾವು ಎಲ್ಲಾ ಕಡೆಯೂ ಸಲ್ಲುತ್ತೇವೆ ಎಂದರು.
ವೈದ್ಯಕೀಯ ರಂಗ ಪವಿತ್ರ ವೃತ್ತಿ: ಡಾ. ಸ್ಮಿತಾ ಎಸ್. ರಾವ್
ಪ್ರಗತಿ ಹಾಸ್ಟಿಟಲ್ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿ ಡಾ. ಸ್ಮಿತಾ ಎಸ್. ರಾವ್, ಪ್ಯಾರಾ ಮೆಡಿಕಲ್ ಸೇರಿದಂತೆ ವೈದ್ಯಕೀಯ ರಂಗ ಪವಿತ್ರ ವೃತ್ತಿ. ಇಲ್ಲಿಗೆ ಬರುವವರು ನೋವನ್ನು ಹಿಡಿದುಕೊಂಡೇ ಬರುತ್ತಾರೆ. ವೈದ್ಯಕೀಯ ರಂಗದಲ್ಲಿ ಇರುವವರು ಅವರಿಗೆ ಸಾಂತ್ವಾನ ಹೇಳುವ ಜೊತೆಗೆ, ಅವರ ಸಮಸ್ಯೆಯನ್ನು ಪರಿಹರಿಸಬೇಕಾದ ಅಗತ್ಯವಿದೆ ಎಂದರು.
ವಿದ್ಯಾಸಂಸ್ಥೆಯ ಮೇಲೆ ಕಳಕಳಿ ಇರಲಿ: ಡಾ. ಯು. ಶ್ರೀಪತಿ ರಾವ್
ಅಧ್ಯಕ್ಷತೆ ವಹಿಸಿದ್ದ ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್‌ನ ಡಾ. ಯು. ಶ್ರೀಪತಿ ರಾವ್ ಮಾತನಾಡಿ, ೧೩ ವಿದ್ಯಾರ್ಥಿಗಳಿದ್ದ ಪ್ಯಾರಾ ಮೆಡಿಕಲ್ ಕಾಲೇಜು ಈಗ ಸಭಾಂಗಣ ತುಂಬುವಂತಾಗಿದೆ. ಕಳೆದ ೧೦ ವರ್ಷಗಳಿಂದ ಸಂಸ್ಥೆ ಅಭಿವೃದ್ಧಿ ಹೊಂದಲು ಸಂಸ್ಥೆಯ ಪ್ರಾಂಶುಪಾಲರಾದ ಪ್ರೀತಾ ಹೆಗ್ಡೆ ಕಾರಣ. ಪದವಿ ಪಡೆದ ಬಳಿಕ ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ಮೇಲೆ ಕಳಕಳಿ ಇಟ್ಟುಕೊಳ್ಳಬೇಕು. ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನಿಮ್ಮ ಸಹಕಾರ ಅಗತ್ಯ ಎಂದರು.
ಸಂಸ್ಥೆಯ ಪ್ರಾಂಶುಪಾಲೆ ಪ್ರೀತಾ ಹೆಗ್ಡೆ ವರದಿ ವಾಚಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿಯನ್ನು ವಿತರಿಸಿದ್ದು, ಕಾರ್ಯಕ್ರಮವನ್ನು ಉಪನ್ಯಾಸಕಿ ಮಾನಸ ಭಟ್ ನಿರ್ವಹಿಸಿದರು. ಉಪನ್ಯಾಸಕರಾದ ರೇಷ್ಮಾ ಸ್ವಾಗತಿಸಿ, ಸುಕನ್ಯಾ ವಂದಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸುದ್ದಿಯಿಂದ ನೇರಪ್ರಸಾರ;
ಪ್ರಗತಿ ಸಂಭ್ರಮ ೨೦೨೨ ಕಲ್ಚರಲ್ ಫೆಸ್ಟ್‌ನ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ನೇರಪ್ರಸಾರ ಸುದ್ದಿ ಚಾನೆಲ್‌ನಲ್ಲಿ ಪ್ರಸಾರಗೊಂಡಿತು. ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯಕ್ರಮದ ನೇರಪ್ರಸಾರವನ್ನು ಸಾವಿರಾರು ಮಂದಿ ವೀಕ್ಷಿಸಿದರು.