ಪುತ್ತೂರು: ಇ-ಫೌಂಡೇಶನ್ ಪುತ್ತೂರು (ಇ-ಫ್ರೆಂಡ್ಸ್) ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಾಲ್ಮರ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಶಿಕ್ಷಕಿ ಚಂದ್ರಾವತಿ, ಶಿಕ್ಷಕಿಯರಾದ ಪ್ರಭಾವತಿ, ಪ್ರೇಮಲತಾ, ಭಾರತಿ, ವಸಂತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇ-ಫೌಂಡೇಶನ್ ಅಧ್ಯಕ್ಷ ಆರಿಫ್ ಸಾಲ್ಮರ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವವರಾಗಿದ್ದು ಶಿಕ್ಷಕರಿಲ್ಲದೆ ಯಾರೂ ಕೂಡಾ ತಮ್ಮ ಜೀವನದಲ್ಲಿ ಸಾಮಾಜಿಕವಾಗಿ ಮತ್ತು ಬೌದ್ಧಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಶಿಕ್ಷಕರ ಉಪದೇಶಮತ್ತು ಮಾರ್ಗದರ್ಶನ ಮಹತ್ವದ್ದಾಗಿದೆ ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ ಮಾತನಾಡಿ ಇ-ಫೌಂಡೇಶನ್‌ನ ಯುವಕರು ಶಿಕ್ಷಕರ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಬಂದು ಆಚರಿಸಿದ್ದು ಮತ್ತು ನಮ್ಮ ಸೇವೆಯನ್ನು ಗುರುತಿಸಿ ನಮಗೆ ಸನ್ಮಾನ ಮಾಡಿರುವುದು ಹೆಚ್ಚು ಸಂತೋಷ ತಂದಿದೆ. ನಿಮ್ಮ ಈ ಕಾರ್ಯವು ಮುಂದಿನ ತಲೆಮಾರಿನ ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಷೀರ್ ಹಾಗೂ ಇ ಫೌಂಡೇಶನ್‌ನ ಸದಸ್ಯರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಶಾಲೆಗೆ ನಮ್ಮಿಂದಾಗುವ ಸಹಾಯವನ್ನು ಮಾಡುವುದಾಗಿ ಇ ಫ್ರೆಂಡ್ಸ್‌ನ ಮುಖಂಡರು ಭರವಸೆ ನೀಡಿದರು.