ಪುತ್ತೂರು:ಈ ಹಿಂದೆ 6 ವರ್ಷಗಳ ಕಾಲ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ಅಶೋಕ್ ಕುಮಾರ್ ರೈ ಅವರನ್ನು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಯಾಗಿ ನೇಮಕಗೊಳಿಸಿ ವರ್ಗಾವಣೆ ಮಾಡಲಾಗಿದೆ.ರೈಯವರು ಅಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಡಾ.ಅಶೋಕ್ ಕುಮಾರ್ ರೈ ಅವರು ಪುತ್ತೂರಿನಲ್ಲಿ 2015ರಿಂದ ತಾಲೂಕು ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸಂದರ್ಭ ಕಡಬ ತಾಲೂಕು ಮತ್ತು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರ ಬಿಟ್ಟು ಉಳಿದೆಲ್ಲ ಆರೋಗ್ಯ ಕೇಂದ್ರಗಳಲ್ಲಿ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ಕೊಳ್ತಿಗೆ, ಉಪ್ಪಿನಂಗಡಿಯಲ್ಲಿ 10 ವರ್ಷ, ಈಶ್ವರಮಂಗಲದಲ್ಲಿ 5 ವರ್ಷ ಸೇರಿದಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಯಾಗಿರುವ ರಾಜೇಂದ್ರ ಕೆ.ವಿ ಅವರು ಡಾ.ದೀಪಕ್ ರೈ ಅವರನ್ನು ತಾಲೂಕು ಆರೋಗ್ಯಾಧಿಕಾರಿಯನ್ನಾಗಿ ನೇಮಕ ಮಾಡಿ ಡಾ.ಅಶೋಕ್ ರೈ ಅವರನ್ನು ಮುಂದಿನ ಅದೇಶದ ತನಕ ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಆದೇಶ ನೀಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಅಶೋಕ್ ರೈಯವರನ್ನು ತಾಲೂಕು ಆರೋಗ್ಯಾಧಿಕಾರಿಯಾಗಿ ನೇಮಕಗೊಳಿಸಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು ಅವರು ಕರ್ತವ್ಯಕ್ಕೆ ಹಾಜರಾಗಿದ್ದರಾದರೂ ಕೆಲವೇ ದಿನಗಳ ಬಳಿಕ ಡಾ.ದೀಪಕ್ ರೈಯವರನ್ನೇ ಮತ್ತೆ ತಾಲೂಕು ಆರೋಗ್ಯಾಽಕಾರಿಯಾಗಿ ನೇಮಕಗೊಳಿಸಲಾಗಿತ್ತು. ಅವರು ಅಧಿಕಾರ ವಹಿಸಿಕೊಂಡ ಬಳಿಕ ಡಾ.ಅಶೋಕ್ ರೈಯವರು ಮತ್ತೆ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಽಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇದೀಗ ಅವರನ್ನು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು ಅಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.