೦ ಶಿಬಿರದ ಮೂಲಕ ಶಿಫಾರಸ್ಸು ಆದ ರೋಗಿಗಳಿಗೆ ತಜ್ಞ ವೈದ್ಯರ ಮೂಲವೇ ಚಿಕಿತ್ಸೆ–ಡಾ. ಅಶ್ವಿನಿ ಶೆಟ್ಟಿ.
೦ ಆರೋಗ್ಯ, ಶಿಕ್ಷಣ ಸೇವೆಗೆ ಆದ್ಯತೆ–ಮನ್ಸೂರ್ ಅಹ್ಮದ್ ಅಝಾದ್.
೦ ಹಿದಾಯದಿಂದ ಆಹಾರ, ಆರೋಗ್ಯ, ಶಿಕ್ಷಣ, ಸ್ವಾವಲಂಬನೆ, ಮೂಲಭೂತ ಸೌಕರ್ಯದ ಸೇವೆ-ಮೊಹಮ್ಮದ್ ಹನೀಫ್.
೦ ಆರೋಗ್ಯ, ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವುದು ವಿಷಾಧನೀಯ–ನಂದಕುಮಾರ್
ಉಪ್ಪಿನಂಗಡಿ: ಹಿದಾಯ ಫೌಂಡೇಶನ್ ಮಂಗಳೂರು, ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಹಾಗೂ ಬದ್ರಿಯಾ ಜುಮಾ ಮಸೀದಿ ಕೋಲ್ಪೆ-ನೆಲ್ಯಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ಯ್ರ ಅಮೃತ ಮಹೋತ್ಸವ ಪ್ರಯುಕ್ತ ಕೋಲ್ಪೆ ಮದ್ರಸ ಸಭಾಂಗಣದಲ್ಲಿ ವೈಕ್ಯಕೀಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್‍ಯಕ್ರಮ ಸೆ. 18ರಂದು ಜರಗಿತು.
ಹಿದಾಯ ಫೌಂಡೇಶನ್ ಚೇರ್‌ಮೆನ್ ಹಾಜಿ ಮನ್ಸೂರ್ ಅಹ್ಮದ್ ಅಝಾದ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಹಿದಾಯ ಫೌಂಡೇಶನ್ ಆರೋಗ್ಯ, ಶಿಕ್ಷಣ ಸೇವೆಗೆ ಆದ್ಯತೆ ನೀಡುತ್ತಿದ್ದು, ಈ ನಿಟ್ಟಿನಲ್ಲಿ ತೀರಾ ಗ್ರಾಮೀಣ ಪ್ರದೇಶಕ್ಕೆ ಬಂದು ಸೇವೆ ಮಾಡುತ್ತಿದ್ದು, ಸಂಘ ಸಂಸ್ಥೆಗಳು ಈ ರೀತಿಯ ಸೇವೆಯ ಮೂಲಕ ಸಾರ್ಥಕತೆ ಸಾಧಿಸಲು ಸಾಧ್ಯ ಎಂದರು.
ಯೇನಪೋಯ ಮೆಡಿಕಲ್ ಕಾಲೇಜಿನ ಸಹಾಯಕ ಪ್ರೊಫೇಸರ್ ಡಾ. ಅಶ್ವಿನಿ ಶೆಟ್ಟಿ ಮಾತನಾಡಿ ಕೆಲವರಲ್ಲಿ ಶಿಬಿರಕ್ಕೆ ಕಲಿಕೆಯ ವೈದ್ಯರು ಬರುತ್ತಾರೆ ಎಂಬ ತಪ್ಪು ಕಲ್ಪನೆ ಇದೆ, ಇದು ಸಲ್ಲದು, ಈ ಬಗ್ಗೆ ತಾತ್ಸರ ಪಡಬಾರದು ಎಂದ ಅವರು ಶಿಬಿರಕ್ಕೆ ತಜ್ಞ ವೈದ್ಯರೂ ಬರುತ್ತಾರೆ, ಶಿಬಿರದ ಮೂಲಕ ಶಿಫಾರಸ್ಸು ಆದ ರೋಗಿಗಳನ್ನು ಯೇನಪೋಯದಲ್ಲಿ ವಿಶೇಷ ಮುತುವರ್ಜಿ ವಹಿಸಿ ತಜ್ಞ ವೈದ್ಯರ ಮೂಲವೇ ಚಿಕಿತ್ಸೆ ಕೊಡಿಸಲಾಗುವುದು, ಶಿಬಿರಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಹಿದಾಯ ಫೌಂಡೇಶನ್ ಕೇಂದ್ರ ಸಮಿತಿ ಅಧ್ಯಕ್ಷ ಹಾಜಿ ಮಹಮ್ಮದ್ ಹನೀಫ್ ಮಾತನಾಡಿ ಹಿದಾಯ ಸಂಸ್ಥೆ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವರನ್ನು ಗುರುತಿಸಿ ತನ್ಮೂಲಕ ಆಹಾರ, ಆರೋಗ್ಯ, ಶಿಕ್ಷಣ, ಸ್ವಾವಲಂಬನೆ, ಮೂಲಭೂತ ಸೌಕರ್ಯ ಈ ಐದು ಉದ್ದೇಶವನ್ನು ಇಟ್ಟುಕೊಂಡು ಸೇವೆಯಲ್ಲಿ ತೊಡಗಿದ್ದು, ಇಂದಿನ ಶಿಬಿರಕ್ಕೆ ಸಹಕಾರ ನೀಡಿದ ಕೋಲ್ಪೆ ಮಸೀದಿ ಆಡಳಿತ ಸಮಿತಿಗೆ ಅಭಾರಿ ಆಗಿರುವುದಾಗಿ ಹೇಳಿದರು.
ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್ ಮಾತನಾಡಿ ಇಂದಿನ ವ್ಯವಸ್ಥೆ ಅಡಿಯಲ್ಲಿ ಆರೋಗ್ಯ, ಶಿಕ್ಷಣ ವ್ಯಾಪಾರೀಕರಣ ಆಗುತ್ತಿರುವುದು ವಿಷಾಧನೀಯವಾಗಿದ್ದು, ಇಂತಹ ಸಂದರ್ಭದಲ್ಲಿ ಹಿದಾಯ ಸಂಸ್ಥೆಯ ಈ ಸೇವೆ ಮೆಚ್ಚುವಂತಾದ್ದು ಎಂದರು.
ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಕೆ.ಕೆ. ಅಬೂಬಕ್ಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್‍ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ಶರೀಫ್ ದಾರಿಮಿ ಅಲ್ ಹೈತಮಿ ದುವಾಃಶೀರ್ವಚನ ನೀಡಿದರು. ಗೋಳಿತೊಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಗೌಡ ಪಠೇರಿ, ಕರ್ನಾಟಕ ಸರ್ಕಾರದ ಮಹಾ ಲೆಕ್ಕಪಾಲಕ ಇಲಾಖೆಯ ನಿವೃತ್ತ ಲೆಕ್ಕಾಧಿಕಾರಿ ಎ.ಜೆ. ಜೋಸೆಫ್, ಯೇನಪೋಯ ಮೆಡಿಕಲ್ ಕಾಲೇಜಿನ ದಂತ ವೈದ್ಯ ಡಾ. ಇಮ್ರಾನ್ ಪಾಷಾ, ನೆಲ್ಯಾಡಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ ಸಂದರ್ಭೋಚಿತವಾಗಿ ಮಾತನಾಡಿದರು.
ಕೋಲ್ಪೆ ಮಸೀದಿ ಗೌರವಾಧ್ಯಕ್ಷ ಬಿ.ಎಸ್. ಬಾವಾ ತಂಙಳ್, ಕೋಲ್ಪೆ ದಫ್ ಸಮಿತಿ ಅಧ್ಯಕ್ಷ ಇಕ್ಬಾಲ್, ಹಿದಾಯ ಫೌಂಡೇಶನ್ ಪದಾಧಿಕಾರಿಗಳಾದ ಟಿ.ಕೆ. ಬಶೀರ್, ಆಬಿದ್ ಅಸ್ಗರ್ ವೇದಿಕೆಯಲ್ಲಿ ಉಪಸ್ಥರಿತರಿದ್ದರು. ಹಿದಾಯ ಫೌಂಡೇಶನ್ ಸಂಸ್ಥೆಯ ಆಶಿಫ್ ಇಕ್ಬಾಲ್, ಬಿ.ಎಂ. ತುಂಬೆ, ಹಮೀದ್ ಕರಾವಳಿ, ಬಶೀರ್ ವಗ್ಗ, ಇಬ್ರಾಹಿಂ ಪರ್ಲಿಯಾ, ಇಲ್ಯಾಸ್ ಕಕ್ಕಿಂಜೆ, ಜುನೈದ್ ಮುಂಡಾಜೆ, ಅನ್ವರ್, ಬದ್ರಿಯಾ ಜುಮಾ ಮಸೀದಿ ಕೋಲ್ಪೆ ಇದರ ಪದಾಧಿಕಾರಿಗಳಾದ ಅಬ್ದುಲ್ಲಕುಂಞ ಕೊಂಕೋಡಿ, ಯು.ಕೆ. ಉಮ್ಮರ್, ಇಕ್ಬಾಲ್ ಕೋಲ್ಪೆ, ಎಂ.ಕೆ. ರಹೀಂ, ಯು.ಕೆ. ಹಮೀದ್, ಇಕ್ಬಾಲ್ ಎಸ್., ಶರೀಫ್ ಕೆ.ಎಸ್., ಅಬೂಬಕ್ಕರ್ ಕೋಲ್ಪೆ, ರಹೀಂ ಕೆ.ಪಿ., ಅಶ್ರಫ್ ಕೆ.ಪಿ., ರಫೀಕ್ ಕೆ.ಇ., ಝುನೈದ್, ಹಾರಿಸ್ ಕೌಸರಿ, ಸಲೀಂ ಎಂ.ಕೆ., ಸಮೀರ್ ಅರ್ಶದಿ, ಎಸ್.ಕೆ. ರಜಾಕ್ ಉಪಸ್ಥಿತರಿದ್ದು ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಬದ್ರಿಯಾ ಜುಮಾ ಮಸೀದಿ ಕೋಲ್ಪೆಯ ಇಸ್ಮಾಯಿಲ್ ಕೆ.ಕೆ. ಸ್ವಾಗತಿಸಿ, ಹಿದಾಯ ಫೌಂಡೇಶನ್‌ನ ಹಕೀಂ ಕಲಾಯಿ ವಂದಿಸಿದರು. ನಾಸಿರ್ ಸಮರಗುಂಡಿ ಕಾರ್‍ಯಕ್ರಮ ನಿರೂಪಿಸಿದರು.
677 ಮಂದಿಯಿಂದ ಶಿಬಿರದಲ್ಲಿ ಭಾಗಿ, 62 ಮಂದಿಗೆ ಉಚಿತ ಕನ್ನಡಕ
ಶಿಬಿರದಲ್ಲಿ ಕಣ್ಣು, ಕಿವಿ, ಮೂಗು, ಗಂಟಲು, ಎಲುಬು, ಹೆರಿಗೆ, ಮತ್ತು ಪ್ರಸೂತಿ ಹಾಗೂ ಮಕ್ಕಳ ತಜ್ಞ ವೈದ್ಯರ ತಂಡ ರೋಗಿಗಳ ತಪಾಸಣೆ ನಡೆಸಿದ್ದು, ಒಟ್ಟು ೬೭೭ ಮಂದಿ ಸದುಪಯೋಗ ಪಡೆದಿದ್ದು, ಈ ಪೈಕಿ ೫೩೭ ಮಂದಿಗೆ ಸ್ಥಳದಲ್ಲಿಯೇ ಔಷಧಿ ನೀಡಲಾಗಿದೆ. ಉಳಿದಂತೆ ೬೦ ಮಂದಿಗೆ ಉಚಿತ ಕನ್ನಡಕ ವಿತರಣೆ ವ್ಯವಸ್ಥೆ, ೮೦ ರೋಗಿಗಳಿಗೆ ಸರ್ಜರಿ ಮತ್ತು ಇನ್ನಿತರ ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗಿದೆ.