ನರಿಮೊಗರು ಪ್ರಾ.ಕೃ.ಪ. ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

  • ರೂ.310.42 ಕೋಟಿ ವ್ಯವಹಾರ ; ರೂ.125.90 ಲಕ್ಷ ನಿವ್ವಲ ಲಾಭ
  • ಗುಣಮಟ್ಟದ ಸೇವೆಯೊಂದಿಗೆ ಸಂಘ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ-ಬಾಬು ಶೆಟ್ಟಿ

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ.೩೧೦.೪೨ ಕೋಟಿ ವ್ಯವಹಾರ ನಡೆಸಿ ರೂ.೧೨೫.೯೦ ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ೧೨% ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಾಬು ಶೆಟ್ಟಿ ವೀರಮಂಗಲ ಹೇಳಿದರು.

ಸೆ.೧೭ರಂದು ನರಿಮೊಗರು ಪ್ರಾ.ಕೃ.ಪ.ಸ.ಸಂಘದ ರೈತ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಸದಸ್ಯರಿಗೆ ತೃಪ್ತಿದಾಯಕ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದೇವೆ. ಸಾಲ ನೀಡುವಿಕೆ ಮತ್ತು ವಸೂಲಾತಿಯನ್ನು ಉತ್ತಮ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದರು.

ನಮ್ಮ ಸಂಘದ ರೈತರ ಸಾಲ ಮನ್ನಾ ಹಣ ಬಿಡುಗಡೆಯಾಗಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಇದೀಗ ೮೦ ರೈತರ ಪರವಾಗಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೇನೆ. ನ್ಯಾಯಾಲಯದಲ್ಲಿ ದೂರು ದಾಖಲಿಸಿರುವ ಕಾರಣ ಇತ್ತೀಚೆಗೆ ರೈತ ಸಂಘದ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿಲ್ಲ ಎಂದು ಬಾಬು ಶೆಟ್ಟಿ ಹೇಳಿದರು.

ಧ್ವಜಸ್ತಂಭ ವಿಚಾರದಲ್ಲಿ ಚರ್ಚೆ:
ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದ ದಿ.ಧರ್ಣಪ್ಪ ಗೌಡರ ಸ್ಮರಣಾರ್ಥ ಸಂಘದ ಹಳೆಯ ಕಟ್ಟಡದ ಮುಂಭಾಗದಲ್ಲಿ ನಿರ್ಮಾಣಗೊಂಡಿದ್ದ ಧ್ವಜಸ್ತಂಭ ಹೊಸ ಕಟ್ಟಡ ಕಟ್ಟಿದ ಮೇಲೆ ಇಲ್ಲದಾಗಿದೆ. ಇದನ್ನು ಪುನರ್‌ನಿರ್ಮಿಸಬೇಕೆಂದು ದಿ.ಧರ್ಣಪ್ಪ ಗೌಡರ ಸಹೋದರ ಶಾಂತಪ್ಪ ಗೌಡ ಹೇಳಿದರು. ಸದಸ್ಯ ದೇವರಾಜ್ ಮಾತನಾಡಿ ಧ್ವಜಸ್ತಂಭ ತೆಗೆದು ಅನೇಕ ವರ್ಷಗಳು ಕಳೆದರೂ ಯಾಕೆ ಇನ್ನೂ ಅದನ್ನು ಅಳವಡಿಸಿಲ್ಲ ಎಂದು ಪ್ರಶ್ನಿಸಿದರು. ಸದಸ್ಯ ಪ್ರಸಾದ್ ಮಾತನಾಡಿ ಹೊಸ ಕಟ್ಟಡ ಕಟ್ಟುವಾಗ ಧ್ವಜಸ್ತಂಭ ಸರಿಯಾದ ರೀತಿಯಲ್ಲಿ ಕಟ್ಟಲು ಜಾಗ ಇಟ್ಟಿಲ್ಲ ಯಾಕೆ ಎಂದು ಕೇಳಿದರು.

ಅಧ್ಯಕ್ಷ ಬಾಬು ಶೆಟ್ಟಿ ಉತ್ತರಿಸಿ ನೀವು ಹೇಳಿದ ಹಾಗೆ ಧ್ವಜಸ್ತಂಭ ಕಟ್ಟಲು ಅಲ್ಲಿ ಜಾಗದ ಕೊರತೆ ಇದೆ. ರೇಷನ್ ಅಂಗಡಿಯೂ ಇರುವ ಕಾರಣ ಲಾರಿ ಬಂದರೆ ಜಾಗ ಸಾಕಾಗುವುದಿಲ್ಲ ಎಂದು ಹೇಳಿದರು. ಸದಸ್ಯ ಸುರೇಶ್ ಪ್ರಭು ಮಾತನಾಡಿ ಈಗ ಇರುವ ಜಾಗದಲ್ಲಿ ಏನಾದರೂ ವ್ಯವಸ್ಥೆ ಮಾಡಿದರೆ ಉತ್ತಮ ಎಂದರು. ಇದೇ ವಿಷಯದಲ್ಲಿ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ವಾರಂಬಳಿತ್ತಾಯ ಹಾಗೂ ಇನ್ನಿತರರು ಅಭಿಪ್ರಾಯ ವ್ಯಕ್ತಪಡಿಸಿದರು. ಅಧ್ಯಕ್ಷರು ಮಾತನಾಡಿ ಅಲ್ಲಿ ಜಾಗ ಇಲ್ಲ. ನಾವು ನೀವೆಲ್ಲಾ ಒಟ್ಟಾಗಿ ಹೋಗಿ ಜಾಗ ಪರಿಶೀಲಿಸುವ ಎಂದು ಹೇಳಿದರು.

ಸಾಲ ಮನ್ನಾ ವಿಳಂಬ-ಕೋರ್ಟ್‌ನಲ್ಲಿ ದೂರು: ಚರ್ಚೆ
ಸಂಘದ ಸದಸ್ಯ ರೈತರ ಸಾಲ ಮನ್ನಾ ಹಣ ಬಿಡುಗಡೆಯಾಗದ ಬಗ್ಗೆ ಮೊನ್ನೆ ಪುತ್ತೂರಿನಲ್ಲಿ ನಡೆದ ಪ್ರತಿಭಟನೆಗೆ ನಿರ್ದೇಶಕರು ಯಾಕೆ ಬಂದಿಲ್ಲ ಎಂದು ಸದಸ್ಯ ದೇವರಾಜ್ ಪ್ರಶ್ನಿಸಿದರು. ಅಧ್ಯಕ್ಷರು ಈಗಾಗಲೇ ಸಾಲಮನ್ನಾ ವಿಚಾರದಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವುದರಿಂದ ಅವರಿಗೆ ಪಾಲ್ಗೊಳ್ಳಲು ಆಗುವುದಿಲ್ಲ ಸರಿ, ಆದರೆ ಉಳಿದವರಿಗೆ ಬರಬಹುದಿತ್ತಲ್ಲಾ ಎಂದು ಕೆಲವರು ಪ್ರಶ್ನೆ ಮಾಡಿದರು. ಸದಸ್ಯ ರವೀಂದ್ರ ರೈ ನೆಕ್ಕಿಲು ಮಾತನಾಡಿ ಸಾಲ ಮನ್ನಾದ ವಿಷಯ ಇಲ್ಲಿ ಸುಖಾಸುಮ್ಮನೆ ಮಾತನಾಡಿ ಏನೂ ಪ್ರಯೋಜನ ಇಲ್ಲ. ಅದು ಸರಕಾರದಿಂದ ಬರಬೇಕಾದ ಹಣ. ಸಹಕಾರಿ ಸಚಿವರು ಮನಸ್ಸು ಮಾಡಿದರೆ ಸರಕಾರಕ್ಕೆ ಸುಗ್ರೀವಾಜ್ಞೆ ಮೂಲಕ ೧೫ ನಿಮಿಷದಲ್ಲಿ ಹಣ ಬಿಡುಗಡೆ ಮಾಡಬಹುದು. ಸುಮ್ಮನೆ ಆಡಳಿತ ಕಮಿಟಿಯನ್ನು ದೂರುತ್ತಾ ಕಾಲಹರಣ ಮಾಡಿ ಏನು ಪ್ರಯೋಜನ ಎಂದು ಕೇಳಿದರು. ಸದಸ್ಯ ಸುರೇಶ್ ಪ್ರಭು ಮಾತನಾಡಿ ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆಯೇ ವಿನಃ ಮಹಾಸಭೆಯ ಕಲಾಪ ವ್ಯರ್ಥ ಮಾಡುವ ಉದ್ದೇಶ ನಮಗಿಲ್ಲ. ರೈತರಿಗೆ ಅನ್ಯಾಯವಾದರೆ ಮುಂದಕ್ಕೂ ಪ್ರತಿಭಟನೆ, ಹೋರಾಟಕ್ಕೆ ಸಿದ್ದರಿದ್ದೇವೆ ಎಂದು ಹೇಳಿದರು. ಸದಸ್ಯ ವಿಶ್ವನಾಥ ಬಲ್ಯಾಯ ಧ್ವನಿಗೂಡಿಸಿದರು.

ಸದಸ್ಯ ಸುಬ್ರಾಯ ಮಾತನಾಡಿ ಆಡಳಿತ ಸಮಿತಿಯವರ ಪ್ರಯತ್ನ ಕಡಿಮೆ ಆದ ಕಾರಣ ಸಾಲ ಮನ್ನಾ ಹಣ ಬಿಡುಗಡೆಯಾಗದೆ ಸಮಸ್ಯೆಯಾಗಿದೆ. ಆಡಳಿತ ಸಮಿತಿಯವರು ಸಹಕಾರ ಸಚಿವರ ಬಳಿ ಹೋದರೆ ಸಾಕಾಗದು ಮುಖ್ಯಮಂತ್ರಿ ಬಳಿ ಹೋಗಬೇಕಿತ್ತು ಎಂದರು. ಇದೇ ವಿಚಾರವಾಗಿ ಸದಸ್ಯ ಪ್ರಸಾದ್ ಮಾತನಾಡಿದರು. ಸದಸ್ಯ ಬೆಳಿಯ್ಯಪ್ಪ ಗೌಡ ಮಾತನಾಡಿ ನ್ಯಾಯಾಲಯದಲ್ಲಿ ದೂರು ನೀಡಿದ್ದು ಸರಿ, ಅದರ ಖರ್ಚು ವೆಚ್ಚಗಳನ್ನು ಸಂಘದಿಂದ ಭರಿಸಬಾರದು ಎಂದು ಹೇಳಿದರು. ಸುರೇಶ್ ಪ್ರಭು ಮಾತನಾಡಿ ನಾವು ರೈತರಿಗಾಗಿ ಹೋರಾಟ ನಡೆಸುತ್ತಿದ್ದು ಇದೇ ವಿಚಾರದಲ್ಲಿ ಬೆಂಗಳೂರಿಗೆ ಹೋಗಲೂ ಸಾಕಷ್ಟು ಖರ್ಚು ತಗಲುತ್ತದೆ. ನಮ್ಮ ಕೈಯಿಂದ ಹಣ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ ನಾವು ಈಗಾಗಲೇ ಸಚಿವ ಎಸ್.ಟಿ ಸೋಮಶೇಖರ್ ಅವರ ಅಪಾಯಿಂಟ್‌ಮೆಂಟ್ ತೆಗೆದಿದ್ದು ಸೆ.೧೯ರಂದು ಬೆಳಿಗ್ಗೆ ೯.೩೦ಕ್ಕೆ ಭೇಟಿಗೆ ಸಮಯ ದಿನ ನಿಗದಿಯಾಗಿದೆ ಎಂದು ಹೇಳಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್ ಮಾತನಾಡಿ ಸಾಲಮನ್ನಾ ಹಣ ಬಿಡುಗಡೆಯಾಗದೇ ಇರುವುದರಲ್ಲಿ ನಮ್ಮ ಕಡೆಯಿಂದ ಯಾವುದೇ ತಪ್ಪು ಸಂಭವಿಸಿಲ್ಲ ಸರಕಾರಿ ಮಟ್ಟದಲ್ಲಿ ಹಣ ಬಿಡುಗಡೆಯಾಗಬೇಕಿದ್ದು ಹಣ ಬಿಡುಗಡೆಗೊಂಡ ಕೂಡಲೇ ರೈತರಿಗೆ ದೊರಕುವಂತೆ ಮಾಡುತ್ತೇವೆ ಎಂದು ಹೇಳಿದರು.

ಗೌರವಾರ್ಪಣೆ
ಸಂಘದ ಹಿರಿಯ ಸದಸ್ಯರಾದ ಜಿನ್ನಪ್ಪ ಗೌಡ, ಮಾರಪ್ಪ ಗೌಡ, ಜಯರಾಮ ಕೆದಿಲಾಯ ಎಸ್, ಗಂಗಯ್ಯ ಗೌಡ, ವಿಶ್ವನಾಥ ನಾಯಕ್, ಸೀತರಾಮ ಗೌಡ, ಸುಲೈಮಾನ್ ಪಿ, ಅಬ್ದುಲ್ ರಹಿಮಾನ್ ಅರ್ತಿಕೆರೆ ಹಾಗೂ ಇತ್ತೀಚೆಗೆ ನಿವೃತ್ತಿ ಹೊಂದಿದೆ ಸಿಬ್ಬಂದಿಗಳಾದ ಮೇದಪ್ಪ ಗೌಡ, ಮೀರಾ ಎನ್.ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇತರ ಚರ್ಚೆಗಳು:
ಸದಸ್ಯೆ ವಿಶಾಲಾಕ್ಷಿ ಮಾತನಾಡಿ ಡಿವಿಡೆಂಡ್ ಹೆಚ್ಚಿಸಬೇಕೆಂದು ಆಗ್ರಹಿಸಿದರು. ಸುರೇಶ್ ಪ್ರಭು ಮತ್ತಿತರರು ಧ್ವನಿಗೂಡಿಸಿದರು.
ಅಧ್ಯಕ್ಷರು ಸಂಘದಲ್ಲಿ ಕೆಲಸ ಕೊಡಿಸುವ ವಿಚಾರವಾಗಿ ಮಹಿಳೆಯೋರ್ವರಿಂದ ಹಣ ಪಡೆದ ಆರೋಪ ಹೊಸಮ್ಮ ದೈವಸ್ಥಾನದಲ್ಲಿ ದೂರು ಸಲ್ಲಿಕೆಯಾಗಿ ಬಳಿಕದ ವಿಚಾರದ ಬಗ್ಗೆ ಸುಬ್ರಾಯ ಪ್ರಸ್ತಾಪಿಸಿದರು. ಬೆಳಿಯಪ್ಪ ಗೌಡ ಹಾಗೂ ಆನಂದರವರು ಧ್ವನಿಗೂಡಿಸಿದರು. ನನ್ನ ಮೇಲಿನ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸಾಬೀತಾಗಿದೆ ಮತ್ತು ಅದು ಮುಗಿದ ಅಧ್ಯಾಯ. ಇಲ್ಲಿ ಅದರ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಅಧ್ಯಕ್ಷರು ಹೇಳಿದರು. ಒಮ್ಮೆ ಮುಗಿದ ವಿಷಯ ಮತ್ತೆ ಇಲ್ಲಿ ಬೇಡ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ, ನಿರ್ದೇಶಕರಾದ ಕುಶಾಲಪ್ಪ ಗೌಡ, ನಾರಾಯಣ ಪೂಜಾರಿ, ವಿಜೇಶ್ ಕುಮಾರ್, ಹಸನ ಅಳಕೆ, ಪರಮೇಶ್ವರ ಭಂಡಾರಿ, ನಾಗಮ್ಮ ಟಿ, ಲತಾ ಮೋಹನ್, ಶಿವರಾಮ, ವಿಶ್ವನಾಥ ನಾಯ್ಕ, ಯಮುನಾ ಹಾಗೂ ಡಿಸಿಸಿ ಬ್ಯಾಂಕ್ ಪ್ರತಿನಿಧಿ ವಸಂತ ಯಸ್ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್ ಕಾರ್ಯಸೂಚಿ ಪ್ರಕಾರ ಸಭೆ ನಿರ್ವಹಿಸಿದರು. ನಿರ್ದೇಶಕಿ ಲತಾ ಮೋಹನ್ ಪ್ರಾರ್ಥಿಸಿದರು. ಸಿಬ್ಬಂದಿ ಸಂದೀಪ್ ಕೆ ವಾರ್ಷಿಕ ವರದಿ ವಾಚಿಸಿದರು. ನೂತನ ಸಿಬ್ಬಂದಿಗಳಾದ ರೇಷ್ಮಾ, ಮೇಘ, ಶ್ರಾವ್ಯ ತಮ್ಮ ಪರಿಚಯ ಮಾಡಿಕೊಂಡರು. ಸಿಬ್ಬಂದಿಗಳಾದ ಜಯರಾಮ ಬಿ, ರೋಹಿತ್ ಪಿ, ಅಶ್ವಿತಾ, ನಳಿನಿ ಬಿ.ಕೆ, ಜೀತೇಶ್ ಸಹಕರಿಸಿದರು.
ಸಭೆಯ ಮೊದಲಿಗೆ ಅಗಲಿದ ಸಂಘದ ಸದಸ್ಯರಿಗೆ ಮತ್ತು ಸಾಲ ಮನ್ನಾ ವಿಚಾರವಾಗಿ ಬೆಂಗಳೂರಿಗೆ ಹೋಗಿದ್ದ ಕೃಷಿಕರಿಗೆ ನೆರವು ನೀಡಿದ್ದ ದಿ.ಪ್ರವೀಣ್ ನೆಟ್ಟಾರುರವರಿಗೆ ಮೌನ ಪ್ರಾರ್ಥನೆ ನಡೆಸಲಾಯಿತು.

LEAVE A REPLY

Please enter your comment!
Please enter your name here