ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

  • ರೂ.೨೧೮.೪೦ ಕೋಟಿ ವ್ಯವಹಾರ, ರೂ.೧.೨೬ ಕೋಟಿ ಲಾಭ, ೧೫% ಡಿವಿಡೆಂಡ್
  • ಸದಸ್ಯರ ಸಂಪೂರ್ಣ ಸಹಕಾರವೇ ಸಂಘದ ಯಶಸ್ಸಿಗೆ ಕಾರಣ-ಸೊರಕೆ

ಟಿ.ಸ್ಟೇನ್ಸ್ ಕಂಪೆನಿಯಿಂದ ಮಾಹಿತಿ ಕಾರ್ಯಗಾರ:
ಮಹಾಸಭೆಯ ನಂತರ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಟಿ.ಸ್ಟೇನ್ಸ್ ಕಂ ಲಿ. ಮಂಗಳೂರು ಇದರ ಸಹಭಾಗಿತ್ವದಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಬೆಳೆಗಳಿಗೆ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ಟಿ ಸ್ಟೇನ್ಸ್ ಕಂ.ಲಿ ವಿಜ್ಞಾನಿ ತೇಜ ಶಂಕರ್ ಅವರು ಪ್ರೊಜೆಕ್ಟರ್ ಮೂಲಕ ಕೃಷಿಕರಿಗೆ ಮಾಹಿತಿ ನೀಡಿದರು. ೧೬೦ ವರ್ಷಗಳ ಇತಿಹಾಸ ಹೊಂದಿರುವ ಟಿ.ಸ್ಟೇನ್ಸ್ ಕಂಪೆನಿಯು ತನ್ನ ಉತ್ಪನ್ನಗಳನ್ನು ೩೨ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ಅವರು ಹೇಳಿದರು. ನಂತರ ಕೃಷಿಗೆ ಸಂಬಂಧಿಸಿದ ವಿವಿಧ ಮಾಹಿತಿ ನೀಡಿದ ಅವರು ಮಣ್ಣಿನ ಬಗ್ಗೆಯೂ ಮಾಹಿತಿ ನೀಡಿ ಕೃಷಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಟಿ.ಸ್ಟೇನ್ಸ್ ಕಂಪೆನಿಯ ಸೀನಿಯರ್ ರೀಜನಲ್ ಮೆನೇಜರ್ ಸುಬ್ರಹ್ಮಣ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಪ್ರಶಸ್ತಿ ನೀಡಲು ಆಗ್ರಹ:
ಉತ್ತಮ ಶಿಕ್ಷಕ, ಉತ್ತಮ ಪೊಲೀಸ್ ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧಕರಿಗೆ ಪ್ರಶಸ್ತಿಗಳು ಇರುವಂತೆ ಉತ್ತಮ ಕಾರ್ಯನಿರ್ವಹಣಾಧಿಕಾರಿ ಪ್ರಶಸ್ತಿ ಯಾಕಿಲ್ಲ ಎಂದು ಶಿವರಾಮ ರೈ ಸೊರಕೆ ಪ್ರಶ್ನಿಸಿದರು. ನಮ್ಮ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈಯವರು ಕರ್ತವ್ಯ ನಿಷ್ಠೆಯಲ್ಲಿ ಎಲ್ಲರಿಂದ ಪ್ರಶಂಸಿಸಲ್ಪಟ್ಟವರಾಗಿದ್ದು ಅಂತಹ ಪ್ರಶಸ್ತಿ ಇವರಿಗೆ ಸಿಗಬೇಕು. ಅದರ ಬಗ್ಗೆ ಸಂಘ ಗಮನಹರಿಸಬೇಕೆಂದು ಅವರು ಹೇಳಿದರು. ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಉತ್ತರಿಸಿ ನೀವು ಹೇಳುವ ವಿಷಯ ಸರಿ ಇದೆ. ಕಾರ್ಯನಿರ್ವಹಣಾಧಿಕಾರಿಯವರ ಕಾರ್ಯಕ್ಷಮತೆಯೂ ಅತ್ಯುತ್ತಮವಾಗಿದೆ. ಆದರೆ ಪ್ರಶಸ್ತಿ ವಿಚಾರಗಳು ಸರಕಾರದ ಮಟ್ಟದಲ್ಲಿ ಆಗಬೇಕಾದ ಕಾರ್ಯಕ್ರಮಗಳಾಗಿದೆ ಎಂದು ಹೇಳಿದರು. ಮಹಾಸಭೆಯಲ್ಲಿ ಸದಸ್ಯರು ಕಾರ್ಯನಿರ್ವಹಣಾಧಿಕಾರಿ ಬಗ್ಗೆ ಇಂತಹ ಮಾತು ಹೇಳುತ್ತಾರೆಂದರೆ ಬಹುಷಃ ಅದುವೇ ಅವರಿಗೆ ದೊಡ್ಡ ಪ್ರಶಸ್ತಿ, ಅದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ ಎಂದು ಸುರೇಶ್ ಕುಮಾರ್ ಸೊರಕೆ ಹೇಳಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮುಂದಿನ ಮಹಾಸಭೆಯಲ್ಲಿ ಒಳ್ಳೆಯ ಸನ್ಮಾನ ಕಾರ್ಯ ಏರ್ಪಡಿಸಬೇಕು ಎಂದು ಸದಸ್ಯ ಸದಾಶಿವ ಶೆಟ್ಟಿ ಪಟ್ಟೆ ಹೇಳಿದರು.

ಮಹಾಸಭೆಗೆ ಬಂದವರಿಗೆ ೧೦೦ ರೂ:
ಮಹಾಸಭೆಗೆ ಬಂದವರಿಗೆ ಚಹಾ ಮತ್ತು ಊಟದ ವ್ಯವಸ್ಥೆ ಎಲ್ಲ ಸಹಕಾರಿ ಸಂಘಗಳ ಮಹಾಸಭೆಗಳಲ್ಲೂ ಸಾಮಾನ್ಯವಾಗಿದೆ. ಆದರೆ ಮುಂಡೂರು ಪ್ರಾ.ಕೃ.ಪ.ಸ.ಸಂಘದ ಮಹಾಸಭೆಗೆ ಆಗಮಿಸುವ ಸದಸ್ಯರಿಗೆ ಚಹಾ, ಊಟದ ಜೊತೆಗೆ ೧೦೦ ರೂಪಾಯಿ ನೀಡಲಾಯಿತು. ಇಲ್ಲಿ ಅನೇಕ ವರ್ಷಗಳಿಂದ ಇದು ಜಾರಿಯಲ್ಲಿದೆ.

ಚಿತ್ರ: ಯೂಸುಫ್ ರೆಂಜಲಾಡಿ
ಪುತ್ತೂರು: ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ. ೨೧೮.೪೦ ಕೋಟಿ ವ್ಯವಹಾರ ಮಾಡಿ ರೂ.೧.೨೬ ಕೋಟಿ ನಿವ್ವಳ ಲಾಭ ಗಳಿಸಿದೆ. ಶೇ.೯೭.೯೨ ಸಾಲ ವಸೂಲಾತಿ ಮಾಡಿದ್ದು ಸದಸ್ಯರಿಗೆ ೧೫% ಡಿವಿಡೆಂಡ್ ಘೋಷಿಸಲಾಗಿದೆ. ಸಂಘವು ಸರ್ವತೋಮುಖ ಪ್ರಗತಿಯನ್ನು ಸಾಧಿಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಹೇಳಿದರು.

ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಸಭಾಭವನದಲ್ಲಿ ಸೆ.೧೮ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಸಂಘ ಕೃಷಿಕರ ಆಶೊತ್ತರಗಳಿಗೆ ಸದಾ ಸ್ಪಂಧಿಸುತ್ತಿದ್ದು ತಳ ಮಟ್ಟದ ಕೃಷಿಕರೂ ನಮ್ಮ ಸಂಘದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ನಮ್ಮ ಸಂಘದ ವ್ಯಾಪ್ತಿಗೊಳಪಡದವರೂ ವಿವಿಧ ಅವಶ್ಯಕತೆ ಮತ್ತು ಯೋಜನೆಗಳ ವಿಚಾರವಾಗಿ ನಮ್ಮ ಸಂಘವನ್ನು ಸಂರ್ಕಿಸುತ್ತಿದ್ದಾರೆ. ರೈತರ ನೆಮ್ಮದಿ ಮತ್ತು ಬಲವರ್ಧನೆಯೇ ನಮ್ಮ ಉದ್ದೇಶವಾಗಿದ್ದು ಅದಕ್ಕಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ ಮತ್ತು ಯಶಸ್ಸನ್ನು ಕೂಡಾ ಸಾಧಿಸುತ್ತಿದ್ದೇವೆ. ಆ ಎಲ್ಲಾ ಕಾರಣಗಳಿಂದಾಗಿ ಸಂಘಕ್ಕೆ ಎಲ್ಲ ಕಡೆಗಳಲ್ಲೂ ವಿಶೇಷ ಗೌರವ ದೊರಕುತ್ತಿದೆ ಎಂದು ಸೊರಕೆ ಹೇಳಿದರು.

ನೊಟೀಸು ಸಿಗದ ಬಗ್ಗೆ ಚರ್ಚೆ:
ಸಂಘದ ಸಲಾಗಾರರಿಗೆ ಸಕಾಲದಲ್ಲಿ ನೊಟೀಸು ಸಿಗದಿರುವ ಬಗ್ಗೆ ಚರ್ಚೆ ನಡೆಯಿತು. ಸದಸ್ಯರಾದ ಶಿವರಾಮ ರೈ ಸೊರಕೆ, ಸೀತರಾಮ ಅಂಬಟ, ಸದಾಶಿವ ಶೆಟ್ಟಿ ಪಟ್ಟೆ, ಬಾಲಕೃಷ್ಣ ಕಣ್ಣಾರಾಯ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಕೃತಿಕ ವಿಕೋಪ ಸಂದರ್ಭ ನೆರವು ನೀಡಲು ಮನವಿ:
ಸಂಘದ ಸದಸ್ಯರು ಮೃತಪಟ್ಟ ಸಂದರ್ಭದಲ್ಲಿ ಸಂಘದಿಂದ ರೂ.೫ ಸಾವಿರ ಮೊತ್ತ ನೀಡುತ್ತಿದ್ದು ಅದನ್ನು ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭಲ್ಲೂ ಕೊಡುವಂತೆ ವಿಸ್ತರಿಸಬೇಕು ಎಂದು ಸದಸ್ಯ ಚಂದ್ರಶೇಖರ್ ಎನ್‌ಎಸ್‌ಡಿ ಆಗ್ರಹಿಸಿದರು. ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಉತ್ತರಿಸಿ ಸದಸ್ಯರು ಮೃತಪಟ್ಟಾಗ ತಕ್ಷಣ ನೀಡುವ ರೂ.೫ ಸಾವಿರ ಮೊತ್ತ ಅಂತ್ಯಕ್ರಿಯೆಗೆ ಸಾಕಾಗುತ್ತದೆ. ಪ್ರಾಕೃತಿಕ ವಿಕೋಪದ ಸಂದಧರ್ಭದಲ್ಲಿ ಅದರ ಪರಿಶೀಲನೆ, ಅಂದಾಜು ಪಟ್ಟಿ ತಯಾರಿ ಅವೆಲ್ಲಾ ಕಷ್ಟ. ಅದು ಸರಕಾರದ ಮಟ್ಟದಲ್ಲಿ ಆದರೆ ಉತ್ತಮ ಎಂದು ಹೇಳಿದರು.

ಸಿಬ್ಬಂದಿಗಳಿಗೆ ಸಮವಸ್ತ್ರ ವ್ಯವಸ್ಥೆ ಮಾಡಿ:
ಸಂಘದ ಸಿಬ್ಬಂದಿಗಳಿಗೆ ಸಮವಸ್ತ್ರ ಮಾಡಿದರೆ ಬ್ಯಾಂಕಿಗೆ ಬಂದು ವ್ಯವಹರಿಸುವವರಿಗೆ ಅನುಕೂಲವಾಗಲಿದ್ದು ಅದಕ್ಕಾಗಿ ಸಮವಸ್ತ್ರ ವ್ಯವಸ್ಥೆ ಮಾಡಬೇಕೆಂದು ಶಿವರಾಮ ರೈ ಸೊರಕೆ ಮನವಿ ಮಾಡಿದರು.

ಭಕ್ತಕೋಡಿಯಲ್ಲಿ ನೂತನ ಶಾಖೆ:
ನಿರ್ದೇಶಕ ಆನಂದ ಪೂಜಾರಿ ಮಾತನಾಡಿ ಭಕ್ತಕೋಡಿಯಲ್ಲಿ ಸಂಘದ ಶಾಖೆ ತೆರೆಯಬೇಕೆನ್ನುವುದು ಅಧ್ಯಕ್ಷರ ಮತ್ತು ನಮ್ಮೆಲ್ಲ ಕನಸಾಗಿದ್ದು ಅದು ಮುಂದಿನ ದಿನಗಳಲ್ಲಿ ಈಡೇರಲಿದೆ ಎಂದು ಹೇಳಿದರು.

ಕಟ್ಟಕಡೆಯ ವ್ಯಕ್ತಿಗೂ ಪ್ರಯೋಜನ-ಶರತ್ ಡಿ
ಡಿಸಿಸಿ ಬ್ಯಾಂಕ್ ಪ್ರತಿನಿಧಿ ಶರತ್ ಡಿ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಕಾರ ಸಂಘದಿಂದ ಪ್ರಯೋಜನ ದೊರಕುತ್ತಿದ್ದು ಪಾರದರ್ಶಕ ಸೇವೆಯೂ ಸಿಗುತ್ತಿದೆ. ಮುಂಡೂರು ಸಹಕಾರಿ ಸಂಘವು ಸುರೇಶ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇತರ ಸಂಘಗಳಿಗೆ ನಮ್ಮ ಸಂಘ ಮಾದರಿ-ಎಸ್.ಡಿ ವಸಂತ
ಸಂಘದ ನಿರ್ದೇಶಕ ಎಸ್.ಡಿ ವಸಂತ ಮಾತನಾಡಿ ನಮ್ಮ ಸಂಘದ ಮೂಲಕ ಕೃಷಿಕರಿಗೆ ಉತ್ತಮ ಸೇವೆ ಸಿಗುತ್ತಿದ್ದು ಇತರ ಸಂಘಗಳಿಗೆ ನಮ್ಮ ಸಂಘ ಮಾದರಿಯಾಗಿದೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಸಮರ್ಪಕ ಮತ್ತು ಉತ್ಕೃಷ್ಟ ಸೇವೆಯನ್ನು ಸಲ್ಲಿಸುವುದು ಕೂಡಾ ಸಂಘದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಶಿವನಾಥ ರೈಯವರಿಂದ ಬೆಳೆ ಸಮೀಕ್ಷೆ ಮಾಹಿತಿ:
ಸಂಘದ ನಿರ್ದೇಶಕ ಶಿವನಾಥ ರೈ ಅವರು ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು. ನಾವು ರೈತ ಸಂಘವನ್ನು ಗ್ರಾಮ ಮಟ್ಟದಲ್ಲಿ ಸ್ಥಾಪಿಸಿದ್ದು ಆ ಮೂಲಕ ರೈತರ ಆಶೊತ್ತರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದ್ದೇವೆ. ಕೃಷಿ ನಾಶದಂತಹ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ಮೊತ್ತ ಲಭಿಸುವಂತೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದವರು ಹೇಳಿದರು.

ಕೋಟಿಗಿಂತ ಹೆಚ್ಚು ಲಾಭಗಳಿಸುತ್ತಿದೆ-ಯಾಕೂಬ್ ಮುಲಾರ್
ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ನಮ್ಮ ಸಂಘದ ವರ್ಷದಿಂದ ವರ್ಷಕ್ಕೆ ಕೋಟಿಗಿಂತ ಹೆಚ್ಚು ಲಾಭಗಳಿಸುತ್ತಿದ್ದು ನಮಗೆ ಸಂತಸದ ವಿಚಾರ. ಬೆಳೆ ವಿಮೆ ಸೇರಿದಂತೆ ಎಲ್ಲ ವಿಚಾರಗಳಲ್ಲೂ ನಮ್ಮ ಸಂಘಕ್ಕೆ ಒಳ್ಳೆಯ ಹೆಸರಿದೆ. ಕೃಷಿಕರಿಗೆ ಸಂಘ ಗುಣಮಟ್ಟದ ಸೇವೆಯನ್ನು ನೀಡುತ್ತಾ ಬಂದಿದ್ದು ಎಲ್ಲರಿಂದ ಪ್ರಶಂಸಿಸಲ್ಪಟ್ಟಿದೆ ಎಂದು ಅವರು ಹೇಳಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಸಿ ಕಾರ್ಯಕಲಾಪಗಳನ್ನು ನಡೆಸಿಕೊಟ್ಟು ಸಭೆ ನಿರ್ವಹಿಸಿದರು. ನಿರ್ದೇಶಕ ಎಸ್.ಡಿ ವಸಂತ ಸ್ವಾಗತಿಸಿದರು. ಉಪಾಧ್ಯಕ್ಷ ಯಾಕೂಬ್ ಮುಲಾರ್ ವಂದಿಸಿದರು.

ಸಿಬ್ಬಂದಿಗಳಾದ ವತ್ಸಲಾ ಎಸ್, ಗಣೇಶ್ ಪಜಿಮಣ್ಣು, ರಿತೇಶ್ ರೈ, ಲಿಂಗಪ್ಪ ನಾಯ್ಕ, ಮೋಹನ ನಾಯ್ಕ ಪಿ, ಗಣೇಶ ಪಿ, ಸರಾಫರಾದ ಶ್ರಿಧರ ಆಚಾರ್ಯ ಸಹಕರಿಸಿದರು. ಸಭೆಯ ಮೊದಲಿಗೆ ಪ್ರಸಕ್ತ ಸಾಲಿನಲ್ಲಿ ಅಗಲಿರುವ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆ ನಡೆಸಲಾಯಿತು.

LEAVE A REPLY

Please enter your comment!
Please enter your name here