ಗೋಳಿತ್ತೊಟ್ಟು ಗ್ರಾಮಸಭೆ: ಅಧಿ ಕಾರಿಗಳ ಗೈರು ಹಾಜರಿಗೆ ಗ್ರಾಮಸ್ಥರ ಆಕ್ರೋಶ

0

ನೆಲ್ಯಾಡಿ: ಗ್ರಾಮಸಭೆ ಆರಂಭದಲ್ಲಿ ಬಹುತೇಕ ಇಲಾಖೆಯ ಅಧಿಕಾರಿಗಳ ಗೈರು ಹಾಜರಿ ಪ್ರಸ್ತಾಪಿಸಿದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ನಡೆದಿದೆ.‌

ಸಭೆ ಸೆ.12ರಂದು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಮೆಸ್ಕಾಂ ಕಡಬ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್‌ರವರು ಮಾರ್ಗದರ್ಶಿ ಅಽಕಾರಿಯಾಗಿದ್ದರು. ಸಭೆ ಆರಂಭವಾಗುತ್ತಿದ್ದಂತೆ ತೋಟಗಾರಿಕೆ, ಆಹಾರ, ಅರಣ್ಯ, ಇಂಜಿನಿಯರ್, ಪೊಲೀಸ್ ಸೇರಿದಂತೆ ಇತರೇ ಪ್ರಮುಖ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಪ್ರಸ್ತಾಪಿಸಿದ ಗ್ರಾಮಸ್ಥರಾದ ಅಬ್ದುಲ್‌ಕುಂಞಿ ಕೊಂಕೋಡಿ, ರಘುಪಾಲೇರಿ, ಕೊರಗಪ್ಪ ಗೌಡ ಕಲ್ಲಡ್ಕ, ಪ್ರಸಾದ್ ಕೆ.ಪಿ.ಸುಲ್ತಾಜೆ, ಶೇಖರ ಗೌಡ ಅನಿಲ ಮತ್ತಿತರರು, ಅಧಿಕಾರಿಗಳು ಬಾರದೇ ಗ್ರಾಮಸಭೆ ನಡೆಸುವುದು ಬೇಡ ಎಂದು ಹೇಳಿದರು. ನೋಡೆಲ್ ಅಽಕಾರಿಯಾಗಿದ್ದ ಸಜಿಕುಮಾರ್‌ರವರು ಇಲಾಖಾಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರು. ಸಭೆ ಆರಂಭಿಸುವ ಕೆಲವೊಂದು ಅಧಿಕಾರಿಗಳು ಬರುತ್ತಿದ್ದಾರೆ. ಗೈರು ಹಾಜರಿಯಾದ ಅಧಿಕಾರಿಗಳ ವಿರುದ್ಧ ಅವರ ಮೇಲಾಧಿಕಾರಿಗೆ ವರದಿ ನೀಡುವುದಾಗಿ ಸಜಿಕುಮಾರ್ ಹೇಳಿದರು. ಇದಕ್ಕೆ ಒಪ್ಪದ ಗ್ರಾಮಸ್ಥರು ಸಭೆ ಮುಂದುವರಿಸುವುದಕ್ಕೆ ಆಕ್ಷೇಪಿಸಿದರು. ಆಟೋ ರಿಕ್ಷಾ ಬಾಡಿಗೆ ಮಾಡಿಕೊಂಡು ಕಡಬ, ಪುತ್ತೂರು ತಾಲೂಕಿನ ಇಲಾಖೆಗಳಿಗೆ ತೆರಳಿ ಗ್ರಾಮಸಭೆಯ ನೋಟಿಸ್ ನೀಡಲಾಗಿದೆ ಎಂದು ಅಧ್ಯಕ್ಷ ಜನಾರ್ದನ ಪಟೇರಿ, ಕಾರ್ಯದರ್ಶಿ ಚಂದ್ರಾವತಿಯವರು ಸ್ಪಷ್ಟಪಡಿಸಿದರು. ಅಽಕಾರಿಗಳ ಗೈರು ಹಾಜರಿ ಬಗ್ಗೆ ಅರ್ಧತಾಸಿಗೂ ಹೆಚ್ಚು ಸಮಯ ಚರ್ಚೆ ನಡೆಯಿತು. ಕೊನೆಗೂ ವರದಿ ಮಂಡನೆಗೆ ಅವಕಾಶ ನೀಡಿದ ಗ್ರಾಮಸ್ಥರು ವರದಿಯನ್ನು ಸಭೆಯ ಕೊನೆಯಲ್ಲಿ ಮಂಜೂರು ಮಾಡುವುದಾಗಿ ಹೇಳಿದರು. ಅದರಂತೆ ವರದಿ ಮಂಡಿಸಿ ಸಭೆ ಮುಂದುವರಿಸಲಾಯಿತು. ನಂತರ ಇಂಜಿನಿಯರ್, ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಆಗಮಿಸಿದರು. ಉಳಿದಂತೆ ಗೈರು ಹಾಜರಿಯಾಗಿರುವ ಇಲಾಖೆಯ ಅಧಿಕಾರಿಗಳ ಬಗ್ಗೆ ತಾಲೂಕುಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲು ನಿರ್ಧರಿಸಲಾಯಿತು. ಸಭೆಯ ಕೊನೆಯಲ್ಲಿ ವರದಿ ಮಂಜೂರು ಮಾಡಲಾಯಿತು.

ಗ್ರಾಮವಾಸ್ತವ್ಯದಿಂದ ಸಮಸ್ಯೆ ಬಗೆಹರಿದಿಲ್ಲ: ಆಲಂತಾಯದಲ್ಲಿ ನಡೆದ ಕಡಬ ತಹಶೀಲ್ದಾರ್ ಗ್ರಾಮವಾಸ್ತವ್ಯದಿಂದ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ತಹಶೀಲ್ದಾರ್ ಸಹಿತ ಅಽಕಾರಿಗಳು ಬಂದು ಹೋಗಿದ್ದಾರೆಯೇ ಹೊರತು ಇದರಿಂದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಸಭೆಯಲ್ಲಿ ದೂರಿದರು. ಸಭೆ ಬಗ್ಗೆ ಗ್ರಾಮಸ್ಥರಿಗೆ ಸರಿಯಾದ ಮಾಹಿತಿಯೂ ನೀಡಿರಲಿಲ್ಲ ಎಂಬ ಆರೋಪವೂ ಕೇಳಿಬಂತು.

ಶಾಲಾ ಕಟ್ಟಡಕ್ಕೆ ಅನುದಾನ ಕೊಡಿ: ಕೊಣಾಲು ಪ್ರಾಥಮಿಕ ಶಾಲೆಯ ಕಟ್ಟಡ ಸೋರುತ್ತಿದೆ. ಮಳೆ ಬಂದಲ್ಲಿ ಮಕ್ಕಳನ್ನು ಆಫೀಸ್ ಕೊಠಡಿಯಲ್ಲಿ ಕುಳ್ಳಿರಿಸಲಾಗುತ್ತದೆ. ಈ ಬಗ್ಗೆ ಬಿಇಒ ಕಚೇರಿಗೆ ಮನವಿ ಮಾಡಿದ ವೇಳೆ ಸರಕಾರದಲ್ಲಿ ದುಡ್ಡಿಲ್ಲ ಎಂದು ಹೇಳುತ್ತಾರೆ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ರಫೀಕ್‌ರವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಹುಕ್ಕೇರಿಯವರು, ಇಲ್ಲಿ ಕಟ್ಟಡ ನಿರ್ಮಾಣಕ್ಕೆ ೯೫ ಲಕ್ಷ ರೂ.,ಅವಶ್ಯಕತೆ ಇದೆ. ಶಿಕ್ಷಣ ಇಲಾಖೆ ಮತ್ತು ಎಸ್‌ಡಿಎಂಸಿಯವರು ಈ ಬಗ್ಗೆ ಮನವಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಗಿಡ ತೆರವು-ಆಕ್ಷೇಪ: ಪರಿಸರ ದಿನಾಚರಣೆಯಂದು ಕೊಣಾಲು ಶಾಲಾ ಮೈದಾನದಲ್ಲಿ ಮಿಯಾವಾಕಿ ಮಾದರಿಯಲ್ಲಿ ಸುಮಾರು ೭೫೦ ಗಿಡ ನಾಟಿ ಮಾಡಲಾಗಿದೆ. ಇದಕ್ಕೆ ಪರಿಸರ ಪ್ರೇಮಿಯಾಗಿರುವ ದುರ್ಗಾಸಿಂಗ್‌ರವರು ಖರ್ಚು ಮಾಡಿ ಜೆಸಿಬಿಯಿಂದ ಕೆಲಸ ಮಾಡಿಸಿದ್ದಾರೆ. ಆದರೆ ಆ ಬಳಿಕ ಅಲ್ಲಿನ ಗಿಡಗಳನ್ನು ತೆರವುಗೊಳಿಸಲಾಗಿದೆ. ಒಮ್ಮೆ ನೆಟ್ಟ ಗಿಡಗಳನ್ನು ತೆರವು ಮಾಡಿರುವುದು ಯಾಕೆ ? ಎಂದು ಅಬ್ದುಲ್‌ಕುಂಞಿ ಕೊಂಕೋಡಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ರಫೀಕ್‌ರವರು, ಈ ಮೈದಾನ 200 ಮೀ.ಟ್ರ್ಯಾಕ್‌ನದ್ದಾಗಿದೆ. ಈ ಪರಿಸರದಲ್ಲಿ ಬೇರೆ ಎಲ್ಲಿಯೂ ಇಷ್ಟು ದೊಡ್ಡ ಮೈದಾನವಿಲ್ಲ. ವನಮಹೋತ್ಸವದಂದು ಗಿಡ ನಾಟಿಗೆ ಶಾಲೆಯ ಹಿಂದೆ ಜಾಗ ಗುರುತಿಸಲಾಗಿತ್ತು. ಆದರೆ ಗಿಡ ನಾಟಿಯ ದಿನ ದೈಹಿಕ ಶಿಕ್ಷಣ ಶಿಕ್ಷಕರು ಇರಲಿಲ್ಲ. ಮುಖ್ಯಶಿಕ್ಷಕರ ಅರಿವಿಗೆ ಇದು ಬಂದಿಲ್ಲ. ಆದ್ದರಿಂದ ಆ ಬಳಿಕ ಮೈದಾನದಲ್ಲಿದ್ದ ಗಿಡಗಳನ್ನು ತೆರವುಗೊಳಿಸಿ ಶಾಲೆಯ ಹಿಂಬದಿ ನೆಡಲಾಗಿದೆ ಎಂದು ಹೇಳಿದರು.

ಅಪಾಯಕಾರಿ ಮರ ತೆರವುಗೊಳಿಸಿ: ಸಣ್ಣಂಪಾಡಿ ಸೇರಿದಂತೆ ಗ್ರಾಮದ ಹಲವೆಡೆ ಅಪಾಯಕಾರಿ ಮರಗಳಿದ್ದು ಇದರ ತೆರವುಗೊಳಿಸಬೇಕೆಂದು ಗ್ರಾಮಸ್ಥ ಪ್ರಸಾದ್ ಕೆ.ಪಿ.ಸುಲ್ತಾಜೆ ಒತ್ತಾಯಿಸಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಧರೆಯ ಮಣ್ಣು ತೆಗೆದಿರುವುದರಿಂದ ವಿದ್ಯುತ್ ಕಂಬಗಳು ಅಪಾಯಕಾರಿಯಾಗಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಜಿಕುಮಾರ್‌ರವರು, ಮಳೆಯಿಂದಾಗಿ ಕಂಬ ಬದಲಾವಣೆ ವಿಳಂಬ ಆಗುತ್ತಿದೆ. ಜನರ ಸುರಕ್ಷತೆ ದೃಷ್ಟಿಯಿಂದ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು. ಅಪಾಯಕಾರಿ ಮರಗಳ ತೆರವಿಗೆ ಸ್ಥಳೀಯ ಪಂಚಾಯತ್‌ನಿಂದ ಅರಣ್ಯ ಇಲಾಖೆಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಜಿಕುಮಾರ್ ಹೇಳಿದರು.

ಸ್ಮಶಾನ ಜಾಗ ಅತಿಕ್ರಮಣ: ಸ್ಮಶಾನದ ಕುರಿತಂತೆ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಗ್ರಾಮಕರಣಿಕರು, ಆಲಂತಾಯ ಗ್ರಾಮದಲ್ಲಿ ಸ್ಮಶಾನಕ್ಕೆ ಮೀಸಲಾಗಿದ್ದ ಜಾಗದ ಗಡಿಗುರುತು ಮಾಡಲಾಗಿದೆ. 1998ರಲ್ಲಿಯೇ ಪಂಚಾಯತ್‌ಗೆ ಹಸ್ತಾಂತರವೂ ಆಗಿದೆ. ಆದರೆ ಇದರಲ್ಲಿ ಈಗ ಬೇರೆಯವರಿಗೆ ಜಾಗ ಮಂಜೂರು ಆಗಿದೆ. ಈ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದರು. ಗೋಳಿತ್ತೊಟ್ಟು, ಕೊಣಾಲುನಲ್ಲಿ ಸ್ಮಶಾನ ಜಾಗದ ಕುರಿತೂ ಚರ್ಚೆಯಾಯಿತು. ಆಲಂತಾಯದಲ್ಲಿ ಕೆರೆ ಜಾಗವೂ ಒತ್ತುವರಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ದೂರು ನೀಡಿದಲ್ಲಿ ಧಮ್ಕಿ: ಗ್ರಾಮಸ್ಥ ಗಣೇಶ್ ಬೊಟ್ಟಿಮಜಲು ಮಾತನಾಡಿ, ಗ್ರಾಮಕರಣಿಕರ ವಿರುದ್ಧ ದೂರು ನೀಡಿರುವುದಕ್ಕೆ ಅವರ ಯೂನಿಯನ್‌ನವರು ಕರೆ ಮಾಡಿ ನನಗೆ ಧಮ್ಕಿ ಹಾಕಿದ್ದಾರೆ. ಗ್ರಾಮದಲ್ಲಿ 100 ಎಕ್ರೆ ಜಾಗ ಇದ್ದವರಿಗೆ ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ನೋಡೆಲ್ ಅಧಿಕಾರಿ ಸಜಿಕುಮಾರ್‌ರವರು ಆಧಾರ ಇಲ್ಲದೆ ಗ್ರಾಮಸ್ಥರು ಆರೋಪ ಮಾಡಬಾರದು. ಅಧಿಕಾರಿಗಳು ಭ್ರಷ್ಟಾಚಾರವೆಸಗಿದಲ್ಲಿ ಲೋಕಾಯುಕ್ತ ಅಥವಾ ಅವರ ಹಿರಿಯ ಅಧಿಕಾರಿಗಳಿಗೆ ದೂರು ನೀಡಬಹುದು ಎಂದರು. ಸರ್ವೆ ನಂ.25ರಲ್ಲಿ ಅರಣ್ಯ ಜಾಗವೂ ಇರುವುದರಿಂದ ಜಂಟಿ ಸರ್ವೆಗೆ ದಿನ ನಿಗದಿಗೊಳಿಸಲಾಗಿತ್ತು. ಆದರೆ ಅಂದು ಅರಣ್ಯ ಇಲಾಖೆಯವರು ಬಾರದೇ ಇದ್ದುದ್ದರಿಂದ ಜಂಟಿ ಸರ್ವೆ ಆಗಿಲ್ಲ ಎಂದು ಗ್ರಾಮಕರಣಿಕರು ಹೇಳಿದರು. ನೆಲ್ಯಾಡಿ ಸರಕಾರಿ ಆಸ್ಪತ್ರೆಗೆ ಹೆರಿಗೆ ವಾರ್ಡ್, ಶಸಚಿಕಿತ್ಸಾ ವ್ಯವಸ್ಥೆಯಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಕೊಣಾಲು ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತ್‌ಗೆ ಇಸ್ಮಾಯಿಲ್ ಕೋಲ್ಪೆ ಮನವಿ ಮಾಡಿದರು.

ಆರೋಗ್ಯ, ಅರಣ್ಯ, ಮೆಸ್ಕಾಂ, ಕೃಷಿ, ಕಂದಾಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷೆ ಶೋಭಾಲತಾ, ಸದಸ್ಯರಾದ ಕೆ.ಬಾಬು ಪೂಜಾರಿ, ಜೀವಿತಾ ಪೆರಣ, ಗುಲಾಬಿ ಕೆ., ಜಾನಕಿ, ಸಂಧ್ಯಾ, ನೋಣಯ್ಯ ಗೌಡ, ವಿ.ಸಿ.ಜೋಸೆಫ್, ಶ್ರುತಿ ಪಿ., ವಾರಿಜಾಕ್ಷಿ, ಪ್ರಜಲ, ಹೇಮಲತಾ, ಬಾಲಕೃಷ್ಣ ಗೌಡ ಅಲೆಕ್ಕಿ, ಸವಿತಾ ಕೆ., ಪದ್ಮನಾಭ ಪೂಜಾರಿ, ಶಿವಪ್ರಸಾದ್ ಎಸ್.,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಜಗದೀಶ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಾವತಿ ವರದಿ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು

LEAVE A REPLY

Please enter your comment!
Please enter your name here