ಜ. 24,25: ಪುತ್ತೂರಿನಲ್ಲಿ ಕೋಟಿ ಚೆನ್ನಯ ಕಂಬಳ ಯಶಸ್ಸಿಗಾಗಿ ಪೂರ್ವಭಾವಿ ಸಭೆ, ಸನ್ಮಾನ

0

ಕಂಬಳದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ-ಸೊರಕೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಜ.24 ಮತ್ತು 25 ರಂದು ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡು ಕರೆ ಕಂಬಳ ನಡೆಯಲಿದ್ದು ಕಾರ್ಯಕ್ರಮದ ಯಶಸ್ಸಿಗಾಗಿ ಕಂಬಳ ಸಮಿತಿಯಿಂದ ಪೂರ್ವಭಾವಿ ಸಭೆ ನಡೆಯಿತು.


ಕೋಟಿ ಚೆನ್ನಯ ಕಂಬಳ ಸಮಿತಿಯ ಗೌರವ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರು ಮಾತನಾಡಿ, 33 ವರ್ಷದ ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳವು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ನಡೆಯಲಿದೆ.ಈ ಬಾರಿಯ ಕಂಬಳ ಕೂಟವು ಅತ್ಯಂತ ಸಂಭ್ರಮ ಸಡಗರದಿಂದ ನಡೆಯುವಂತಾಗಬೇಕು ಇದಕ್ಕಾಗಿ ಚಂದ್ರಹಾಸ ಶೆಟ್ಟಿ ಅವರ ನೇತೃತ್ವದಲ್ಲಿ ಹಗಲು ರಾತ್ರಿಯನ್ನದೆ ಕೆಲಸ ಕಾರ್ಯಗಳು ನಡೆಯಲಿದ್ದು, ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

35 ವರ್ಷಗಳ ಹಿಂದೆ ನಿಂತು ಹೋಗಿದ್ದ ಕಂಬಳ ದಿವಂಗತ ಜಯಂತ ಕುಮಾರ್ ರೈರವರ ನೇತೃತ್ವದಲ್ಲಿ ಪುನಾರಾರಂಭಗೊಂಡಿತು. ಶಕುಂತಲಾ ಶೆಟ್ಟಿ ಅವರು ಈ ಹಿಂದೆ ಬಿಜೆಪಿ ಶಾಸಕಿರಾಗಿದ್ದ ಸಂದರ್ಭದಲ್ಲಿ ನಮ್ಮ ಕೈ ಬಿಡಲಿಲ್ಲ. ಅವರು ಕಾಂಗ್ರೆಸ್‌ನಿಂದ ಶಾಸಕರಾದ ಸಂದರ್ಭದಲ್ಲಿ ಪುತ್ತೂರಿನ ಕಂಬಳದ ಯಶಸ್ವಿಗೆ ಕೈಜೋಡಿಸಿದವರು. ಅವರು ಮಾಜಿ ಶಾಸಕರಾದರೂ ಇಲ್ಲಿಯವರೆಗೆ ಕಂಬಳದ ಮೇಲೆ ಅಭಿಮಾನವಿಟ್ಟು ಕಂಬಳ ಕ್ರೀಡೆಯ ಯಶಸ್ವಿಗಾಗಿ ದುಡಿಯುತ್ತಿದ್ದಾರೆ. ಅವರ ಸಹಕಾರ ಮುಂದೆಯೂ ನಮಗೆ ಬೇಕಾಗಿದೆ ಎಂದು ವಿನಯ್ ಕುಮಾರ್ ಸೊರಕೆ ಹೇಳಿದರು. ಅಶೋಕ್ ಕುಮಾರ್ ರೈ ಯವರು ಕಂಬಳದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುವ ಮೂಲಕವೂ ಶಾಸಕರಾಗಿ ಆಯ್ಕೆಗೊಳ್ಳಲು ಸಹಕಾರಿಯಾಯಿತು. ಶಾಸಕರಾದ ಮೇಲೆ ಅವರು ಕಂಬಳವನ್ನು ಬೆಂಗಳೂರಿನಲ್ಲಿ ನಡೆಸುವ ಮೂಲಕ ಕಂಬಳ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದರು. ಕಂಬಳಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಯೊಂದು ಕಡೆ ನಡೆಯುವ ಕಂಬಳಕ್ಕೆ ಸರಕಾರದ ವತಿಯಿಂದ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸುವಲ್ಲಿ ಸಫಲರಾಗಿದ್ದಾರೆ. ಪುತ್ತೂರಿನ ಕಂಬಳದ ಯಶಸ್ಸಿನ ಹಿಂದೆ ಅಶೋಕ್ ಕುಮಾರ್ ರೈ ಯವರ ಸಂಪೂರ್ಣ ಸಹಕಾರ ಇದೆ ಎಂದು ಸೊರಕೆ ಹೇಳಿದರು.


ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಅವರು ಮಾತನಾಡಿ ಕಳೆದ 33 ವರ್ಷಗಳಿಂದ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಕಂಬಳವು ಉತ್ತಮ ರೀತಿಯಿಂದ ನಡೆದು ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೂ ಪುತ್ತೂರಿನ ಕಂಬಳಕ್ಕೆ ಉತ್ತಮ ಹೆಸರು ಬರಬೇಕು ಎಂಬುದನ್ನು ಮನಗಂಡು ಕಂಬಳದ ಯಶಸ್ವಿಗೆ ಶಕ್ತಿಮೀರಿ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದು ಹೇಳಿದರು.


ದೊಡ್ಡ ಮಟ್ಟದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ನಡೆಯುವ ಕೋಟಿ ಚೆನ್ನಯ ಕಂಬಳದ ಯಶಸ್ವಿನಲ್ಲಿ ಮಹಾಲಿಂಗೇಶ್ವರನ ಆಶೀರ್ವಾದ ಅನುಗ್ರಹ ಖಂಡಿತ ಇದೆ ಎಂದ ಅವರು ಕಂಬಳಕ್ಕೆ ವರ್ಷದಿಂದ ವರ್ಷಕ್ಕೆ ಖರ್ಚು ವೆಚ್ಚಗಳು ಜಾಸ್ತಿ ಆಗುತ್ತಾ ಸಾಗುತ್ತಿದ್ದು ನೀಡುವ ಬಂಗಾರದ ಬೆಲೆ ಗಗನಕ್ಕೇರಿದೆ ಅಲ್ಲದೆ ಕಂಬಳ ಮುಗಿದ ತಕ್ಷಣ ಎರಡು ಹೊಸ ಕರೆಗಳ ನಿರ್ಮಾಣ ಕೆಲಸ ಕಾರ್ಯಗಳು ನಡೆಯಲಿದೆ ಕರೆಗಳನ್ನು ನಿರ್ಮಿಸುವ ಇಂಜಿನಿಯರ್‌ಗಳು 16,೦೦೦ ಕಲ್ಲುಗಳು ಮತ್ತು 60 ಲೋಡ್ ಮರಳು ಬೇಕೆಂದು ಅಂದಾಜಿಸಿದ್ದಾರೆ ಎಂದು ಹೇಳಿದರು.


ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಮಾತನಾಡಿ, ನಾನೊಬ್ಬಳು ಹೆಸರಿಗೆ ಮಾತ್ರ ಕಂಬಳದ ಸಂಪೂರ್ಣ ಯಶಸ್ಸಿಗೆ ಚಂದ್ರಹಾಸ ಶೆಟ್ಟಿ ಯವರ ನೇತೃತ್ವದಲ್ಲಿ ಎಲ್ಲರೂ ಶಕ್ತಿ ಮೀರಿ ದುಡಿಯಬೇಕಾಗಿದೆ. ಇದಕ್ಕಾಗಿ ಎಲ್ಲರ ಸಹಕಾರ, ಸಹಾಯ ಬೇಕಾಗಿದೆ . ಈ ಕಂಬಳ ಕ್ರೀಡೆಯು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಕೋಟಿ ಚೆನ್ನಯ ಕಂಬಳ ಸಮಿತಿಯ ಕೋಶಾಽಕಾರಿ ಪಂಜಿಗುಡ್ಡೆ ಈಶ್ವರ ಭಟ್ ರವರು ಮಾತನಾಡಿ ಪುತ್ತೂರಿನ ಐತಿಹಾಸಿಕ ಕ್ರೀಡೆಯಾದ ಕೋಟಿ ಚೆನ್ನಯ ಜೋಡುಕರೆ ಕಂಬಳವು ಎಲ್ಲಾ ವಿಧದಲ್ಲೂ ಅತ್ಯಂತ ಹೆಸರುವಾಸಿಯಾದ ಕ್ರೀಡೆಯಾಗಿದೆ ಕೋಣಗಳ ನಿರ್ವಹಣೆ ಸೇರುವ ಜನಸಂಖ್ಯೆ ಅಥವಾ ಅಚ್ಚುಕಟ್ಟಾಗಿ ಕಂಬಳ ನಡೆಸಿಕೊಂಡು ಬರುವ ಯುವಕರ ತಂಡದ ವಿಷಯದಲ್ಲಿ ಇಡೀ ರಾಜ್ಯದಲ್ಲಿ ಪುತ್ತೂರಿನ ಕಂಬಳ ಹೆಸರುವಾಸಿಯಾಗಿದೆ ಎಂದು ಹೇಳಿದರು. ಕಂಬಳವನ್ನು ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ಕೆಲವೊಂದು ಚಿಕ್ಕ ಚಿಕ್ಕ ಘಟನೆಗಳು ನಡೆದಲ್ಲಿ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಶೀಘ್ರದಲ್ಲಿ ಬಗೆಹರಿಸಿಕೊಳ್ಳಬೇಕು ಎಂದೂ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. ಕಂಬಳ ಸಮಿತಿಯ ವತಿಯಿಂದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರ ನೇತೃತ್ವದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅನ್ನದಾನದ ಕಾರ್ಯಕ್ರಮಕ್ಕೆ 15 ಕ್ವಿಂಟಾಲ್ ಅಕ್ಕಿಯನ್ನು ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ ಅರ್ಧದಷ್ಟು ಅಕ್ಕಿ ದೇವಸ್ಥಾನಕ್ಕೆ ಬಂದಿದ್ದು ಉಳಿದ ಅಕ್ಕಿಯನ್ನು ದೇವಸ್ಥಾನಕ್ಕೆ ಬೇಕಾಗುವ ಸಂದರ್ಭದಲ್ಲಿ ತರಿಸಿಕೊಳ್ಳಲಾಗುವುದೆಂದು ಅವರು ಹೇಳಿದರು.


ರಾಜೀವ ಶೆಟ್ಟಿಗೆ ಸನ್ಮಾನ:
ರಾಜ್ಯ ಕಂಬಳ ಸಮಿತಿಯ ತೀರ್ಪುಗಾರರ ಸಂಘದ ಉಪಾಧ್ಯಕ್ಷ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಗೌರವ ಸಲಹೆಗಾರ ರಾಜೀವ ಶೆಟ್ಟಿ ಎಡ್ತೂರುರವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಕಂಬಳ ಸಮಿತಿಯ ಗೌರವಾಧ್ಯಕ್ಷ ವಿನಯ ಕುಮಾರ್ ಸೊರಕೆ, ಇತರರು ರಾಜೀವ ಶೆಟ್ಟಿ ಎಡ್ತೂರುರವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ರಾಜೀವ ಶೆಟ್ಟಿ ಅವರು ಮಾತನಾಡಿ ಒಳ್ಳೆ ರೀತಿಯಿಂದ ನಡೆಯುವ ಕಂಬಳದ ಎಲ್ಲಾ ಒಳ್ಳೆಯ ಕೆಲಸ ಕಾರ್ಯಗಳಿಗೆ ನಮ್ಮ ಸಹಕಾರ ಯಾವತ್ತೂ ಇದೆ ಎಂದು ಹೇಳಿದರಲ್ಲದೆ ಈ ಸನ್ಮಾನವನ್ನು ಮಹಾಲಿಂಗೇಶ್ವರನ ಪ್ರಸಾದವೆಂದು ತಿಳಿದುಕೊಂಡಿದ್ದೇನೆ ಎಂದು ಹೇಳಿದರು.


ಆರ್ಯಾಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮುಹಮ್ಮದ್ ಅಲಿ,ಕಂಬಳ ಸಮಿತಿಯ ಸಂಚಾಲಕ ವಸಂತ ಕುಮಾರ್ ರೈ ಜೆ.ಕೆ., ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ. ಉಪಾಧ್ಯಕ್ಷರಾದ ಶಿವರಾಮ ಆಳ್ವ ಕುರಿಯ, ಜೋಕಿಂ ಡಿಸೋಜಾ,ಜಿನ್ನಪ್ಪ ಪೂಜಾರಿ ಮುರ, ಶಶಿಕಿರಣ್ ರೈ ನೂಜಿಬೈಲು, ಪ್ರೇಮಾನಂದ ನ್ಯಾಕ್, ರೋಷನ್ ರೈ ಬನ್ನೂರು, ರಂಜಿತ್ ಬಂಗೇರ, ಗಂಗಾಧರ ಶೆಟ್ಟಿ ಪನಡ್ಕ, ಪ್ರಶಾಂತ ರೈ ವಿಕ್ರಂ ಶೆಟ್ಟಿ ಅಂತರ,, ಸುಮಿತ್ ಶೆಟ್ಟಿ ಕಂಬಳಬೆಟ್ಟು, ಸುಶಾಂತ್ ಶೆಟ್ಟಿ ಕಂಬಳಬೆಟ್ಟು ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಕುಮಾರ್ , ಪ್ರಶಾಂತ್ ಮುರ, ದಾಮೋದರ ಮುರ, ಸಂತೋಷ್ ಕುಮಾರ್, ಅಭಿಷೇಕ್ ಬೆಳ್ಳಿಪಾಡಿ, ಸುದೇಶ್ ಕುಮಾರ್ ನ್ಯಾಕ್, ಉಮೇಶ್ ಕರ್ಕೇರ, ಶರತ್ ಕೇಪುಳು, ರಾಕೇಶ್ ಶೆಟ್ಟಿ ಮಠಂತಬೆಟ್ಟು, ಕಿರಣ್ ಡಿಸೋಜ, ಯೋಗೀಶ್ ಸಾಮಾನಿ, ಖಾದರ್ ಪೋಳ್ಯ ಸನತ್ ರೈ ಒಳತಡ್ಕ, ಅಭಿಷೇಕ್ ಬೆಳ್ಳಿ ಪಾಡಿ, ದಾಮೋದರ, ಗಣೇಶ್ ರಾಜ್ ಬಿಳಿಯೂರು, ಮಂಜುನಾಥ ಗೌಡ ಬನ್ನೂರು, ಬಿಪಿನ್ ಶೆಟ್ಟಿ, ವಿಲ್ಪ್ರೇಡ್ ಡಿಸೋಜಾ, ರಾಜೇಶ್ ಶೆಟ್ಟಿ ಕೆಮ್ಮಾರ, ರಾಕ್ ಶೆಟ್ಟಿ ಚಿಕ್ಕ ಪುತ್ತೂರು, ದೀಕ್ಷಿತ್ ಚಿಕ್ಕ ಪುತ್ತೂರು, ಕಿಶೋರ್ ತಾರಿಗುಡ್ಡೆ, ರಕ್ಷಿತ್ ಚಿಕ್ಕ ಪುತ್ತೂರು, ಲೋಕೇಶ್ ಪಡ್ಡಾಯೂರು, ಸುಹಾಸ್, ದಾಮೋದರ ಶೆಟ್ಟಿ, ರಫೀಕ್ ಎಂ.ಕೆ. ಜಗದೀಶ್ ಗೀತ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಕಂಬಳ ಸಮಿತಿಯ ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿ, ವಂದಿಸಿದರು.

ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಚಂದ್ರಹಾಸ ಶೆಟ್ಟಿ:
ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಪುತ್ತೂರಿನ ಕಂಬಳಕ್ಕೆ ಮಾತ್ರವಲ್ಲ ರಾಜ್ಯದಲ್ಲಿ ನಡೆಯುವ ಎಲ್ಲಾ ಕಂಬಳಗಳಿಗೂ ಸರಕಾರದ ವತಿಯಿಂದ ತಲಾ ಐದು ಲಕ್ಷ ರೂ. ಬಿಡುಗಡೆಗೊಳಿಸಲು ಶಕ್ತಿಮೀರಿ ದುಡಿದಿದ್ದಾರೆ. ಪುತ್ತೂರಿನ ಶಾಸಕರಿಗೆ ಸಮಸ್ತ ಜನರ ಪರವಾಗಿ ಹಾಗೂ ಕಂಬಳ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ತಿಳಿಸಿದರು.

LEAVE A REPLY

Please enter your comment!
Please enter your name here