ಕಾಂಚನ: ನವೀಕರಣಗೊಂಡ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಪಾಠ ಪ್ರವಚನಗಳಿಗೆ ಚಾಲನೆ

0

ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಡಳಿತ ಮಂಡಳಿಗೆ ಒಳಪಟ್ಟ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ೩೭ ವರ್ಷಗಳ ಅನಂತರ ನವೀಕರಣಗೊಂಡಿದ್ದು ನವೀಕರಣಗೊಂಡ ಶಾಲೆಯಲ್ಲಿ ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ಚಾಲನೆ ನೀಡಲಾಯಿತು.

ಧರ್ಮಸ್ಥಳದ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಆಶಯದೊಂದಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿರುವ ಡಿ.ಹರ್ಷೇಂದ್ರ ಕುಮಾರ್‌ರವರ ಮಾರ್ಗದರ್ಶನದಲ್ಲಿ ಸುಮಾರು ಇಪ್ಪತ್ತೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲೆಯ ತರಗತಿ ಕೋಣೆಗಳು, ಮುಖ್ಯೋಪಾಧ್ಯಾಯರ ಕೊಠಡಿ, ಅಧ್ಯಾಪಕರ ಕೊಠಡಿಗಳಿಗೆ ಟೈಲ್ಸ್‌ಗಳ ನೆಲಹಾಸು, ಸುಣ್ಣ ಬಣ್ಣ, ವಿದ್ಯುತ್ ವೈರಿಂಗ್ ಅಳವಡಿಸುವಿಕೆ, ಶಾಲಾ ಸಭಾಂಗಣ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶೌಚಾಲಯ, ನೀರಿನ ಸೌಲಭ್ಯ, ಕಂಪ್ಯೂಟರ್ ಕೊಠಡಿ, ಅಕ್ಷರ ದಾಸೋಹ ಕೊಠಡಿಗಳ ನವೀಕರಣ ಕೆಲಸ ನಡೆಯಿತು. ನವೀಕರಣಗೊಂಡ ಹಿನ್ನೆಲೆಯಲ್ಲಿ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಗಣಹೋಮ ನೆರವೇರಿಸಿ, ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿಗಳನ್ನು ತರಗತಿಗೆ ಸಾಂಕೇತಿಕವಾಗಿ ಬರಮಾಡಿಕೊಳ್ಳಲಾಯಿತು .


ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ವಿದ್ಯಾರ್ಥಿಗಳ ಕ್ಷೇಮಪಾಲನಾಧಿಕಾರಿ ಸೋಮಶೇಖರ್ ಶೆಟ್ಟಿಯವರು ದೀಪ ಬೆಳಗಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಬೇಕಾದ ಎಲ್ಲಾ ಮೂಲಭೂತ ಸವಲತ್ತುಗಳನ್ನು ಧರ್ಮಸ್ಥಳದ ಮಂಜುನಾಥೇಶ್ವರ ಆಡಳಿತ ಸಂಸ್ಥೆ ಮಾಡಿಕೊಟ್ಟಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಮುಖ್ಯೋಪಾಧ್ಯಾಯ ಸೂರ್ಯಪ್ರಕಾಶ ಮಾತನಾಡಿ, ಧರ್ಮಸ್ಥಳದ ಖಾವಂದರು ಮತ್ತು ಧರ್ಮಸ್ಥಳ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಯಾಗಿರುವ ಡಿ ಹರ್ಷೇಂದ್ರ ಕುಮಾರ್‌ರವರಿಗೆ ವಿಶೇಷ ಧನ್ಯವಾದಗಳನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳದ ಇಂಜಿನಿಯರಾಗಿರುವ ಯಶೋಧರ ಹಾಗೂ ಕಾಂಟ್ರ್ಯಾಕ್ಟ್ ಅಬ್ದುಲ್‌ರವರನ್ನು ಗೌರವಿಸಲಾಯಿತು. ನಿವೃತ್ತ ಮುಖ್ಯಗುರು ಸುಬ್ರಹ್ಮಣ್ಯ ಭಟ್, ನಿವೃತ್ತ ಶಿಕ್ಷಕ ಕೃಷ್ಣಪ್ಪ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೇಣುಗೋಪಾಲ್ ನಾಯಕ್, ಗೋಪಾಲಕೃಷ್ಣ ನಾಯಕ್, ಶಿವರಾಮಕಾರಂತ, ದುಗ್ಗಪ್ಪ ಗೌಡ, ಸಿದ್ದಪ್ಪ ಗೌಡ, ಯುವಕ ಮಂಡಲದ ಅಧ್ಯಕ್ಷ ಅನಿಲ್ ಪಿಂಟೊ, ಉಪಾಧ್ಯಕ್ಷ ಸಚಿನ್‌ರವರು ಉಪಸ್ಥಿತರಿದ್ದರು. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here