ಹಂಟ್ಯಾರು ಶಾಲೆಯಲ್ಲಿ ಸೋಲಾರ್ ಡಿಜಿಟಲ್ ಎಜ್ಯುಕೇಶನ್ ಪ್ರೋಗ್ರಾಮ್ ಲೋಕಾರ್ಪಣೆ: ನೆಕ್ಸ್ಟ್ ಎಜ್ಯುಕೇಶನ್ ಅಡ್ವಾನ್ಸ್‌ಡ್ ಟೆಕ್ನಾಲಜಿಯ ತಾಲೂಕಿನಲ್ಲಿಯೇ ಪ್ರಥಮ ಸಿಸ್ಟಮ್

0

ಪುತ್ತೂರು:ಸರಕಾರಿ ಶಾಲಾ ವಿದ್ಯಾರ್ಥಿಗಳಿಗೂ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ನೀಡುವ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ಸೌರಶಕ್ತಿ ಆಧಾರಿತ ಡಿಜಿಟಲ್ ಎಜುಕೇಶನ್ ಪ್ರೋಗ್ರಾಮ್ ಲೋಕಾರ್ಪಣೆಯು ಸೆ.೧೭ರಂದು ಸಂಟ್ಯಾರ್ ಶಾಲೆಯಲ್ಲಿ ನಡೆಯಿತು. ಗ್ರಾಮ ಪಂಚಾಯತ್‌ನ ಸಹಯೋಗ ಹಾಗೂ ನೆಸ್ಟ್ ಎಜ್ಯುಕೇಶನ್‌ಗೆ ಸಂಬಂಧಿಸಿದ ವಿಷಯಗಳನ್ನು ಹೊಂದಿರುವ ಸ್ಮಾರ್ಟ್ ಕ್ಲಾಸ್ ಪ್ರಥಮ ಘಟಕವು ಸಂಟ್ಯಾರ್ ಶಾಲೆಯಲ್ಲಿ ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಪ್ರಾರಂಭಗೊಂಡಿದೆ.


ಆರ್ಯಾಪು ಗ್ರಾಮ ಪಂಚಾಯತ್, ಮೆಂಡಾ ಫೌಂಡೇಶನ್ ಸಂಸ್ಥೆ ಮತ್ತು ಐಐಟಿ ಖರಗಪುರ, ಅಲ್ಯೂಮಿನಿ ಅಸೋಸಿಯೇಷನ್ ಬೆಂಗಳೂರು ಇವರ ಅನುದಾನದೊಂದಿಗೆ ರೂ.೨.೧೦ಲಕ್ಷ ವೆಚ್ಚದಲ್ಲಿ ಸೌರಶಕ್ತಿ ಆಧಾರಿತ ಡಿಜಿಟಲ್ ಎಜ್ಯುಕೇಶನ್ ಪ್ರೋಗ್ರಾಮ್ ಹಾಗೂ ಸೌರ ದೀಪಗಳ ಅಳವಡಿಸಲಾಯಿತು.

ಏನಿದು ಡಿಜಿಟಲ್ ಎಜ್ಯುಕೇಶನ್?
ಸೆಲ್ಕೋ ಸೋಲಾರ್ ಲೈಟ್ ಸಂಸ್ಥೆಯ `ಇ-ಶಾಲಾ’ಎಂಬ ಯೋಜನೆಯಡಿ ಗ್ರಾಮೀಣ ಪ್ರದೇಶದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡುತ್ತಿದೆ. ಇದರಲ್ಲಿ ಸೋಲಾರ್ ಪ್ಯಾನಲ್, ಬ್ಯಾಟರಿ, ನೆಸ್ಟ್ ಎಜ್ಯುಕೇಶನ್ ಪಠ್ಯ ತಂತ್ರಾಂಶ ಒಳಗೊಂಡು ಸಿಸ್ಟಮ್, ೫೦ ಇಂಚು ಟಿವಿ ಅಳವಡಿಸುವ ಜೊತೆಗೆ ಐದು ವರ್ಷದ ಲೈಸನ್ಸ್‌ನ್ನು ಒಳಗೊಂಡಿದೆ. ಡಿಜಿಟಲ್ ಎಜ್ಯುಕೇಶನ್‌ನಲ್ಲಿ ೧ನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕ ಬೋಧನೆಗೆ ಪೂರಕವಾದ ದತ್ತಾಂಶಗಳನ್ನು ಒಳಗೊಂಡಿದೆ. ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಗಳೆರಡರಲ್ಲೂ ಲಭ್ಯವಿದೆ. ಇದರಲ್ಲಿ ಮುಖ್ಯವಾಗಿ ಮಕ್ಕಳ ಕಲಿಕೆ ಪೂರಕವಾದ ಎಲ್ಲಾ ದತ್ತಾಂಶಗಳಿದ್ದು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ನೀಡಲಾಗುವ ಗುಣಮಟ್ಟದ ಕಲಿಕಾ ವಿಷಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೂ ಇದು ಪ್ರಯೋಜನಕಾರಿಯಾದ ಮಾಹಿತಿಗಳನ್ನು ಒಳಗೊಂಡಿದೆ. ಪ್ರತಿ ವಿಷಯಗಳಿಗೆ ಸಂಬಂಧಿಸಿ ತರಗತಿಯಲ್ಲಿ ಎಷ್ಟು ಪಾಠ ಮಾಡಿದೆ, ಎಷ್ಟು ಪಾಠ ಮಾಡಲು ಬಾಕಿಯಿದೆ ಎಂಬ ಅಂಕಿ ಅಂಶಗಳನ್ನು ಇದರಲ್ಲಿ ತಿಳಿಯಬಹುದು. ನೆಟ್ ಎಜ್ಯುಕೇಶನ್‌ಗೆ ಸಂಬಂಧಿಸಿದ ಎಲ್ಲಾ ದತ್ತಾಂಶಗಳು ಇದರಲ್ಲಿ ಒಳಗೊಂಡಿದೆ. ಎಂದು ಸೆಲ್ಕೋ ಸಂಸ್ಥೆ ಏರಿಯಾ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.

ಸ್ಮಾರ್ಟ್‌ಕ್ಲಾಸ್‌ನ್ನು ಲೋಕಾರ್ಪಣೆಗೊಳಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಸ್ಮಾರ್ಟ್ ತರಗತಿಗಳನ್ನು ಆರಂಭಿಸುವುದರಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಬಹುದು. ಆ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯ. ಇದಕ್ಕಾಗಿ ತಾನು ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ಸ್ಮಾರ್ಟ್‌ಕ್ಲಾಸ್ ಯೋಜನೆಗೆ ಒಟ್ಟು ರೂ.೧.೮೦ಲಕ್ಷ ವೆಚ್ಚವಿದೆ. ಇದರಲ್ಲಿ ಶೇ.೫೦ರಷ್ಟನ್ನು ಬೆಂಗಳೂರಿನ ಮೆಂಡಾ ಫೌಂಡೇಶನ್ ಸಂಸ್ಥೆಯು ಭರಿಸಲು ಸಿದ್ದವಿದೆ. ಉಳಿದ ಶೇ.೫೦ರಷ್ಟು ಮೊತ್ತವನ್ನು ಸ್ಥಳೀಯ ಸಂಸ್ಥೆಗಳು ಭರಿಸಿದರೆ ಶಾಲೆಗಳಿಗೆ ಅಳವಡಿಸಬಹುದು. ನೆಸ್ಟ್ ಎಜಯುಕೇಶನ್‌ನ ಅಡ್ವಾನ್ಸ್‌ಡ್ ಟೆಕ್ನಾಲಜಿ ಹೊಂದಿರುವ ಈ ಸ್ಮಾರ್ಟ್ ಕ್ಲಾಸ್‌ನ್ನು ಜಿಲ್ಲೆಯಲ್ಲಿ ಈಗಾಗಲೇ ೫೦ ಶಾಲೆಗಳಿಗೆ ಅಳವಡಿಸಲಾಗಿದೆ. ಒಟ್ಟು ೨೫೦ ಶಾಲೆಗಳಿಗೆ ಅಳವಡಿಸುವ ಗುರಿಯಿದೆ. ಈ ವ್ಯವಸ್ಥೆಯನ್ನು ಅಳವಡಿಸಿದ ಶಾಲೆಗಳಲ್ಲಿ ದಾಖಲಾತಿ ಹಾಗೂ ಫಲಿತಾಂಶ ಏರಿಕೆಯಾಗುವಲ್ಲಿ ಪರಿಣಾಮ ಬೀರಿದೆ. ಉತ್ತಮ ರೀತಿಯಲ್ಲಿ ನಿರ್ವಹಣೆಯಾಗಬೇಕೆನ್ನುವ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳ ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸೆಲ್ಕೋ ಸೋಲಾರ್ ಏರಿಯಾ ಮ್ಯಾನೇಜರ್ ಪ್ರಸಾದ್ ತಿಳಿಸಿದ್ದಾರೆ.

ಕುಡಿಯುವ ನೀರಿನ ಘಟಕಕ್ಕೆ ಸೋಲಾರ್ ಪಂಪ್‌ನ್ನು ಬನ್ನೂರು ಗ್ರಾ.ಪಂನಲ್ಲಿ ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಅಳವಡಿಸಲಾಗಿದೆ. ಈಗ ಪಂಚಾಯತ್‌ನ ಅನುದಾನದ ಮೂಲಕ ತಾಲೂಕಿನಲ್ಲಿ ಆರ್ಯಾಪು ಗ್ರಾ.ಪಂ ಪ್ರಥಮ ಬಾರಿಗೆ ಸೋಲಾರ್ ಡಿಜಿಟಲ್ ಎಜ್ಯುಕೇಶನ್‌ನ್ನು ಅಳವಡಿಸಲಾಗಿದೆ. ಆರ್ಯಾಪು ಗ್ರಾಮದ ವ್ಯಾಪ್ತಿಯಲ್ಲಿ ಬರುವಂತಹ ಉಳಿದ ಮೂರು ಶಾಲೆಗಳಿಗೂ ಪಂಚಾಯತಿ ವ್ಯಾಪ್ತಿಯ ಸಹಕಾರದಿಂದ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗುವುದು ಎಂದು ಆರ್ಯಾಪು ಗ್ರಾ.ಪಂ. ಪಿಡಿಓ ನಾಗೇಶ್ ಎಂ ತಿಳಿಸಿದರು.
ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ, ಸದಸ್ಯ ಹರೀಶ್ ನಾಯಕ್ ವಾಗ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಾಬು ಪುತ್ತೂರು ಸೆಲ್ಕೋ ಸೋಲಾರ್ ಪುತ್ತೂರು ಶಾಖೆಯ ವ್ಯವಸ್ಥಾಪಕ ಸುಧಾಕರ ಆಳ್ವ, ಶಾಲಾ ಪ್ರಭಾರ ಮುಖ್ಯಗುರು ಮೋಹಿನಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here