94ಸಿ ನಿವೇಶನಕ್ಕೆ ಗ್ರಾ.ಪಂನಿಂದ ವಾಸ್ತವ್ಯ ದೃಢೀಕರಣ ಕಡ್ಡಾಯ – ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಂದಾಯ ಇಲಾಖೆಯ ಹೊಸ ನಿಯಮದ ಪ್ರಕಾರ ೯೪ಸಿ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಜನರು ಪಂಚಾಯತ್ ನಿಂದ ವಾಸ್ತವ್ಯ ದೃಢೀಕರಣ ಪಡೆದುಕೊಳ್ಳಬೇಕಾಗಿದೆ. ಈ ಬಗ್ಗೆ ಸೆ.೮ರಂದು ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಯಿತು. ಸದಸ್ಯ ರಾಜೇಶ್ ತ್ಯಾಗರಾಜೆ ಮಾತನಾಡಿ ಸ್ಥಳೀಯ ಜನರ ಸಮಕ್ಷಮದಲ್ಲಿ ಸ್ಥಳ ಮಹಜರು ಮಾಡಿ ಜನರಿಗೆ ತೊಂದರೆಯಾಗದ ರೀತಿ ವಾಸ್ತವ್ಯ ದೃಢೀಕರಣ ನೀಡಬೇಕು. ಗ್ರಾ.ಪಂ ಸದಸ್ಯರು ಇದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು. ಈ ಬಗ್ಗೆ ನಿರ್ಣಯ ಮಾಡುವಂತೆ ಉಪಾಧ್ಯಕ್ಷ ಸಂತೋಷ್ ಮಾಣಿಯಾಣಿ, ಸದಸ್ಯ ಮೋನಪ್ಪ ಪೂಜಾರಿ, ಹರೀಶ್ ರೈ ಜಾರತ್ತಾರು ಒತ್ತಾಯಿಸಿದರು. ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ತಾರತಮ್ಯ ಮಾಡಬಾರದು: ಗ್ರಾ.ಪಂ.ನ ಎಲ್ಲಾ ಸದಸ್ಯರನ್ನು ಸಮಾನ ದೃಷ್ಠಿಯಲ್ಲಿ ನೋಡಬೇಕು. ತಾರತಾಮ್ಯ ಮಾಡಬಾರದು. ನಾವು ಆಕ್ಷೇಪ ಮಾಡಿದರೂ ಕೆಲವೊಂದು ಕೆಲಸಗಳನ್ನು ಮಾಡಿ ಪಂಚಾಯತ್‌ನಿಂದ ಹಣ ಬಿಡುಗಡೆ ಮಾಡುತ್ತೀರಿ. ನಮ್ಮ ಮಾತಿಗೆ ಕಿಂಚಿತ್ತೂ ಸ್ಪಂದನೆ ಸಿಗುತ್ತಿಲ್ಲ, ನಮ್ಮ ಅಳಲನ್ನು ಯಾರತ್ರ ಹೇಳಿಕೊಳ್ಳಲಿ ಎಂದು ಸದಸ್ಯ ಮೋನಪ್ಪ ಪೂಜಾರಿ ಹೇಳಿದರು. ಅಧ್ಯಕ್ಷೆ ಸೌಮ್ಯಾ ಬಾಲಸುಬ್ರಹ್ಮಣ್ಯ ಉತ್ತರಿಸಿ ನಾವು ತಾರತಮ್ಯ ಮಾಡಿಲ್ಲ. ನಮಗೆ ಎಲ್ಲಾ ಸದಸ್ಯರೂ ಒಂದೇ. ಸದಸ್ಯರೆಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

ಪಂಚಾಯತ್‌ನಿಂದ ಹಾಕಿರುವ ದಾರಿ ದೀಪಗಳು ಹಗಲಲ್ಲಿ ಕೂಡ ಉರಿಯುತ್ತಿದೆ. ಅದನ್ನು ನಂದಿಸುವ ಜನರಿಲ್ಲ. ಈ ನಷ್ಟವನ್ನು ತುಂಬಿಸುವರಾರು ಎಂದು ಸದಸ್ಯ ಲೋಕೇಶ್ ಚಾಕೋಟೆ ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಮಾತಾಡಿದ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ದಾರಿ ದೀಪ ಮಾತ್ರ ಅಲ್ಲ ನೀರಿನ ಸಂಪರ್ಕ ಪಡೆದುಕೊಂಡು ಪೈಪ್‌ಲೈನ್ ತುಂಡಾದ ಸಂದರ್ಭ ಅದನ್ನು ದುರಸ್ತಿ ಮಾಡುವವರು ಕೂಡ ಇಲ್ಲ. ಕೆಲವೊಂದು ಕಡೆ ಕೆಟ್ಟುಹೋಗಿ ನೀರು ಪೋಲಾಗುವುದನ್ನು ನಾನು ನೋಡಿದ್ದೇನೆ. ಎಲ್ಲಾ ಕೆಲಸಗಳು ಪಂಚಾಯತ್ ಮಾಡುತ್ತದೆ ಎಂದು ತಿಳಿಯದೆ, ಪಂಚಾಯತ್ ನೊಟ್ಟಿಗೆ ನಾವು ಇದ್ದೇವೆ ಎಂಬ ಕೆಲಸವಾಗಬೇಕಿದೆ ಎಂದು ಹೇಳಿದರು.

ರಸ್ತೆಯಲ್ಲೇ ಹರಿಯುವ ನೀರು: ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಚರಂಡಿಗಳಲ್ಲಿ ಹೂಳು ತುಂಬಿ ರಸ್ತೆಯಲ್ಲಿಯೇ ನೀರು ಹರಿಯುತ್ತಿದೆ. ರಸ್ತೆಯ ಪಕ್ಕದಲ್ಲಿರುವ ಪೊದೆಗಂಟಿಗಳನ್ನು ತೆಗೆಯುವವರಿಲ್ಲ ಇದರಿಂದ ಶಾಲಾ ಮಕ್ಕಳಿಗೆ ಸಾರ್ವಜನಿಕ ಪಾದಚಾರಿಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ರಸ್ತೆ ಪ್ರಾಧಿಕಾರಕ್ಕೆ ಪತ್ರ ಬರೆಯಲು ಸದಸ್ಯ ಅಬ್ದುಲ್ ರಹಿಮಾನ್ ಒತ್ತಾಯಿಸಿದರು. ಈ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ರಾಷ್ಟ್ರಧ್ವಜ ಹಾರಾಟ-ಚರ್ಚೆ: ಕೌಡಿಚ್ಚಾರು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಆ.೧೬ರಂದು ಕೂಡಾ ರಾಷ್ಟ್ರಧ್ವಜ ಹಾರಾಡುತ್ತಿತ್ತು. ಇದು ರಾಷ್ಟ್ರಕ್ಕೆ ಕೊಡುವ ಗೌರವವೇ..? ಇದರ ಬಗ್ಗೆ ಫೊಟೋ ಕೂಡ ಇದೆ ಎಂದು ಪಂಚಾಯತ್ ಸದಸ್ಯೆ ಜಯಂತಿ ಪಟ್ಟುಮೂಲೆ ಆರೋಪಿಸಿದರು. ಈ ಬಗ್ಗೆ ಮಾತಾಡಿದ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಆ.೧೫ರಂದು ಸಂಜೆ ಧ್ವಜವನ್ನು ಅವರೋಹಣ ಮಾಡಬೇಕಿತ್ತು. ಇದು ತಪ್ಪು. ಅದೇ ರೀತಿ ಪೊಟೋ ತೆಗೆದ ವ್ಯಕ್ತಿ ಅದನ್ನು ನೋಡಿ ಸುಮ್ಮನೆ ಕೂತಿರುವುದು ಕೂಡ ಅಷ್ಟೇ ತಪ್ಪು. ಆ ವ್ಯಕ್ತಿಗೆ ಅದೇ ದಿನ ರಾಷ್ಟ್ರ ಧ್ವಜ ಅವರೋಹಣ ಮಾಡಿ ರಾಷ್ಟ್ರ ಭಕ್ತಿ ಸಾರ ಬಹುದಿತ್ತು ಎಂದರು. ಈ ಬಗ್ಗೆ ಸುಮಾರು ಹೊತ್ತು ವಾದ-ವಿವಾದ ನಡೆಯಿತು. ರಾಷ್ಟ್ರ ಧ್ವಜ ಹಾಕಿದವರು ಕ್ಷಮೆ ಕೇಳಿದ ಕ್ಷಣ ಗೊಂದಲಗಳಿಗೆ ತೆರೆ ಎಳೆಯಲಾಯಿತು. ಚರ್ಚೆಯಲ್ಲಿ ಸದಸ್ಯ ಅಬ್ದುಲ್ ರಹಿಮಾನ್, ಹರೀಶ್ ರೈ ಜಾರತ್ತಾರು,ನಾರಾಯಣ ನಾಯ್ಕ ಚಾಕೋಟೆ, ರಾಜೇಶ್ ಮಣಿಯಾಣಿ ಭಾಗವಹಿಸಿದರು.

ಅಭಿನಂದನೆ: ಇತ್ತೀಚೆಗೆ ಪಂಚಾಯತ್ ವ್ಯಾಪ್ತಿಯ ಮಾಡ್ನೂರು ಹೊಳೆಗೆ ರಾತ್ರಿ ವೇಳೆಯಲ್ಲಿ ಬಂದು ತ್ಯಾಜ್ಯವನ್ನು ಹಾಕುವವರನ್ನು ರೆಡ್ ಹ್ಯಾಂಡ್ ಹಿಡಿಯಲು ಸಹಕರಿಸಿದ ಪಂಚಾಯತ್ ಸದಸ್ಯ ವಿಜಿತ್ ಕಾವುರವರನ್ನು ಪಂಚಾಯತ್ ಸದಸ್ಯ ಹರೀಶ್ ರೈ ಜಾರತ್ತಾರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಸದಸ್ಯ ಮೋನಪ್ಪ ಪೂಜಾರಿ ತ್ಯಾಜ್ಯ ಹಾಕಿದವರಿಗೆ ಎಚ್ಚರಿಕೆ ಕೊಟ್ಟದ್ದು ಸರಿ ಆದರೆ ರೂ ೫ ಸಾವಿರ ಫೈನ್ ಹೆಚ್ಚಾಗಿದೆ. ಸ್ವಲ್ಪ ಕಡಿಮೆ ಮಾಡಬಹುದಿತ್ತು ಎಂದರು. ಇದಕ್ಕೆ ಆಕ್ಷೇಪಿಸಿದ ಸದಸ್ಯೆ ಭಾರತಿ ವಸಂತ್ ಮಾತಾಡಿ ಹೊಳೆಗೆ ತ್ಯಾಜ್ಯ ಹಾಕುವವರಿಗೆ ೫ ಅಲ್ಲ ೧೦ ಸಾವಿರ ದಂಡ ಹಾಕಬೇಕು ಇಂತವರಿಂದ ಸ್ವಚ್ಛ ಭಾರತದ ಕನಸು ನನಸಾದೀತೇ ಎಂದರು.

ಶ್ರದ್ಧಾಂಜಲಿ: ಇತ್ತೀಚೆಗೆ ನಿಧಾನರಾದ ಸಚಿವ ಉಮೇಶ್ ಕತ್ತಿಯವರಿಗೆ ಸಭೆಯ ಪ್ರಾರಂಭದಲ್ಲಿ ಶ್ರದ್ಧಾಂಜಲಿ ಅರ್ಜಿಸಲಾಯಿತು.

ಸದಸ್ಯರುಗಳಾದ ಸಲ್ಮಾ ಆಮ್ಬಿನಡ್ಕ, ಉಷಾರೇಖಾ ರೈ ಅಮೈ, ರೇಣುಕಾ ಸತೀಶ್, ಮೀನಾಕ್ಷಿ ಪಾಪೆಮಜಲು, ಸಾವಿತ್ರಿ ಪೊನ್ನೆತ್ತಳ್ಕ, ಅನಿತಾ ಆಚಾರಿಮೂಲೆ, ಹೇಮಾವತಿ ಚಾಕೋಟೆ, ಶಂಕರ ಮಾಡಂದೂರು, ಪುಷ್ಪಾವತಿ ಮರತ್ತಮೂಲೆ, ಸದಾನಂದ ಮಣಿಯಾಣಿ ಉಪಸ್ಥಿತರಿದ್ದರು. ಪಿ.ಡಿ.ಓ ಪದ್ಮಕುಮಾರಿ ಸ್ವಾಗತಿಸಿದರು. ಸಿಬ್ಬಂದಿ ಪ್ರಭಾಕರ ಕಡತ ಪ್ರತಿಗಳನ್ನು ವಾಚಿಸಿ ವಂದಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.